ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget 2024 | ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಿಕ್ಕಿದ್ದೇನು?

Published 1 ಫೆಬ್ರುವರಿ 2024, 14:29 IST
Last Updated 1 ಫೆಬ್ರುವರಿ 2024, 14:29 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ಅವರ ಎರಡನೆಯ ಅವಧಿಯ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಮಗ್ರ, ಸರ್ವ ವ್ಯಾಪಕತೆಯ, ಸರ್ವರನ್ನೂ ಒಳಗೊಳ್ಳುವ ಅಭಿವೃದ್ಧಿಯನ್ನು ಖಾತರಿ‍ಪಡಿಸುವುದರತ್ತ ತಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಸಮಾಜದ ವಿವಿಧ ಜನವರ್ಗಗಳಿಗೆ ಅವರು ಬಜೆಟ್‌ನಲ್ಲಿ ಯೋಜನೆಗಳನ್ನು ಘೋಷಿಸಿದರು.

‘ಲಖ್‌ಪತಿ ದೀದಿ’ ಮೂರು ಕೋಟಿಗೆ ಏರಿಕೆ

ಗ್ರಾಮೀಣ ಮಹಿಳೆಯರ ಬಹು ಜೀವನೋಪಾಯ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಅನುಷ್ಠಾನಗೊಳಿಸಿರುವ ‘ಲಖ್‌ಪತಿ ದೀದಿ’ ಯೋಜನೆಯಡಿ 3 ಕೋಟಿ ಮಹಿಳೆಯರಿಗೆ ತರಬೇತಿ ನೀಡುವ ಕುರಿತು ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಲಾಗಿದೆ. 

ಸರ್ಕಾರವು ಈ ಯೋಜನೆಯಡಿ ಹಳ್ಳಿಗಳಲ್ಲಿಯೇ ಸಣ್ಣ ಉದ್ಯಮಗಳ ಸ್ಥಾಪನೆಗೆ ಸ್ವಸಹಾಯ ಗುಂಪಿನ ಸದಸ್ಯೆಯರಿಗೆ ಪ್ರೋತ್ಸಾಹ ನೀಡಲಿದೆ. ಆ ಮೂಲಕ ಅವರು ವರ್ಷಕ್ಕೆ ಕನಿಷ್ಠ ₹1 ಲಕ್ಷ ಸುಸ್ಥಿರ ಆದಾಯಗಳಿಸುವಂತೆ ಮಾಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಈ ಮೊದಲು ಯೋಜನೆಯಡಿ 2 ಕೋಟಿ ಮಹಿಳೆಯರಿಗೆ ತರಬೇತಿ ನೀಡುವ ಗುರಿ ಹೊಂದಿತ್ತು.

‘ದೇಶದಲ್ಲಿ 83 ಲಕ್ಷ ಸ್ವಸಹಾಯ ಗುಂ‍ಪುಗಳಿವೆ. ಇವುಗಳಲ್ಲಿ ಒಟ್ಟು 9 ಕೋಟಿ ಮಹಿಳೆಯರಿದ್ದು, ಸ್ವಾವಲಂಬನೆ ಸಾಧಿಸುವ ಜೊತೆಗೆ ಗ್ರಾಮೀಣ ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಈಗಾಗಲೇ, ಒಂದು ಕೋಟಿ ಮಹಿಳೆಯರು ಲಕ್ಷಾಧಿಪತಿಗಳಾಗಿದ್ದಾರೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಮಹಿಳೆ, ಮಕ್ಕಳ ಅಭಿವೃದ್ಧಿಗೆ ₹26 ಸಾವಿರ ಕೋಟಿ

2024–25ರ ಕೇಂದ್ರ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ₹ 26000 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಇದು ಕಳೆದ ಬಾರಿಗಿಂತ ಶೇ 2.52ರಷ್ಟು ಹೆಚ್ಚಿನ ಮೊತ್ತವಾಗಿದೆ.   

‘ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0’ ಯೋಜನೆಗೆ ಅತಿಹೆಚ್ಚು, ಅಂದರೆ, ₹21,200 ಕೋಟಿ ಹಂಚಿಕೆ ಮಾಡಲಾಗಿದೆ. ಮಹಿಳಾ ಸಬಲೀಕರಣದ ‘ಮಿಷನ್ ಶಕ್ತಿ’ ಯೋಜನೆಗೆ ₹3145.97 ಕೋಟಿ ಹಾಗೂ ಮಕ್ಕಳ ರಕ್ಷಣೆಯ ‘ಮಿಷನ್ ವಾತ್ಸಲ್ಯ’ ಯೋಜನೆಗೆ 1472 ಕೋಟಿ ಹಂಚಿಕೆ ಮಾಡಲಾಗಿದೆ.        

ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆಯ ಸಂಬಂಧದ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಪ್ರಯತ್ನಗಳನ್ನು ಕ್ರೋಡೀಕರಿಸಿ, ಅದರ ಫಲ ಮಹಿಳೆಯರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ‘ಮಿಷನ್ ಶಕ್ತಿ’ ಯೋಜನೆಯ ಗುರಿಯಾಗಿದೆ.  

ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾದ ಸುರಕ್ಷಿತ ವಾತಾವರಣವನ್ನು ರೂಪಿಸುವುದು ‘ವಾತ್ಸಲ್ಯ’ ಯೋಜನೆಯ ಉದ್ದೇಶವಾಗಿದೆ.

ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಸಂಬಂಧದ ಸ್ವಾಯತ್ತ ಸಂಸ್ಥೆಗಳಿಗೆ ಈ ಬಾರಿ ಕಳೆದ ಬಾರಿಗಿಂತ ಕಡಿಮೆ ಹಣ ಹಂಚಿಕೆ ಮಾಡಲಾಗಿದೆ. ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್‌ಎ), ರಾಷ್ಟ್ರೀಯ ಮಕ್ಕಳು ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ಮುಂತಾದ ಸ್ವಾಯತ್ತ ಸಂಸ್ಥೆಗಳಿಗಾಗಿ ಕಳೆದ ಬಜೆಟ್‌ನಲ್ಲಿ ₹168 ಕೋಟಿ ಹಂಚಿಕೆ ಮಾಡಲಾಗಿತ್ತು. ಈ ಬಾರಿ ₹153 ಕೋಟಿ ಹಂಚಿಕೆ ಮಾಡಲಾಗಿದೆ. 

‘ನಾಲ್ಕು ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ‘

‘ಬಡವರು ಮಹಿಳೆಯರು ಯುವಕರು ಮತ್ತು ಅನ್ನದಾತರು– ಈ ನಾಲ್ಕು ಸಮುದಾಯಗಳ ಅಭಿವೃದ್ಧಿಯೇ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.  ‘ಉತ್ತಮ ಬದುಕಿನ ಹುಡುಕಾಟದಲ್ಲಿರುವ ಈ ಸಮುದಾಯಗಳಿಗೆ ಸರ್ಕಾರದ ನೆರವಿನ ಅಗತ್ಯವಿದ್ದು ಸರ್ಕಾರ ಅವರೊಂದಿಗೆ ನಿಲ್ಲಲಿದೆ. ಅವರ ಸಬಲೀಕರಣ ಮತ್ತು ಬೆಳವಣಿಗೆಯು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ. ಅವರ ಪ್ರಗತಿಯು ದೇಶದ ಪ್ರಗತಿಯಾಗಿದೆ’ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯ ಪಟ್ಟರು  2047ರ ಹೊತ್ತಿಗೆ ದೇಶವನ್ನು ‘ವಿಕಸಿತ್ ಭಾರತ’ ಮಾಡಲು ತಾವು ಶ್ರಮಿಸುತ್ತಿರುವುದಾಗಿ ಅವರು ಹೇಳಿದರು.

‘ಅಲ್ಪಸಂಖ್ಯಾತ ಮಕ್ಕಳಿಗೆ ಕಡಿಮೆ ಅನುದಾನ’

‘ಪ್ರಸಕ್ತ ಬಜೆಟ್ ಅಂದಾಜಿನಲ್ಲಿ ಮಕ್ಕಳಿಗೆ ಹಂಚಿಕೆ ಮಾಡಿರುವ ಮೊತ್ತವು ಕಳೆದ ಬಜೆಟ್‌ಗಿಂತ ಹಲವು ಪಟ್ಟು ಹೆಚ್ಚಿದೆ. ಕಳೆದ ಬಜೆಟ್‌ನಲ್ಲಿ ಈ ಸಂಬಂಧ ₹5,702.38 ಕೋಟಿ ಹಂಚಿಕೆಯಾಗಿದ್ದರೆ, ಈ ಬಾರಿ ₹103,790.70 ಕೋಟಿ ಹಂಚಿಕೆ ಮಾಡಲಾಗಿದೆ. ಆದರೆ, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿನ ಮಕ್ಕಳಿಗೆ ಹಂಚಿಕೆ ಮಾಡಲಾಗಿರುವ ಮೊತ್ತದಲ್ಲಿ ಇಳಿಕೆಯಾಗಿದೆ. 2023–24ರಲ್ಲಿ ಈ ವರ್ಗಕ್ಕೆ ₹1582.10 ಕೋಟಿ ಹಂಚಿಕೆಯಾಗಿದ್ದರೆ ಈ ಬಾರಿ ಬಜೆಟ್ ಅಂದಾಜಿನಲ್ಲಿ ₹1517.34 ಕೋಟಿ ಹಂಚಲಾಗಿದೆ’ ಎಂದು ಮಕ್ಕಳ ಹಕ್ಕುಗಳ ಸರ್ಕಾರೇತರ ಸಂಸ್ಥೆ CRY ವಿಶ್ಲೇಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT