ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ಏನಿದು ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್?

Published 18 ಜೂನ್ 2023, 19:55 IST
Last Updated 18 ಜೂನ್ 2023, 19:55 IST
ಅಕ್ಷರ ಗಾತ್ರ

–ಕಾವ್ಯ ಡಿ.

ಪ್ರತಿ ತಿಂಗಳು ನಿರ್ದಿಷ್ಟ ಆದಾಯ ಬೇಕು ಎನ್ನುವವರು ಸಾಮಾನ್ಯವಾಗಿ ನಿಶ್ಚಿತ ಠೇವಣಿ (ಎಫ್.ಡಿ) ಅಥವಾ ಅಂಚೆ ಕಚೇರಿ ಠೇವಣಿ (ಪೋಸ್ಟಲ್ ಡೆಪಾಸಿಟ್) ಮೊರೆ ಹೋಗುತ್ತಾರೆ. ಆದರೆ ಬ್ಯಾಂಕುಗಳಲ್ಲಿ ಬಡ್ಡಿ ದರ ಇಳಿಕೆ, ನಿರಂತರ ಹಣದುಬ್ಬರದ ಕಾರಣದಿಂದ ನಿಶ್ಚಿತ ಠೇವಣಿಗಳಂತಹ ಹೂಡಿಕೆಗಳಲ್ಲಿ ಹೆಚ್ಚು ಲಾಭ ಎಲ್ಲ ಕಾಲಕ್ಕೂ ಸಿಗುವುದಿಲ್ಲ.

ಹೆಚ್ಚು ಲಾಭವೂ ಬೇಕು, ನಿಗದಿತ ಸಮಯಕ್ಕೆ ನಿಶ್ಚಿತ ಆದಾಯವೂ ಬೇಕು ಎನ್ನುವವರು ಮ್ಯೂಚುವಲ್ ಫಂಡ್ ಕಂಪನಿಗಳು ಒದಗಿಸುವ ಎಸ್‌ಡಬ್ಲ್ಯುಪಿ ಯೋಜನೆಯ ಮೊರೆ ಹೋಗಬಹುದು. ಎಸ್‌ಡಬ್ಲ್ಯುಪಿ ಎಂದರೆ ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲಾನ್ (ಹೂಡಿಕೆ ಮಾಡಿದ ಹಣವನ್ನು ವ್ಯವಸ್ಥಿತವಾಗಿ
ಹಿಂದಕ್ಕೆ ಪಡೆಯುವ ಯೋಜನೆ). ಇದರ ಲಾಭ ಪಡೆಯುವುದು ಹೇಗೆ ಎಂಬ ಬಗ್ಗೆ ಪರಿಶೀಲಿಸೋಣ.

ಎಸ್‌ಡಬ್ಲ್ಯುಪಿ ಎಂದರೇನು?: ನೀವು ಮ್ಯೂಚುವಲ್ ಫಂಡ್‌ ಹೂಡಿಕೆದಾರ ಆಗಿದ್ದರೆ ಎಸ್‌ಐಪಿ ಬಗ್ಗೆ ಗೊತ್ತೇ ಇರುತ್ತದೆ. ಮ್ಯೂಚುವಲ್ ಫಂಡ್ ಪರಿಭಾಷೆಯಲ್ಲಿ ಎಸ್‌ಐಪಿ ಅಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್. ಇದು ಮ್ಯೂಚುವಲ್ ಫಂಡ್‌ಗಳಲ್ಲಿ ವ್ಯವಸ್ಥಿತವಾಗಿ ಹೂಡಿಕೆ ಮಾಡಲು ಇರುವ ಸೌಲಭ್ಯ. ಮ್ಯೂಚುವಲ್ ಫಂಡ್ ಹೂಡಿಕೆಗೆ ಎಸ್‌ಐಪಿ ಹೇಗೆ ಲಭ್ಯವಿದೆಯೋ, ಹೂಡಿಕೆ ಮೊತ್ತ ಹಾಗೂ ಅದರ ಮೇಲಿನ ಲಾಭವನ್ನು ವ್ಯವಸ್ಥಿತವಾಗಿ ಹಿಂಪಡೆಯಲು ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲಾನ್ (ಎಸ್‌ಡಬ್ಲ್ಯುಪಿ) ಇದೆ. ಹೂಡಿಕೆ ಮಾಡಿರುವ ಮೊತ್ತವನ್ನು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮ ಅಥವಾ ವರ್ಷಕ್ಕೊಮ್ಮೆ... ನಿಮ್ಮ ಅನುಕೂಲಕ್ಕೆ ತಕ್ಕಂತೆ ಮ್ಯೂಚುವಲ್‌ ಫಂಡ್‌ನಿಂದ ನಿರ್ದಿಷ್ಟ ಮೊತ್ತವನ್ನು ನಿಯಮಿತವಾಗಿ ಹೊರತೆಗೆಯುವ ವ್ಯವಸ್ಥೆಯೇ ಎಸ್‌ಡಬ್ಲ್ಯುಪಿ.

ಎಸ್‌ಡಬ್ಲ್ಯುಪಿ ಹೇಗೆ ಕೆಲಸ ಮಾಡುತ್ತದೆ?: ಉದಾಹರಣೆಗೆ, ನಿಮ್ಮ ಮ್ಯೂಚುವಲ್ ಫಂಡ್‌ ಒಂದರಲ್ಲಿ ₹5 ಲಕ್ಷ ಇದೆ ಎಂದು ಭಾವಿಸೋಣ. ಪ್ರತಿ ತಿಂಗಳು ಅದರಿಂದ ₹20 ಸಾವಿರ ಮೊತ್ತ ವಾಪಸ್ ಪಡೆಯಲು ತೀರ್ಮಾನಿಸುತ್ತೀರಿ ಎಂದು ಭಾವಿಸೋಣ. ಹೀಗೆ ನಿರ್ಧರಿಸಿದ ಬಳಿಕ ಮ್ಯೂಚುವಲ್ ಫಂಡ್ ಕಂಪನಿಗೆ ಸೂಚನೆಯೊಂದನ್ನು ಕೊಡುತ್ತೀರಿ. ಸೂಚನೆ ಕೊಟ್ಟ ಬಳಿಕ ಪ್ರತಿ ತಿಂಗಳು, ಆ ಫಂಡ್‌ನಿಂದ ₹20 ಸಾವಿರ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಹೀಗೆ ಒಟ್ಟು ₹5 ಲಕ್ಷ ಹಂತಹಂತವಾಗಿ ಮುಂದಿನ 24 ತಿಂಗಳ ಕಾಲ ನಿಮ್ಮ ಖಾತೆಗೆ ಸಂದಾಯವಾಗುತ್ತದೆ.

ಎರಡು ಮಾದರಿಗಳು: ಎಸ್‌ಡಬ್ಲ್ಯುಪಿ ಆಯ್ಕೆ ಮಾಡಿಕೊಳ್ಳುವಾಗ ಸಾಮಾನ್ಯವಾಗಿ ಎರಡು ಆಯ್ಕೆಗಳು ಸಿಗುತ್ತವೆ. ಒಂದನೆಯದು, ಹೂಡಿಕೆ ಮೇಲೆ ಬಂದ ಲಾಭವನ್ನು ಮಾತ್ರ ನಿಯಮಿತವಾಗಿ ಹಿಂಪಡೆದುಕೊಳ್ಳುವುದು. ಮತ್ತೊಂದು, ಹೂಡಿಕೆ ಮತ್ತು ಲಾಭಾಂಶವನ್ನು ಅನುಕೂಲಕ್ಕೆ ತಕ್ಕಂತೆ ನಿಗದಿತ ಸಮಯಕ್ಕೆ ನಗದೀಕರಣ ಮಾಡಿಕೊಳ್ಳುವುದು. ಈ ಎರಡರ ಪೈಕಿ ನಿಮಗೆ ಯಾವುದು ಅನುಕೂಲವೋ ಅದರ ಮೊರೆ ಹೋಗಬಹುದು.

ಎಸ್‌ಡಬ್ಲ್ಯುಪಿಯಿಂದ ಹಲವು ಅನುಕೂಲ: ಷೇರು ಮಾರುಕಟ್ಟೆ ನಕಾರಾತ್ಮಕ ಹಾದಿಯಲ್ಲಿದ್ದಾಗ ನಿಮ್ಮ ಹೂಡಿಕೆ ಮೊತ್ತವನ್ನು ಒಂದೇ ಬಾರಿಗೆ ಹಿಂಪಡೆದರೆ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ಎಸ್‌ಡಬ್ಲ್ಯುಪಿ ಮೊರೆ ಹೋದರೆ ಆಗುವ ನಷ್ಟವನ್ನು ತಪ್ಪಿಸಬಹುದು. ನಿಗದಿತ ಮೊತ್ತವನ್ನು ಹಂತಹಂತವಾಗಿ ಪಡೆಯುವುದರಿಂದ, ನಷ್ಟ ಉಂಟಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಪ್ರತಿ ತಿಂಗಳು ಆದಾಯ ಪಡೆಯಲು ಸಾಧ್ಯವಿರುವುದರಿಂದ ನಿವೃತ್ತಿ ಜೀವನ ನಡೆಸುತ್ತಿರುವವರಿಗೆ ಎಸ್‌ಡಬ್ಲ್ಯುಪಿ ಯೋಜನೆ ಹೆಚ್ಚು ಸೂಕ್ತವಾಗುತ್ತದೆ.

ಮ್ಯೂಚುವಲ್ ಫಂಡ್ ಎಸ್‌ಡಬ್ಲ್ಯುಪಿ ಬಳಸಿಕೊಂಡು ಪರ್ಯಾಯ ಆದಾಯ ಕಂಡುಕೊಳ್ಳಲು ಸಾಧ್ಯ. ಉದಾಹರಣೆಗೆ, ನಿಮ್ಮ ಬಳಿ ₹10 ಲಕ್ಷ ಇದ್ದು ಅದನ್ನು ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು ಕೆಲ
ಅವಧಿಯವರೆಗೆ ನಿಗದಿತ ಆದಾಯ ಕಂಡುಕೊಳ್ಳಬಹುದು. ಹೀಗೆ ಮಾಡಿದಾಗ ಮಾಸಿಕ ಆದಾಯದ ಜೊತೆ ಹೆಚ್ಚುವರಿ ಆದಾಯಕ್ಕೆ ಒಂದು ಮೂಲ ದೊರಕಿದಂತಾಗುತ್ತದೆ.

ಎಸ್‌ಡ್ಬ್ಲ್ಯುಪಿ ಒಂದು ಒಳ್ಳೆಯ ಸಾಧನ. ನೀವು ಹೂಡಿಕೆಗೆ ಹೊಸಬರಾಗಿರಲಿ ಅಥವಾ ಅನುಭವಿಯಾಗಿರಲಿ, ಹಣಕಾಸಿನ ಗುರಿಗಳನ್ನು ತಲುಪಲು ಎಸ್‌ಡಬ್ಲ್ಯುಪಿ ಒಂದು ಉತ್ತಮ ಮಾರ್ಗ. ಹಣಕಾಸು ಯೋಜನೆ ರೂಪಿಸುವಾಗ ಇದು ಗಮನದಲ್ಲಿರಲಿ.

(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT