ಗುರುವಾರ , ಏಪ್ರಿಲ್ 15, 2021
24 °C

Karnataka Budget 2021: ಪ್ರಾದೇಶಿಕ ತಾರತಮ್ಯದ ಪರಾಕಾಷ್ಠೆ

ರಜಾಕ್ ಉಸ್ತಾದ್ Updated:

ಅಕ್ಷರ ಗಾತ್ರ : | |

Prajavani

ಐದು ವರ್ಷಗಳಲ್ಲಿ ಬಜೆಟ್‌ ಗಾತ್ರ ದುಪ್ಪಟ್ಟಾಗಿದೆ. ಆದರೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ₹1500 ಕೋಟಿ ಮಾತ್ರ ಅನುದಾನ ಇಟ್ಟಿದ್ದಾರೆ. ಈ ಬಾರಿ ಕನಿಷ್ಠ ₹ 2,500 ಕೋಟಿ ಕೊಡಬೇಕು ಎಂಬ ಬೇಡಿಕೆ ಇತ್ತು. ವರ್ಷದಿಂದ ವರ್ಷಕ್ಕೆ ಮಾರುಕಟ್ಟೆ ದರ ಹೆಚ್ಚಾಗುತ್ತಿದೆ ಎನ್ನುವುದನ್ನೇ ಸರ್ಕಾರ ಪರಿಗಣಿಸಿಲ್ಲ.

ಮೈಸೂರು, ಶಿವಮೊಗ್ಗದಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಹಾಗೂ ದಾವಣಗೆರೆಯಲ್ಲಿ ಜಯದೇವ ಆಸ್ಪತ್ರೆಯ ಶಾಖೆಗೆ ಸರ್ಕಾರವೇ ಅನುದಾನ ಕೊಡುತ್ತದೆ. ಆದರೆ, ಕಲಬುರ್ಗಿಯ ಜಿಮ್ಸ್‌ನಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ಆರಂಭಿಸಲು ಕೆಕೆಆರ್‌ಡಿಬಿ ಅನುದಾನ ನೀಡಬೇಕಂತೆ! ಇದಕ್ಕೂ ಸರ್ಕಾರ ಪ್ರತ್ಯೇಕ ಅನುದಾನ ನೀಡಬೇಕಿತ್ತಲ್ಲವೇ?

ಡಾ.ನಂಜುಂಡಪ್ಪ ವರದಿ ಶಿಫಾರಸುಗಳ ಅನುಷ್ಠಾನಕ್ಕೆ ಏಳು ವರ್ಷಗಳಿಂದ ₹ 3000 ಕೋಟಿ ಇಡುತ್ತಿದ್ದಾರೆ. ಕನಿಷ್ಠ ₹ 10 ಸಾವಿರ ಕೋಟಿ ನೀಡಿ ಎಂಬ ಬೇಡಿಕೆ ಇತ್ತು. ಒಟ್ಟು 114 ತಾಲ್ಲೂಕುಗಳ ಅಭಿವೃದ್ಧಿಗೆ ದಶಕದಿಂದಲೂ ಇಷ್ಟೇ ಅನುದಾನ ನೀಡುತ್ತಿರುವುದು ಯಾವ ಲೆಕ್ಕಾಚಾರ?

ಬೀದರ್‌ನಲ್ಲಿ ಕೃಷಿ ಸಲಕರಣೆಗಳ ಕ್ಲಸ್ಟರ್‌ ಘೋಷಣೆ ಮಾಡಿದ್ದಾರೆ. ಇದನ್ನು 2018ರಲ್ಲಿ ಕುಮಾರಸ್ವಾಮಿ ಸರ್ಕಾರವೇ ಘೋಷಣೆ ಮಾಡಿತ್ತು. ಬಸವಕಲ್ಯಾಣದ ಅನುಭವ ಮಂಟಪದ ಪ್ರಸ್ತಾವ ಮೂರು ವರ್ಷಗಳಿಂದ ಪ್ರತಿ ಬಜೆಟ್‌ನಲ್ಲಿ ಆಗುತ್ತಲೇ ಇದೆ. ಹಿಂದಿನ ಕಾಮಗಾರಿಗಳ ಬಗ್ಗೆಯೇ ಪದೇಪದೇ ಹೇಳುವ ಮೂಲಕ ಈ ಭಾಗದ ಜನರಿಗೆ ಮಂಕುಬೂದಿ ಎರಚಿದ್ದಾರೆ.

ರಾಯಚೂರು ರಿಂಗ್‌ ರಸ್ತೆ ನಿರ್ಮಿಸುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. ಯಾದಗಿರಿ ಜಿಲ್ಲೆಯ ಕಡೇಚೂರಿನಲ್ಲಿ ಬಲ್ಕ್‌ ಡ್ರಗ್‌ ಪಾರ್ಕ್‌ ನಿರ್ಮಿಸಬೇಕಾಗಿರುವುದು ಕೇಂದ್ರ ಸರ್ಕಾರ. ಆದರೆ, ಇವರೆಡನ್ನೂ ರಾಜ್ಯ ಬಜೆಟ್‌ನಲ್ಲಿ ಏಕೆ ಸೇರಿಸಿದ್ದಾರೋ ಗೊತ್ತಿಲ್ಲ. ರಾಯಚೂರಿಗೆ ವಿಮಾನ ನಿಲ್ದಾಣ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವುದು ಸೇರಿ ಯಾವುದೇ ಬೇಡಿಕೆ ಈಡೇರಿಲ್ಲ. ಇದು ಮೈಸೂರು, ಶಿವಮೊಗ್ಗ, ಬೆಂಗಳೂರು, ಹಾಸನಕ್ಕೆ ಮಾತ್ರ ಸೀಮಿತವಾದ ಬಜೆಟ್‌.

ಭದ್ರಾ ಮೇಲ್ದಂಡೆ ಯೋಜನೆ ಕೇವಲ 20 ಟಿಎಂಸಿ ಅಡಿ ನೀರಿಗೆ ಸೀಮಿತವಾಗಿದ್ದು, ಇದಕ್ಕೆ ₹ 21 ಸಾವಿರ ಕೋಟಿ ಡಿಪಿಆರ್‌ಗೆ ಅನುಮೋದನೆ ನೀಡಿದ್ದಾರೆ. ರಾಜ್ಯದ ಅತ್ಯಂತ ದೊಡ್ಡ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ಕಡೆಗಣಿಸಿದ್ದಾರೆ. ತಾರತಮ್ಯಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ?

(ಲೇಖಕ: ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು