ಶುಕ್ರವಾರ, ಏಪ್ರಿಲ್ 16, 2021
31 °C

ಆಟದ ಒಳಗೊಂದು ಆಟ

ಬಿ. ಸೀತಾರಾಮ ಭಟ್  Updated:

ಅಕ್ಷರ ಗಾತ್ರ : | |

Prajavani

ಮಲೆನಾಡಿನ ಬುಡದಲ್ಲಿರುವ ಕಾರ್ಕಳ ಪೇಟೆಯಿಂದ ನೇರವಾಗಿ ಪಶ್ಚಿಮಕ್ಕೆ ಸಾಗಿ ಮಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಪಡುಬಿದ್ರಿಯಲ್ಲಿ ಸೇರುವ ಈಗಿನ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಐವತ್ತು-ಅರವತ್ತು ವರ್ಷಗಳ ಹಿಂದೆ ನಿದ್ರಿಸುತ್ತಿದ್ದು, ಈಗ ಧಿಡೀರನೆ ಆಧುನಿಕತೆಯ ರ೦ಗಿಗೆ ಬಲಿಯಾಗುತ್ತಿರುವ ಹಳ್ಳಿಗಳಲ್ಲಿ ನಮ್ಮೂರು ಬೆಳ್ಮಣ್ಣು ಕೂಡಾ ಒಂದು...

ಈಗ ಹದಿನೈದು ಅಡಿ ಅಗಲದ ರಸ್ತೆ ದಾಟಲು ಹತ್ತು ಸಲ ಆಚೀಚೆ ಕತ್ತು ತಿರುಗಿಸಿ ಬಿರುಗಾಳಿಯಂತೆ ನುಗ್ಗಿ ಬರುವ ಬೈಕು, ಕಾರು ಮತ್ತಿತರ ವಾಹನಗಳಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಹಳ್ಳಿಗರು ಹರಸಾಹಸ ಪಡುತ್ತಿರುವುದು ನಿತ್ಯ ನೋಟ. 1962ರ ಚೀನಾ ಯುದ್ಧ ಪ್ರಾರಂಭವಾದಾಗ ನಮ್ಮ ಅಪ್ಪ ಇಲ್ಲಿನ ಆಗ ಜನನಾಲಗೆಯಲ್ಲಿ ಉರುಳಾಡುತ್ತಿದ್ದ ‘ಗಿರೇಶೆಟ್ರ ಕಟ್ಟೋಣ’ ಎಂಬಲ್ಲಿ ‘ದುರ್ಗಾ ವಿಲಾಸ’ ಎಂಬ ಹೋಟೇಲು ತೆರೆದರು . ನಾನಾಗ ಒಂಭತ್ತು ವರ್ಷದವನು. ಆ ವರ್ಷ ಚುನಾವಣೆ ನಡೆದದ್ದೂ , ಅಲ್ಲಿಂದ ಎರಡು ಕಿ.ಮೀ. ದೂರದಲ್ಲಿದ್ದ ಮತದಾನ ಕೇಂದ್ರದ ಸಿಬ್ಬಂದಿಗಳಿಗೆ ಡಾಂಬರು ಇಲ್ಲದ ಧೂಳು ರಸ್ತೆಯಲ್ಲಿ ಊಟ ತಿಂಡಿಯ ಪಾತ್ರೆ ಹೊತ್ತು ಸುಡುಬಿಸಿಲಲ್ಲಿ ನಡೆದು ಕೊಟ್ಟು ಬಂದದ್ದೂ ನನ್ನ ಭಾವಕೋಶದ ನೆನಪುಗಳಲ್ಲಿ ಒಂದು ತಂತು.

ಆಗ ಚೀನಾ ಯುದ್ಧ ನಡೆಯುತ್ತಿತ್ತು ಅಂದೆನಲ್ಲ, ಆ ದಿನಗಳಲ್ಲಿ ಕಟ್ಟಡದ ಮಾಲಕರಾಗಿದ್ದ ಗಿರಿಯ ಶೆಟ್ಟರು ಒಂದು ದೊಡ್ಡ ರೇಡಿಯೋ ಇಟ್ಟು ಸಂಜೆ ವಾರ್ತೆಗಳನ್ನು ಜೋರಾಗಿ ಊರವರಿಗೆ ಕೇಳಿಸುತ್ತಿದ್ದರು. ಅದನ್ನು ಕೇಳಲು ಹತ್ತೈವತ್ತು ಮಂದಿ ನಮ್ಮ ಹೋಟೇಲಿನ ಮುಂದೆ ಜಮಾಯಿಸಿ ಮೈದಾನದಲ್ಲಿ ಕೂರುತ್ತಿದ್ದರು. ಅತ್ತ ಕಡೆಯಿಂದ ‘ಆಕಾಶವಾಣಿ...ಈಗ ವಾರ್ತೆಗಳು...ಓದುತ್ತಿರುವವರು ...ರಂಗ ರಾವ್...’ ಅಂತ ಬಾನುಲಿ ಕೇಳುತ್ತಿದ್ದಂತೆ ಜನ ಉಸಿರು ಬಿಗಿ ಹಿಡಿದು ಮಹಡಿ ನೋಡುತ್ತಿದ್ದರು. ‘ಬಾಮ್ಡಿ ಲಾ ಪ್ರದೇಶ ಚೀನಾದ ಕೈ ವಶ.. ಭಾರತ ಸೈನ್ಯ ಹಿಮ್ಮೆಟ್ಟಿದೆ..’ ಎಂಬ ಸುದ್ದಿ ಬಿತ್ತರವಾದಂತೆ ಜನ ಭಾವಾವೇಶಕ್ಕೆ ಒಳಗಾಗಿದ್ದನ್ನು ಮರೆಯಲು ಸಾಧ್ಯವಿಲ್ಲ.

ಜನ ಆಗ ತುಂಬ ಸರಳವಾಗಿದ್ದರು, ನೇರವಾಗಿದ್ದರು. ಅದರಲ್ಲೂ ನಮ್ಮೂರ ಜನರಂತೂ ಪ್ರಾಮಾಣಿಕತೆಗೆ, ನೈತಿಕತೆಗೆ ಕೊಡುತ್ತಿದ್ದ ಬೆಲೆಯನ್ನು ನಾನು ಹೋಟೇಲಿನಲ್ಲಿ ದುಡಿಯುತ್ತಿರುವಾಗಲೇ ಅನುಭವಿಸಿದ್ದೆ. ಒಬ್ಬ ರೈತ ನಮ್ಮ ಹೋಟೇಲಿಗೆ ಒಟ್ಟು ಒಂದು ಸಾವಿರ ಬಾಳೆಕಾಯಿಗಳನ್ನು ಒಂದಕ್ಕೆ ಐದು ಪೈಸೆಯಂತೆ ಬೆಳೆದಂತೆ ತಂದುಕೊಡುವ ಒಪ್ಪಂದ ಮಾಡಿಕೊಂಡು ಐವತ್ತು ರೂಪಾಯಿ ಮುಂಗಡ ಪಡಕೊಂಡಿದ್ದ. ಪ್ರತಿ ಗೊನೆ ಬೆಳೆದಾಗಲೂ ತಪ್ಪದೆ ತಂದು ಕೊಡುತ್ತಿದ್ದ.

ಕೆಲವು ಗೊನೆಗಳ ಕಾಯಿಗಳು ಎಷ್ಟು ದೊಡ್ಡದಾಗಿದ್ದವೆಂದರೆ, ಒಂದು ಗೊನೆಯನ್ನು ಅಪ್ಪ ಹರಾಜು ಹಾಕಿದಾಗ ಐವತ್ತು ರೂಪಾಯಿಗೆ ಹೋಯಿತು ! ಅದರಲ್ಲಿ ಇಪ್ಪತ್ತೈದು ರೂಪಾಯಿಗಳನ್ನು ಅವನಿಗೆ ಕೊಟ್ಟರೆ ಅವ ಅದನ್ನು ನೇರವಾಗಿ ನಿರಾಕರಿಸಿಬಿಟ್ಟ...

‘ಅದು ನಿಮ್ಮ ಹಣ. ಅರ್ಜಂಟಾದ್ರೆ ನಿಮ್ಮ ಹತ್ರ ಸಾಲ ಕೇಳ್ತೇನೆ. ಆಗ ಕೊಡಿ..’ ಅಂದ. ಅಂತ ಗೊನೆಗಳನ್ನು ಅವನು ಎಲ್ಲಿ ಮಾರಿದರೂ ಅವನಿಗೆ ತುಂಬ ದುಡ್ಡು ಸಿಗ್ತಾ ಇತ್ತು. ನಮ್ಮ ಲೆಕ್ಕ ತೀರುವರೆಗೂ ಅವನು ಬಾಳೆಕಾಯಿ ಕೊಟ್ಟದ್ದು ನಮ್ಮವರ ನೈತಿಕ ನೆಲೆಗಟ್ಟಿಗೆ ಒಂದು ಉದಾಹರಣೆ.

ಒಂದು ಪ್ರಸಂಗವನ್ನು ಹೇಳಿದರೆ ನಮ್ಮ ಹಿರಿಯರ ನೈತಿಕ ನೆಲೆಗಟ್ಟು ಹೇಗಿತ್ತು ಅಂತ ಅರ್ಥವಾದೀತು. ನಮ್ಮ ಹೋಟೇಲಿದ್ದ ಕಟ್ಟಡದ ಎದುರು ವಿಶಾಲ ಮೈದಾನವಿತ್ತು. ಊರಿಗೆ ಬರುವ ಟೆಂಟುಮೇಳಗಳೆಲ್ಲ ಇಲ್ಲೇ ಆಟ ಆಡಿಸುತ್ತಿದ್ದವು. ನಮ್ಮ ಹೋಟೇಲಿನ ಎದುರೇ ಆದ್ದರಿಂದ ಬೆಳಿಗ್ಗೆ ಆಟದ ಲಾರಿ ಬಂದು ಸಾಮಾನು ಇಳಿಸುತ್ತಿತ್ತು. ಮರುದಿನ ಬೆಳಿಗ್ಗೆ ಟೆಂಟು ಬಿಚ್ಚಿ ಹೊರಡುವವರೆಗೆ ನಮಗೆ ‘ಕೋಮಣ ಕಟ್ಟರೆ ಪುರುಸೊತ್ತಿಜ್ಜಿ’ ಅನ್ನೋ ಥರ ವ್ಯಾಪಾರ....ನನಗೆ ಸಪ್ಲೈ ಮಾಡುವ, ಬಿಲ್ಲು ತಗೊಳ್ಳೋ ಕೆಲಸ... ರಾತ್ರಿಯಿಡೀ ಎಚ್ಚರ. ಗಳಿಗೆಗಳಿಗೆಗೆ ನುಗ್ಗಿ ಬರುವ ಗಿರಾಕಿಗಳನ್ನು ವಿಚಾರಿಸಿ, ನಂತರ ಹಣ ತಗೊಳ್ಳೋದೇ ನನ್ನ ಆ ಹೊತ್ತಿನ ಮಹಾಸಂಗ್ರಾಮ. ಆ ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ಸಿಕ್ಕಾಬಟ್ಟೆ ರಶ್ ಇದ್ದಾಗ, ನಮ್ಮೂರಿನ ನನಗೆ ಗೊತ್ತಿದ್ದವನೊಬ್ಬ ಗಡದ್ದಾಗಿ ತಿಂದು, ಚಾ ಕುಡಿದು, ದುಡ್ಡು ಕೊಡದೆ ತಪ್ಪಿಸಿಕೊಂಡು ಹೋಗಿ, ನೇರ ಟೆಂಟಿನೊಳಗೆ ನುಸುಳಿಬಿಟ್ಟ. ಅದನ್ನು ನೋಡಿದ ನಾನು ತಕ್ಷಣ ನಮ್ಮಪ್ಪನಿಗೆ ವಿಷಯ ಹೇಳಿದೆ. ಕೂಡಲೇ ಚಾ ಮಾಡುತ್ತಿದ್ದ ಕೈ ಪಾತ್ರೆಗಳನ್ನು ಕೆಳಗಿಟ್ಟ ಅಪ್ಪ ಉಗ್ರಾವತಾರದಲ್ಲಿ ಟೆಂಟಿನೊಳಗೆ ನುಗ್ಗಿದರು. ಬರಿ ಮೈ. ಎಲುಬು ಎಣಿಸುವಂತಹ ಮೈಕಟ್ಟು. ಜನಿವಾರ. ಅಲ್ಲಿ ಒಂದೆಡೆ ಅಡಗಿದ್ದ ಆ ಧಡಿಯನನ್ನು ಕಾಲರ್ ಹಿಡಿದು ಎಬ್ಬಿಸಿ ರಂಗದ ಮುಂದೆ ಎಳೆದು ತಂದರು. ಆಟ ನಿಂತಿತು. ಪಟಪಟನೆ ನಾಲ್ಕಾರು ಪೆಟ್ಟು ಕೆನ್ನೆಗೆ ಬಿಗಿದ ನಮ್ಮಪ್ಪ ಅವನನ್ನು ಎಳೆದುಕೊಂಡೇ ಹೊರಗೆ ಬಂದರು. ಟೆಂಟಿನಲ್ಲಿದ್ದ ನೂರಾರು ಮಂದಿ ಈ ಪ್ರಸಂಗವನ್ನು ನೋಡಿದರು. ಯಾರೂ ಏನೂ ಮಾತಾಡಲಿಲ್ಲ. ಹೋಟೇಲಿಟ್ಟು ದುಡಿದು ಬದುಕುವ ಬಡ ಮನುಷ್ಯ ಖಂಡಿತ ಸುಳ್ಳು ಹೇಳಲಾರ ಅಂತ ಇಡೀ ಊರಿಗೆ ಗೊತ್ತಿತ್ತು. ಅವನು ದುಡ್ಡು ಕೊಟ್ಟು ಹೋದ...

ಈಗ ಇಂತದ್ದು ಆಗಿದ್ದರೆ?

ನಮ್ಮ ಹಿರಿಯರಿಗೆ ನ್ಯಾಯದಲ್ಲಿ ಎಷ್ಟೊಂದು ಗೌರವ ಇತ್ತು.....

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.