ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೊಂದು 'ಶೂನ್ಯ ಬಜೆಟ್': ರಾಹುಲ್ ಗಾಂಧಿ- ಪ್ರತಿಪಕ್ಷಗಳ ಪ್ರತಿಕ್ರಿಯೆ ಹೀಗಿತ್ತು!

Last Updated 1 ಫೆಬ್ರುವರಿ 2022, 9:40 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿರುವ 2022–23ನೇ ಸಾಲಿನ ಬಜೆಟ್‌‌ ಅನ್ನು ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ನಾಯಕರು ಟೀಕಿಸಿದ್ದಾರೆ.

ಇದೊಂದು ಶೂನ್ಯ ಬಜೆಟ್ ಆಗಿದ್ದು, ದುಡಿಯುವ ಹಾಗೂ ಮಧ್ಯಮ ವರ್ಗದವರಿಗೆ ಯಾವುದೇ ಪರಿಹಾರ ಘೋಷಿಸದೇ ದ್ರೋಹ ಎಸಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಶೂನ್ಯ ಬಜೆಟ್: ರಾಹುಲ್ ಟೀಕೆ
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ದುಡಿಯುವ, ಮಧ್ಯಮ, ಬಡ, ಯುವ ಜನಾಂಗ, ರೈತರು ಹಾಗೂ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆಗಳಿಗೆ ಏನೂ ಲಭಿಸಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮಧ್ಯಮ ವರ್ಗಕ್ಕೆ ದ್ರೋಹ ಬಗೆದ ಕೇಂದ್ರ ಸರ್ಕಾರ: ಸುರ್ಜೆವಾಲ
ಕೋವಿಡ್ ಸಾಂಕ್ರಾಮಿಕ ರೋಗದ ಕಷ್ಟಕಾಲದಲ್ಲಿ ದುಡಿಯುವ ಹಾಗೂ ಮಧ್ಯಮ ವರ್ಗವು ಪರಿಹಾರಕ್ಕಾಗಿ ನಿರೀಕ್ಷಿಸುತ್ತಿದ್ದರು. ಸಂಬಳ ಕಡಿತ ಹಾಗೂ ಹಣದುಬ್ಬರದಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ನೇರ ತೆರಿಗೆ ಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಮತ್ತೊಮ್ಮೆ ತೀವ್ರ ನಿರಾಶೆಯನ್ನುಂಟು ಮಾಡಿದ್ದಾರೆ. ದೇಶದ ದುಡಿಯುವ ಹಾಗೂ ಮಧ್ಯಮ ವರ್ಗಕ್ಕೆ ಕೇಂದ್ರ ಸರ್ಕಾರವು ದ್ರೋಹ ಬಗೆದಿದೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಪ್ರತಿಕ್ರಿಯಿಸಿದ್ದಾರೆ.

ಜನ ಸಾಮಾನ್ಯರ ಬಗ್ಗೆ ಚಿಂತಿತರಾಗಿದ್ದೇವೆ: ತರೂರ್
ಡಿಜಿಟಲ್ ಕರೆನ್ಸಿಗೆ ಸಂಬಂಧಿಸಿದಂತೆ ಸರ್ಕಾರವು ಆ ದಿಕ್ಕಿನತ್ತ ಸಾಗುತ್ತಿದೆ. ಆ ಬಗ್ಗೆ ನಮ್ಮ ಟೀಕೆಗಳಿಲ್ಲ. ಆದರೆ ಬಜೆಟ್‌ನಲ್ಲಿ ಸಾಮಾನ್ಯ ನಾಗರಿಕರಿಗೆ ಎದುರಾಗಿರುವ ಕೊರತೆ ಬಗ್ಗೆ ನಾವು ಹೆಚ್ಚು ಚಿಂತಿತರಾಗಿದ್ದೇವೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.

ಹೊಸತೇನಿಲ್ಲ: ಕುಮಾರಸ್ವಾಮಿ ಟೀಕೆ
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಹೊಸತೇನು ಇಲ್ಲ. ಹಸಿದವರ ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿದಂತೆ ಇದೆ ಎಂದು ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.

ಯಾರಿಗೆ ಬಜೆಟ್? ಯಚೂರಿ ಪ್ರಶ್ನೆ

ದೇಶದ ಶೇ 10 ರಷ್ಟು ಶ್ರೀಮಂತರು ಶೇ 75ರಷ್ಟು ಸಂಪತ್ತನ್ನು ಹೊಂದಿದ್ದಾರೆ. ತಳಮಟ್ಟದಲ್ಲಿರುವ ಶೇ 60 ರಷ್ಟು ಮಂದಿ ಶೇ 5ಕ್ಕಿಂತಲೂ ಕಡಿಮೆ ಸಂಪತ್ತು ಹೊಂದಿದ್ದಾರೆ. ನಿರುದ್ಯೋಗ, ಬಡತನ ಮತ್ತು ಹಸಿವು ಹೆಚ್ಚುತ್ತಿರುವ ಮತ್ತು ಸಾಂಕ್ರಾಮಿದ ಈ ಸಮಯದಲ್ಲಿ ಶ್ರೀಮಂತರಿಗೆ ಏಕೆ ಹೆಚ್ಚು ತೆರಿಗೆ ವಿಧಿಸಿಲ್ಲ? ಎಂದು ಸಿಪಿಐ ನಾಯಕ ಸೀತಾರಾಮ ಯಚೂರಿ ಪ್ರಶ್ನೆ ಮಾಡಿದ್ದಾರೆ.

ಏನೂ ಇಲ್ಲಗಳ ನಡುವೆ ಕಳೆದುಹೋದ ಬಜೆಟ್‌: ಮಮತಾ

‘ನಿರುದ್ಯೋಗ ಮತ್ತು ಹಣದುಬ್ಬರದಿಂದ ನಲುಗಿ ಹೋಗುತ್ತಿರುವ ಸಾಮಾನ್ಯ ಜನರಿಗೆ ಬಜೆಟ್‌ನಿಂದ ಸಿಕ್ಕಿದ್ದು ಶೂನ್ಯ. ‘ಏನೂ ಇಲ್ಲಗಳ’ ನಡುವೆ ಬಜೆಟ್‌ ಕಳೆದು ಹೋಗಿದೆ - ಪೆಗಾಸಿಸ್‌ ಅನ್ನು ಮರೆಮಾಚುವ ಬಜೆಟ್‌’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೇಲಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT