ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget Opinion: ಬೀದಿಬದಿ ವ್ಯಾಪಾರಸ್ಥರನ್ನು ಕಡೆಗಣಿಸಿರುವುದು ನೋವಿನ ಸಂಗತಿ

Published 16 ಫೆಬ್ರುವರಿ 2024, 23:30 IST
Last Updated 16 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಕಾರ್ಮಿಕರ ಒಳಿತಿಗಾಗಿ ಈ ಬಾರಿಯ ಬಜೆಟ್‌ನಲ್ಲಿ ಬಹಳ ಪ್ರಮುಖ ನಿರ್ಧಾರಗಳನ್ನು ಸರ್ಕಾರ ಕೈಗೊಂಡಿದೆ. ಅದರ ಜೊತೆಗೆ ಬೀದಿಬದಿ ವ್ಯಾಪಾರಿಗಳ ಅಭಿವೃದ್ಧಿಗೂ ಯೋಜನೆಗಳನ್ನು ರೂಪಿಸಿದ್ದರೆ ಈ ಬಜೆಟ್‌ ಜನಪರವಾಗುತ್ತಿತ್ತು. ಬಡವರಷ್ಟೇ ಬೀದಿಬದಿ ವ್ಯಾಪಾರಿಗಳಾಗಿರುತ್ತಾರೆ. ಅವರನ್ನು ಕಡೆಗಣಿಸಿರುವುದು ನೋವು ತಂದಿದೆ.

ರಾಜ್ಯದಲ್ಲಿ 5.5 ಲಕ್ಷ ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ. 25 ಲಕ್ಷ ಅವಲಂಬಿತರು ಇದ್ದಾರೆ. ಜೀವನ ನಡೆಸಲು ನಿತ್ಯ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಇದರ ಜೊತೆಗೆ ಸವಲತ್ತುಗಳಿಗಾಗಿ ಸರ್ಕಾರದ ಗಮನ ಸೆಳೆಯಲು ಹೋರಾಟ ಮಾಡಬೇಕು. ಬೀದಿ ಬದಿ ವ್ಯಾಪಾರಿಗಳ ಕುಟುಂಬಗಳನ್ನು ಬಡತನದಿಂದ ಮೇಲೆತ್ತುವ ಪ್ರಯತ್ನವನ್ನು ಇಲ್ಲಿವರೆಗಿನ ಯಾವ ಸರ್ಕಾರಗಳೂ ಮಾಡಿಲ್ಲ. ಈ ಸರ್ಕಾರವಾದರೂ ಮಾಡೀತು ಎಂಬ ನಿರೀಕ್ಷೆ ಇತ್ತು. ಅದೂ ಹುಸಿಯಾಗಿದೆ.

ಯಾವುದೇ ಜಾಮೀನು ಇಲ್ಲದೇ ₹20 ಸಾವಿರ ಸಾಲ ನೀಡಬೇಕು. ಕಲ್ಯಾಣ ಮಂಡಳಿ ರಚಿಸಬೇಕು. ಇಲ್ಲದೇ ಹೋದರೆ ಪ್ರತ್ಯೇಕ ನಿಗಮ ರಚಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿದ್ದವು. ಜೊತೆಗೆ ನಿವೇಶನ ರಹಿತ ಬೀದಿಬದಿ ವ್ಯಾಪಾರಿಗಳಿಗೆ ನಿವೇಶನ ನೀಡುವ, ಮನೆ ಇಲ್ಲದವರಿಗೆ ಮನೆ ನೀಡುವ ಯೋಜನೆಗಳನ್ನು ರೂಪಿಸಬೇಕಿತ್ತು.

ಈ ಬಜೆಟ್‌ನಲ್ಲಿ ಯಾವುದೇ ಸ್ಪಂದನೆ ದೊರೆತಿಲ್ಲ. ಆದರೂ ನಾವು ಆಶಾಭಾವನೆಯನ್ನು ಕಳೆದುಕೊಂಡಿಲ್ಲ. ಮುಂದಿನ ಬಜೆಟ್‌ನಲ್ಲಿಯಾದರೂ ಬೀದಿಬದಿ ವ್ಯಾಪಾರಸ್ಥರನ್ನು ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ.

- ಸಿ.ಇ. ರಂಗಸ್ವಾಮಿ, ರಾಜ್ಯಾಧ್ಯಕ್ಷ, ಬೀದಿಬದಿ ವ್ಯಾಪಾರಸ್ಥರ ಸಂಘ

ಸ್ಥಳೀಯ ಸರ್ಕಾರ ಬಲಿಷ್ಠಗೊಳಿಸಿ

5ನೇ ಹಣಕಾಸು ಆಯೋಗವು ಈ ಮೊದಲೇ ರಚನೆಯಾಗಬೇಕಿತ್ತು. ಈಗ ರಚನೆಯಾಗಿ ಅದರ ಶಿಫಾರಸ್ಸಿನ ಅಡಿಯಲ್ಲಿ ಹಣ ಹಂಚಿಕೆಯಾಗುವುದರಿಂದ ಸ್ಥಳೀಯ ಸರ್ಕಾರಗಳಿಗೆ ಸಿಗಬೇಕಾಗಿರುವ ಆರ್ಥಿಕ ಬೆಂಬಲ ಸಮರ್ಪಕವಾಗಿ ದೊರೆಯುವ ನಿರೀಕ್ಷೆಯಲ್ಲಿದ್ದೇವೆ. ಸ್ಥಳೀಯ ಸರ್ಕಾರಗಳಿಗೆ ಕಂದಾಯದಿಂದ ಬರುವ ಆದಾಯವೇ ಪ್ರಮುಖವಾದುದು. ಈ ನಿಟ್ಟಿನಲ್ಲಿ ಸರ್ಕಾರ ಡಿಜಿಟಲೀಕರಣ ಮಾಡಿರುವುದು ಒಳ್ಳೆಯ ಆಲೋಚನೆಯಾಗಿದೆ. ಸ್ಥಳೀಯ ಸರ್ಕಾರ ತಮ್ಮ ಕಂದಾಯವನ್ನು ಕ್ರಮಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ಸಂಗ್ರಹಣೆ ಮಾಡಬಹುದು.

ಸ್ಥಳೀಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜನರ ಸಹಭಾಗಿತ್ವ ಬಹಳ ಪ್ರಮುಖವಾದುದು. ಆದರೆ ನಗರ ಸ್ಥಳೀಯ ಸರ್ಕಾರಗಳ ಮುಖ್ಯ ಜಾಲತಾಣಗಳಲ್ಲಿ ಪಾಲಿಕೆ ಪರಿಷತ್ ಸಾಮಾನ್ಯ ಸಭೆಗಳ ನಡಾವಳಿ ಸೇರಿದಂತೆ ಯಾವುದೇ ಮಾಹಿತಿಗಳು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುವ ಸಭೆಗಳ ಕಾರ್ಯಕಲಾಪವನ್ನು ನೇರ ಪ್ರಸಾರ ಮಾಡುವುದರಿಂದ ಜನರಿಗೆ ತಮ್ಮ ಸ್ಥಳೀಯ ಆಡಳಿತ ಕುರಿತು ವಾರ್ಡ್ ಸದಸ್ಯರು ನಡೆಸುವ ಚರ್ಚೆಯ ಎಲ್ಲ ಮಾಹಿತಿಯು ಇದರಿಂದ ಲಭಿಸಲಿದೆ.

ನಗರದಲ್ಲಿನ ವಾತಾವರಣದ ಸ್ವಚ್ಛತೆಗಾಗಿ ಮರಗಳ ಗಣತಿ, ಕೆರೆ ಮತ್ತು ಉದ್ಯಾನಗಳ ತಂತ್ರಾಂಶ ಆಧಾರಿತ ಮೇಲ್ವಿಚಾರಣೆ ಮತ್ತು ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸಲು ಪ್ರತ್ಯೇಕ ನೀತಿ ಜಾರಿಗೊಳಿಸಿರುವುದು ಸ್ವಾಗತಾರ್ಹ. ವಾರ್ಡ್ ಸಮಿತಿ ಮತ್ತು ಏರಿಯಾ ಸಭೆಗಳನ್ನು ಕಾರ್ಯರೂಪಕ್ಕೆ ತಂದು ಸಮರ್ಪಕವಾಗಿ ನಿರ್ವಹಿಸಬಹುದು.

- ಮಂಜುನಾಥ ಹಂಪಾಪುರ ಎಲ್., ಕಾರ್ಯಕ್ರಮದ ವ್ಯವಸ್ಥಾಪಕ, ನಾಗರಿಕ ಸಹಭಾಗಿತ್ವ ಕರ್ನಾಟಕ ಜನಾಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT