ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ ಬಜೆಟ್ 2020 | ಚುನಾವಣೆಯತ್ತ ಕಣ್ಣು ನಗರದ ಮೇಲೆ ಕೃಪೆ

ಸಂಚಾರ ದಟ್ಟಣೆ, ಕಸ ವಿಲೇವಾರಿ, ಕೆರೆ ಮಾಲಿನ್ಯ ಸಮಸ್ಯೆಗಳಿಗೆ ಪರಿಹಾರ– ಕನಸು ಬಿತ್ತಿದ ಸಿ.ಎಂ.
Published : 5 ಮಾರ್ಚ್ 2020, 19:15 IST
ಫಾಲೋ ಮಾಡಿ
Comments

ಬೆಂಗಳೂರು: ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜ್ಯ ಸರ್ಕಾರ, ನಗರದ ಜನರ ಪಾಲಿಗೆ ನಿತ್ಯದ ಗೋಳಾಗಿ ಪರಿಣಮಿಸಿರುವ ಸಂಚಾರ ದಟ್ಟಣೆ, ಕಸ ವಿಲೇವಾರಿ, ಕೆರೆಗಳ ಮಾಲಿನ್ಯದಂತಹ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕನಸು ಬಿತ್ತಿದೆ.

ಈ ಸಮಸ್ಯೆಗಳ ಪರಿಹರಿಸಲು 2020–21ನೇ ಸಾಲಿನ ಬಜೆಟ್‌ನಲ್ಲಿ ಈ ಕುರಿತು ಅನೇಕ ಯೋಜನೆಗಳನ್ನು ಪ್ರಕಟಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ಜನರ ಬವಣೆಗಳ ಬಗ್ಗೆ ಕರುಣೆ ತೋರಿದ್ದಾರೆ. ನಗರದ ಸಮಸ್ಯೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಉಲ್ಲೇಖಿಸಿರುವ ಬಹುತೇಕ ಯೋಜನೆಗಳು ಈಗಾಗಲೇ ಘೋಷಣೆ ಆಗಿರುವವೇ ಆಗಿವೆ.

ಶುಭ್ರ ಬೆಂಗಳೂರಿಗೆ ಪಣ
ರಾಜಧಾನಿಯ ಕಸ ವಿಲೇವಾರಿ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಹೈಕೋರ್ಟ್‌ ಚಾಟಿ ಬೀಸಿದ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದೆ. ‘ಶುಭ್ರ ಬೆಂಗಳೂರು’ ಹೆಸರಿನಲ್ಲಿ ಹೊಸ ಯೋಜನೆ ಜಾರಿಗೊಳಿಸಿರುವ ಸರ್ಕಾರ, ಈ ಸಲುವಾಗಿ ₹ 999 ಕೋಟಿ ಮೊತ್ತದ ಕ್ರಿಯಾಯೋಜನೆ ಪ್ರಕಟಿಸಿದೆ.

ಕಸ ವಿಲೇವಾರಿ ವ್ಯವಸ್ಥೆಯನ್ನು ಬಿಬಿಎಂಪಿ ಸರಿಯಾಗಿ ನಿರ್ವಹಿಸದ ಬಗ್ಗೆ ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್‌ ‘ಪಾಲಿಕೆಯ ಚುನಾಯಿತ ಕೌನ್ಸಿಲನ್ನು ಸೂಪರ್‌ ಸೀಡ್‌ ಮಾಡಬಾರದೇಕೇ’ ಎಂದು ಪ್ರಶ್ನಿಸಿತ್ತು. ಶುಭ್ರ ಬೆಂಗಳೂರು ಯೋಜನೆಯ ಕಾಮಗಾರಿಗಳನ್ನು ಈ ವರ್ಷವೇ ಅನುಷ್ಠಾನಗೊಳಿಸಿ ಘನತ್ಯಾಜ್ಯ ನಿರ್ವಹಣೆಯಲ್ಲಿ ದೇಶದಲ್ಲೇ ಮಾದರಿ ನಗರವನ್ನಾಗಿ ಮಾರ್ಪಡಿಸಲಾಗುವುದು ಎಂದು ಎಂದು ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ ‍ತಿಳಿಸಿದ್ದಾರೆ.

ಈ ಹಿಂದಿನ ಸರ್ಕಾರ ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಅಡಿ (2019ರಿಂದ 2021ರವರೆಗೆ) ಒಟ್ಟು ₹ 8015.37 ಕೋಟಿ ಅನುದಾನ ಮಂಜೂರು ಮಾಡಿತ್ತು. ಇದರಲ್ಲಿ ಕಸ ನಿರ್ವಹಣೆಗೆ ₹ 584.35 ಕೋಟಿ ಕಾಯ್ದರಿಸಲಾಗಿತ್ತು. ಆದರೆ, ಕಸ ನಿರ್ವಹಣೆಗೆ ನೀಡಿದ್ದ ಅನುದಾನದಲ್ಲಿ ₹ 528.85 ಕೋಟಿಯನ್ನು ಕಸ ವಿಲೇವಾರಿ ಘಟಕಗಳ ಆಸುಪಾಸಿನ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಡಲಾಗಿತ್ತು. ಹಾಗಾಗಿ, ಕಸ ನಿರ್ವಹಣೆಗೆ ಕೇವಲ ₹ 55 ಕೋಟಿ ಅನುದಾನ ಲಭ್ಯವಾಗಿತ್ತು.

ಮಂಡೂರು ಭೂಭರ್ತಿ ಕೇಂದ್ರದ ಬಯೋಮೈನಿಂಗ್‌ ಮತ್ತು ಅದಕ್ಕೆ ಮಣ್ಣಿನ ಹೊದಿಕೆ ಹೊದಿಸುವುದು, ಕಸ ನಿರ್ವಹಣೆ ಘಟಕಗಳಿಗೆ ಜಾಗ ಖರೀದಿ, ಶ್ರೆಡ್ಡರ್‌ ಮತ್ತು ಚಾಪರ್‌ ಯಂತ್ರ ಖರೀದಿ, ಮಾಂಸದ ತ್ಯಾಜ್ಯ ವಿಲೇವಾರಿ ಘಟಕ, ಸ್ವಚ್ಛತಾ ಪರಿಕರಗಳ ಖರೀದಿ, ಕಸ ನಿರ್ವಹಣೆ ಘಟಕಗಳ ಬಳಿ ಮಾರ್ಷಲ್‌ ನೇಮಕ, ಕೆಸಿಡಿಸಿ ಘಟಕದ ಮೇಲ್ದರ್ಜೆಗೇರಿಸುವುದು, ಮಿಟಗಾನಹಳ್ಳಿಯಲ್ಲಿ ವೈಜ್ಞಾನಿಕ ಕಸ ನಿರ್ವಹಣೆ ಘಟಕ ಸ್ಥಾಪನೆ, ಮಿನಿ ಕಸ ವರ್ಗಾವಣೆ ಕೇಂದ್ರ ಸ್ಥಾಪನೆ ಸೇರಿದಂತೆ 37 ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒಟ್ಟು ₹ 999 ಕೋಟಿ ಒದಗಿಸಬೇಕು ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್‌ ಪ್ರಸ್ತಾವ ಸಲ್ಲಿಸಿದ್ದರು.

ಮುಖ್ಯಾಂಶಗಳು
8,344 ಕೋಟಿ:ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ ಅನುಷ್ಠಾನ
₹417 ಕೋಟಿ:ಕೆರೆಗಳ ಸರ್ವತೋಮುಖ ಅಭಿವೃದ್ಧಿಗೆ ಅನುದಾನ
₹200 ಕೋಟಿ:ರಾಜಕಾಲುವೆಗಳ ಅಭಿವೃದ್ಧಿಗೆ
₹1,000 ಕೋಟಿ:110 ಹಳ್ಳಿಗಳಲ್ಲಿ ರಸ್ತೆಗಳ ಪುನಶ್ಚೇತನಕ್ಕೆ ಮುಂದಿನ ಎರಡು ವರ್ಷಗಳಿಗೆ
₹14,500 ಕೋಟಿ:ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೆಟ್ರೊ ಮಾರ್ಗಕ್ಕೆ
₹500 ಕೋಟಿ:ಉಪನಗರ ರೈಲು ಯೋಜನೆಗೆ
₹8,772 ಕೋಟಿ:ಬೆಂಗಳೂರು ಅಭಿವೃದ್ಧಿಗೆ ಒಟ್ಟು ಅನುದಾನ

ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ
ಬಿಬಿಎಂಪಿಯು ಕರ್ನಾಟಕ ಪೌರನಿಗಮಗಳ ಕಾಯ್ದೆ 1976ರ ಅನ್ವಯ ಕಾರ್ಯನಿರ್ವಹಿಸುತ್ತಿದೆ. ನಗರದ ಸಮಸ್ಯೆ ಹಾಗೂ ಇನ್ನಿತರ ಸ್ವರೂಪದ ವಿಚಾರಗಳು ಬೇರೆ ನಗರಗಳಿಗೆ ಹೋಲಿಸಿದರೆ ಸಂಕೀರ್ಣವಾಗಿದ್ದು, ನಗರದ ಆಡಳಿತ ನಿರ್ವಹಣೆ ದೊಡ್ಡ ಸವಾಲು. ಪರಿಣಾಮಕಾರಿ ಆಡಳಿತ ಮತ್ತು ನಾಗರಿಕ ಸೇವೆಗಳನ್ನು ನೀಡಲು ಬೆಂಗಳೂರು ನಗರಕ್ಕೆ ಸೀಮಿತವಾಗಿ ಪ್ರತ್ಯೇಕ ಪೌರನಿಗಮ (ಕೆಎಂಸಿ) ಕಾಯ್ದೆ ರಚಿಸಲು ನಿರ್ಧರಿಸಲಾಗಿದೆ.

ಕೆರೆಗಳ ಅಭಿವೃದ್ಧಿಗೆ ₹417 ಕೋಟಿ
ಇತ್ತೀಚಿಗೆ ಕೆರೆಗಳ ಒತ್ತುವರಿ ಹೆಚ್ಚಾಗುತ್ತಿದೆ. ತ್ಯಾಜ್ಯ ನೀರು ಸೇರುತ್ತಿರುವುದರಿಂದ ಜಲಕಾಯಗಳು ಕಲುಷಿತಗೊಳ್ಳುತ್ತಿವೆ. ಇದನ್ನು ತಡೆಗಟ್ಟಲು ಶುಭ್ರ ಬೆಂಗಳೂರು ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ ₹100 ಕೋಟಿ ಕ್ರಿಯಾಯೋಜನೆಗೆ ಅನು ಮೋದನೆ ನೀಡಲಾಗಿದೆ. ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ ಅನುಮೋದನೆಗೊಂಡಿರುವ ಕ್ರಿಯಾಯೋಜನೆ ಯಡಿ ಕೆರೆಗಳ ಅಭಿವೃದ್ಧಿಗೆಂದೇ ₹317 ಕೋಟಿ ಮೀಸಲಿಡಲಾಗಿದೆ.

ಹಳ್ಳಿಗಳ ರಸ್ತೆ ದುರಸ್ತಿಗೆ ಮುಂದು
ಬೆಂಗಳೂರು ನಗರಕ್ಕೆ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲಿ ಜಲಮಂಡಳಿ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳನ್ನು ನಡೆಸುತ್ತಿದೆ. ಇದರಿಂದಾಗಿ, ಅಲ್ಲಿನ ರಸ್ತೆಗಳು ಹದಗೆಟ್ಟಿವೆ. ರಸ್ತೆಗಳ ದುರಸ್ತಿಗೆ ಎರಡು ವರ್ಷಗಳಲ್ಲಿ ₹1 ಸಾವಿರ ಕೋಟಿ ನೀಡಲಾಗುತ್ತದೆ. 2020–21ನೇ ಸಾಲಿನಲ್ಲಿ ಈ ಉದ್ದೇಶಕ್ಕಾಗಿ ₹500 ಕೋಟಿ ಒದಗಿಸಲಾಗುತ್ತದೆ.

ಬಿಎಂಟಿಸಿಗೆ 500 ಎಲೆಕ್ಟ್ರಿಕ್ ಬಸ್‌
ನಗರ ಸಂಚಾರಕ್ಕೆ ‌500 ಸಾಮಾನ್ಯ ಎಲೆಕ್ಟ್ರಿಕ್‌ ಬಸ್‌ಗಳನ್ನು ಬಿಎಂಟಿಸಿಗೆ ಸೇರ್ಪಡೆ ಮಾಡಲು ₹100 ಕೋಟಿ ಅನುದಾನವನ್ನು ಸರ್ಕಾರ ಬಜೆಟ್‌ನಲ್ಲಿ ನಿಗದಿ ಮಾಡಿದೆ.

ಕೇಂದ್ರ ಸರ್ಕಾರದ ಫೆಮಾ–2 ಯೋಜನೆಯಡಿ 300 ಹವಾನಿಯಂತ್ರಿತ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಟೆಂಡರ್‌ ಕರೆಯಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಮೆಟ್ರೊ ಫೀಡರ್ ಸೇವೆಗೆ 90 ಎಲೆಕ್ಟ್ರಿಕ್‌ ಬಸ್‌ಗಳನ್ನು ಪಡೆಯಲು ಟೆಂಡರ್ ಆಹ್ವಾನಿಸಲಾಗಿದೆ.

ಈ ಮೂರು ಯೋಜನೆಗಳು ಕಾರ್ಯಾರಂಭಗೊಂಡರೆ ಒಟ್ಟು 890 ಎಲೆಕ್ಟ್ರಿಕ್‌ ಬಸ್‌ಗಳು ನಗರದಲ್ಲಿ ಸಂಚರಿಸಲಿವೆ. 500 ಸಾಮಾನ್ಯ ಬಸ್‌ಗಳನ್ನು ಸೇವೆಗೆ ಸೇರಿಸಲಾಗುವುದು ಎಂದಷ್ಟೇ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಬಸ್‌ಗಳನ್ನು ಬಿಎಂಟಿಸಿ ಖರೀದಿ ಮಾಡಲಿದೆಯೋ,ಗುತ್ತಿಗೆ ಆಧಾರದಲ್ಲಿ ಪಡೆಯಲಿದೆಯೋ ಎಂಬುದು ಸ್ಪಷ್ಟವಾಗಿಲ್ಲ.

ಬಿಎಂಟಿಸಿಗೆ ಸಾಲ
ಹೊಸದಾಗಿ 1,500 ಡೀಸೆಲ್‌ ಬಸ್‌ಗಳ ಖರೀದಿಗೆ ₹600 ಕೋಟಿ ಅನುದಾನವನ್ನು ಸಾಲದ ರೂಪದಲ್ಲಿ ನೀಡಲು ಬಜೆಟ್‌ ನಲ್ಲಿ ಪ್ರಸ್ತಾಪಿಸಲಾಗಿದೆ. ಪ್ರತಿ ವರ್ಷ ₹100 ಕೋಟಿಯಂತೆ ಏಳು ವರ್ಷದ ಅವಧಿಗೆ ಸಾಲ ರೂಪದಲ್ಲಿ ಸಹಾಯಧನ ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

12 ಕಡೆ ಬಸ್ ಆದ್ಯತಾ ಪಥ
ಸಂಚಾರ ದಟ್ಟಣೆಯ 12 ಕಾರಿಡಾರ್‌ಗಳಲ್ಲಿ 2ನೇ ಹಂತದಲ್ಲಿ ಬಸ್ ಆದ್ಯತಾ ಪಥಗಳನ್ನು ಅನುಷ್ಠಾನಗೊಳಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ಸದ್ಯ ಸಿಲ್ಕ್ ಬೋರ್ಡ್‌ನಿಂದ ಟಿನ್ ಫ್ಯಾಕ್ಟರಿ ತನಕ ಹೊರ ವರ್ತುಲ ರಸ್ತೆಯಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ. ಆದರೆ, ಅದು ಯಶಸ್ವಿಯಾಗಿಲ್ಲ.

ಸಿಲ್ಕ್‌ಬೋರ್ಡ್‌–ಹೆಬ್ಬಾಳ, ನಾಯಂಡಹಳ್ಳಿ–ಜೇಡಿ ಮರ ಜಂಕ್ಷನ್‌, ಇಬ್ಬಲೂರು ಜಂಕ್ಷನ್‌–ಸರ್ಜಾಪುರ, ಕಂಟೋನ್ಮೆಂಟ್‌ –ಹೆಣ್ಣೂರು, ಮೆಜೆಸ್ಟಿಕ್‌–ಹೆಬ್ಬಾಳ, ಜಯ ಮಹಲ್‌ ರಸ್ತೆ ಕಂಟೋನ್ಮೆಂಟ್‌ ವೃತ್ತ– ಮೇಖ್ರಿ ವೃತ್ತ, ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೊ ನಿಲ್ದಾಣ– ಸಿಲ್ಕ್‌ಬೋರ್ಡ್‌, ಯಶವಂತಪುರ–ಕೆಂಗೇರಿ– ಎಲೆಕ್ಟ್ರಾನಿಕ್‌ಸಿಟಿ, ಹೊಸೂರು ರಸ್ತೆ (ಮೆಜೆಸ್ಟಿಕ್‌ನಿಂದ ಸಿಲ್ಕ್‌ಬೋರ್ಡ್‌), ಹಳೆ ವಿಮಾನ ನಿಲ್ದಾಣ ರಸ್ತೆ (ಮೆಜೆಸ್ಟಿಕ್‌– ಕಾಡುಗೋಡಿ), ಮಾಗಡಿ ರಸ್ತೆ (ಮೆಜೆಸ್ಟಿಕ್‌–ಗೊಲ್ಲರಹಟ್ಟಿ) ಮಾರ್ಗಗಳಲ್ಲಿ ಆದ್ಯತಾ ಪಥ ನಿರ್ಮಿಸುವ ಉದ್ದೇಶ ಇದೆ.

ಉಪನಗರ ರೈಲಿಗೆ ಅನುದಾನ
ಉಪನಗರ ರೈಲು ಯೋಜನೆಗೆ ರಾಜ್ಯ ಬಜೆಟ್‌ನಲ್ಲಿ ₹500 ಕೋಟಿ ಮೀಸಲಿಡ ಲಾಗಿದೆ. ₹18,621 ಕೋಟಿ ಮೊತ್ತದ ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ 20ರಷ್ಟು ಹಣ ನೀಡಬೇಕಿದೆ. ಶೇ 60ರಷ್ಟು ಆರ್ಥಿಕ ನೆರವನ್ನು ಹಣಕಾಸು ಸಂಸ್ಥೆಗಳಿಂದ ಪಡೆಯಲು ಉದ್ದೇಶಿಸಲಾಗಿದೆ.

ಕೇಂದ್ರ ಬಜೆಟ್‌ನಲ್ಲಿ ಯೋಜನೆ ಪ್ರಸ್ತಾಪಿಸಿದ ಕೇಂದ್ರ ಸರ್ಕಾರ, ರೈಲ್ವೆ ಇಲಾಖೆ ಪಿಂಕ್ ಬುಕ್‌ನಲ್ಲಿ ₹1 ಕೋಟಿ ನಿಗದಿ ಮಾಡಿದೆ.‌ ಬಾಕಿ ಇರುವ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ (ಸಿಸಿಇಎ) ಅನುಮೋದನೆ ದೊರೆಯುವ ತನಕ ಕಾಮಗಾರಿ ಆರಂಭವಾಗದು. ಈ ನಡುವೆ ಯೋಜನೆಗೆ ಬೇಕಿರುವ ಭೂಮಿ ಸರ್ವೆ ನಡೆಸಲು ಆಸಕ್ತ ಏಜೆನ್ಸಿಗಳನ್ನು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ–ರೈಡ್‌) ಆಹ್ವಾನಿಸಿದೆ.‌

‘ರೈಲ್ವೆ ಇಲಾಖೆ ಮಂಜೂರಾತಿ ನೀಡಿರುವ ಬೈಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ಜೋಡಿ ರೈಲು ಮಾರ್ಗ ಯೋಜನೆಗಳಿಗೆ ರಾಜ್ಯ ಸರ್ಕಾರ ನೀಡಬೇಕಿರುವ ಶೇ 50ರಷ್ಟು ಅನುದಾನ ಭರಿಸಲು ನಿರ್ಧರಿಸಲಾಗಿದೆ’ ಎಂದು ಬಜೆಟ್ ಭಾಷಣದಲ್ಲಿ ತಿಳಿಸಿದರು.

ಬಿಡದಿಯಲ್ಲಿ ಕಸದಿಂದ ವಿದ್ಯುತ್‌
ಕರ್ನಾಟಕ ವಿದ್ಯುತ್ ನಿಗಮದಿಂದ ಬಿಬಿಎಂಪಿ ಸಹಯೋಗದಲ್ಲಿ ಬಿಡದಿಯಲ್ಲಿ ಕಸದಿಂದ ವಿದ್ಯುತ್‌ ಉತ್ಪಾದನಾ ಕೇಂದ್ರ ಸ್ಥಾ‍ಪಿಸಲಾಗುತ್ತದೆ. ಈ ಯೋಜನೆಯ ವೆಚ್ಚ ₹210 ಕೊಟಿ. ವಾರ್ಷಿಕ 7 ಕೋಟಿ ಯುನಿಟ್ ವಿದ್ಯುತ್ ಉತ್ಪಾದನೆ ಗುರಿ ಇರಿಸಿಕೊಳ್ಳಲಾಗಿದೆ. ಈ ಸಂಬಂಧ ಬಿಬಿಎಂಪಿಯು ಮೂರು ವರ್ಷಗಳ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಕಳೆದ ವರ್ಷ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗಿತ್ತು. ಕಳೆದ ವರ್ಷ ವಿಸ್ತೃತಾ ಯೋಜನಾ ವರದಿ ಸಿದ್ಧವಾಗಿತ್ತು.

ನಗರದಲ್ಲಿ ಪ್ರತಿದಿನ 4 ಸಾವಿರ ಟನ್‌ ಕಸ ಉತ್ಪಾದನೆಯಾಗುತ್ತದೆ. ಕಸ ವಿಲೇವಾರಿಗೆ ಪಾಲಿಕೆ ವರ್ಷಕ್ಕೆ ₹500 ಕೋಟಿಗೂ ಅಧಿಕ ವೆಚ್ಚ ಮಾಡುತ್ತಿದೆ. ಕಸ ಸಂಸ್ಕರಣಾ ಘಟಕಗಳಿಗೆ ಆಗಾಗ ಪ್ರತಿಭಟನೆಯ ಬಿಸಿ ತಟ್ಟುತ್ತಿದೆ. ಇದರಿಂದಾಗಿ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ವಿದ್ಯುತ್ ಉತ್ಪಾದನೆಯಿಂದ ಈ ಸಮಸ್ಯೆಗೆ ಸ್ವಲ್ಪ ಮುಕ್ತಿ ಸಿಗಬಹುದು.

ಬಿಡದಿ–ಹೇರೋಹಳ್ಳಿ ರಸ್ತೆಯ ಪಕ್ಕದಲ್ಲಿ ಕೆಪಿಸಿಎಲ್‌ 175 ಎಕರೆ ಜಾಗ ಹೊಂದಿದೆ. 15 ಎಕರೆ ಜಾಗದಲ್ಲಿ ಈ ಘಟಕ ಸ್ಥಾಪನೆಯಾಗಲಿದೆ. ವಿದ್ಯುತ್‌ ಉತ್ಪಾದಿಸಲು ನಿತ್ಯ 500 ಟನ್‌ನಿಂದ 1000 ಟನ್‌ ಒಣ ತ್ಯಾಜ್ಯದ ಅಗತ್ಯ ಇದೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

2021ಕ್ಕೆ ಟಿ.ಜಿ.ಹಳ್ಳಿ ಕಾಮಗಾರಿ ಪೂರ್ಣ
ತಿಪ್ಪಗೊಂಡನಹಳ್ಳಿ ಜಲಾಶಯದ ಪುನಶ್ಚೇತನ ಕಾಮಗಾರಿ 2021ರ ಸೆಪ್ಟೆಂಬರ್‌ಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಕಾಮಗಾರಿಗೆ 2019ರ ಮಾರ್ಚ್‌ನಲ್ಲಿ ಚಾಲನೆ ನೀಡಲಾಗಿತ್ತು. ಪುನಶ್ಚೇತನಕ್ಕೆ ₹406 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಮೊದಲ ಹಂತದಲ್ಲಿ ₹285.95 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ.

ಪುನಶ್ಚೇತನಕ್ಕೆ ಎತ್ತಿನಹೊಳೆ ನೀರು: ಎತ್ತಿನಹೊಳೆ ಯೋಜನೆಯಿಂದ ಬರುವ 0.8 ಟಿಎಂಸಿ ಅಡಿ ನೀರನ್ನು ಈ ಜಲಾಶಯಕ್ಕೆ ಮತ್ತು 1.70 ಟಿಎಂಸಿ ಅಡಿ ನೀರನ್ನು ಹೆಸರಘಟ್ಟ ಜಲಾಶಯಕ್ಕೆ ಪೂರೈಸುವ ಉದ್ದೇಶವಿದೆ. ಅದಕ್ಕೂ ಮುನ್ನ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪೂರ್ಣ ಪ್ರಮಾಣದಲ್ಲಿ ಶುದ್ಧೀಕರಿಸಿ ಕೊಳಚೆ ನೀರು ಸೇರದಂತೆ ಮಾಡುವ ಕಾಮಗಾರಿ ಪುನಶ್ಚೇತನ ಯೋಜನೆ ಅಡಿ ನಡೆಯುತ್ತಿದೆ.

ಯೋಜನೆಯಡಿ ನಿತ್ಯ 2 ಕೋಟಿ ಲೀಟರ್ ತ್ಯಾಜ್ಯ ನೀರು ಶುದ್ಧೀಕರಿಸುವ ಘಟಕ, 11 ಕೋಟಿ ಲೀಟರ್‌ (ದಿನವೊಂದಕ್ಕೆ) ಸಾಮರ್ಥ್ಯದ ಉನ್ನತ ತಂತ್ರಜ್ಞಾನದ ನೀರು ಶುದ್ಧೀಕರಣ ಘಟಕ ಸ್ಥಾಪನೆ, ತಿಪ್ಪಗೊಂಡನಹಳ್ಳಿ, ತಾವರೆಕೆರೆ ಪಂಪ್ ಹೌಸ್ ಪುನಶ್ಚೇತನ, ಬೆಂಗಳೂರಿನವರೆಗೆ 22 ಕಿ.ಮೀ. ಉಕ್ಕಿನ ಪೈಪ್ ಲೈನ್, ಜಲಾಶಯದ ಹೂಳನ್ನು ಬಯೋ ರೆಮಿಡಿಯೇಷನ್ ವಿಧಾನದಲ್ಲಿ ತೆಗೆಯುವ ಕೆಲಸ ಸಾಗಿದೆ.

ವೈಟ್‌ಫೀಲ್ಡ್ ಉಪ ವಿಭಾಗ
ನಗರದಲ್ಲಿ ಸಂಚಾರ ದಟ್ಟಣೆ ಜೊತೆಗೆ ಪೊಲೀಸರಿಗೆ ಕೆಲಸದ ಒತ್ತಡವೂ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಎಂಬಂತೆ, ನಗರದಲ್ಲಿ ಹೊಸ ಉಪವಿಭಾಗವೊಂದನ್ನು ಸೃಷ್ಟಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ನಗರದಲ್ಲಿ ಸದ್ಯ ಏಳು ಉಪವಿಭಾಗಗಳಿದ್ದು, 45 ಸಂಚಾರ ಠಾಣೆಗಳಿವೆ. ಇದೀಗ ಹೊಸದಾಗಿ ‘ವೈಟ್‌ಫೀಲ್ಡ್’ ಉಪವಿಭಾಗವನ್ನು ಸೃಷ್ಟಿಸಲಾಗುತ್ತಿದ್ದು, ಇದರ ಉಸ್ತುವಾರಿಯನ್ನು ಎಸಿಪಿ ದರ್ಜೆ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ. ‘ಕೆ.ಆರ್‌.ಪುರ, ಎಚ್‌ಎಎಲ್ ಹಾಗೂ ವೈಟ್‌ಫೀಲ್ಡ್ ಸಂಚಾರ ಠಾಣೆಗಳು ಹೊಸ ಉಪವಿಭಾಗ ವ್ಯಾಪ್ತಿಗೆ ಬರಲಿವೆ. ಹಣಕಾಸು ಇಲಾಖೆಯಿಂದ ಒಪ್ಪಿಗೆ ಸಿಕ್ಕ ಬಳಿಕ ಕಚೇರಿ ಸ್ಥಾಪನೆ ಹಾಗೂ ಸಿಬ್ಬಂದಿ ನೇಮಕದ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಹೇಳಿದರು.

ಇತರ ಪ್ರಮುಖ ಘೋಷಣೆಗಳು
*ನಗರದ ಆಯ್ದ ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ಸ್ನೇಹಿ ವಾತಾವರಣ ನಿರ್ಮಿಸಲು ಮಕ್ಕಳಾ ಪಾಲನಾ ಕೇಂದ್ರಗಳು, ಸ್ಯಾನಿಟರಿ ನ್ಯಾಪ್‌ಕಿನ್‌ ಡಿಸ್ಪೆನ್ಸರ್ ಮತ್ತು ಇತರ ಸೌಲಭ್ಯಗಳನ್ನು ಹೊಂದಿರುವ ಮಹಿಳಾ ವಿಶ್ರಾಂತಿ ಕೊಠಡಿಗಳನ್ನು ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಡಿ ತೆರೆಯಲಾಗುವುದು.

*ನಗರದ ವಿವಿಧ ಭಾಗಗಳಲ್ಲಿ ನಾಲ್ಕು ವಿದ್ಯುತ್‌ ಚಿತಾಗಾರಗಳ ಸ್ಥಾಪನೆ.

*ಸಾರ್ವಜನಿಕ ಸಾರಿಗೆಯ ಕೊನೆಯ ಮೈಲಿನ ಸಂಪರ್ಕವನ್ನು ಸುಧಾರಿಸಲು ‘ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ’ ಯೋಜನೆ ಜಾರಿ.

*ಭಾರಿ ವಾಹನಗಳ ದಟ್ಟಣೆ ನೀಗಿಸಲು ನಗರದ ಹೊರವಲಯದಲ್ಲಿ ಸಮಗ್ರ ಬಹು ಹಂತದ ಸಾರಿಗೆ ಹಬ್‌ ಅನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಅನುವಾಗುವಂತೆ ಕಾರ್ಯಾಧ್ಯಯನ.

*ನಗರಕ್ಕೆ ಸಮಗ್ರ ಮೊಬಿಲಿಟಿ ಯೋಜನೆ ತಯಾರಿಸಲಾಗಿದ್ದು, ಸಾರ್ವಜನಿಕ ಸಾರಿಗೆ ಬಳಕೆಯನ್ನು ಶೇ 48ರಿಂದ ಶೇ 73ಕ್ಕೇರಿಸುವ ಉದ್ದೇಶಕ್ಕಾಗಿ ಮೂಲಸೌಕರ್ಯಗಳು, ಟ್ರಾನ್ಸಿಟ್‌ ಆಧಾರಿತ ಬೆಳವಣಿಗೆ ಹಾಗೂ ಖಾಸಗಿ ಸಾರಿಗೆ ಮೇಲೆ ಅಗತ್ಯವಿರುವ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು.

*12 ಅಧಿಕ ಸಾಂದ್ರತೆ ವಲಯಗಳಲ್ಲಿ ಬೆಂಗಳೂರಿನ ಶೇ 80ರಷ್ಟು ವಾಹನ ದಟ್ಟಣೆ ಇದೆ. ಇವುಗಳು ಸುಮಾರು ₹190 ಕಿ.ಮೀ.ಗಳಷ್ಟು ಉದ್ದವಿದ್ದು, ಇವುಗಳನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕೈಗೆತ್ತಿಕೊಂಡು ಅಭಿವೃದ್ಧಿಗೊಳಿಸಲಾಗುವುದು. ಇದಕ್ಕಾಗಿ ₹500 ಕೋಟಿ ವೆಚ್ಚ ಮಾಡಲಾಗುತ್ತದೆ.

*ರಸ್ತೆ ಸುರಕ್ಷತಾ ನಿಧಿಗೆ ₹200 ಕೋಟಿ ಅನುದಾನ

*ರಸ್ತೆ ಮೇಲೆ ವಾಹನ ಪಾರ್ಕಿಂಗ್‌ ತಪ್ಪಿಸಲು ಅಂಡರ್‌ಗ್ರೌಂಡ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ಜನನಿಬಿಡ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಜಾರಿ.

*ವಿಶ್ವೇಶ್ವರಯ್ಯ ತಾಂತ್ರಿಕ ಸಂಸ್ಥೆಯನ್ನು ಐಐಟಿ ಮಾದರಿಯಲ್ಲಿ ಸ್ವಾಯತ್ತವಾಗಿ ಅಭಿವೃದ್ಧಿ. ಅದಕ್ಕಾಗಿ ₹10 ಕೋಟಿ.

*ಕೆ.ಸಿ.ಜನರಲ್‌ ಆಸ್ಪತ್ರೆ ಹಾಗೂ ಸಿ.ವಿ.ರಾಮನ್‌ ಆಸ್ಪತ್ರೆಗಳಲ್ಲಿ ಹೃದ್ರೋಗದ ಚಿಕಿತ್ಸೆಗಾಗಿ ಕ್ಯಾತ್‌ಲ್ಯಾಬ್‌ ಸ್ಥಾಪನೆ.

*ನಗರದ ನಾಲ್ಕು ದಿಕ್ಕುಗಳಲ್ಲಿ ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ₹60 ಕೋಟಿ ವೆಚ್ಚದಲ್ಲಿ ಕಲಾಕ್ಷೇತ್ರಗಳ ನಿರ್ಮಾಣ.

*ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 100 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ₹66 ಕೋಟಿ ವೆಚ್ಚದಲ್ಲಿ ನಿರ್ಮಾಣ.

*ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಚಿತ್ರಸಂತೆಗೆ ₹1 ಕೋಟಿ ಅನುದಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT