ಭಾನುವಾರ, 3 ಮಾರ್ಚ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಂತರ ಬಜೆಟ್ 2024: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾಷಣದ ಟಾಪ್ 10 ಅಂಶಗಳು

Published 1 ಫೆಬ್ರುವರಿ 2024, 12:43 IST
Last Updated 1 ಫೆಬ್ರುವರಿ 2024, 12:43 IST
ಅಕ್ಷರ ಗಾತ್ರ
Introduction

ನವದೆಹಲಿ: ಮಹಾ ಚುನಾವಣೆಗೆ ಮುನ್ನ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಂಡಿಸಿದರು. ಎನ್‌ಡಿಎ ಸರ್ಕಾರದ ಈ ಮಧ್ಯಂತರ ಬಜೆಟ್ 2024ರಲ್ಲಿ ಮಹಿಳೆಯರು, ಬಡವರು, ರೈತರು ಮತ್ತು ಯುವ ಜನರ ಮೇಲೆ ಒತ್ತು ನೀಡಲಾಗಿದೆ ಎಂದು ಸಚಿವೆ ಬಜೆಟ್ ಭಾಷಣದಲ್ಲೇ ಹೇಳಿಕೊಂಡಿದ್ದಾರೆ. ಅವರ ಬಜೆಟ್ ಭಾಷಣದ ಪ್ರಮುಖ ಹತ್ತು ಅಂಶಗಳು ಇಲ್ಲಿವೆ.

ಬಜೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, ಮಾಹಿತಿ, ವಿಶ್ಲೇಷಣೆಗಳನ್ನು ನೀವು ಇಲ್ಲಿ ನೋಡಬಹುದು.

1

ತೆರಿಗೆ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

ವೇತನ ಪಡೆಯುವ ವರ್ಗದವರಿಗೆ ವಿತ್ತ ಸಚಿವೆ ನಿರ್ಮಲಾ ಅವರು ತಮ್ಮ ಮುಂಗಡ ಪತ್ರದಲ್ಲಿ ಯಾವುದೇ ಬದಲಾವಣೆ ಘೋಷಿಸಿಲ್ಲ. ಅಂದರೆ, ಕಳೆದ ಬಾರಿಯ ಆದಾಯ ತೆರಿಗೆ ಪದ್ಧತಿಯೇ ಮುಂದುವರಿಯಲಿದೆ. ಆದರೆ, ದೀರ್ಘಕಾಲದಿಂದ ಪರಿಹಾರವಾಗದಿರುವ ತೆರಿಗೆ ಸಂಬಂಧಿತ ತಗಾದೆಗಳನ್ನು ಕೊನೆಗೊಳಿಸುವ ನಿಟ್ಟಿನಲ್ಲಿ, 2009-10 ನಡುವೆ ₹25,000 ವರೆಗಿನ ಮೊತ್ತ ಹಾಗೂ 2010-2015 ನಡುವೆ ₹10,000 ಮೊತ್ತದ ವ್ಯಾಜ್ಯಗಳನ್ನು ಕೊನೆಗೊಳಿಸುವ ಭರವಸೆ ನೀಡಿದ್ದಾರೆ. ಇದರಿಂದ ಸುಮಾರು 1 ಕೋಟಿ ತೆರಿಗೆದಾರರಿಗೆ ಅನುಕೂಲ ಆಗಲಿದೆ ಎಂದಿದ್ದಾರೆ.

2

ವಂದೇ ಭಾರತ್ ಮಾದರಿಯ ಬೋಗಿಗಳು

ದೇಶದಾದ್ಯಂತ ಸುಮಾರು 40 ಸಾವಿರ ರೈಲು ಬೋಗಿಗಳನ್ನು ವಂದೇ ಭಾರತ್ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗುತ್ತದೆ ಎಂದಿದ್ದಾರೆ ನಿರ್ಮಲಾ ಸೀತಾರಾಮನ್. ಅಂದರೆ, ಅವುಗಳ ಗುಣಮಟ್ಟ, ಸುರಕ್ಷತೆ, ಅನುಕೂಲಗಳನ್ನು ಹೆಚ್ಚಿಸಲಾಗುತ್ತದೆ. ಅಂತೆಯೇ ಮೂರು ರೈಲ್ವೆ ಕಾರಿಡಾರ್‌ಗಳನ್ನೂ ಕೇಂದ್ರವು ಅನುಷ್ಠಾನಕ್ಕೆ ತರಲಿದ್ದು, ಇದು ಹೆಚ್ಚಿನ ಸಂಚಾರ ಸಾಂದ್ರತೆ ಇರುವ ರೈಲು ಮಾರ್ಗಗಳಲ್ಲಿ ಪ್ರಯಾಣಿಕರಿಗೆ ವೇಗ ಮತ್ತು ಸುರಕ್ಷತೆಯೊಂದಿಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ ಎಂದಿದ್ದಾರೆ.

3

ಮಹಿಳೆಯರಿಗೆ ಬಲ

ಚುನಾವಣಾ ಪೂರ್ವ ಬಜೆಟ್‌ನಲ್ಲಿ ನಿರ್ಮಲಾ ಅವರು ಮಹಿಳಾ ಸಬಲೀಕರಣದ ಮಾತನಾಡಿದ್ದಾರೆ. ಮಹಿಳಾ ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡಿ, ಮಹಿಳೆಯರು ವರ್ಷಕ್ಕೆ ಕನಿಷ್ಠ 1 ಲಕ್ಷ ದುಡಿಯುವಂತೆ ಮಾಡುವ ಕೇಂದ್ರದ ಲಕ್ಷಾಧಿಪತಿ ದೀದಿ (ಲಖ್‌ಪತಿ ದೀದಿ) ಯೋಜನೆಯನ್ನು ಈಗಿರುವ 2 ಕೋಟಿಯಿಂದ 3 ಕೋಟಿ ಫಲಾನುಭವಿಗಳಿಗೆ ವಿಸ್ತರಿಸಲಾಗುತ್ತದೆ ಎಂದಿದ್ದಾರೆ. ಅಲ್ಲದೆ, ಆಯುಷ್ಮಾನ್ ಭಾರತ ಯೋಜನೆಯಡಿ ಆರೋಗ್ಯ ರಕ್ಷೆಯ ವ್ಯಾಪ್ತಿಯನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಸಹಾಯಕರಿಗೂ ವಿಸ್ತರಿಸಲಾಗುತ್ತದೆ ಎಂದಿದ್ದಾರೆ. ಜೊತೆಗೆ, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ 9ರಿಂದ 14 ವಯಸ್ಸಿನ ಬಾಲಕಿಯರಿಗೂ ಲಸಿಕೆ ನೀಡಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ.

4

ಮೂಲಸೌಕರ್ಯಕ್ಕೆ ಉತ್ತೇಜನ

ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಮೀಸಲಾಗಿರುವ ನಿಧಿಯನ್ನು 11.1 ಲಕ್ಷ ಕೋಟಿ ರೂ.ಗೆ ಏರಿಸಲಾಗಿದೆ. ಅಂದರೆ, ಹಿಂದಿನ ಮುಂಗಡ ಪತ್ರಕ್ಕಿಂತ ಇದರ ಪ್ರಮಾಣವು ಶೇ.11ರಷ್ಟು ಏರಿಕೆ ಮಾಡಲಾಗಿದೆ.

5

ಮಧ್ಯಮ ವರ್ಗದವರ ಮನೆಯ ಕನಸು

ಬಾಡಿಗೆ ಮನೆ, ಸ್ಲಂ ಪ್ರದೇಶ ಅಥವಾ ಅನಧಿಕೃತ ಕಾಲನಿಗಳಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದವರಿಗೆ ಮನೆ ಕಟ್ಟಲು ಅಥವಾ ಖರೀದಿಸಲು ನೆರವು ನೀಡುವ ಯೋಜನೆ ಘೋಷಿಸಲಾಗಿದೆ. ಇದಕ್ಕೆ ಹಣಕಾಸು ಸಾಲದ ನೆರವು ನೀಡಲಾಗುತ್ತದೆ. ಇದರೊಂದಿಗೆ, ಪಿಎಂ ಆವಾಸ್ ಯೋಜನೆಯಡಿ, ಮುಂದಿನ ಐದು ವರ್ಷಗಳಲ್ಲಿ ಇನ್ನೂ 2 ಕೋಟಿ ಮನೆಗಳ ನಿರ್ಮಾಣ ಮಾಡಲಾಗುತ್ತದೆ ಎಂದು ನಿರ್ಮಲಾ ಘೋಷಣೆ ಮಾಡಿದ್ದಾರೆ.

6

ರಕ್ಷಣಾ ಇಲಾಖೆಗೆ ಹೆಚ್ಚು ಅನುದಾನ

ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ಶೇ.8ರಷ್ಟು ಅನುದಾನ ಹೆಚ್ಚಿಸಲಾಗಿದೆ. ನಿರ್ಮಲಾ ಸೀತಾರಾಮನ್ ಘೋಷಿಸಿರುವಂತೆ ಈ ವರ್ಷದ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ 6.2 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಇದಲ್ಲದೆ, ರಕ್ಷಣೆಗೆ ಸಂಬಂಧಿಸಿದಂತೆ ಡೀಪ್ ಟೆಕ್ ತಂತ್ರಜ್ಞಾನವನ್ನು ಬಲಪಡಿಸುವುದಕ್ಕೂ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ ನಿರ್ಮಲಾ ಸೀತಾರಾಮನ್.

7

ಎಫ್‌ಡಿಐ ಎಂದರೆ ಮೊದಲು ಭಾರತವನ್ನು ಅಭಿವೃದ್ಧಿಪಡಿಸೋಣ (First Develop India)

ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಯನ್ನೇ ಗಮನದಲ್ಲಿಟ್ಟುಕೊಂಡು, ಮೊದಲು ಭಾರತವನ್ನು ಅಭಿವೃದ್ಧಿಪಡಿಸೋಣ ಎಂಬ ಪರಿಕಲ್ಪನೆಯೊಂದಿಗೆ, ಭಾರತದಲ್ಲಿ ಹೂಡಿಕೆ ಮಾಡುವ ಕುರಿತು ವಿದೇಶಿ ಪಾಲುದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂದು ಹಣಕಾಸು ಸಚಿವೆ ಘೋಷಿಸಿದ್ದಾರೆ. ಜೊತೆಗೆ, ಕಳೆದ ಹತ್ತು ವರ್ಷಗಳಲ್ಲಿ (2014-2023) ಹಿಂದಿನ ಅವಧಿಗೆ ಹೋಲಿಸಿದರೆ (2005-2014) ಎಫ್‌ಡಿಐ ಒಳಹರಿವಿನ ಪ್ರಮಾಣವು ದುಪ್ಪಟ್ಟಾಗಿದೆ (596 ಶತಕೋಟಿ ಡಾಲರ್) ಎಂದಿದ್ದಾರೆ.

8

ಸಂಶೋಧನೆ ಮತ್ತು ನಾವೀನ್ಯ ತಂತ್ರಜ್ಞಾನ, ಯುವ ಶಕ್ತಿಗೆ ಒತ್ತು

ಖಾಸಗಿ ವಲಯವು ಸಂಶೋಧನೆ ಮತ್ತು ನಾವೀನ್ಯ ತಂತ್ರಜ್ಞಾನ ಕ್ಷೇತ್ರಕ್ಕೆ ಒತ್ತು ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಪೂರಕವಾಗಲಿ ಎಂಬ ಉದ್ದೇಶಕ್ಕಾಗಿ 50 ವರ್ಷಗಳ ಅವಧಿಗೆ ಬಡ್ಡಿರಹಿತ ಸಾಲ ನೀಡುವುದಕ್ಕಾಗಿ ₹1 ಲಕ್ಷ ಕೋಟಿ ಸಂಚಿತ ನಿಧಿಯನ್ನು ಸ್ಥಾಪಿಸಲಾಗುತ್ತದೆ ಎಂದಿದ್ದಾರೆ ಕೇಂದ್ರ ಹಣಕಾಸು ಸಚಿವೆ. ನಮ್ಮ ಯುವ ಜನಾಂಗ ಮತ್ತು ತಂತ್ರಜ್ಞಾನದ ಶಕ್ತಿ-ಸಾಮರ್ಥ್ಯಗಳನ್ನು ಬೆಸೆಯುವ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ ಎಂದು ಸೀತಾರಾಮನ್ ಹೇಳಿದ್ದಾರೆ.

9

ದೇಶಿ ಪ್ರವಾಸೋದ್ಯಮ ಅಭಿವೃದ್ಧಿ ಒತ್ತು

ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಅವರು ದೇಶಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿದ್ದಾರೆ. ದೇಶಿ ಪ್ರವಾಸೋದ್ಯಮದ ಒಲವು ಹೆಚ್ಚಾಗುತ್ತಿದ್ದು, ಲಕ್ಷದ್ವೀಪ ಸೇರಿದಂತೆ ಭಾರತದ ದ್ವೀಪಗಳಲ್ಲಿ ಬಂದರುಗಳನ್ನು ಸಂಪರ್ಕಿಸುವುದು, ಪ್ರವಾಸೋದ್ಯಮ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರಿಂದ ಉದ್ಯೋಗ ಸೃಷ್ಟಿಯೂ ಹೆಚ್ಚಾಗುತ್ತದೆ ಎಂದಿದ್ದಾರೆ ನಿರ್ಮಲಾ.

10

ಬಡವರು, ಮಹಿಳೆಯರು, ಯುವಜನರು ಮತ್ತು ರೈತರು

ಬಡವರು, ಮಹಿಳೆಯರು, ಯುವಜನರು ಮತ್ತು ರೈತರು - ಇವರು ವಿಕಸಿತ ಭಾರತದ ಆಧಾರ ಸ್ತಂಭಗಳು. ಅವರೆಲ್ಲರ ಅಗತ್ಯಗಳಿಗೆ ಆದ್ಯ ಗಮನ ನೀಡಿ, ಬೆಂಬಲ ಒದಗಿಸಲು ಸರ್ಕಾರ ಬದ್ಧವಾಗಿದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಇವರ ಸಬಲೀಕರಣ ಸಾಧ್ಯವಾಗಬೇಕು. 2047ರಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ (ವಿಕಸಿತ ಭಾರತ) ಪರಿವರ್ತಿಸುವ ಸಂಕಲ್ಪವು ಈ ಮೂಲಕ ಸಾಕಾರವಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ರೈತರು ನಮ್ಮ ಅನ್ನದಾತರು. ಪ್ರತಿ ವರ್ಷ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 11.8 ಕೋಟಿ ರೈತರಿಗೆ ಹಣಕಾಸು ನೆರವು ನೀಡಲಾಗುತ್ತಿದೆ ಎಂದು ನಿರ್ಮಲಾ ನೆನಪಿಸಿದ್ದಾರೆ.

ಬಜೆಟ್ ಅಂಕಿ ಅಂಶಗಳ ಬಗೆಗೆ ಮತ್ತಷ್ಟು ಮಾಹಿತಿ ಇಲ್ಲಿದೆ.