ಶುಕ್ರವಾರ, ಮಾರ್ಚ್ 5, 2021
17 °C

ಮ್ಯೂಚುವಲ್‌ ಫಂಡ್‌ ಹೂಡಿಕೆ ಲಾಭದಾಯಕ

ಕೌಶಲೇಂದ್ರ ಸಿಂಗ್ ಎಸ್ Updated:

ಅಕ್ಷರ ಗಾತ್ರ : | |

ಮ್ಯೂಚುವಲ್‌ ಫಂಡ್‌ ಹೂಡಿಕೆ ಲಾಭದಾಯಕ

ಹೂಡಿಕೆಗೆ ಹಲವಾರು ವಾಖ್ಯಾನಗಳಿವೆ. ಹೂಡಿಕೆ ಮಾಡಿರುವ ಹಣ ಮತ್ತೆ ಆದಾಯ ತರುವಂತಿರಬೇಕು ಎನ್ನುವ ಮನೋಭಾವ ಎಲ್ಲರಲ್ಲಿ ಸಹಜವಾಗಿರುತ್ತದೆ. ಮಾರುಕಟ್ಟೆಯಲ್ಲಿ ಹೂಡಿಕೆಗೆ ಹಲವಾರು ರೀತಿಯ ಆಯ್ಕೆಗಳಿವೆ. ಚಿನ್ನ, ರಿಯಲ್‌ ಎಸ್ಟೇಟ್‌, ಉಳಿತಾಯ ಖಾತೆ, ನಿಶ್ಚಿತ ಠೇವಣಿ ಮತ್ತು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಇವುಗಳ ಮೇಲೆ ಹಣ ಹೂಡಿಕೆ ಮಾಡುವುದು ಸಂಪ್ರದಾಯ ರೀತಿಯಲ್ಲಿ ಬೆಳೆದು ಬಂದಿದೆ. ಆದರೆ, ಇವೆಲ್ಲವೂ ಹಣದುಬ್ಬರದ ನಡುವೆಯೂ ಕಡಿಮೆ ಅವಧಿಯಲ್ಲಿ ನಿರೀಕ್ಷಿತ ಲಾಭ ಒದಗಿಸುವ ಬಗ್ಗೆ  ಅನುಮಾನಗಳು ಇದ್ದೇ ಇರುತ್ತವೆ.

’ಮಾರ್ಗನ್‌ ಸ್ಟ್ಯಾನ್ಲಿ’ ಬಿಡುಗಡೆ ಮಾಡಿರುವ ವರದಿ ಅನ್ವಯ,  20 ವರ್ಷಗಳಲ್ಲಿ ಚಿನ್ನ, ನಿಶ್ಚಿತ ಠೇವಣಿ, ರಿಯಲ್‌ ಎಸ್ಟೇಟ್‌ ಮತ್ತು ಷೇರು ಮಾರುಕಟ್ಟೆಗಳಲ್ಲಿನ ಹಣ ಹೂಡಿಕೆ ಪೈಕಿ  ಕೇವಲ ಷೇರುಗಳು ಮಾತ್ರ ಹಣದುಬ್ಬರವನ್ನು ಸಮರ್ಥವಾಗಿ ಎದುರಿಸಿದೆ.

ಆದ್ದರಿಂದ, ಹೆಚ್ಚಿನ ಲಾಭ ದೊರೆಯಬೇಕಾದರೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದು ಅತ್ಯುತ್ತಮ ಆಯ್ಕೆಗಳಲ್ಲಿ ಒಂದು. ಸಾರ್ವಜನಿಕರು ಈಗಲೂ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ಇದಕ್ಕೆ ಷೇರು ಮಾರುಕಟ್ಟೆ ಕುರಿತ ಮಾಹಿತಿಯ ಕೊರತೆ ಕಾರಣ. ಜತೆಗೆ ವಿಶ್ವಾಸಾರ್ಹತೆಯ ಅಂಶವೂ ಮುಖ್ಯವಾಗಿದೆ. ಇಂತಹ ಸನ್ನಿವೇಶದಲ್ಲಿ ಎಲ್ಲ ವರ್ಗದ ಜನತೆಗೂ ಮ್ಯೂಚುವಲ್‌ ಫಂಡ್‌ ಅತ್ಯುತ್ತಮ ಆಯ್ಕೆಯಾಗಿದೆ.

ಮ್ಯೂಚುವಲ್‌ ಫಂಡ್ಸ್‌ ಅನ್ನು ವೃತ್ತಿಪರ ಹಣಕಾಸು ವ್ಯವಸ್ಥಾಪಕರು ನಿರ್ವಹಿಸುತ್ತಾರೆ. ಇವರು ಮಾರುಕಟ್ಟೆ ಮೇಲೆ ಸದಾ ನಿಗಾ ವಹಿಸಿ ವಿಶ್ಲೇಷಣೆ ಮಾಡುತ್ತಾರೆ. ಮ್ಯೂಚುವಲ್‌ ಫಂಡ್‌ನಲ್ಲಿ ಹಣ ಹೂಡಿಕೆ ಕುರಿತು ಸಲಹೆ ನೀಡುತ್ತಾರೆ.

ಮ್ಯೂಚುವಲ್‌ ಫಂಡ್‌ನ ಅನುಕೂಲಗಳು

ಅಪಾಯ ಕಡಿಮೆ:  ಮ್ಯೂಚುವಲ್‌ ಫಂಡ್‌ನಲ್ಲಿ ಹಣ ಕಳೆದುಕೊಳ್ಳುವ ಅಪಾಯ ಕಡಿಮೆ. ವಿವಿಧ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡುವುದರಿಂದ ಲಾಭ ಹೆಚ್ಚಾದಂತೆ ಅದರ ಲಾಭಾಂಶವೂ ದೊರೆಯಲಿದೆ.

ಕನಿಷ್ಠ ಹೂಡಿಕೆ: ಮ್ಯೂಚುವಲ್‌ ಫಂಡ್‌ನಲ್ಲಿ ಅಪಾರ ಬಂಡವಾಳ ಹೂಡಿಕೆ ಮಾಡಬೇಕಾಗಿಲ್ಲ. ಅತಿ ಕಡಿಮೆ ಅಂದರೆ ಕೇವಲ ₹500 ಸಹ ಹೂಡಿಕೆ ಮಾಡಬಹುದು. ಇದರಿಂದ, ಎಲ್ಲ ವರ್ಗ ಮತ್ತು ವಯೋಮಾನದವರಿಗೂ ಅನುಕೂಲವಾಗಲಿದೆ.

ಹೆಚ್ಚು ಲಾಭದ ನಿರೀಕ್ಷೆ: ಯಾವುದೇ ಹೂಡಿಕೆದಾರರಿಗೆ ತನ್ನ ಹಣದಿಂದ ವಾಪಸ್‌ ಎಷ್ಟು ಮೊತ್ತ ಬರಬಹುದು ಎನ್ನುವ ನಿರೀಕ್ಷೆಗಳು ಸಹಜ. ಸಾಮಾನ್ಯವಾಗಿ ಮ್ಯೂಚುವಲ್‌ ಫಂಡ್‌ನಲ್ಲಿ ವಿವಿಧ ವಲಯಗಳಿಂದ ಶೇ 31.68, ಶೇ 35.28 ಮತ್ತು ಶೇ 28.92ರಷ್ಟು ಲಾಭ ದೊರೆಯಲಿದೆ.

ತೆರಿಗೆ ಮುಕ್ತ ಲಾಭ: ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿರುವ ಹಣವನ್ನು ಯಾವುದೇ ಸಮಯದಲ್ಲಿ ವಾಪಸ್‌ ಪಡೆಯಬಹುದು. ಇದಕ್ಕೆ ಕನಿಷ್ಠ ಶುಲ್ಕ ವಿಧಿಸಲಾಗುತ್ತದೆ. ಜತೆಗೆ ಹೂಡಿಕೆದಾರರು ಬಂಡವಾಳ ಹೂಡಿಕೆ ಮೇಲಿನ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಆದರೆ, ಹೂಡಿಕೆ ಹಣ ಒಂದು ವರ್ಷಕ್ಕಿಂತ ಹೆಚ್ಚು ಇರಬೇಕು.

ಮ್ಯೂಚುವಲ್‌ ಫಂಡ್‌ ಮತ್ತು ಬ್ಯಾಂಕ್‌ ಠೇವಣಿ: ಬ್ಯಾಂಕ್‌ಗಳಲ್ಲಿ ಠೇವಣಿಯಿಂದ ಹೆಚ್ಚಿನ ಬಡ್ಡಿ ಇತ್ತೀಚಿನ ದಿನಗಳಲ್ಲಿ ದೊರೆಯುತ್ತಿಲ್ಲ. ಇದಕ್ಕೆ ಹಣದುಬ್ಬರ ಮತ್ತು ತೆರಿಗೆ ಅಂಶಗಳು ಸಹ ಕಾರಣವಾಗಿವೆ. ಹೀಗಾಗಿ, ಇದು ಹೆಚ್ಚು ಲಾಭದಾಯಕವಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಮ್ಯೂಚುವಲ್‌ ಫಂಡ್‌ನಲ್ಲಿ ದೊರೆಯುವ ಲಾಭಾಂಶಕ್ಕೆ ತೆರಿಗೆ ವಿನಾಯಿತಿ ದೊರೆಯುತ್ತದೆ. ಹೀಗಾಗಿ ಇದು ಲಾಭದಾಯಕ ಹೂಡಿಕೆಯಾಗಿದೆ.

ಮ್ಯೂಚುವಲ್‌ ಫಂಡ್‌ ಮತ್ತು ವಿಪಿಎಫ್‌: ಈ ಹಿಂದೆ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಅತ್ಯುತ್ತಮ ಆಯ್ಕೆಯಾಗಿತ್ತು.  ಆದರೆ, ಇತ್ತೀಚಿಗೆ ಬಡ್ಡಿ ದರ ಕಡಿಮೆಯಾಗುತ್ತಿರುವುದರಿಂದ ಇದರಲ್ಲಿ ಹೂಡಿಕೆ ಮಾಡುವುದು ಆಕರ್ಷಣೀಯವಾಗಿಲ್ಲ. ಪಿಪಿಎಫ್‌ನಲ್ಲಿನ ಹಣವನ್ನು 15 ವರ್ಷಗಳವರೆಗೂ ಪಡೆಯಲು ಸಾಧ್ಯವಿಲ್ಲ.

ಮ್ಯೂಚುವಲ್‌ ಫಂಡ್‌ ಮತ್ತು ಕಾರ್ಪೊರೇಟ್‌ ಬಾಂಡ್‌ಗಳು: ಕಾರ್ಪೊರೇಟ್‌ ಬಾಂಡ್‌ಗಳ ಮೇಲೆ ಹಣ ಹೂಡಿಕೆ ಮಾಡಿದಾಗ ಲಾಭಾಂಶಕ್ಕೆ ತೆರಿಗೆ ವಿನಾಯ್ತಿ ದೊರೆಯುತ್ತದೆ. ಆದರೆ, ಕಾರ್ಪೋರೇಟ್‌ ಬಾಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವಾಗ ಕಂಪೆನಿಗಳ ಬಗ್ಗೆ ಹೆಚ್ಚು ಎಚ್ಚರವಹಿಸಬೇಕು.

ಈ ಮೇಲಿನ ಎಲ್ಲ ಅಂಶಗಳನ್ನು ವಿಶ್ಲೇಷಿಸಿದಾಗ ಎಲ್ಲ ವರ್ಗದವರಿಗೆ ಮ್ಯೂಚುವಲ್‌ ಫಂಡ್‌ಗಳು ಹೂಡಿಕೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಆದರೂ, ಮ್ಯೂಚುವಲ್‌ ಫಂಡ್‌ನಲ್ಲಿನ ಅಪಾಯದ ಬಗ್ಗೆ ಎಚ್ಚರವಹಿಸಬೇಕು. ಹೀಗಾಗಿ, ಹೂಡಿಕೆ ಮಾಡುವ ಮುನ್ನ ಸಮಗ್ರವಾಗಿ ಅಧ್ಯಯನ ಮಾಡಬೇಕು. ಅಗತ್ಯಕ್ಕೆ ತಕ್ಕಂತೆ ಎಚ್ಚರವಹಿಸಿ ಮ್ಯೂಚುವಲ್‌ ಫಂಡ್‌ನಲ್ಲಿ ಹಣ ಹೂಡಿಕೆ ಮಾಡಬೇಕು.

(ಲೇಖಕ ಅಡ್ವೈಸರಿಮಂಡಿಡಾಟ್‌ಕಾಂ.ನ ಸಿಇಒ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.