ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ 2020| ಆರ್ಥಿಕತೆ ಚೇತರಿಕೆ; ಸಮೀಕ್ಷೆ ಆಶಾವಾದ

ವಿತ್ತೀಯ ಕೊರತೆ ಹೆಚ್ಚಲಿ; ಸಂಪತ್ತು ಸೃಷ್ಟಿಗೆ ಆದ್ಯತೆ ಸಿಗಲಿ; ಆರ್ಥಿಕ ಸುಧಾರಣೆಗಳ ಜಾರಿಗೆ ದಿಟ್ಟತನ ತೋರಲಿ
Last Updated 31 ಜನವರಿ 2020, 20:15 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವು ಶೇ 6 ರಿಂದ ಶೇ 6.5ರಷ್ಟು ಚೇತರಿಕೆ ದಾಖಲಿಸಲಿದೆ ಎಂದು ಆರ್ಥಿಕ ಸಮೀಕ್ಷೆಯು ಆಶಾವಾದ ವ್ಯಕ್ತಪಡಿಸಿದೆ.

ಆರ್ಥಿಕ ಬೆಳವಣಿಗೆಗೆ ಪುನಶ್ಚೇತನ ನೀಡುವುದು ಸರ್ಕಾರದ ಮುಖ್ಯ ಆದ್ಯತೆಯಾಗಬೇಕಾಗಿದೆ. ಈ ಕಾರಣಕ್ಕೆ ವಿತ್ತೀಯ ಕೊರತೆ ಗುರಿ ಸಡಿಲಿಸಿ ವೆಚ್ಚ ಹೆಚ್ಚಿಸಬೇಕು. ಸಬ್ಸಿಡಿ ಕಡಿತಗೊಳಿಸಬೇಕು ಎಂದು ಸಲಹೆ ನೀಡಿರುವ ಸಮೀಕ್ಷೆಯು, ಉದ್ಯಮ ಪರ ನೀತಿ ಅಳವಡಿಸಿಕೊಳ್ಳುವುದನ್ನು ಬಲವಾಗಿ ಪ್ರತಿಪಾದಿಸಿದೆ.

ಮುಖ್ಯ ಧ್ಯೇಯ: ಸಂಪತ್ತು ಸೃಷ್ಟಿಸುವುದೇ ಸಮೀಕ್ಷೆಯ ಮುಖ್ಯ ಧ್ಯೇಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿರುವ ‘ಸಂಪತ್ತು ಸೃಷ್ಟಿಸುವವರು ದೇಶದ ಸಂಪತ್ತಾಗಿದ್ದಾರೆ’ ಎನ್ನುವ ಮಾತಿನಿಂದ ಪ್ರೇರಣೆ ಪಡೆದಿದೆ. ಸಂಪತ್ತಿನ ಸಮರ್ಪಕ ವಿತರಣೆ ಮಾಡುವ ಮುಂಚೆ ಅದನ್ನು ಸೃಷ್ಟಿಸಬೇಕಾಗಿದೆ. ಹೀಗಾಗಿ ಸಂಪತ್ತು ಸೃಷ್ಟಿಸುವವರನ್ನು ಗೌರವದಿಂದ ಕಾಣಬೇಕು ಎಂದು ಅಭಿಪ್ರಾಯಪಡಲಾಗಿದೆ.

ಕುಂಠಿತ ಆರ್ಥಿಕ ಬೆಳವಣಿಗೆ ದರವು ಅತ್ಯಂತ ಕೆಳಮಟ್ಟ ತಲುಪಿ ಈಗ ಚೇತರಿಕೆಯ ಹಾದಿಗೆ ಮರಳುತ್ತಿದೆ. ತಯಾರಿಕೆ ಚಟುವಟಿಕೆ ಮತ್ತು ಜಾಗತಿಕ ವ್ಯಾಪಾರವು ಕುಸಿತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದು ಮುಂದಿನ ವರ್ಷದ ಜಿಡಿಪಿ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಿಳಿಸಿದೆ. ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ. ಸುಬ್ರಮಣಿಯನ್‌ ಸಮೀಕ್ಷೆ ಸಿದ್ಧಪಡಿಸಿದ್ದಾರೆ.

ಆರ್ಥಿಕತೆಗೆ ಉತ್ತೇಜನ ನೀಡಲು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ತಯಾರಿಕಾ ವಲಯಕ್ಕೆ ಸಂಬಂಧಿಸಿದಂತೆ ಜಾಗತಿಕ ಮಾರುಕಟ್ಟೆಗೆ ಭಾರತದಲ್ಲಿ ಸರಕುಗಳನ್ನು ಜೋಡಣೆ ಮಾಡುವ ಉದ್ದಿಮೆಗೆ ಆದ್ಯತೆ ನೀಡಬೇಕು. ಇದರಿಂದ 2025ರ ವೇಳೆಗೆ 4 ಕೋಟಿ ಮತ್ತು 2030ರ ಹೊತ್ತಿಗೆ 8 ಕೋಟಿ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದು ಅಂದಾಜಿಸಿದೆ.

ಉದ್ದಿಮೆ – ವಹಿವಾಟು ಆರಂಭಿಸುವುದನ್ನು ಸುಲಭಗೊಳಿಸಲು ನಿಯಮ ಸರಳಗೊಳಿಸಬೇಕು. ಆಸ್ತಿ ನೋಂದಣಿ, ತೆರಿಗೆ ಪಾವತಿ ಮತ್ತು ಗುತ್ತಿಗೆ ಕಾರ್ಯಗತಗೊಳಿಸುವುದನ್ನು ಸುಲಭಗೊಳಿಸಬೇಕು ಎಂದು ಸಲಹೆ ನೀಡಲಾಗಿದೆ.

ಚುನಾವಣೆಯಲ್ಲಿ ಭಾರಿ ಜನಬೆಂಬಲ ಪಡೆದಿರುವುದನ್ನು ಸರ್ಕಾರವು ಆರ್ಥಿಕ ಸುಧಾರಣಾ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರಲು ಬಳಸಿಕೊಳ್ಳಬೇಕು. ಇದರಿಂದ ಆರ್ಥಿಕತೆಯು 2020–21ರಲ್ಲಿ ಗಮನಾರ್ಹ ಚೇತರಿಕೆ ಕಾಣಲಿದೆ ಎಂದು ಹೇಳಿದೆ.

ಶೇ 6 ರಿಂದ ಶೇ 6.5: 2020–21ನೇ ಹಣಕಾಸು ವರ್ಷದ ಡಿಜಿಪಿ

₹ 100 ಲಕ್ಷ ಕೋಟಿ: ಮೂಲಸೌಕರ್ಯ ವಲಯಕ್ಕೆ ಹೂಡಿಕೆ

8 ಕೋಟಿ: 2030ರ ವೇಳೆಗೆ ಹೊಸ ಉದ್ಯೋಗ ಸೃಷ್ಟಿ

ಈ ವರ್ಷದ ಆರ್ಥಿಕ ಸಮೀಕ್ಷೆಯನ್ನು ₹ 100
ನೋಟು ಹೊಂದಿರುವ ನೇರಳೆ ಬಣ್ಣದಲ್ಲಿ ಎರಡು ಸಂಪುಟಗಳಲ್ಲಿ ಮುದ್ರಿಸಲಾಗಿದೆ. ‘ಇದು ಹಳೆಯ ಮತ್ತು ಹೊಸತನದ ಸಮನ್ವಯತೆ ಪ್ರತಿನಿಧಿಸುತ್ತದೆ’ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ. ವಿ. ಸುಬ್ರಮಣಿಯನ್‌ ಹೇಳಿದ್ದಾರೆ.

ಆರ್ಥಿಕ ಸಾಧನೆಯ ಚಿತ್ರಣ

ಪ್ರಸಕ್ತ ಹಣಕಾಸು ವರ್ಷದಲ್ಲಿನ ವಿವಿಧ ವಲಯಗಳ ಸಾಧನೆಯ ವಿವರವಾದ ಚಿತ್ರಣವನ್ನು ಆರ್ಥಿಕ ಸಮೀಕ್ಷೆಯು ನೀಡುತ್ತದೆ. ಬಜೆಟ್‌ನ ಪೂರ್ವಭಾವಿ ಸಮಗ್ರ ಚಿತ್ರಣವೂ ಇದಾಗಿರುತ್ತದೆ. ಸರ್ಕಾರದ ಮುಂದೆ ಇರುವ ಸವಾಲುಗಳನ್ನೂ ಪಟ್ಟಿ ಮಾಡಿರುತ್ತದೆ.

ಗನ್ ಲೈಸನ್ಸ್‌ಗಿಂತ ಹೋಟೆಲ್‌ ಲೈಸನ್ಸ್‌ ಕಠಿಣ

ಪಿಸ್ತೂಲ್‌, ಗನ್‌ ಖರೀದಿಸಲು ಬೇಕಾಗುವ ಅನುಮತಿಗಳಿಗಿಂತ ಮಹಾನಗರಗಳಲ್ಲಿ ರೆಸ್ಟೊರೆಂಟ್ಸ್‌ ಆರಂಭಿಸಲು ಬೇಕಾಗುವ ಅನುಮತಿಗಳ ಸಂಖ್ಯೆಯೇ ಹೆಚ್ಚಿಗೆ ಇರುವುದರತ್ತ ಸಮೀಕ್ಷೆ ಬೊಟ್ಟು ಮಾಡಿದೆ. ದೆಹಲಿಯಲ್ಲಿ ಪಿಸ್ತೂಲ್‌ ಖರೀದಿಸಲು ಪೊಲೀಸರು 18 ದಾಖಲೆಗಳನ್ನು ಕೇಳಿದರೆ, ರೆಸ್ಟೊರೆಂಟ್ ಆರಂಭಿಸಲು 45 ದಾಖಲೆಗಳನ್ನು ಬಯಸುತ್ತಾರೆ. ಬೆಂಗಳೂರಿನಲ್ಲಿ 36, ಮುಂಬೈನಲ್ಲಿ 22 ದಾಖಲೆಗಳು ಬೇಕಾಗುತ್ತವೆ.

‘ಥಾಲಿನಾಮಿಕ್ಸ್‌’

ಜನಸಾಮಾನ್ಯರ ಹಣಕಾಸು ಪರಿಸ್ಥಿತಿಯಲ್ಲಿ ಸುಧಾರಣೆಯಾಗಿರುವುದನ್ನು ಸೂಚಿಸಲು ಒಂದು ತಟ್ಟೆ ಊಟಕ್ಕೆ ಆಗುವ ವೆಚ್ಚದ ನಿದರ್ಶನ (ಥಾಲಿನಾಮಿಕ್ಸ್‌) ನೀಡಲಾಗಿದೆ. 2006–07 ರಿಂದ 2019–20ರ ಅವಧಿಯಲ್ಲಿ ಸಸ್ಯಹಾರಿ ಥಾಲಿಯ ಕೈಗೆಟುಕುವ ಪ್ರಮಾಣವು ಶೇ 29ರಷ್ಟು ಮತ್ತು ಮಾಂಸಾಹಾರಿ ಊಟ ಶೇ 18ರಂದು ಸುಧಾರಣೆ ಕಂಡಿದೆ. ವ್ಯಕ್ತಿಯೊಬ್ಬ 2006ರಲ್ಲಿ ಥಾಲಿ ಊಟಕ್ಕೆ ದಿನಗೂಲಿಯ ಶೇ 70ರಷ್ಟು ವೆಚ್ಚ ಮಾಡಿದ್ದರೆ, 2019ರಲ್ಲಿ ದಿನದ ದುಡಿಮೆಯ ಶೇ 50ರಷ್ಟು ವೆಚ್ಚ ಮಾಡಲು ಸಾಧ್ಯವಾಗಿದೆ. 5 ಸದಸ್ಯರನ್ನು ಒಳಗೊಂಡ ಕುಟುಂಬವು ಧಾನ್ಯ, ತರಕಾರಿ ಮತ್ತು ಬೇಳೆ ಒಳಗೊಂಡ ದಿನಕ್ಕೆ ಕನಿಷ್ಠ ಎರಡು ಹೊತ್ತಿನ ಥಾಲಿ ಊಟಕ್ಕೆ ವರ್ಷವೊಂದಕ್ಕೆ ಸರಾಸರಿ ₹ 10,887 ಹೆಚ್ಚು ಹಣ ವೆಚ್ಚ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT