ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ವಿಶ್ಲೇಷಣೆ | ಶಿಕ್ಷಣ: ಹಿತಕಾರಿ ಆಲೋಚನೆ

Last Updated 5 ಮಾರ್ಚ್ 2020, 20:15 IST
ಅಕ್ಷರ ಗಾತ್ರ

ಬಜೆಟ್ ಎಂದರೆ ಹಣ ಕೊಡುವುದರ ಘೋಷಣೆ ಎನ್ನುವ ರೀತಿಯಲ್ಲಿ ಆಗಿ, ಒಂದು ಆಲೋಚನಾ ಕ್ರಮದ ರೂಪ ಇಲ್ಲದೆ ಇರುವ ಸಂದರ್ಭದಲ್ಲಿ ಈ ಸಾಲಿನ ಬಜೆಟ್, ಶಿಕ್ಷಣದ ಬಗ್ಗೆ ಒಂದು ಚಿಂತನೆಯ ಅಸ್ತಿತ್ವವನ್ನು ಸೂಚಿಸಿರುವುದು ಒಳ್ಳೆಯ ವಿಷಯ. ಬಹಳ ದೊಡ್ಡ ಪ್ರಮಾಣದ್ದು ಎನ್ನುವ ಹಣ ಬಿಡುಗಡೆಯ ಘೋಷಣೆ ಇಲ್ಲದಿರುವುದೇ ಉತ್ತಮ ಬೆಳವಣಿಗೆ.ಏಕೆಂದರೆ ಎಲ್ಲಿ ಕೊಡುಗೆಗಳು ವಿಪರೀತವಾಗಿ ಇರುವುದಿಲ್ಲವೋ ಅಲ್ಲಿ ಚಿಂತನೆಗಳಿರುತ್ತವೆ. ಚಿಂತನೆಗಳಿರುವಲ್ಲಿ ಕ್ರಿಯಾಶೀಲತೆ ಇರುತ್ತದೆ.

ಶಿಕ್ಷಣಕ್ಕೆ ಹಣಕ್ಕಿಂತ ಹೆಚ್ಚಾಗಿ ಹಣ ಸಮರ್ಪಕ ಬಳಕೆಯಾಗಿ ಉದ್ದೇಶಿತ ಪರಿಣಾಮ ಉಂಟಾಗುವಂತೆ ಮಾಡಬೇಕಿದೆ. ಆ ರೀತಿಯ ಕೆಲವು ಸೂಕ್ಷ್ಮ ಚಿಂತನೆಗಳು ಬಜೆಟ್‌ನಲ್ಲಿವೆ. ಉದಾಹರಣೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಡೆಸುವ ವಸತಿ ಶಾಲೆಗಳಲ್ಲಿ ಕೆಲವು ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಮೂರೋ ನಾಲ್ಕೋ ಇರುವ ಸನ್ನಿವೇಶಗಳಿವೆ. ಬಜೆಟ್ ನಲ್ಲಿ ಈ ಶಾಲೆಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಶೇ 25ರಷ್ಟು ಇರಲೇಬೇಕು ಎಂದಿರುವುದು ವಿವೇಕದ ನಡೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ವರ್ಗದ ವಿದ್ಯಾರ್ಥಿಗಳಲ್ಲಿ ಎಸ್ಎಸ್ಎಲ್‌ಸಿಯಲ್ಲಿ ಉನ್ನತ ಅಂಕಗಳನ್ನು ಪಡೆದವರಿಗೆ ₹1 ಲಕ್ಷ ಪ್ರಶಸ್ತಿ ಘೋಷಿಸಿರುವುದು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ರೂಪಿಸುವ ಚಿಂತನಶೀಲ ಹೆಜ್ಜೆ. ಸ್ಪರ್ಧಾತ್ಮಕವಾಗಿ ಬೆಳೆದು ಸಶಕ್ತಗೊಳ್ಳುವ ಮತ್ತೊಂದು ಅವಕಾಶವೂ ತಮಗಿದೆ ಎಂಬ ಚಿಂತನೆಯನ್ನುದಮನಿತರಲ್ಲಿ ಪ್ರೇರೇಪಿಸುವ ಕ್ರಮ ಇದು.

ಇಂಗ್ಲಿಷ್ ಮಾಧ್ಯಮ ಮತ್ತು ಮುಕ್ತ ಅಭಿವೃದ್ಧಿಯ ಪರಿಕಲ್ಪನೆ ಪ್ರಶ್ನಾರ್ಹ ಸಂಗತಿಯೇ. ಹಾಗಿದ್ದರೂ 400 ಸರ್ಕಾರಿ ಉರ್ದು ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಚಿಂತನಾತ್ಮಕವಾಗಿ ಮುಖ್ಯ. ಪಿಯು ಕಾಲೇಜುಗಳಲ್ಲಿ ವಿಜ್ಞಾನ ಪ್ರತಿಭಾ ಶೋಧನೆ ಮಾಡಿ ಆಯ್ದ 500 ವಿದ್ಯಾರ್ಥಿಗಳಿಗೆ ಎರಡು ವರ್ಷದ ಶಿಕ್ಷಣ ಮತ್ತು ತಿಂಗಳು ₹1 ಸಾವಿರ ವಿದ್ಯಾರ್ಥಿ ವೇತನ ನೀಡುವ ಆಲೋಚನೆಯು ಶಿಕ್ಷಣವನ್ನು ಪರೀಕ್ಷೆಯ ಅಂಕಗಳಿಗಾಗಿ ಕಿತ್ತಾಟ ಎನ್ನುವ ಸ್ಥಿತಿಯಿಂದ ಮೆಲ್ಲಗೆ ಆವಿಷ್ಕಾರದ ಕಡೆಗೆ ಸೆಳೆಯುವ ರೂಪದ್ದಾಗಿದೆ. ಪ್ರತಿಭಾ ಶೋಧನೆಗೆ ಪರೀಕ್ಷೆಯ ಅಂಕಗಳು ಮಾನದಂಡವಾಗಿಲ್ಲ. ಪರೀಕ್ಷೆಯ ಅಂಕಗಳ ಭಾರದಿಂದ ಕಂಗೆಟ್ಟಿರುವ ವಿದ್ಯಾರ್ಥಿಗಳು ಮತ್ತು ಅಂಕಗಳ ವಿಚಾರದಲ್ಲಿ ಒಂದು ಗುಂಗೇ ಬೆಳೆದಿರುವ ವ್ಯವಸ್ಥೆಯಲ್ಲಿ ಪ್ರತಿಭೆಯನ್ನು ಅಂಕ ಗಳಿಕೆಯಿಂದ ಹೊರಕ್ಕೆ ತರುವ ಈ ಪ್ರಯತ್ನ ಮಹತ್ವದ್ದಾಗಿ ಕಾಣಿಸುತ್ತದೆ.

ಇದೇ ರೀತಿಯ ಇನ್ನೊಂದು ಆಲೋಚನೆ ಗ್ರಾಮೀಣ ಯುವಕರಿಗೆ ಕೌಶಲಾಭಿವೃದ್ಧಿಗೆ ₹20 ಕೋಟಿ ಇರಿಸಿರುವುದರಲ್ಲಿದೆ. ಇಲ್ಲಿಯೂ ಅಂಕಗಳ ನಿರ್ಬಂಧವಿಲ್ಲ. ಆದರೆ ಯಾವ ಕೌಶಲ ಎಂಬುದು ಸ್ಪಷ್ಟವಿಲ್ಲ. ಅದು ಕೃಷಿಯೇತರ ಗ್ರಾಮೀಣ ಕೌಶಲವೇ ಆಗಿದ್ದಲ್ಲಿ ಇದಕ್ಕೆ ಐತಿಹಾಸಿಕ ಮಹತ್ವವಿದೆ.

ಆಟೊ ಚಾಲಕರ ಮಕ್ಕಳಿಗೆ ವಾರ್ಷಿಕ ₹2 ಸಾವಿರ ಕೊಡುವ ಪ್ರಸ್ತಾವ ವ್ಯಾವಹಾರಿಕವಾಗಿ ಮಹತ್ವದ್ದಲ್ಲದಿದ್ದರೂ, ಸಮಾಜದ ಎಲ್ಲ ವರ್ಗವನ್ನು ಸರ್ಕಾರ ಗಮನಿಸಿದೆ ಎನ್ನುವ ಮಟ್ಟಿಗೆ ಸ್ವಾಗತಾರ್ಹ ಆಲೋಚನೆ.

ಒಟ್ಟೂ ಶೈಕ್ಷಣಿಕ ಹಿನ್ನೆಲೆಯ ಕಾರ್ಯಕ್ರಮಗಳಲ್ಲಿ ಚಿಂತನೆಯ ಹಿನ್ನೆಲೆ ಕಾಣದೆ ಇರುವುದು ಬ್ಯಾಗ್ ರಹಿತ ಸಂಭ್ರಮದ ಶನಿವಾರದ ಪರಿಕಲ್ಪನೆಯಲ್ಲಿ. ಒಂದು ಪರೀಕ್ಷೆಯನ್ನು ಬರೆಯುವುದಕ್ಕಾಗಿ ಓದಲೂ ಸಮಯ ಒದಗಿಸದಂತೆ ನಾಲ್ಕೈದು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಒಪ್ಪಿಕೊಂಡಿರುವ ವ್ಯವಸ್ಥೆಯಲ್ಲಿ ಈ ಪರೀಕ್ಷೆಗಳ ಸರಣಿಗಳನ್ನು ಕೊನೆಗಾಣಿಸದೆ ಮಕ್ಕಳ ವಿಚಾರದಲ್ಲಿ 'ಸಂಭ್ರಮ' ಸಾಧ್ಯ ಎಂದು ಭಾವಿಸುವುದಕ್ಕೆ ಅರ್ಥಪೂರ್ಣತೆ ಉಳಿದುಕೊಳ್ಳುವುದಿಲ್ಲ. ಬ್ಯಾಗ್ ಏನಿದ್ದರೂ ಮಕ್ಕಳಿಗೆ ಭೌತಿಕ ಹೊರೆಯಾಗಿರುತ್ತದೆ‌. ಅವರ ಮಾನಸಿಕ ಹೊರೆ ಪಠ್ಯದ ಗಾತ್ರ ಮತ್ತು ಪರೀಕ್ಷೆಗಳ ಸಂಖ್ಯೆಗಳಾಗಿವೆ. ಪಠ್ಯದ ಗಾತ್ರವನ್ನು ಕಿರಿದುಗೊಳಿಸಿ-ಕಲಿಕೆಯ ದಕ್ಷತೆಯನ್ನು ಹೆಚ್ಚಿಸಿ, ಪರೀಕ್ಷೆಗಳ ಸಂಖ್ಯೆಗಳನ್ನು ಇಳಿಸುವುದರಲ್ಲಿ ಮಕ್ಕಳ ಸಂತೋಷದ ನಿಜದ ಸೆಲೆ ಇದೆ.

ಆರೋಗ್ಯ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ ಪೂರಕವಾಗಿ ಟೆಲಿ ಮೆಡಿಸಿನ್ ಸೇವೆ, ಬಡರೋಗಿಗಳಿಗೆ ಡಯಾಲಿಸಿಸ್ ಸೇವೆ, ಒಂದು ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಕ್ಕೆ ಉಚಿತ ಪ್ರೀಪೇಯ್ಡ್ ಹೆಲ್ತ್ ಕಾರ್ಡ್ ಗಳ ಬಗ್ಗೆಯೆಲ್ಲ ಬಜೆಟ್ ಪ್ರಸ್ತಾಪಿಸಿದೆ. ಇವೆಲ್ಲ ಸ್ವಾಗತಾರ್ಹವಾದರೂ ದೂರಗಾಮಿ ದೃಷ್ಟಿಕೋನ ಇಲ್ಲ.

ಆ ದೃಷ್ಟಿಕೋನ ಶಿಕ್ಷಣದ ವಿಷಯದಲ್ಲಿ ಇದೆ‌. ಆದರೆ ಸರ್ಕಾರದ ಆಶಯವನ್ನು ತಲುಪಿಸಲು ಸಾಧ್ಯವಾಗುವ ಹಾಗೆ ಶಿಕ್ಷಣ ಕ್ಷೇತ್ರವನ್ನು ಹೇಗೆ ಸಬಲೀಕರಣ ಮಾಡಲಾಗುತ್ತದೆ ಎಂಬುದನ್ನು ಭವಿಷ್ಯವೇ ಹೇಳಬೇಕು.

(ಲೇಖಕ–ಶಿಕ್ಷಕ ಹಾಗೂ ಆರ್ಥಿಕ ಪರಿಣತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT