ಸೋಮವಾರ, ಮೇ 16, 2022
24 °C

Budget 2021: ದೇಶದ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಸಂಜೀವಿನಿ: ಯಡಿಯೂರಪ್ಪ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂಸತ್ತಿನಲ್ಲಿ ಮಂಡಿಸಿರುವ 2021-22ನೇ ಸಾಲಿನ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈ ಬಜೆಟ್ ದೇಶದ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಸಂಜೀವಿನಿಯಾಗಿದೆ ಎಂದು ತಿಳಿಸಿದ್ದಾರೆ.

ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು (ಸೋಮವಾರ) ಮಂಡಿಸಿದ ಬಜೆಟ್, ಸವಾಲಿನ ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಸಂಜೀವಿನಿಯಾಗಿದೆ. ಕೋವಿಡ್-19 ಬಿಕ್ಕಟ್ಟಿನಿಂದ ಸ್ಥಗಿತಗೊಂಡ ಅರ್ಥವ್ಯವಸ್ಥೆ ಮತ್ತೆ ಪುಟಿದೇಳಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಈ ಬಜೆಟ್ ವೇಗವರ್ಧಕವಾಗಲಿದೆ. ಸಾಂಕ್ರಾಮಿಕದ ಸಂಕಷ್ಟಗಳ ನಡುವೆ ಇದು ಉತ್ತಮ ಬಜೆಟ್ ಆಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಇದನ್ನೂ ಓದಿ: 

ಕೇಂದ್ರ ಬಜೆಟ್‌ನಲ್ಲಿ ವಿವಿಧ ಕ್ಷೇತ್ರಗಳಿಗೆ ನೀಡಿರುವ ಅನುದಾನವನ್ನು ಯಡಿಯೂರಪ್ಪ ಮೆಲುಕು ಹಾಕಿದರು. ಕೋವಿಡ್ ಲಸಿಕೆ ಅಭಿಯಾನಕ್ಕೆ 35,000 ಕೋಟಿ ರೂ, ಕೃಷಿ ಬಲವರ್ಧನೆ, ಅನ್ನದಾತ ರೈತರ ಅಭಿವೃದ್ಧಿಗೆ ಪ್ರಾಮುಖ್ಯತೆ, ಕೌಶಲ್ಯ ಹಾಗೂ ಮೂಲಸೌಕರ್ಯಾಭಿವೃದ್ಧಿ, ಕೈಗಾರಿಕಾ ಬೆಳವಣಿಗೆಗೆ ಬಜೆಟ್‍ನಲ್ಲಿ ವಿಶೇಷ ಗಮನ ನೀಡಲಾಗಿರುವುದು ಸ್ವಾಗತಾರ್ಹ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ 2022ರೊಳಗೆ ರೈತರ ಆದಾಯ ದ್ವಿಗುಣಗೊಳಿಸಲು ಭೂಮಿಕೆ ಒದಗಿಸಲಾಗಿದೆ ಎಂದು ತಿಳಿಸಿದರು.

ಸ್ವಾವಲಂಬಿ ಭಾರತ ನಿರ್ಮಾಣದ ನಿಟ್ಟಿನಲ್ಲಿ ಬಜೆಟ್‌ನಲ್ಲಿ 13 ವಲಯಗಳಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿರುವುದು, ಸ್ವಚ್ಛ ಅಭಿಯಾನಕ್ಕೆ 1.41 ಲಕ್ಷ ಕೋಟಿ ರೂ. ಅನುದಾನ ಒದಗಿಸಿರುವುದನ್ನು ಸ್ವಾಗತಿಸುತ್ತೇನೆ. ಪ್ರಸಕ್ತ ಬಜೆಟ್ ಅರ್ಥವ್ಯವಸ್ಥೆಯ ಪುನಶ್ಚೇತನದೊಂದಿಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಶಕ್ತಿ ತುಂಬುವ ಸಾಮರ್ಥ್ಯ ಪ್ರದರ್ಶಿಸಿದೆ ಎಂದು ಟ್ವೀಟ್ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು