ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2024 | ದಾಖಲೆಯ 15ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ

ಆಯವ್ಯಯದ ಮೊತ್ತ ₹ 3.80 ಲಕ್ಷ ಕೋಟಿಗೆ ಏರಿಕೆ?- ಬೆಳಿಗ್ಗೆ 10.15ಕ್ಕೆ ಮಂಡನೆ ಆರಂಭ
Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಅಭಿವೃದ್ಧಿಯ ಮುನ್ನೋಟ ನೀಡುವ 2024–25ನೇ ಸಾಲಿನ ರಾಜ್ಯ ಬಜೆಟ್‌ ಶುಕ್ರವಾರ (ಫೆ.16) ಬೆಳಿಗ್ಗೆ 10.15ಕ್ಕೆ ಮಂಡನೆಯಾಗಲಿದೆ.

ಈವರೆಗೆ 14 ಬಜೆಟ್ ಮಂಡಿಸಿ ರಾಜ್ಯದಲ್ಲಿ ದಾಖಲೆ ಸೃಷ್ಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 15ನೇ ಬಜೆಟ್ ಇದಾಗಿದೆ. ಲೋಕಸಭೆ ಚುನಾವಣೆ ಎದುರುಗೊಳ್ಳುವ ಹೊತ್ತಿನೊಳಗೆ, ಮತದಾರರನ್ನು ಕಾಂಗ್ರೆಸ್‌ ಪಕ್ಷದತ್ತ ಸೆಳೆಯುವ ಹೊಸ ಜನಪ್ರಿಯ ಘೋಷಣೆ, ಚುನಾವಣೆ ಕಾರಣಕ್ಕೆ ಹೊಸ ತೆರಿಗೆಯ ಭಾರ ಹಾಕದಿರುವ ಬಜೆಟ್ ಇದಾಗಿರಲಿದೆ. ಜುಲೈನಲ್ಲಿ ಸಿದ್ದರಾಮಯ್ಯ ಮಂಡಿಸಿದ್ದ ಪರಿಷ್ಕೃತ ಬಜೆಟ್‌ನ ಮೊತ್ತ ₹3.27 ಲಕ್ಷ ಕೋಟಿಯಾಗಿತ್ತು. ಈ ಬಾರಿ ಬಜೆಟ್‌ ಮೊತ್ತ ₹3.50 ಲಕ್ಷ ಕೋಟಿ ಅಥವಾ ₹3.80 ಲಕ್ಷ ಕೋಟಿಗೆ ತಲುಪುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದ ಬರೆಯ ಮಧ್ಯೆ ವಿತ್ತೀಯ ಶಿಸ್ತಿನ ಪರಿಮಿತಿಯಲ್ಲಿ ವೆಚ್ಚ, ಸಂಪನ್ಮೂಲ ಕ್ರೋಡೀಕರಣದ ‘ಲೆಕ್ಕಾಚಾರ’ಗಳು ಈ ಬಜೆಟ್‌ ಮೇಲಿನ ಕುತೂಹಲವನ್ನು ಹೆಚ್ಚಿಸಿವೆ. 

ಕೇಂದ್ರದ ತೆರಿಗೆ ಪಾಲಿನಲ್ಲಿ ಅನ್ಯಾಯವಾಗುತ್ತಿದೆ ಎಂದು ದೂರಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದ ಸಿದ್ದರಾಮಯ್ಯ, ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬ ಅಭಿಯಾನ ಆರಂಭಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ವಿವಿಧ ರಾಜ್ಯಗಳಿಂದ ಸಲ್ಲಿಕೆಯಾಗುವ ತೆರಿಗೆ ಸಂಗ್ರಹ, ಆ ಮೊತ್ತದಲ್ಲಿ ರಾಜ್ಯಕ್ಕೆ ಸಿಗುವ ಪಾಲಿನಲ್ಲಿ ಆಗಿರುವ ಅನ್ಯಾಯವನ್ನು ಬಜೆಟ್‌ ಭಾಷಣದಲ್ಲಿ ಪ್ರಸ್ತಾಪಿಸಲು ಸಿದ್ದರಾಮಯ್ಯ ತಯಾರಿ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ. 

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಆರ್ಥಿಕ ಭಾರ, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು, ಸಹಾಯಾನುದಾನ ಕೊರತೆಯ ಮಧ್ಯೆಯೇ ಜನಪ್ರಿಯ ಬಜೆಟ್ ಮಂಡಿಸಲು ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ. ಗ್ಯಾರಂಟಿಗಳಿಗಾಗಿಯೇ ₹58 ಸಾವಿರ ಕೋಟಿ ತೆಗೆದಿಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.  ರೈತ ಸಮುದಾಯ, ಕೈಗಾರಿಕಾ ವಲಯ, ಕಾರ್ಮಿಕ ಸಂಘಟನೆಗಳು ನಾನಾ ಬೇಡಿಕೆಗಳನ್ನು ಮುಂದಿಟ್ಟಿವೆ. ತೀವ್ರ ಬರದಿಂದ ರೈತ ವರ್ಗ ಸಂಕಷ್ಟದಲ್ಲಿದೆ. ಕೇಂದ್ರದಿಂದ ಇನ್ನೂ ಬಿಡುಗಡೆಯಾಗದ ಬರ ಪರಿಹಾರ ಮುಖ್ಯಮಂತ್ರಿ ಅವರನ್ನು ಒತ್ತಡಕ್ಕೆ ಸಿಲುಕಿಸಿದೆ. ಬರ ಇರುವ ಕಾರಣಕ್ಕೆ ಈ ಬಾರಿ ರೈತರ ಸಾಲವನ್ನು ಸಂಪೂರ್ಣವಾಗಿ ಒಮ್ಮೆ ಮನ್ನಾ ಮಾಡಲಿ ಎನ್ನುವುದು ರೈತ ಸಮುದಾಯದ ನಿರೀಕ್ಷೆಯಾಗಿದೆ.

ಗ್ರಾಮೀಣ ಮತ್ತು ನಗರ ಭಾಗದ ಜನರಿಗೆ ಸೂರು ಹೊಂದುವ ದಶಕಗಳ ಕನಸು ಇನ್ನೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಮಧ್ಯಮ ವರ್ಗ ಮತ್ತು ಕೂಲಿ ಕಾರ್ಮಿಕರು ನಗರದಲ್ಲಿ ಸ್ವಂತ ಸೂರು ಕಾಣುವುದು ಕನಸಾಗಿಯೇ ಉಳಿದಿದೆ. ಹೀಗಾಗಿ ವಿಶೇಷ ವಸತಿ ಯೋಜನೆಗಳನ್ನು ರೂಪಿಸಿ, ಪ್ರತಿಯೊಬ್ಬರಿಗೂ ಸೂರು (ಮನೆ) ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಇದೆ. ಇದಕ್ಕೆ ಎಷ್ಟರಮಟ್ಟಿಗೆ ಬಜೆಟ್‌ನಲ್ಲಿ ಆದ್ಯತೆ ಸಿಗಲಿದೆ ಎಂಬ ಕುತೂಹಲವಂತೂ ಇದೆ.

ಸಂಭಾವ್ಯ ಹೊಸ ಘೋಷಣೆಗಳು

  • ಕರ್ನಾಟಕ ರಾಜ್ಯ ಉದಯವಾಗಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲಿ ಹಲವು ಹೊಸ ಯೋಜನೆಗಳು

  • ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಜಾರಿ ಕುರಿತು ಪ್ರಸ್ತಾವ ಮತ್ತು ಅನುದಾನ ನೀಡಿಕೆ

  • ಹೊಸ ಜಿಲ್ಲೆಗಳಾಗಿ ಚಿಕ್ಕೋಡಿ ಗೋಕಾಕ ಮಧುಗಿರಿ ಮಹಿಳೆಯರಿಗಾಗಿ ವಿಶೇಷ ಯೋಜನೆಗಳು

  • ರಾಮಮಂದಿರಗಳ ಪುನುರುತ್ಥಾನಕ್ಕೆ ₹100 ಕೋಟಿ ಅನುದಾನ

  • ಮೇಕೆದಾಟು ಯೋಜನೆಗೆ ಅನುದಾನ

  • ಬೆಂಗಳೂರು ಅಥವಾ ಕಲಬುರಗಿಯಲ್ಲಿ ವಚನ ಮಂಟಪ ಮತ್ತು ವಚನ ವಿಶ್ವವಿದ್ಯಾಲಯ

  • ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಬ್ರ್ಯಾಂಡ್‌ ಬೆಂಗಳೂರಿಗೆ ಆದ್ಯತೆ

  • ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ

  • ಬಂಜಾರ ವಾಲ್ಮೀಕಿ ಬೋವಿ ಮಾದಿಗರ ಜತೆಗೆ ಹಿಂದುಳಿದ ವಿವಿಧ ಜಾತಿಗಳಿಗೆ ಆರ್ಥಿಕ ನೆರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT