ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ| ಹೂಡಿಕೆಯ ನುಂಗದಿರಲಿ ‘ಬೆಲೆ ಏರಿಕೆ’

Last Updated 20 ಜೂನ್ 2022, 3:59 IST
ಅಕ್ಷರ ಗಾತ್ರ

ಯಾವುದೇ ಹೂಡಿಕೆ ಮಾಡುವ ಮೊದಲು, ಹೂಡಿಕೆಗೆ ಸಿಗುವ ಬಡ್ಡಿ ಲಾಭ ಎಷ್ಟು ಎನ್ನುವುದನ್ನು ನೋಡುತ್ತೇವೆ. ಆದರೆ ಹೂಡಿಕೆ ಮಾಡುವಾಗ ಬೆಲೆ ಏರಿಕೆ (ಹಣದುಬ್ಬರದ) ಪ್ರಮಾಣದ ಬಗ್ಗೆ ನಾವು ಮಾತನಾಡುವುದೇ ಇಲ್ಲ. ಬೆಲೆ ಏರಿಕೆ ಎನ್ನುವ ಅಂಶ ದೀರ್ಘಾವಧಿಯಲ್ಲಿ ಹೂಡಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಬನ್ನಿ, ಹಣದುಬ್ಬರ ನಮ್ಮ ಹೂಡಿಕೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ತಿಳಿಯೋಣ.

ಏನಿದು ಬೆಲೆ ಏರಿಕೆ / ಹಣದುಬ್ಬರ: ನಮ್ಮ ಕಾಲದಲ್ಲಿ ಒಂದು ಪ್ಲೇಟ್ ಇಡ್ಲಿಗೆ 5 ರೂಪಾಯಿ ಇತ್ತು. ಆದ್ರೆ ಈಗ 50 ರೂಪಾಯಿ ಆಗಿದೆ ಅಂತ ನಿಮ್ಮ ಅಜ್ಜ - ಅಜ್ಜಿ ಹೇಳೋದನ್ನ ಕೇಳಿರ್ತೀರಾ ಅಲ್ವಾ? ಹೌದು! ಸರಳ ಭಾಷೆಯಲ್ಲಿ ಇದನ್ನು ಹಣದುಬ್ಬರ ಅಥವಾ ಬೆಲೆ ಏರಿಕೆ ಎಂದು ಕರೆಯಬಹುದು. ವಸ್ತುಗಳಿಗೆ ಬೇಡಿಕೆ ಹೆಚ್ಚಾದಾಗ ಮತ್ತು ಉತ್ಪನ್ನಗಳ ಕೊರತೆ ಎದುರಾದಾಗ ಸಾಮಾನ್ಯವಾಗಿ ಹಣದುಬ್ಬರದ ಸ್ಥಿತಿ ನಿರ್ಮಾಣಗೊಳ್ಳುತ್ತದೆ. ಉದಾಹರಣೆಗೆ ರಷ್ಯಾ–ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿ ತೈಲ ಬೆಲೆ ಏರಿಕೆಯಾಯ್ತು. ತೈಲ ಬೆಲೆ ಹೆಚ್ಚಳದಿಂದ ಸಾರಿಗೆ ವೆಚ್ಚ ತುಟ್ಟಿಯಾಯ್ತು. ಸಾರಿಗೆ ವೆಚ್ಚ ಹೆಚ್ಚಾದ ಕಾರಣ, ವಸ್ತುಗಳ ಸಾಗಣೆ ವೆಚ್ಚ ಹೆಚ್ಚಾಯಿತು, ಸಾಗಣೆ ವೆಚ್ಚ ದುಬಾರಿಯಾದ್ದರಿಂದ ಕಂಪನಿಗಳ ಒಟ್ಟಾರೆ ಉತ್ಪದನಾ ವೆಚ್ಚವೂ ಹೆಚ್ಚಾಯಿತು. ಉತ್ಪಾದನಾ ವೆಚ್ಚವನ್ನು ಕಂಪನಿಗಳು ಗ್ರಾಹಕನಿಗೆ ವರ್ಗಾಯಿಸಿದವು. ಇದರಿಂದ ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುಗಳಿಗೆ ಗ್ರಾಹಕ ಹೆಚ್ಚು ಬೆಲೆ ತೆರುವಂತಾಯಿತು. ಹೆಚ್ಚು ಬೆಲೆ ಕೊಡಬೇಕಾದ ಸಂದರ್ಭ ಸೃಷ್ಟಿಯಾದ ಕಾರಣ, ಗ್ರಾಹಕನ ಜೇಬಲ್ಲಿ ದುಡ್ಡು ಕಡಿಮೆಯಾಗಿ ಖರೀದಿ ಸಾಮರ್ಥ್ಯ ಕುಂಠಿತವಾಯಿತು. ಹೀಗೆ ಹಣದುಬ್ಬರ ನಿಮ್ಮ ದುಡ್ಡನ್ನು ನಿಮಗೆ ಗೊತ್ತಿಲ್ಲದಂತೆ ನುಂಗಿಬಿಡುತ್ತದೆ.

ಹಣದುಬ್ಬರದಿಂದ ಹಣದ ಮೌಲ್ಯ ತಗ್ಗುವುದು ಹೇಗೆ: ಸದ್ಯ ವಾರ್ಷಿಕ ಹಣದುಬ್ಬರ ದರ ಶೇ 6 ರಷ್ಟಿದೆ ಎಂದು ಭಾವಿಸೋಣ. ಈ ಲೆಕ್ಕಾಚಾರದಂತೆ ಇಂದು ₹ 100ಕ್ಕೆ ಸಿಗುವ ವಸ್ತುವಿನ ಬೆಲೆ ಮುಂದಿನ ವರ್ಷ ₹ 106 ಆಗುತ್ತದೆ. ಈ ಕಾರಣದಿಂದಲೇ ನಿಮ್ಮ ಹೂಡಿಕೆಗಳಿಗೆ ಬೆಲೆ ಏರಿಕೆ (ಹಣದುಬ್ಬರ) ಮೀರಿ ಲಾಭಾಂಶ ತಂದುಕೊಡುವ ಸಾಮರ್ಥ್ಯ ಇರಬೇಕು ಎಂದು ಹೇಳುವುದು. ಈಗಿನ ಸ್ಥಿತಿಯಲ್ಲಿ ನಿಶ್ಚಿತ ಠೇವಣಿ (ಎಫ್‌ಡಿ) ಬಡ್ಡಿ ದರ ಶೇ 7 ರಷ್ಟಿದೆ. ಸದ್ಯದ ಹಣದುಬ್ಬರ ಪ್ರಮಾಣ ಶೇ 6 ರಷ್ಟಿದೆ ಎಂದಿಟ್ಟುಕೊಳ್ಳಿ. ಈ ವೇಳೆ ನೀವು ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಿದರೆ ಹಣದುಬ್ಬರ ದರವನ್ನು ಕಳೆದ ನಂತರ ನಿಮಗೆ ಸಿಗುವ ಅಸಲಿ ಲಾಭಾಂಶ ಶೇ 1 ರಷ್ಟು ಮಾತ್ರ.

ಹಾಗಾದ್ರೆ ಎಲ್ಲಿ ಹೂಡಿಕೆ ಮಾಡಬೇಕು: ಹಣದುಬ್ಬರ ಮೀರಿ ಲಾಭಾಂಶ ತಂದುಕೊಡುವ ಸಾಮರ್ಥ್ಯವಿರುವುದು ಷೇರು ಮಾರುಕಟ್ಟೆ, ಮ್ಯೂಚುಯಲ್ ಫಂಡ್, ರಿಯಲ್ ಎಸ್ಟೇಟ್ ನಂತಹ ಹೂಡಿಕೆಗಳಿಗೆ ಮಾತ್ರ. ಷೇರು ಮಾರುಕಟ್ಟೆ ಸೂಚ್ಯಂಕಗಳ ಇತಿಹಾಸವನ್ನು ನೋಡಿದಾಗ ದೀರ್ಘಾವಧಿಯಲ್ಲಿ ಸರಾಸರಿ ಶೇ 15 ರಷ್ಟು ಲಾಭಾಂಶ ಸಿಕ್ಕಿರುವುದು ತಿಳಿಯುತ್ತದೆ. ನಿಫ್ಟಿ ಅಥವಾ ಸೆನ್ಸೆಕ್ಸ್ ಸೂಚ್ಯಂಕ ಆಧರಿಸಿ ಇಂಡೆಕ್ಸ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದವರು ಸಹಿತ ಶೇ 15 ರಷ್ಟು ಲಾಭಾಂಶ ಪಡೆದಿದ್ದಾರೆ. ನಿಶ್ಟಿತ ಠೇವಣಿಯ ಶೇ 7 ರ ಬಡ್ಡಿ ದರಕ್ಕೆ ಹೋಲಿಕೆ ಮಾಡಿ ನೋಡಿದಾಗ ಮಾರುಕಟ್ಟೆ ಆಧಾರಿತ ಹೂಡಿಕೆಗಳು ದುಪ್ಪಟ್ಟು ಲಾಭ ತಂದುಕೊಡುತ್ತವೆ ಎಂದೇ ಹೇಳಬಹುದು. ಅದರೆ ನೆನಪಿರಲಿ, ಷೇರು ಮಾರುಕಟ್ಟೆ ಮತ್ತು ಮ್ಯೂಚುಯಲ್ ಫಂಡ್‌ಗಳ ಬಗ್ಗೆ ಒಂದಿಷ್ಟು ತಿಳಿದ ನಂತರವಷ್ಟೇ ಅಲ್ಲಿ ಹೂಡಿಕೆ ಶುರು ಮಾಡಿ.

ನಿಮಗೆ ಗೊತ್ತಿರಲಿ ‘ರೂಲ್ ಆಫ್ 70’: ಬೆಲೆ ಏರಿಕೆ (ಹಣದುಬ್ಬರ) ಕಾರಣದಿಂದಾಗಿ ಎಷ್ಟು ವರ್ಷಗಳಿಗೊಮ್ಮೆ ನಿಮ್ಮ ಹಣದ ಮೌಲ್ಯ ಕುಸಿತಗೊಳ್ಳಲಿದೆ ಎನ್ನುವುದನ್ನು ‘ರೂಲ್ ಆಫ್ 70’ ತಿಳಿಸುತ್ತದೆ. 70 ರ ಜೊತೆ ಪ್ರಸುತ ಬೆಲೆ ಏರಿಕೆ ದರವನ್ನು ಭಾಗಿಸಿದಾಗ ಎಷ್ಟು ವರ್ಷಗಳಿಗೊಮ್ಮೆ ನಿಮ್ಮ ದುಡ್ಡಿನ ಮೌಲ್ಯ ಅರ್ಧಕ್ಕೆ ಇಳಿಯಲಿದೆ ಎನ್ನುವುದು ಗೊತ್ತಾಗುತ್ತದೆ. ಉದಾಹರಣೆಗೆ ಈಗ ಪ್ರಸ್ತುತ ಹಣದುಬ್ಬರ ದರ ಶೇ 6 ರಷ್ಟಿದೆ ಎಂದುಕೊಳ್ಳೋಣ. 70 ರ ಜೊತೆ 6 ಭಾಗಿಸಿದಾಗ ಪ್ರತಿ 12 ವರ್ಷಗಳಿಗೊಮ್ಮೆ ನಿಮ್ಮ ದುಡ್ಡು ಅರ್ಧದಷ್ಟು ಮೌಲ್ಯ ಕಳೆದುಕೊಳ್ಳುತ್ತದೆ ಎಂದು ತಿಳಿಯುತ್ತದೆ. ಅಂದರೆ ಇವತ್ತು ನಿಮ್ಮ ಬಳಿ ಇರುವ ನೂರು ರೂಪಾಯಿ 12 ವರ್ಷಗಳ ಬಳಿಕ ₹ 50 ರ ಮೌಲ್ಯವನ್ನು ಮಾತ್ರ ಹೊಂದಿರಲಿದೆ. ಅದಕ್ಕೆ ಹೇಳೋದು ನಾವು ಮಾಡುವ ಹೂಡಿಕೆಗಳಿಗೆ ಬೆಲೆ ಏರಿಕೆ ಸ್ಥಿತಿಯನ್ನು ಮೀರಿ ಲಾಭಾಂಶ ತಂದುಕೊಡುವ ಸಾಮರ್ಥ್ಯ ಇರಬೇಕು ಅಂತ.

ಕರಡಿ ಹಿಡಿತಕ್ಕೆ ಷೇರುಪೇಟೆ ಸೂಚ್ಯಂಕಗಳು: ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರ ಕುಸಿತದ ಹಾದಿಯಲ್ಲಿ ಮುಂದುವರಿದಿವೆ. ಜೂನ್ 17 ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಭಾರೀ ಕುಸಿತ ದಾಖಲಿಸಿವೆ.

ಮಾರುಕಟ್ಟೆಯಲ್ಲಿ ಸದ್ಯ ಕರಡಿ ಹಿಡಿತ ಬಿಗಿಯಾಗಿದೆ. ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 5.41 ರಷ್ಟು ತಗ್ಗಿದೆ. ನಿಫ್ಟಿ ಶೇ 5.6 ರಷ್ಟು ಇಳಿಕೆ ಕಂಡಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಪ್ರಮುಖ ದೇಶಗಳ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಳ ಮಾಡಿರುವುದು ಸೇರಿದಂತೆ ಹಲವು ಅಂಶಗಳು ಸೂಚ್ಯಂಕಗಳ ಇಳಿಕೆಗೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕುಸಿತ ಕಂಡುಬಂದಿದೆ. ಬಿಎಸ್‌ಇ ಲೋಹ ಮತ್ತು ಅನಿಲ ಸೂಚ್ಯಂಕ ತಲಾ ಶೇ 9 ರಷ್ಟು ಕುಸಿದಿವೆ. ಬಿಎಸ್‌ಇ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 8 ರಷ್ಟು ಇಳಿಕೆಯಾಗಿದೆ. ಇನ್ನು ಬಿಎಸ್‌ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 6.6, ಮಿಡ್ ಕ್ಯಾಪ್ ಸೂಚ್ಯಂಕ ಶೇ 5.3, ಲಾರ್ಜ್ ಕ್ಯಾಪ್ 6.3 ರಷ್ಟು ತಗ್ಗಿವೆ. ಈವರೆಗೆ ಜೂನ್ ತಿಂಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 42,088 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 30, 312.85 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಇಳಿಕೆ: ಒಎನ್‌ಜಿಸಿ ಶೇ 14, ಹಿಂಡಾಲ್ಕೊ ಶೇ 14, ಟೆಕ್ ಮಹೀಂದ್ರ ಶೇ 13, ವಿಪ್ರೊ ಶೇ 13, ಟಾಟಾ ಸ್ಟೀಲ್ ಶೇ 12 ಮತ್ತು ಟೈಟಾನ್ ಶೇ 10 ರಷ್ಟು ಕುಸಿದಿವೆ.

ಮುನ್ನೋಟ: ಸದ್ಯದ ಸ್ಥಿತಿಯಲ್ಲಿ ಷೇರುಪೇಟೆಯಲ್ಲಿ ಚೇತರಿಕೆ ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತದ ಷೇರುಪೇಟೆ ಮಾತ್ರವಲ್ಲ, ಜಾಗತಿಕವಾಗಿ ಪ್ರಮುಖ ಷೇರುಪೇಟೆಗಳೆಲ್ಲವೂ ನಕಾರಾತ್ಮಕ ಹಾದಿಯಲ್ಲೇ ಇವೆ. ಪ್ರಮುಖ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಹಣದುಬ್ಬರ ನಿಯಂತ್ರಣಕ್ಕಾಗಿ ಬಡ್ಡಿ ದರವನ್ನು ಮೇಲಿಂದ ಮೇಲೆ ಪರಿಷ್ಕರಣೆ ಮಾಡುತ್ತಿರುವುದು ಮಾರುಕಟ್ಟೆಗೆ ಮುಳುವಾಗಿದೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT