ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಮೇಲೆ ಬಜೆಟ್‌ ಸೃಷ್ಟಿಸಿದ ಅಲ್ಪಾವಧಿ ಒತ್ತಡ

ಬಜೆಟ್‌ 2020
Last Updated 28 ಜನವರಿ 2020, 12:29 IST
ಅಕ್ಷರ ಗಾತ್ರ

ಕಳೆದೊಂದು ವಾರದಲ್ಲಿ ಷೇರುಪೇಟೆಯು ಒಂದು ಮಟ್ಟಿನ ಸ್ಥಿರತೆಯ ಮಟ್ಟದಲ್ಲಿ ಇತ್ತು. ಬಜೆಟ್ ನಿರೀಕ್ಷೆಗಳು, ಮೂರನೇ ತ್ರೈಮಾಸಿಕದಲ್ಲಿನ ಕಂಪನಿಗಳ ಹಣಕಾಸು ಸಾಧನೆ ಉತ್ತಮವಾಗಿರುವ ಅಂದಾಜು ಮಾಡಲಾಗಿತ್ತು. ಆದರೆ, ಮೊದಲಿಗೆ ಹೊರಬಿದ್ದಿರುವ ಬ್ಯಾಂಕಿಂಗ್‌ ಮತ್ತು ಐಟಿ ವಲಯದ ತ್ರೈಮಾಸಿಕದ ಫಲಿತಾಂಶಗಳು ಮಾರುಕಟ್ಟೆಯ ನಿರೀಕ್ಷೆಗಿಂತಲೂ ಕಡಿಮೆ ಮಟ್ಟದಲ್ಲಿವೆ. ಹಣದುಬ್ಬರ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಅಲ್ಪಾವಧಿಗೆ ಆರ್‌ಬಿಐನಿಂದ ಬಡ್ಡಿದರ ಕಡಿತ ನಿರೀಕ್ಷಿಸುವಂತಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಎಚ್ಚರಿಕೆಯ ನಡೆ ಮುಂದುವರಿಯಲಿದೆ.

ಜನವರಿ 17ರಂದು ನಿಫ್ಟಿ 50 ಶೇ 1.5ರವರೆಗೆ, ನಿಫ್ಟಿ ಮಿಡ್‌ಕ್ಯಾಪ್‌ 100 ಶೇ 6.7 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್‌ 100 ಶೇ 10.5ರವರೆಗೂ ಏರಿಕೆ ಕಂಡಿವೆ. ಹೀಗಾಗಿ ವಹಿವಾಟು ಸ್ಥಿರಗೊಳ್ಳುವ ನಿರೀಕ್ಷೆ ಮಾಡಬಹುದಾದರೂ ಬಜೆಟ್‌ ನಿರ್ಧಾರದಿಂದ ಬಹಳಷ್ಟು ಬದಲಾವಣೆಗಳು ಆಗಬಹುದಾಗಿದೆ.

ಬ್ಯಾಂಕಿಂಗ್‌ ವಲಯಕ್ಕೆ ಸಂಬಂಧಿಸಿದಮತೆ ಭವಿಷ್ಯದಲ್ಲಿ ಭಾರಿ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಆರ್ಥಿಕ ಸಾಧನೆ ಉತ್ತಮವಾಗಿದ್ದರೂ ವಸೂಲಾಗದ ಸಾಲ (ಎನ್‌ಪಿಎ) ಕಳವಳಕಾರಿಯಾಗಿದೆ. ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ, ಖಾಸಗಿ ಬ್ಯಾಂಕ್‌ಗಳ ನಂತರ ಸಣ್ಣ ಹಣಕಾಸು ಬ್ಯಾಂಕ್‌ಗಳ ಸ್ಥಿತಿ ಉತ್ತಮವಾಗಿದೆ. ‘ಎನ್‌ಪಿಎ‘ ಮಟ್ಟ ಹೆಚ್ಚಾಗುತ್ತಿರುವುದು, ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದಲ್ಲಿ ಏರಿಕೆ ಹಾಗೂ ವಿಲೀನದ ಪರಿಸ್ಥಿತಿಯನ್ನು ಗಮನಿಸಿದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಸೂಕ್ತ. ಖಾಸಗಿ ಬ್ಯಾಂಕ್‌ಗಳ ವಿಷಯದಲ್ಲಿ ಆಯ್ಕೆ ಅಗತ್ಯ. ಸಣ್ಣ ಬ್ಯಾಂಕ್‌ಗಳು ಗ್ರಾಮೀಣ ಭಾಗದಲ್ಲಿ ಗಮನ ನೀಡುತ್ತಿರುವುದರಿಂದ ಬಡ್ಡಿ ದರ ಗಳಿಕೆ, ಕಡಿಮೆ ಎನ್‌ಪಿಎ, ಸಾಲದ ಬಡ್ಡಿ ದರದಲ್ಲಿನ ಇಳಿಕೆಯ ದೃಷ್ಟಿಯಿಂದ ದೀರ್ಘಾವಧಿಗೆ ಉತ್ತಮವಾಗಿವೆ. ರಾಜಕೀಯ ವಿಷಯಗಳಿಂದ ಗ್ರಾಮೀಣ ಮಾರುಕಟ್ಟೆ ಸಮಸ್ಯೆ ಎದುರಿಸುವ ಅಪಾಯ ಇದ್ದೇ ಇದೆ.

ಐಟಿ ವಲಯದ ಬಗ್ಗೆ ತಟಸ್ಥ ನಿಲುವು ಇದೆ. ಮೂರನೇ ತ್ರೈಮಾಸಿಕದ ಆರ್ಥಿಕ ಸಾಧನೆ ಅಲ್ಪ ಇಳಿಕೆ ಕಂಡಿದ್ದು, ಮುನ್ನೋಟವು ಮಂದಗತಿಯಲ್ಲಿದೆ. ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವೆಗಳ ವಲಯದ ಮಂದಗತಿಯ ಬೆಳವಣಿಗೆಯಿಂದ ವರಮಾನ ಸಂಗ್ರಹದಲ್ಲಿ ಹೆಚ್ಚಿನ ಏರಿಕೆ ಕಷ್ಟ. ಗರಿಷ್ಠ ವೆಚ್ಚದಿಂದಾಗಿ ದೊಡ್ಡ ಕಂಪನಿಗಳ ಷೇರುಗಳು ಸಮಸ್ಯೆ ಎದುರಿಸಲಿವೆ. ಮಿಡ್‌ಕ್ಯಾಪ್‌ ಷೇರುಗಳು ಗ್ರಾಹಕ ಕೇಂದ್ರಿತ ಪರಿಣಾಮ ಇಲ್ಲದೇ ಇರುವುದು ಹಾಗೂ ಆಕರ್ಷಕ ಮೌಲ್ಯದಿಂದಾಗಿ ಉತ್ತಮ ವಹಿವಾಟು ನಡೆಸುವ ಸಾಧ್ಯತೆ ಇದೆ.

ಜಾಗತಿಕವಾಗಿ, ಅಮೆರಿಕ–ಚೀನಾ ವಾಣಿಜ್ಯ ಒಪ್ಪಂದ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಮಾಡಲಾಗಿದೆ. ಇದು ಷೇರುಪೇಟೆಗಳ ಪಾಲಿಗೆ ಅತಿ ಮುಖ್ಯವಾದ ವಿಷಯವಾಗಿದೆ. ಮೊದಲ ಹಂತದ ಒಪ್ಪಂದ ಏರ್ಪಡಲು ಒಂದು ವರ್ಷ ಹಿಡಿಯಿತು. ಈ ಅವಧಿಯಲ್ಲಿ ಷೇರುಪೇಟೆಗಳು ಸಾಕಷ್ಟು ಏರಿಳಿತ ಕಂಡಿವೆ.

ನಿರೀಕ್ಷೆಗಳೇನು

ಕೇಂದ್ರ ಬಜೆಟ್‌ನಲ್ಲಿ ಹಲವು ರೀತಿಯ ಉತ್ತೇಜನ ಕೊಡುಗೆಗಳು ಸಿಗುವ ವಿಶ್ವಾಸವನ್ನು ಷೇರುಪೇಟೆಗಳು ಹೊಂದಿವೆ. ಷೇರು ವಹಿವಾಟು ತೆರಿಗೆ (ಎಸ್‌ಟಿಟಿ), ದೀರ್ಘಾವಧಿಯ ಬಂಡವಾಳ ಗಳಿಕೆ ತೆರಿಗೆ ಮತ್ತು ವಿತರಣಾ ತೆರಿಗೆಯಲ್ಲಿ ಬದಲಾವಣೆಯಾಗಲಿದೆ ಎನ್ನುವ ನಿರೀಕ್ಷೆಯಲ್ಲಿವೆ. ಒಟ್ಟಾರೆಯಾಗಿ, ಉದ್ಯಮಗಳ ಬೆಳವಣಿಗೆಗೆ ಸಕಾರಾತ್ಮಕ ಕ್ರಮಗಳು, ಆದಾಯ ತೆರಿಗೆಯಲ್ಲಿ ಕಡಿತ, ಗ್ರಾಮೀಣ ಭಾಗದಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಿಸುವ ಯೋಜನೆಗಳು ಜಾರಿಗೊಳ್ಳುವ ಸಾಧ್ಯತೆ ಇದೆ.

ನಿರ್ದಿಷ್ಟವಾಗಿ ವಾಹನ, ಮೂಲಸೌಕರ್ಯ, ರಿಯಲ್‌ ಎಸ್ಟೇಟ್‌, ಕೃಷಿ ಮತ್ತು ವಸತಿ ವಲಯಗಳೂ ಉತ್ತೇಜನ ಕೊಡುಗೆಯನ್ನು ನಿರೀಕ್ಷಿಸುತ್ತಿವೆ. ವಿತ್ತೀಯ ಕೊರತೆ ವಿಷಯದಲ್ಲಿ, ಶೇ 3.6 ರಿಂದ ಶೇ 3.8ರಷ್ಟಿದ್ದರೂ ಮಾರುಕಟ್ಟೆ ಅದನ್ನು ನಿಭಾಯಿಸಬಲ್ಲದು.₹ 350 ಲಕ್ಷ ಕೋಟಿ ಆರ್ಥಿಕತೆಯ ಗುರಿ ಸಾಕಾರವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಆರ್ಥಿಕ ಸ್ಥಿತಿಯ ವಾಸ್ತವ ಚಿತ್ರಣವನ್ನು ನೀಡುವ ಮತ್ತು ಚೇತರಿಕೆಗೆ ಪೂರಕವಾದ ನಿರ್ಧಾರಗಳನ್ನು ಘೋಷಿಸುವ ನಿರೀಕ್ಷೆ ಇದೆ.

(ಲೇಖಕ:ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT