ಶನಿವಾರ, ಮಾರ್ಚ್ 6, 2021
28 °C
ತೀವ್ರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಬಲ್ಲ ಬಜೆಟ್‌ಗಾಗಿ ದೇಶ ಕಾಯುತ್ತಿದೆ

ಬಜೆಟ್: ಸಚಿವೆ ಮುಂದೆ ಸವಾಲಿನ ಸಾಲು

ಪ್ರೊ. ಜಿ.ವಿ.ಜೋಶಿ Updated:

ಅಕ್ಷರ ಗಾತ್ರ : | |

ಕೇಂದ್ರ ಹಣಕಾಸು ಸಚಿವರಾಗಿ ನಿರ್ಮಲಾ ಸೀತಾರಾಮನ್ ಈತನಕ ಮಂಡಿಸಿದ ಎರಡು ಬಜೆಟ್‌ಗಳು ಭಾರಿ ಪರಿವರ್ತನೆ ತರುವಂತಹ ಪರಿಣಾಮವನ್ನೇನೂ ಬೀರಲಿಲ್ಲ. ಫೆಬ್ರುವರಿ 1ರಂದು ಅವರು ಮಂಡಿಸಲಿರುವ ಮೂರನೆಯ ಬಜೆಟ್‌ನ ಎದುರು ಸವಾಲುಗಳ ಸಾಗರವೇ ನಿಂತಿದೆ. ಆದರೂ ಆರ್ಥಿಕ ಪ್ರಗತಿಯ ಸಾಧನೆಗಾಗಿ ಹಿಂದೆಂದೂ ಮಂಡನೆಯಾಗದಂಥ ಬಜೆಟ್ ರೂಪಿಸಲು ಸಲಹೆ ನೀಡುವಂತೆ ಜನವರಿ 8ರಂದು ನವದೆಹಲಿಯಲ್ಲಿ ಅವರು ಬಹಿರಂಗವಾಗಿ ಮನವಿ ಮಾಡಿ ಅಚ್ಚರಿ ಹುಟ್ಟಿಸಿದ್ದರು. ಹೀಗಾಗಿ, ಅಪರೂಪದ ಬಜೆಟ್ ಮಂಡಿಸಲು ನಿರ್ಮಲಾ ಭರ್ಜರಿ ತಯಾರಿ ನಡೆಸುತ್ತಿದ್ದಾರೆಂಬ ಭಾವನೆ ಬರುವುದು ಸಹಜವಾದರೂ ಅದರ ರೂಪ ಹೇಗಿರಲಿದೆ ಎಂದು ಕೇಳಬೇಕಾದ ಪ್ರಸಂಗವೂ ಎದುರಾಗಿದೆ.

ಆರ್ಥಿಕತೆಗೆ ಚೇತರಿಕೆ ಒದಗಿಸಬಲ್ಲ ಅಭಿವೃದ್ಧಿ ಪ್ರಕ್ರಿಯೆ, ಹೋರಾಟದ ಹಾದಿ ಹಿಡಿದ ಕೃಷಿಕ ಸಮುದಾಯಕ್ಕೆ ಸಾಂತ್ವನ ನೀಡಬಲ್ಲ ನೀತಿ ಮತ್ತು ಜನಸಮುದಾಯಕ್ಕೆ ಸ್ವಾಸ್ಥ್ಯ ಒದಗಿಸಬಲ್ಲ ವಿಶೇಷ ಸಾಂಸ್ಥಿಕ ವ್ಯವಸ್ಥೆ- ಹೀಗೆ ಸಾರ್ವಜನಿಕ ವೆಚ್ಚದ ಭಾರಿ ಹೆಚ್ಚಳಕ್ಕೆ ದಾರಿ ಮಾಡಲಿರುವ ಪ್ರಮುಖ ಧ್ಯೇಯಗಳನ್ನು ಹೊಂದಿದ ಮುಂಗಡಪತ್ರವನ್ನು ಸಂಪನ್ಮೂಲಗಳ ಕೊರತೆ ತೀವ್ರವಾಗಿರುವಾಗಲೇ ಮಂಡಿಸಬೇಕಾದ ತುರ್ತು ಅಗತ್ಯ ಸಚಿವರನ್ನು ಸುತ್ತುವರಿದಿದೆ.

ದೇಶದ ಆರ್ಥಿಕತೆಯ ರಕ್ತನಾಳದಂತಿರುವ ಬ್ಯಾಂಕಿಂಗ್ ರಂಗದ ಜಂಘಾಬಲಕ್ಕೆ ಏಟು ನೀಡುತ್ತಿರುವ ವಸೂಲಾಗದ ಸಾಲದ ಜಾಲ, ₹107 ಲಕ್ಷ ಕೋಟಿಗಿಂತ ಜಾಸ್ತಿಯಾದ ಕೇಂದ್ರ ಸರ್ಕಾರದ ಸಾಲದ ಭಾರ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಕೇಂದ್ರ ಸರ್ಕಾರದತ್ತ ನೆರವಿಗಾಗಿ ನೋಡುತ್ತಿರುವ ರಾಜ್ಯ ಸರ್ಕಾರಗಳಿಂದ ಈಗ ಆಗಾಗ ಆಗುತ್ತಿರುವುದು ಒಕ್ಕೂಟ ವ್ಯವಸ್ಥೆಯ ಬಲ ಪ್ರದರ್ಶನವಲ್ಲ, ಬದಲಾಗಿ ಮಿತಿಗಳ ದರ್ಶನ!

ಜಿಎಸ್‌ಟಿ ಸಂಗ್ರಹದಲ್ಲಿ ಸುಧಾರಣೆ, ಉಕ್ಕಿನ ಬಳಕೆಯಲ್ಲಿ ಹೆಚ್ಚಳ, ಟೋಲ್ ಸಂಗ್ರಹದಲ್ಲಿ ಏರಿಕೆ, ಪೆಟ್ರೋಲ್ ಖರೀದಿಯಲ್ಲಿ ಏರುಗತಿ, ಷೇರುಪೇಟೆಯಲ್ಲಿ ಸಾಮಾನ್ಯವಾಗಿರುವ ಸಕಾರಾತ್ಮಕ ವಹಿವಾಟು ಮತ್ತು ಮಾರುಕಟ್ಟೆಯಲ್ಲಿ ಚೇತರಿಕೆ ಈಗ ಕಣ್ಣಿಗೆ ಬೀಳುತ್ತಿರುವುದು ನಿಜ. ಆದರೆ ಕೊರೊನಾ ಶಕೆ ಪ್ರಾರಂಭವಾದ ಮೇಲೆ ಈ ದೊಡ್ಡ ಅರ್ಥವ್ಯವಸ್ಥೆಯಲ್ಲಿ ಕವಿದ ಕಾರ್ಮೋಡದ ಪ್ರಭಾವ ಇನ್ನೂ ಕದಡಿ ಹೋಗದೆ ದಟ್ಟವಾಗಿಯೇ ಇದೆ. ಮುಂದೆ ಸುಧಾರಣೆಯಾಗಬಹುದೆಂದು ಆಶಿಸಬಹುದಾದರೂ 2021-22ನೇ ಸಾಲಿನ ಹಣಕಾಸು ವರ್ಷದಲ್ಲಿ ಅದರ ಪ್ರಭಾವವು ಸವಾಲು ಒಡ್ಡುವ ರೀತಿಯಲ್ಲಿ ನಿಚ್ಚಳವಾಗಿ ಉಳಿಯುವುದೆಂಬ ಭಾವನೆ ವ್ಯಾಪಿಸಿದೆ.

ಬಜೆಟ್ ಮಂಡನೆ ದಿನ ಸಮೀಪಿಸುತ್ತಿರುವಾಗ, ಇಂಡಿಯಾ ರೇಟಿಂಗ್ಸ್ ಏಜೆನ್ಸಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಕುಸಿತ ಶೇ (-) 7.5ರಷ್ಟಿರಲಿದೆ ಎಂದು ಅಂದಾಜು ಮಾಡಿದ್ದೇನೋ ಹೌದು. ಆದರೆ ದೇಶದ ಅರ್ಥವ್ಯವಸ್ಥೆಯು ಕೋವಿಡ್-19 ಸೃಷ್ಟಿಸಿದ ಬಿಕ್ಕಟ್ಟಿನಿಂದ ಹೊರಬರುತ್ತಿದೆ ಎಂದು ಆರ್‌ಬಿಐ ಅಧಿಕಾರಿಗಳು ಹೇಳಿದ ಬೆನ್ನಲ್ಲೇ, ಇದು ಒಂದಿಬ್ಬರು ಲೇಖಕರ ಅಭಿಪ್ರಾಯವೇ ವಿನಾ ಕೇಂದ್ರೀಯ ಬ್ಯಾಂಕಿನದ್ದಲ್ಲ ಎಂದು ಹೇಳಿ ಪಾರಾಗಿಬಿಡುವ ಸ್ಪಷ್ಟ ಉದ್ದೇಶವುಳ್ಳ ವಿವರಣೆ ನಿರ್ಮಲಾ ಅವರ ಪಾಲಿಗೆ ತಂಪಾದ, ರುಚಿಕರವಾದ ತುಪ್ಪವಾಗಲು ಹೇಗೆ ತಾನೇ ಸಾಧ್ಯ?

ಕೊರೊನಾ ದಾಳಿಯ ಹಿನ್ನೆಲೆಯಲ್ಲಿ, ತೀವ್ರವಾದ ಆರ್ಥಿಕ ಅಸಮಾನತೆಗೆ ಕಡಿವಾಣ ಹಾಕಬಲ್ಲ ಒಳಗೊಳ್ಳುವಿಕೆಯ ಅಭಿವೃದ್ಧಿ ಗುರಿಯನ್ನು ಸಾಧಿಸಲು ಈಗಲಾದರೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಶೇಷ ಲಕ್ಷ್ಯ ನೀಡಬೇಕಾಗಿದೆ ಎಂದು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರು ಹೇಳಿದ್ದು ಮಾರ್ಮಿಕವಾಗಿದೆ. ಈ ಅಸಮಾನತೆಯನ್ನು ತೊಡೆದುಹಾಕುವಲ್ಲಿ ಸರ್ಕಾರಿ ವ್ಯವಸ್ಥೆಯ ಮೂಲಭೂತ ಪಾತ್ರ ಏನು ಎಂಬುದನ್ನೂ ಇದು ಸ್ಪಷ್ಟಪಡಿಸಿದೆ ಎಂದೂ ಅವರು ಹೇಳಿದ್ದಾರೆ. ದೇಶದಾದ್ಯಂತ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಗಣನೀಯವಾಗಿ ಸುಧಾರಿಸುವ ಅಗತ್ಯವನ್ನು ಎನ್.ಕೆ.ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗದ ವರದಿ ಎತ್ತಿ ತೋರಿಸಿದೆ. ಇವೆಲ್ಲವನ್ನೂ ಈಗ ನಿರ್ಮಲಾ ಪರಿಗಣಿಸಬೇಕಾಗಿದೆ.

ಕಳೆದ ಮೇ ತಿಂಗಳಿನಲ್ಲಿ ನೀಡಲಾದ ₹ 20 ಲಕ್ಷ ಕೋಟಿ ಮೊತ್ತದ ‘ಆತ್ಮನಿರ್ಭರ ಭಾರತ’ ಕೊಡುಗೆಯನ್ನು ನೆನಪಿಸಿಕೊಂಡರೂ ಕೇಂದ್ರ ಸರ್ಕಾರವು ಮತ್ತೆ ಮತ್ತೆ ಕೃಷಿ, ಉದ್ದಿಮೆ ರಂಗಗಳಿಗೆ ಉತ್ತೇಜನ ನೀಡಿದರೂ ಈಗಾಗಲೇ ಜಿಡಿಪಿಯ ಶೇ 7.5ರಷ್ಟಾಗಿರುವ ವಿತ್ತೀಯ ಕೊರತೆಯನ್ನು ಹೆಚ್ಚಿಸದಂತೆ ಮೋದಿ ನೇತೃತ್ವದ ಸರ್ಕಾರಕ್ಕೆ ಆಪ್ತರಾದ ಆರ್‌ಬಿಐ ಮಾಜಿ ಗವರ್ನರ್ ಬಿಮಲ್ ಜಲಾನ್ ಅವರು ಸಲಹೆ ನೀಡಿದ್ದು ಹಣಕಾಸು ಸಚಿವರ ಪಾಲಿಗೆ ಎಚ್ಚರಿಕೆಯ ನುಡಿಯೇ ಸರಿ. 2020ರ ಅಕ್ಟೋಬರ್‌ನಲ್ಲಿ ಸೇವೆಗಳು ಮತ್ತು ತಯಾರಿಕಾ ವಲಯಗಳ ಒಟ್ಟಾರೆ ಬೆಳವಣಿಗೆಯನ್ನು ತೋರಿಸುವ ಸೂಚ್ಯಂಕವು 58ರಷ್ಟು ಇದ್ದದ್ದು ನವೆಂಬರ್‌ನಲ್ಲಿ 56.3ಕ್ಕೆ ಇಳಿಕೆಯಾಗಿದ್ದನ್ನು ಕೂಡ ಅವರು ಅಲಕ್ಷಿಸುವಂತಿಲ್ಲ.

ಉದ್ಯೋಗ ಸೃಷ್ಟಿಯಲ್ಲಿ ಹಿಂದೆ ಬಿದ್ದರೂ ಆದಾಯದ ದೃಷ್ಟಿಯಿಂದ ಮಹತ್ವ ಪಡೆದ ಸೇವಾ ವಲಯವು ಕೊರೊನಾ ಹೊಡೆತದಿಂದ ಈಗ ಬಳಲುತ್ತಿದೆ. ಭಾರತದ ಸೇವೆಗಳಿಗೆ ಅಂತರರಾಷ್ಟ್ರೀಯವಾಗಿ ಬೇಡಿಕೆ ಸೀಮಿತವಾಗಿ ಹೋಗಿದೆ. ನಗದು ಕೊರತೆ, ಕಾರ್ಮಿಕರ ಅಭಾವ ಮತ್ತು ಮಂದಗತಿಯ ಬೇಡಿಕೆಯಿಂದ ನಲುಗುತ್ತಿರುವ ಸೇವಾ ವಲಯದ ಸುಧಾರಣೆಗಾಗಿ ನಿರ್ಮಲಾ ಚಿಂತನೆ ಮಾಡಬೇಕಾಗಿದೆ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಶೇ 7.61ರಷ್ಟಾಗಿ ಗರಿಷ್ಠ ಮಟ್ಟ ತಲುಪಿ, ಆರ್ಥಿಕ ಹಿಂಜರಿತ ರಾಷ್ಟ್ರವ್ಯಾಪಿಯಾಗಿರುವಾಗಲೇ ಸುದ್ದಿ ಮಾಡಿತ್ತು. ನಂತರ ನವೆಂಬರ್‌ನಲ್ಲಿ ಶೇ 6.93ಕ್ಕೆ ಇಳಿಕೆಯಾಗಿದ್ದರೂ ಸಗಟು ದರ ಸೂಚ್ಯಂಕ ಆಧರಿಸಿದ ಹಣದುಬ್ಬರದ ಪ್ರಮಾಣ ನವೆಂಬರ್‌ನಲ್ಲಿ 9 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು. ಡಿಸೆಂಬರ್‌ನಲ್ಲಿ ಸಗಟು ಹಣದುಬ್ಬರದಲ್ಲಿ ಆಗಿದ್ದು ತೀರ ಅಲ್ಪವಾದ ಇಳಿಕೆ. 2014ರ ಚುನಾವಣೆಯಲ್ಲಿ ಯುಪಿಎ ಸೋಲಲು ನಿಯಂತ್ರಣಕ್ಕೆ ಬಾರದ ಹಣದುಬ್ಬರವೂ ಒಂದು ಪ್ರಬಲ ಕಾರಣವಾಗಿತ್ತು. ಇದನ್ನು ನೆನಪಿಸಿಕೊಂಡು, ಬರುತ್ತಿರುವ ಬಜೆಟ್ ಹಣದುಬ್ಬರದ ಶಕ್ತಿಗಳ ಬಲವರ್ಧನೆಗೆ ದಾರಿ ಮಾಡದಂತೆ ಮುಂಜಾಗ್ರತೆ ವಹಿಸಬೇಕಾಗಿದೆ.

12 ಪಂಚವಾರ್ಷಿಕ ಯೋಜನೆಗಳು ಕಳೆದುಹೋದರೂ ಮೋದಿ ನೇತೃತ್ವದ ಸರ್ಕಾರ ಬಂದು ಆರೂವರೆ ವರ್ಷಗಳ ನಂತರವೂ ಬಡತನ ಇನ್ನೂ ಈ ದೇಶದಲ್ಲಿ ಗಂಭೀರ ಸಮಸ್ಯೆಯಾಗಿಯೇ ಉಳಿದಿರುವುದು ದೊಡ್ಡ ದುರಂತ. ಬಡತನ ನಿವಾರಣೆ ಆಗಬೇಕಾದರೆ ಶೇ 10ರಷ್ಟು ಆರ್ಥಿಕ ಬೆಳವಣಿಗೆ ದರ ಅವಶ್ಯವೆಂದು ನೀತಿ ಆಯೋಗದ ಕಾರ್ಯನಿರ್ವಾಹಕ ಅಧಿಕಾರಿ ಹೇಳಿ ಸುಮಾರು 5 ವರ್ಷಗಳು ಕಳೆದುಹೋದವು. ಭಾರತದಲ್ಲಿ ದಿನಕ್ಕೆ ₹ 133ಕ್ಕಿಂತಲೂ ಅಲ್ಪ ಆದಾಯದ ಕಡು ಬಡವರ ಸಂಖ್ಯೆ 2011ರ ನಂತರ ಗಣನೀಯವಾಗಿ 5 ಕೋಟಿಗೆ ಇಳಿದಿದೆ ಎಂದು 2019ರ ಜನವರಿಯಲ್ಲಿ ವಿಶ್ವಬ್ಯಾಂಕ್ ವರದಿ ಮಾಡಿತ್ತು. ನಂತರ ಕೊರೊನಾ ಪಿಡುಗಿನ ಪ್ರಸರಣದಿಂದ ಕಡು ಬಡವರ ಸಮಸ್ಯೆ ಮತ್ತೆ ತೀವ್ರವಾಗುತ್ತಿರುವುದನ್ನು ಸಚಿವೆ ಪರಿಗ್ರಹಿಸಬೇಕಾಗಿದೆ.

ಕೇಂದ್ರ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ, ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳ ನಡುವಣ ಸಂಬಂಧವನ್ನು ಗುರುತಿಸಿದ್ದರಲ್ಲದೆ, ಸಮಗ್ರವಾದ ಉದ್ಯೋಗ ನೀತಿಯನ್ನು ಸಾರಲು ಒಲವು ತೋರಿದ್ದರು. ಮುಂದೆ ಉದ್ಯೋಗ ಸೃಷ್ಟಿಗೆ ಒಲವು ತೋರಿದ ಉದ್ಯಮಗಳಿಗೆ ತೆರಿಗೆ ವಿನಾಯಿತಿ ಘೋಷಿಸಿ ಸುಮ್ಮನಾದರು. ಈಗಂತೂ ವಿವಿಧ ರಂಗಗಳಲ್ಲಿ ಇರುವ ಉದ್ಯೋಗ ಅವಕಾಶಗಳನ್ನು ಗುರುತಿಸುವ ಮತ್ತು ರಾಜ್ಯಗಳ ಪಾತ್ರವನ್ನು ಪರಿಗಣಿಸುವ ಉದ್ಯೋಗ ನೀತಿಯ ಅಗತ್ಯ ತೀವ್ರವಾಗಿರುವುದನ್ನು ಸಚಿವೆ ತಮ್ಮ ಬಜೆಟ್ ಭಾಷಣದಲ್ಲಿ ಒಪ್ಪಿಕೊಳ್ಳುವುದು ರಾಷ್ಟ್ರೀಯ ಅವಶ್ಯಕತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು