ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2022: ರಾಸಾಯನಿಕ ಮುಕ್ತ ಕೃಷಿಗೆ ಉತ್ತೇಜನ

ಎಣ್ಣೆಕಾಳುಗಳ ಆಮದು ಮೇಲಿನ ಅವಲಂಬನೆ ತಗ್ಗಿಸಲು ಯೋಜನೆ
Last Updated 1 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ರಾಸಾ ಯನಿಕ ಮುಕ್ತ ಹಾಗೂ ನೈಸರ್ಗಿಕ ಕೃಷಿಗೆ ಉತ್ತೇಜನ, ಎಣ್ಣೆಕಾಳುಗಳ ಆಮದು ಮೇಲಿನ ಅವಲಂಬನೆ ಕಡಿಮೆಗೊಳಿಸಲು ಎಣ್ಣೆಕಾಳುಗಳ ಕೃಷಿಗೆ ಪ್ರೋತ್ಸಾಹ ನೀಡಲು ಸಮಗ್ರ ಯೋಜನೆ ಜಾರಿ ಸೇರಿದಂತೆ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು 2022–23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಅತಿಯಾದ ರಾಸಾಯನಿಕ ಗೊಬ್ಬರ ಗಳ ಬಳಕೆಯಿಂದ ಕೃಷಿ ಭೂಮಿಯ ಫಲವತ್ತತೆ ಕ್ಷೀಣಿಸುವುದನ್ನು ತಡೆಗಟ್ಟುವ ಪ್ರಮುಖ ಉದ್ದೇಶದಿಂದ ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ನೀಡಲು ಈ ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸುತ್ತಿದ್ದರೂ, ಮೊದಲ ಹಂತದಲ್ಲಿ, ಗಂಗಾ ನದಿ ಪಾತ್ರದಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿನ ರೈತರಿಗೆ ಈ ಯೋಜನೆಯಡಿ ಒತ್ತು ನೀಡಲಾಗುವುದು ಎಂದು ತಿಳಿಸಲಾಗಿದೆ.

ನೈಸರ್ಗಿಕ ಕೃಷಿಯ ಜೊತೆಗೆ ಶೂನ್ಯಬಂಡವಾಳ ಹಾಗೂ ಸಾವಯವ ಕೃಷಿ ಪದ್ಧತಿಗಳನ್ನೂ ಪ್ರೋತ್ಸಾಹಿಸುವುದು, ಕೃಷಿಯಲ್ಲಿ ಆಧುನಿಕ ಪದ್ಧತಿಗಳ ಅಳವಡಿಕೆ, ಮೌಲ್ಯವರ್ಧನೆ ಹಾಗೂ ಸಮರ್ಪಕ ನಿರ್ವಹಣೆ ಅಗತ್ಯ. ಕೃಷಿ ಕ್ಷೇತ್ರದ ಈ ಅಗತ್ಯಗಳನ್ನು ಪೂರೈಸುವ ಸಲುವಾಗಿ ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಪಠ್ಯಕ್ರಮವನ್ನು ಪರಿಷ್ಕರಿಸಬೇಕಾಗುತ್ತದೆ. ಹಾಗಾಗಿ, ಪಠ್ಯಕ್ರಮಗಳ ಪರಿಷ್ಕರಣೆ ಮಾಡಲು ರಾಜ್ಯಗಳನ್ನು ಉತ್ತೇಜಸಲಾಗುವುದು ಎಂದಿದ್ದಾರೆ.

ಎಣ್ಣೆಕಾಳುಗಳ ಉತ್ಪಾದನೆ ಹೆಚ್ಚಳಕ್ಕೆ ಕ್ರಮ: ಎಣ್ಣೆಕಾಳುಗಳನ್ನು ಆಮದು ಮಾಡಿಕೊಳ್ಳುವುದರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಬಜೆಟ್‌ ನಲ್ಲಿ ಯೋಜನೆಯನ್ನು ಪ್ರಕಟಸಲಾಗಿದೆ. ದೇಶದ ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಸಮಗ್ರವಾದ ಹಾಗೂ ವ್ಯವಸ್ಥಿತವಾದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದೂ ನಿರ್ಮಲಾ ಘೋಷಿಸಿದ್ದಾರೆ.

ಸಿರಿಧಾನ್ಯಗಳ ಮಾರುಕಟ್ಟೆ ವಿಸ್ತರಣೆ: 2023 ಅನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂಬುದಾಗಿ ಘೋಷಿಸಲಾಗಿದೆ. ಹೀಗಾಗಿ, ಸಿರಿಧಾನ್ಯಗಳ ಕೃಷಿಯನ್ನು ಪ್ರೋತ್ಸಾಹಿಸುವ ಜೊತೆಗೆ, ಕೊಯ್ಲು ನಂತರ ಮೌಲ್ಯವರ್ಧನೆ, ದೇಶೀ ಯವಾಗಿ ಮಾರುಕಟ್ಟೆ ವಿಸ್ತರಣೆಗೆ ಒತ್ತು ನೀಡಲಾಗುವುದು. ಜೊತೆಗೆ, ಸಿರಿಧಾನ್ಯಗಳಿಗೆಬ್ರ್ಯಾಂಡ್‌ ರೂಪ ನೀಡಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಯೋಜನೆ ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದ್ದಾರೆ.

ಬಂಡವಾಳ ಹೂಡಿಕೆಗೆ ಒತ್ತು: ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ನಬಾರ್ಡ್‌ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸುವದಾಗಿ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದರು.

ಸ್ಟಾರ್ಟ್‌ಅಪ್‌ಗಳು ಬಂಡವಾಳ ಹೂಡುವುದನ್ನು ಪ್ರೋತ್ಸಾಹಿಸಲು ‘ಸಹ–ಹೂಡಿಕೆ ಮಾದರಿ’ ಎಂಬ ಪರಿಕಲ್ಪನೆಯನ್ನು ನಬಾರ್ಡ್‌ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಕೃಷಿ ಮತ್ತು ಗ್ರಾಮೀಣ ಉದ್ದಿಮೆಗಳಲ್ಲಿ ಬಂಡವಾಳ ಹೂಡಿಕೆ ಈ ಯೋಜನೆಯ ಉದ್ದೇಶ. ಕೃಷಿಕರ ಸಂಘಗಳು, ರೈತರಿಗೆ ಬಾಡಿಗೆ ಆಧಾರದ ಮೇಲೆ ಕೃಷಿ ಉಪಕರಣಗಳನ್ನು ನೀಡುವುದು, ಮಾಹಿತಿ ತಂತ್ರಜ್ಞಾನ ಆಧಾರಿತ ನೆರವನ್ನು ರೈತರಿಗೆ ಒದಗಿಸುವುದು ಈ ಯೋಜನೆ ಒಳಗೊಂಡಿದೆ.

ಎಂಎಸ್‌ಪಿ: ₹ 2.37 ಲಕ್ಷ ಕೋಟಿ ಮೀಸಲು
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ ₹ 2.37 ಲಕ್ಷ ಕೋಟಿ ತೆಗೆದಿರಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಕಳೆದ ವರ್ಷ ಈ ಮೊತ್ತ ₹ 2.42 ಲಕ್ಷ ಕೋಟಿ ಇತ್ತು.

2021–22ನೇ ಸಾಲಿನ ಹಿಂಗಾರು ಹಂಗಾಮಿ ಗೋಧಿ ಹಾಗೂ ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಒಟ್ಟು 1,208 ಲಕ್ಷ ಟನ್‌ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. 1.63 ಕೋಟಿ ರೈತರಿಗೆ ಇದರಿಂದ ಲಾಭವಾಗಲಿದೆ. ತಮಗೆ ಹೊಂದುವಂತಹ ತರಕಾರಿ ಹಾಗೂ ಹಣ್ಣುಗಳ ಕೃಷಿಯನ್ನು ರೈತರು ಕೈಗೊಳ್ಳಲು ಹಾಗೂ ಅವುಗಳ ಕೊಯ್ಲು, ಸಾಗಣೆಗಾಗಿ ನೆರವು ನೀಡಲಾಗುವುದು. ಈ ಉದ್ದೇಶಕ್ಕೆ ರಾಜ್ಯ ಸರ್ಕಾರಗಳ ಪಾಲುದಾರಿಕೆಯೂ ಇರಲಿದೆ.

ತಂತ್ರಜ್ಞಾನ:ಖಾಸಗಿ ಸಹಭಾಗಿತ್ವಕ್ಕೆ ಮಣೆ
ಡಿಜಿಟಲ್‌ ಹಾಗೂ ಹೈ–ಟೆಕ್‌ ಸೇವೆಗಳನ್ನು ಅನ್ನದಾತನ ಮನೆಗೆ ತಲುಪಿಸಲು ಸರ್ಕಾರ–ಖಾಸಗಿ ಸಹಭಾಗಿತ್ವ (ಪಿಪಿಪಿ) ವಿಧಾನದಡಿ ಯೋಜನೆಗೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಘೋಷಿಸಿದೆ.

ಈ ಕಾರ್ಯದಲ್ಲಿ ಸಾರ್ವಜನಿಕ ವಲಯದ ಸಂಶೋಧನಾ ಸಂಸ್ಥೆಗಳು, ವಿಸ್ತರಣಾ ಕೇಂದ್ರಗಳಲ್ಲದೇ, ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಉದ್ದಿಮೆಗಳನ್ನು ಒಳಗೊಳ್ಳುವಂತೆ ಮಾಡಲಾಗುವುದು. ಖಾಸಗಿ ವಲಯವನ್ನು ಸಹ ಕೃಷಿ ಕ್ಷೇತ್ರದ ಭಾಗಿದಾರರನ್ನಾಗಿ ಮಾಡುವ ಚಿಂತನೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್‌ ಮುಂದಿಟ್ಟಿದ್ದಾರೆ.

ಬಾಹ್ಯಾಕಾಶ, ರಕ್ಷಣಾ ಕ್ಷೇತ್ರದಲ್ಲಿ ಡ್ರೋನ್‌ಗಳ ಬಳಕೆ ಈ ವ್ಯಾಪಕವಾಗಿದೆ. ಈ ಕ್ಷೇತ್ರದಲ್ಲಿಯೂ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ‘ಕಿಸಾನ್‌ ಡ್ರೋನ್‌’ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದುಪ್ರಕಟಿಸಿದ್ದಾರೆ.

ಬೆಳೆಗಳ ಸಮೀಕ್ಷೆ, ಜಮೀನಿನ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳು ಹಾಗೂ ಪೋಷಕಾಂಶಗಳ ಸಿಂಪಡಣೆಗೆ ಡ್ರೋನ್‌ಗಳನ್ನು ಬಳಕೆಯನ್ನು ಉತ್ತೇಜಿಸಲಾಗುತ್ತದೆ.

ಇವನ್ನೂ ಓದಿ
*

*
*
*
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT