ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಪರಿಹಾರ: ರಾಜ್ಯಕ್ಕೆ ಮತ್ತೆ ನಷ್ಟ

Last Updated 1 ಫೆಬ್ರುವರಿ 2021, 20:03 IST
ಅಕ್ಷರ ಗಾತ್ರ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರ ನಿಗದಿಯಲ್ಲಿ ರಾಜ್ಯಕ್ಕೆ ಸತತ ಎರಡನೇ ವರ್ಷವೂ ನಷ್ಟವಾಗಿದೆ. 2020–21ನೇ ವರ್ಷದಲ್ಲಿ ಬಜೆಟ್‌ನಲ್ಲಿ ನಿಗದಿಯಾಗಿದ್ದ ಮೊತ್ತಕ್ಕಿಂತಲೂ ಕಡಿಮೆ ಪರಿಹಾರ ರಾಜ್ಯಕ್ಕೆ ದೊರಕಿತ್ತು. 2021–22ರ ಬಜೆಟ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಜಿಎಸ್‌ಟಿ ಪರಿಹಾರದ ಮೊತ್ತದಲ್ಲಿ ಶೇ 14ರಷ್ಟು ಕಡಿತ ಮಾಡಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಬಜೆಟ್‌ ಅಂದಾಜು ಮತ್ತು ಪರಿಷ್ಕೃತ ಅಂದಾಜುಗಳ ಪ್ರಕಾರ, ರಾಜ್ಯಕ್ಕೆ ಜಿಎಸ್‌ಟಿ ಪರಿಹಾರದಲ್ಲಿ ಒಟ್ಟು ₹ 16,814 ಕೋಟಿಯಷ್ಟು ನಷ್ಟವಾಗಿದೆ.

‘2020–21ರ ಬಜೆಟ್‌ ಅಂದಾಜುಗಳ ಪ್ರಕಾರ, ರಾಜ್ಯಕ್ಕೆ ಜಿಎಸ್‌ಟಿ ಪರಿಹಾರದ ರೂಪದಲ್ಲಿ₹ 28,000 ಕೋಟಿ ದೊರೆಯಬೇಕಿತ್ತು. ಆದರೆ, ಈ ಮೊತ್ತದಲ್ಲಿ ₹ 7,900 ಕೋಟಿಯಷ್ಟು ನಷ್ಟ ಉಂಟಾಗಲಿದೆ. ಪರಿಷ್ಕೃತ ಅಂದಾಜುಗಳ ಪ್ರಕಾರ, ರಾಜ್ಯಕ್ಕೆ ₹ 20,073 ಕೋಟಿ ಮಾತ್ರ ಜಿಎಸ್‌ಟಿ ಪರಿಹಾರದ ರೂಪದಲ್ಲಿ ದೊರಕಲಿದೆ’ ಎಂದು ಹಣಕಾಸು ಇಲಾಖೆಯ ಮೂಲಗಳು ತಿಳಿಸಿವೆ.

2021–22ನೇ ಆರ್ಥಿಕ ವರ್ಷಕ್ಕೆ ರಾಜ್ಯಕ್ಕೆ ದೊರಕಬೇಕಾದ ಜಿಎಸ್‌ಟಿ ಪರಿಹಾರದ ಮೊತ್ತವನ್ನು ₹ 24,573 ಕೋಟಿಗೆ ನಿಗದಿ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ₹ 3,427 ಕೋಟಿಯಷ್ಟು ಕಡಿಮೆ ಮೊತ್ತವನ್ನು ನಿಗದಿ ಮಾಡಲಾಗಿದೆ. ಇದು ರಾಜ್ಯ ಸರ್ಕಾರದ ಮುಂದಿನ ಬಜೆಟ್‌ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ.

ತೆರಿಗೆ ಪರಿಹಾರದ ವಿಚಾರದಲ್ಲಿ ಕರ್ನಾಟಕವು ಅತ್ಯಧಿಕ ನಷ್ಟ ಅನುಭವಿಸುತ್ತಿರುವ ರಾಜ್ಯವಾಗಿದೆ. 2019–20ರ ಬಜೆಟ್‌ನಲ್ಲಿ ರಾಜ್ಯಕ್ಕೆ ₹ 38,000 ಕೋಟಿ ಜಿಎಸ್‌ಟಿ ಪರಿಹಾರ ನಿಗದಿಪಡಿಸಲಾಗಿತ್ತು. 2020–21ರ ಬಜೆಟ್‌ನಲ್ಲಿ ಈ ಮೊತ್ತ ₹ 28,000 ಕೋಟಿಗೆ ಕುಸಿದಿತ್ತು. ಜಿಎಸ್‌ಟಿ ಪರಿಹಾರದ ಮೊತ್ತದಲ್ಲಿ ಕಡಿತ ಮಾತ್ರವಲ್ಲ, ಕಡಿತಗೊಂಡ ಮೊತ್ತಕ್ಕೆ ಪರಿಹಾರ ರೂಪದಲ್ಲಿ ಘೋಷಿಸಿದ್ದ ₹ 5,495 ಕೋಟಿ ವಿಶೇಷ ಅನುದಾನ ಹಾಗೂ ಕೇಂದ್ರ ಸರ್ಕಾರದ ನೆರವಿನ ಯೋಜನೆಗಳ ಅನುದಾನವನ್ನುಇನ್ನೂಬಿಡುಗಡೆ ಮಾಡಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT