ಭಾನುವಾರ, ಮಾರ್ಚ್ 7, 2021
31 °C

Union Budget 2021: ಕೇಂದ್ರದ ಬಜೆಟ್‌ನಲ್ಲಿ ಬಡತನ ನಿವಾರಣೆಗೆ ಆದ್ಯತೆ ಸಿಗಲಿ

ಡೆಕ್ಕನ್‌ ಹೆರಾಲ್ಡ್‌ Updated:

ಅಕ್ಷರ ಗಾತ್ರ : | |

ಕಳೆದ ವರ್ಷ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 'ಜನರ ಜೀವನ ಮಟ್ಟ ಸುಧಾರಣೆಯತ್ತ ಬಜೆಟ್‌ ಚಿತ್ತ ಹರಿಸಿದೆ' ಎಂದು ಭರವಸೆ ನೀಡಿದ್ದರು. ಆದರೆ, 2020ನೇ ವರ್ಷವು ದೊಡ್ಡ ದುರಂತವೊಂದಕ್ಕೆ ಎದುರಾಗಲಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ. 

ಕೊರೊನಾ ವೈರಸ್‌ ಸೋಂಕಿನಿಂದ ದೇಶವು ವಿವಿಧ ರೀತಿಯಲ್ಲಿ ದುರ್ಬಲಗೊಂಡಿತು. ಲಾಕ್‌ಡೌನ್‌ನಿಂದಾಗಿ ಇಡೀ ದೇಶದ ಆರ್ಥಿಕತೆ ಪಾತಾಳಕ್ಕೆ ಕಂಡಿತು. ಲಕ್ಷಾಂತರ ಜನರ ಜೀವನೋಪಾಯಕ್ಕೆ ಕುತ್ತು ಬಂದೊದಗಿತು. ವ್ಯಾಪಾರ-ವಹಿವಾಟುಗಳು ನಿಂತು ಹೋದವು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ವರ್ಷದ ಬಜೆಟ್‌ನಲ್ಲಿ 'ಜೀವನ' ಎಂಬ ಸರಳ ವಿಷಯದ ಮೇಲೆ ಚಿತ್ತ ಹರಿಸಬೇಕಿದೆ. ನಿರುದ್ಯೋಗ ಮತ್ತು ಬಡತನದಿಂದ ಜನರನ್ನು ರಕ್ಷಿಸಲು ಕೇಂದ್ರ ಸರ್ಕಾರವು ಕಾರ್ಯಯೋಜನೆ ರೂಪಿಸಬೇಕಿದೆ.

ಈ ಕೆಟ್ಟ ಪರಿಸ್ಥಿತಿಯಲ್ಲಿ ವೇಗದ ಆರ್ಥಿಕ ಬೆಳವಣಿಗೆಯ ಬಗ್ಗೆ ಮಾತನಾಡುವುದು ಸಮಂಜಸವಲ್ಲ. ಚೇತರಿಕೆ ಪ್ರಕ್ರಿಯೆಗೆ ಸಹಾಯ ಮಾಡಲು ಆರ್ಥಿಕತೆಯನ್ನು ಮರು ಸಮತೋಲನಗೊಳಿಸುವತ್ತ ಸರ್ಕಾರ ಗಮನ ಹರಿಸಬೇಕಿದೆ. ವಾಸ್ತವ ಅತ್ಯಂತ ಕಠೋರವಾಗಿದ್ದು, ನಮ್ಮ ಆರ್ಥಿಕತೆ ಕಲ್ಪನೆಗೂ ನಿಲುಕದಷ್ಟು ಹಿನ್ನೆಡೆ ಕಂಡಿದೆ. 

ವಿತ್ತ ಸಚಿವಾಲಯವೇ ನೀಡಿದ ಅಂಕಿಅಂಶಗಳ ಪ್ರಕಾರ, ಈ ಹಣಕಾಸು ಅವಧಿಯಲ್ಲಿ ನಮ್ಮ ಆರ್ಥಿಕತೆ ಶೇ 7.7 ರಷ್ಟು ಕುಸಿತ ಕಂಡಿದೆ. ಎರಡು ತಲೆಮಾರಿನ ಭಾರತೀಯರು ಎಂದಿಗೂ ಕಲ್ಪಿಸಿಕೊಳ್ಳದಂತಹ ಸನ್ನಿವೇಶಗಳಿಗೆ ನಾವಿಂದು ಸಾಕ್ಷಿಯಾಗಿದ್ದೇವೆ. 

ನೋಟು ರದ್ಧತಿಯ ನಂತರ ನಿಧಾನ ಗತಿಯಲ್ಲಿ ಸಾಗುತ್ತಿದ್ದ ನಮ್ಮ ಆರ್ಥಿಕತೆ ಈಗ ಪಾತಾಳಕ್ಕೆ ಕುಸಿದಿದೆ. ಸರಳವಾಗಿ ಹೇಳುವುದಾದರೆ, ನಮ್ಮ ಆರ್ಥಿಕತೆಯು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಕುಸಿತ ಕಂಡಿದೆ. 

ದೇಶದ ಆರ್ಥಿಕ ಅಭಿವೃದ್ದಿಗೆ ಬಡತನ ಹೆಚ್ಚು ಮಾರಕವಾಗಿದೆ. ಹಸಿವು, ಕಡಿಮೆ ವೇತನ, ಬಡವರ ಸಂಖ್ಯೆಯಲ್ಲಿ ಏರಿಕೆ ಮತ್ತು ಜನರ ಜೀವನ ಮಟ್ಟದಲ್ಲಿ ಕುಸಿತ ಅಭಿವೃದ್ದಿಗೆ ತೊಡಕಾಗಿ ಪರಿಣಮಿಸಿವೆ. ನಮ್ಮ ಸಾಮಾಜಿಕ ಸೂಚಕಗಳು ದುರ್ಬಲವಾಗಿ ಕಾಣುತ್ತಿವೆ. 

ಆರೋಗ್ಯ ಕ್ಷೇತ್ರದಲ್ಲಿನ ಅನಿಶ್ಚಿತ ಪರಿಸ್ಥಿತಿ ಎಲ್ಲರಿಗೂ ತಿಳಿದೇ ಇದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಗಳಿಂದ ಹೊರಗುಳಿಯುತ್ತಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. 

ಭಾರೀ ಬಡತನ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಂತಹ ಸಮಸ್ಯೆಗಳು ಭಾರತಕ್ಕೆ ಬಹುದೊಡ್ಡ ಸಂಕಷ್ಟಗಳಾಗಿ ಪರಿಣಮಿಸಿವೆ. ಕಳೆದ 15 ವರ್ಷಗಳಲ್ಲಿ ಬಡತನ ರೇಖೆಯನ್ನು ದಾಟಿ ಹೊರಬಂದ ಬಹುತೇಕ ಮಂದಿ ಮತ್ತೆ ಬಡತನ ರೇಖೆಗಿಂತ ಕೆಳಗಿಳಿದಿದ್ದಾರೆ ಎಂದು ಅಂದಾಜಿಸಲಾಗಿದೆ. ನೈಜೀರಿಯಾದಲ್ಲಿ ವಾಸಿಸುವ ಬಡವರಿಗಿಂತ ಹೆಚ್ಚು ಬಡವರನ್ನು ಭಾರತ ಹೊಂದಿದೆ ಎಂದು ಸಂಖ್ಯೆಗಳು ಹೇಳುತ್ತಿವೆ. 

ಇದು ಲಾಕ್‌ಡೌನ್ ನಂತರ ಹೆಚ್ಚಿದ ನಿರುದ್ಯೋಗದ ನೇರ ಪರಿಣಾಮವಾಗಿದೆ. ಸುಮಾರು 10 ಕೋಟಿ 21 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದು, 4 ಕೋಟಿ ವಲಸೆ ಕಾರ್ಮಿಕರು ತಮ್ಮ ಮನೆಗೆ ಮರಳಿದ್ದಾರೆ. ಈ ನಿರುದ್ಯೋಗವು ಮಾರಣಾಂತಿಕ ಅಪೌಷ್ಟಿಕತೆಗೆ ಕಾರಣವಾಗಿದೆ. ಲಾಕ್‌ಡೌನ್‌ಗೂ ಮುನ್ನ ಹಸಿವಿನಿಂದ ಮಲಗುವವರ ಸಂಖ್ಯೆ ದೇಶದಲ್ಲಿ 10 ಕೋಟಿಗೂ ಅಧಿಕವಾಗಿತ್ತು. ಲಾಕ್‌ಡೌನ್‌ ಪರಿಣಾಮದಿಂದಾಗಿ 5 ಕೋಟಿಗೂ ಹೆಚ್ಚು ಜನರು ಈ ಸಂಖ್ಯೆಗೆ ಸೇರ್ಪಡೆಯಾಗಿದ್ದಾರೆ.

ಲಾಕ್‌ಡೌನ್‌ ನಂತರ ಜಾಗತಿಕವಾಗಿ ಸುಮಾರು 2 ಕೋಟಿ 40 ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗುಳಿಯಲಿದ್ದಾರೆ. ಇದರಲ್ಲಿ ಶೇ 30 ಮಕ್ಕಳು ಭಾರತೀಯರೇ ಆಗಿದ್ದಾರೆ. ಒಂದು ಅಂದಾಜಿನ ಪ್ರಕಾರ, ಕಳೆದ ತಿಂಗಳು ದೇಶಾದ್ಯಂತ 40,000 ಶಾಲೆಗಳು ಸ್ಥಗಿತಗೊಂಡಿವೆ. ಶಿಕ್ಷಣ ವ್ಯವಸ್ಥೆ ಯಾವಾಗ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂಬ ಬಗ್ಗೆ ನಾವಿನ್ನೂ ಸ್ಪಷ್ಟತೆಯನ್ನು ಕಂಡುಕೊಂಡಿಲ್ಲ.

ಬಡವರ ಮೇಲೆ ಹಣಕಾಸು ಸಚಿವರ ಗಮನವಿರಲಿ

ಈ ಸಾರಿಯ ಬಜೆಟ್‌ನಲ್ಲಿ ಬಡತನ ನಿರ್ಮೂಲನೆ ಪ್ರಮುಖ ಅಂಶವಾಗಬೇಕಿದೆ. ನಿರ್ಮಲಾ ಸೀತಾರಾಮನ್‌ ಅವರು ಸ್ವ-ಉದ್ಯೋಗ, ಕೃಷಿ ಕೆಲಸಗಾರರು ಮತ್ತು ನಿರುದ್ಯೋಗಿಗಳ ಕೈಹಿಡಿಯಬೇಕಿದೆ. ಲಾಭ ವರ್ಗಾವಣೆ ಮೂಲಕ ಮನೆ ಬಾಡಿಗೆ, ಶಾಲಾ ಶುಲ್ಕ ಮತ್ತು ಆರೋಗ್ಯ ವೆಚ್ಚಗಳನ್ನು ಪಾವತಿಸಲು ಸಹಾಯ ಮಾಡಬೇಕಿದೆ. ಲಕ್ಷಾಂತರ ಜನರು ಬಡತನಕ್ಕೆ ಸಿಲುಕುತ್ತಿರುವಾಗ ನಮಗೆ ಹೊಸ ₹20,000 ಕೋಟಿ ವೆಚ್ಚದ ಸೆಂಟ್ರಲ್ ವಿಸ್ತಾದ ಅಗತ್ಯವಿಲ್ಲ ಎಂಬುದನ್ನು ನಾವು ಮನಗಾಣಬೇಕು. ಒಟ್ಟಿನಲ್ಲಿ ಈ ಬಜೆಟ್‌ ಬಡವರಿಗಾಗಿ ಇರಬೇಕು. 

ಫೆಬ್ರುವರಿ 1, ಬೆಳಗ್ಗೆ 11 ಗಂಟೆಗೆ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ವರದಿ ಹೇಳಿದೆ. ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್, ಫೆಬ್ರುವರಿ 1ರಿಂದ ನಡೆಯಲಿರುವ ಸಂಸತ್‌ನ ಐದನೇ ಅಧಿವೇಶನದಲ್ಲಿ 2021ನೇ ಸಾಲಿನ ಮುಂಗಡಪತ್ರ ಮಂಡನೆ ಮಾಡಲಿದ್ದಾರೆ.

ಸಂಸತ್‌ನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೆಳಗ್ಗೆ 11 ಗಂಟೆಗೆ ಭಾಷಣ ಮಾಡಲಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 7.5 ಜಿಡಿಪಿ ಬೆಳವಣಿಗೆ ನಿರೀಕ್ಷಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು