ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget-2022| ಕಾವೇರಿ–ಪೆನ್ನಾರ್‌ ಸೇರಿ 5 ನದಿ ಜೋಡಣೆ ಯೋಜನೆ ಘೋಷಣೆ

Last Updated 1 ಫೆಬ್ರುವರಿ 2022, 15:56 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಕಾವೇರಿ ಮತ್ತು ಆಂಧ್ರದ ಪೆನ್ನಾರ್‌ ನದಿಗಳ ಜೋಡಣೆ ಸೇರಿದಂತೆ ವಿವಿಧ ನದಿಗಳನ್ನು ಸಂಪರ್ಕಿಸುವ ಮಹತ್ವದಐದು ನದಿ ಜೋಡಣಾ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಸಾಲಿನ ಬಜೆಟ್‌ನಲ್ಲಿ ಈ ಯೋಜನೆ ಪ್ರಕಟಿಸಿದ್ದು, ಒಮ್ಮೆ ಫಲಾನುಭವಿ ರಾಜ್ಯಗಳ ನಡುವೆ ಸಹಮತ ಏರ್ಪಡುತ್ತಿದ್ದಂತೆ ಕಾರ್ಯಗತಗೊಳಿಸಲಾಗುವುದು ಎಂದಿದ್ದಾರೆ.

ದಾಮನಗಂಗಾ–ಪಿಂಜಲ್‌, ಪರ್‌–ತಪಿ–ನರ್ಮದಾ, ಗೋದಾವರಿ–ಕೃಷ್ಣಾ, ಕೃಷ್ಣಾ–ಪೆನ್ನಾರ್‌, ಪೆನ್ನಾರ್‌–ಕಾವೇರಿ ನದಿಗಳ ಜೋಡಣೆ ಸಂಬಂಧ ಸಮಗ್ರ ಯೋಜನಾ ವರದಿ ಸಜ್ಜಾಗಿದೆ ಎಂದಿದ್ದಾರೆ.

ಕೆನ್–ಬೆತ್ವಾ ಯೋಜನೆ:ನೀರಾವರಿ ಸೌಲಭ್ಯ, ಕುಡಿಯುವ ನೀರು ಪೂರೈಕೆ, ಜಲವಿದ್ಯುತ್‌ ಉತ್ಪಾದನೆ ಒಳಗೊಂಡ ಅಂದಾಜು ₹ 44,605 ಕೋಟಿ ವೆಚ್ಚದ ಕೆನ್‌–ಬೆತ್ವಾ ಯೋಜನೆಯನ್ನೂ ಕೇಂದ್ರ ಸರ್ಕಾರ ಪ್ರಕಟಿಸಿದೆ.

ಯೋಜನೆಯಡಿ 9.08 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ, 62 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆ, 103 ಮೆಗಾವ್ಯಾಟ್ ಜಲವಿದ್ಯುತ್‌ ಉತ್ಪಾದನೆ 27 ಮೆಗಾವ್ಯಾಟ್‌ ಸೋಲಾರ್‌ ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಈ ಯೋಜನೆಯಡಿ ಹೊಂದಲಾಗಿದೆ. ಉದ್ದೇಶಿತ ಯೋಜನೆಗಾಗಿ 2021–22ನೇ ಸಾಲಿನಲ್ಲಿ 4,300 ಕೋಟಿ, 2022–23ನೇ ಸಾಲಿನಲ್ಲಿ ₹ 1,400 ಕೋಟಿ ಅನ್ನೂ ಹಂಚಿಕೆ ಮಾಡಲಾಗಿದೆ.

2000 ಕಿ.ಮೀ ಸಂಪರ್ಕ ರಸ್ತೆಗೆ ‘ಕವಚ’:ಆತ್ಮನಿರ್ಭರ ಭಾರತ್‌ ಅಂಗವಾಗಿ ಸುಮಾರು 2000 ಕಿ.ಮೀ. ಅಂತರದ ಸಂಪರ್ಕ ರಸ್ತೆಯನ್ನು ಕವಚ್‌ ತಂತ್ರಜ್ಞಾನದ ವ್ಯಾಪ್ತಿಗೆ ತರಲಾಗುವುದು. ‘ಕವಚ್‌‘ ಎಂಬುದು ಸುರಕ್ಷತೆ ಮತ್ತು ರಸ್ತೆಯ ಸಾಮರ್ಥ್ಯ ವೃದ್ಧಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ವಿಶ್ವದರ್ಜೆ ಗುಣಮಟ್ಟದ ತಂತ್ರಜ್ಞಾನವಾಗಿದೆ.

ಪರ್ವತ್‌ ಮೇಳ:ಸುಗಮ ಸಂಚಾರಕ್ಕೆ ಅವಕಾಶವಿಲ್ಲದ, ಕ್ಲಿಷ್ಟಕರವಾದ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಸಂಚಾರಕ್ಕೆ ಅನುವಾಗುವಂತೆ, ಪರಿಸರ ಸ್ನೇಹಿ ಮತ್ತು ಸುಸ್ಥಿರಾಭಿವೃದ್ಧಿಯ ಪರ್ಯಾಯ, ಸಾಂಪ್ರದಾಯಿಕ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಅದಕ್ಕಾಗಿ ರಾಷ್ಟ್ರೀಯ ರೋಪ್‌ವೇ ಅಭಿವೃದ್ಧಿ ಕಾರ್ಯಕ್ರಮವನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ ಜಾರಿಗೆ ತರಲಿದ್ದು, ಪ್ರಯಾಣಿಕರ ಅನುಕೂಲ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿ ಗುರಿಯೂ ಇದೆ. 2022–23 ನೇ ಸಾಲಿನಲ್ಲಿ 60 ಕಿ.ಮೀ ಉದ್ದ ರೋಪ್‌ ವೇ ಯೋಜನೆ ಜಾರಿಗೆ 8 ಪ್ರತ್ಯೇಕ ಗುತ್ತಿಗೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT