ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ತೆರಿಗೆ ಉಳಿಸಲು ಉತ್ತಮ ಆಯ್ಕೆಗಳು

Last Updated 15 ಜನವರಿ 2023, 23:56 IST
ಅಕ್ಷರ ಗಾತ್ರ

ತೆರಿಗೆ ಉಳಿಸುವ ಹೂಡಿಕೆಗಳನ್ನು, ಉಳಿತಾಯಗಳನ್ನು ಮಾಡಲು ಮಾರ್ಚ್ 31ರವರೆಗೆ ಸಮಯ ಇದೆ, ಈಗಲೇ ಅದರ ಬಗ್ಗೆ ಚಿಂತೆ ಯಾಕೆ ಅಂದುಕೊಂಡರೆ ಕೊನೇ ಕ್ಷಣದಲ್ಲಿ ಸರಿಯಾದ ಹೂಡಿಕೆ ಆಯ್ಕೆ ಮಾಡಿ ಉಳಿತಾಯದ ಗುರಿ ಮುಟ್ಟಲು ಸಾಧ್ಯವಿಲ್ಲ. ಇನ್ನು ಇರುವ ಎರಡೂವರೆ ತಿಂಗಳನ್ನು ಹೂಡಿಕೆಗೆ ವ್ಯವಸ್ಥಿತವಾಗಿ ಬಳಸಿಕೊಂಡರೆ ತೆರಿಗೆ ಉಳಿಸುವ ಹಾದಿ ಸುಗಮವಾಗುತ್ತದೆ. ಕಾನೂನಿನ ಅನ್ವಯ ತೆರಿಗೆ ಉಳಿಸಲು ಇರುವ ಉತ್ತಮ ಮಾರ್ಗಗಳ ಬಗ್ಗೆ ಮಾಹಿತಿ ಇಲ್ಲಿದೆ.

1. ಎನ್‌ಪಿಎಸ್ (ರಾಷ್ಟ್ರೀಯ ಪಿಂಚಣಿ ಯೋಜನೆ): ತೆರಿಗೆ ಉಳಿಸಲು ಇರುವ ಅತ್ಯುತ್ತಮ ಆಯ್ಕೆಗಳಲ್ಲಿ ಎನ್‌ಪಿಎಸ್ ಪ್ರಮುಖವಾದುದು. ಎನ್‌ಪಿಎಸ್‌ನಲ್ಲಿ ದೀರ್ಘಾವಧಿಯಲ್ಲಿ ಶೇ 8ರಿಂದ ಶೇ 11ರಷ್ಟು ಲಾಭಾಂಶ ನಿರೀಕ್ಷಿಸಬಹುದು. ಎನ್‌ಪಿಎಸ್ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿ ₹ 1.5 ಲಕ್ಷದವರೆಗೆ, ಸೆಕ್ಷನ್ 80 ಸಿಸಿಡಿ 1ಬಿ ಅಡಿ ಹೆಚ್ಚುವರಿಯಾಗಿ ₹ 50,000ಕ್ಕೆ ವಿನಾಯಿತಿ ಲಭಿಸುತ್ತದೆ. ಉದ್ಯೋಗದಾತ ಸಂಸ್ಥೆ ಉದ್ಯೋಗಿಯ ಮೂಲ ವೇತನದ ಶೇ 10ರಷ್ಟನ್ನು ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿದರೆ ಆ ಮೊತ್ತಕ್ಕೂ ತೆರಿಗೆ ಇಲ್ಲ.

2. ಯುಲಿಪ್: ಯುಲಿಪ್ ಅಂದರೆ ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್. ಯುಲಿಪ್‌ಗಳಲ್ಲಿ ಶೇ 8ರಿಂದ ಶೇ 9ರವರೆಗೆ ಲಾಭಾಂಶ ನಿರೀಕ್ಷಿಸಬಹುದು. ಈ ಹೂಡಿಕೆಯಲ್ಲಿ 5 ವರ್ಷಗಳ ಲಾಕಿನ್ ಅವಧಿ ಇದೆ. ಡೆಟ್ ಹೂಡಿಕೆಗಳು (ಸುರಕ್ಷಿತ ಹೂಡಿಕೆ ಆಯ್ಕೆ) ಮತ್ತು ಷೇರು ಮಾರುಕಟ್ಟೆಯಂತಹ ಹೆಚ್ಚಿನ ರಿಸ್ಕ್ ಇರುವ ಹೂಡಿಕೆ ಆಯ್ಕೆಗಳ ನಡುವೆ ಬದಲಾಯಿಸಿಕೊಳ್ಳಲು ಇದರಲ್ಲಿ ಅವಕಾಶವಿದೆ. ಹೂಡಿಕೆ ಮೇಲಿನ ಗಳಿಕೆಗೆ ಸೆಕ್ಷನ್ 10 (10ಡಿ) ಅಡಿಯಲ್ಲಿ ವಿನಾಯಿತಿ ಇದೆ. ಯುಲಿಪ್‌ಗೆ ಪಾವತಿಸುವ ಪ್ರೀಮಿಯಂಗೆ ಸೆಕ್ಷನ್ 80 ಸಿ ಅಡಿಯಲ್ಲಿ ₹ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಲಭಿಸುತ್ತದೆ.

3. ಹಿರಿಯ ನಾಗರಿಕರ ಉಳಿತಾಯ ಯೋಜನೆ: ಈ ಯೋಜನೆಯಲ್ಲಿ 5 ವರ್ಷ ಲಾಕಿನ್ ಅವಧಿಯಿದ್ದು ಸದ್ಯದ ಬಡ್ಡಿ ದರ ಶೇ 8ರಷ್ಟಿದೆ. ಹಿರಿಯ ನಾಗರಿಕರಿಗೆ ಇದೊಂದು ಉತ್ತಮ ಹೂಡಿಕೆ ಯೋಜನೆ. ಈ ಯೋಜನೆಯಲ್ಲಿ ಹೂಡಿಕೆ ಮೇಲಿನ ಬಡ್ಡಿ ಗಳಿಕೆ ಸಂಪೂರ್ಣವಾಗಿ ಆದಾಯ ತೆರಿಗೆಗೆ ಒಳಪಡುತ್ತದೆ. ಆದರೆ ಹಿರಿಯ ನಾಗರಿಕರು ವಾರ್ಷಿಕವಾಗಿ ಗಳಿಸುವ ₹ 50 ಸಾವಿರದವರೆಗಿನ ಮೊತ್ತಕ್ಕೆ ತೆರಿಗೆ ಕಟ್ಟಬೇಕಿಲ್ಲ. ಅಂದರೆ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ₹ 6.25 ಲಕ್ಷ ತೊಡಗಿಸಿದರೆ ವಾರ್ಷಿಕ ಯಾವುದೇ ತೆರಿಗೆ ಅನ್ವಯಿಸದು. ಈ ಯೋಜನೆಯಲ್ಲಿ ಮೂರು ತಿಂಗಳಿಗೊಮ್ಮೆ ಬಡ್ಡಿ ಮೊತ್ತ ಪಾವತಿಯಾಗುತ್ತದೆ. ಪಿಪಿಎಫ್ ಅಥವಾ ಬ್ಯಾಂಕ್ ನಿಶ್ಚಿತ ಠೇವಣಿಗಿಂತ ಇದರಲ್ಲಿ ಹೆಚ್ಚು ಲಾಭವಿದೆ.

4. ಇಎಲ್ಎಸ್ಎಸ್: ಇಎಲ್ಎಸ್ಎಸ್ ಅಂದರೆ ‘ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್’. ಇಲ್ಲಿ ಹೂಡಿಕೆ ಮಾಡಿದರೆ ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ. ಈ ಯೋಜನೆಯಲ್ಲಿ 3 ವರ್ಷದ ಲಾಕಿನ್ ಇದೆ. ಈ ಯೋಜನೆಯ ಅಡಿಯಲ್ಲಿನ ಫಂಡ್‌ಗಳು ಕಳೆದ ಐದು ವರ್ಷಗಳಲ್ಲಿ ವಾರ್ಷಿಕ ಸರಾಸರಿ ಶೇ 10.01ರಷ್ಟು ಲಾಭಾಂಶ ನೀಡಿದ್ದಿದೆ. ಇದು ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಯಾಗಿರುವುದರಿಂದ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ಐಪಿ) ಮೂಲಕ ಹೂಡಿಕೆ ಸೂಕ್ತ. ತೆರಿಗೆ ಉಳಿತಾಯಕ್ಕೆಂದು ಒಂದೇ ಬಾರಿಗೆ ದೊಡ್ಡ ಮೊತ್ತದ ಹಣವನ್ನು ಇದರಲ್ಲಿ ತೊಡಗಿಸಬಾರದು.

5. ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ): ಪಿಪಿಎಫ್ ಶೇ 7.1ರಷ್ಟು ಬಡ್ಡಿ ನೀಡುತ್ತದೆ. ಈ ಯೋಜನೆ ತೆರಿಗೆ ಉಳಿತಾಯಕ್ಕೆ ಒಳ್ಳೆಯ ಸಾಧನ. ಹೂಡಿಕೆ ಹಂತದಲ್ಲಿ, ಹೂಡಿಕೆ ಮೇಲೆ ಗಳಿಸುವ ಬಡ್ಡಿಗೆ ಮತ್ತು ಅವಧಿ ಮುಗಿದ ಬಳಿಕ ತೆಗೆದುಕೊಳ್ಳುವ ಹಣಕ್ಕೆ ಇಲ್ಲಿ ತೆರಿಗೆ ಇಲ್ಲ. ಪಿಪಿಎಫ್ ಖಾತೆ ಆರಂಭಿಸಿ 6 ವರ್ಷಗಳ ಬಳಿಕ ಶೇ 50ರಷ್ಟು ಮೊತ್ತವನ್ನು ಹಿಂಪಡೆಯುವ ಅವಕಾಶ ಇದೆ. ಸೆಕ್ಷನ್ 80 ಸಿ ಅಡಿಯಲ್ಲಿ ಪಿಪಿಎಫ್ ಹೂಡಿಕೆಗೆ ತೆರಿಗೆ ವಿನಾಯಿತಿ ಸಿಗುತ್ತದೆ.

6. ಸುಕನ್ಯಾ ಸಮೃದ್ಧಿ: 10 ವರ್ಷದೊಳಗಿನ ಹೆಣ್ಣು ಮಕ್ಕಳಿರುವ ಪೋಷಕರು ಈ ಯೋಜನೆಯನ್ನು ಪ್ರಮುಖ ಬ್ಯಾಂಕ್‌ಗಳಲ್ಲಿ, ಅಂಚೆ ಕಚೇರಿಗಳಲ್ಲಿ ಆರಂಭಿಸಬಹುದು. ಸದ್ಯ ಇದರ ಬಡ್ಡಿ ದರ ಶೇ 7.6ರಷ್ಟಿದ್ದು ಹೆಣ್ಣು ಮಗುವಿಗೆ 18 ವರ್ಷ ತುಂಬುವವರೆಗೆ ಈ ಯೋಜನೆಯಲ್ಲಿನ ಹಣ ಹಿಂಪಡೆಯಲು ಸಾಧ್ಯವಿಲ್ಲ. ಕನಿಷ್ಠ ₹ 1 ಸಾವಿರ ಹೂಡಿಕೆಯೊಂದಿಗೆ ಯೋಜನೆ ಆರಂಭಿಸಬಹುದು. ಗರಿಷ್ಠ ಹೂಡಿಕೆ ಮೊತ್ತ ವರ್ಷಕ್ಕೆ ₹ 1.5 ಲಕ್ಷ. ಸುಕನ್ಯಾ ಸಮದ್ಧಿ ಹೂಡಿಕೆಗೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.

7. ಎಫ್.ಡಿ, ಎನ್ಎಸ್‌ಸಿ, ಜೀವ ವಿಮೆ ಪಾಲಿಸಿ: ತೆರಿಗೆ ಉಳಿಸುವ ಎಫ್.ಡಿ.ಗಳು ಉತ್ತಮ ಆಯ್ಕೆಗಳಂತೆ ತೋರುತ್ತವೆ. ಆದರೆ ಹೂಡಿಕೆ ಮೇಲಿನ ಬಡ್ಡಿ ಗಳಿಕೆಗೆ ವ್ಯಕ್ತಿಯ ಆದಾಯದ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಕಟ್ಟಬೇಕಿರುವುದರಿಂದ ಹೊರೆಯಾಗುತ್ತದೆ. ಎನ್‌ಎಸ್‌ಸಿ ಹೂಡಿಕೆಗೆ ಶೇ 7ರಷ್ಟು ಬಡ್ಡಿ ಸಿಗುತ್ತದೆ. ಅಂಚೆ ಕಚೇರಿಗಳಲ್ಲಿ ಇದನ್ನು ಪಡೆಯಬಹುದು. ಇನ್ನು ಎಂಡೋಮೆಂಟ್ ಜೀವ ವಿಮೆ ಪಾಲಿಸಿಗಳು ಶೇ 5ರಷ್ಟು ವಾರ್ಷಿಕ ಲಾಭ ನೀಡುತ್ತವೆ. ಮೇಲಿನ ಮೂರು ಹೂಡಿಕೆಗಳು ಕೂಡ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಉಳಿತಾಯದ ದೃಷ್ಟಿಯಿಂದ ಅಷ್ಟೊಂದು ಒಳ್ಳೆಯ ಸಾಧನಗಳಲ್ಲ. ಒಂದೊಮ್ಮೆ ಈಗಾಗಲೇ ಇವುಗಳಲ್ಲಿ ಹೂಡಿಕೆ ಮಾಡಿದ್ದರೆ ತೆರಿಗೆ ವಿನಾಯಿತಿ ಲಾಭ ಪಡೆಯಬಹುದು.

ಅಲ್ಪ ಚೇತರಿಕೆ ಕಂಡ ಷೇರುಪೇಟೆ
ಜನವರಿ 13ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಅಲ್ಪ ಚೇತರಿಕೆ ಕಂಡಿವೆ. 60,261 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.60ರಷ್ಟು ಹೆಚ್ಚಳ ಕಂಡಿದೆ. 17,956 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.45ರಷ್ಟು ಇಳಿಕೆಯಾಗಿದೆ. ದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಖರೀದಿ, ರಿಟೇಲ್ ಹೂಡಿಕೆದಾರರಿಂದ ಹೂಡಿಕೆ ಹೆಚ್ಚಳ, ಐ.ಟಿ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಡುಬಂದ ಸಕಾರಾತ್ಮಕತೆ ಸೇರಿದಂತೆ ಹಲವು ಅಂಶಗಳು ಸೂಚ್ಯಂಕಗಳ ಚೇತರಿಕೆಗೆ ಕಾರಣ.

ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಲೋಹ ಸೂಚ್ಯಂಕ, ಮಾಹಿತಿ ತಂತ್ರಜ್ಞಾನ ಸೂಚ್ಯಂಕಗಳು ತಲಾ ಶೇ 3ಕ್ಕಿಂತ ಹೆಚ್ಚು ಗಳಿಸಿಕೊಂಡಿವೆ. ಪವರ್ ಮತ್ತು ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕಗಳು ತಲಾ ಶೇ 2ರಷ್ಟು ಜಿಗಿದಿವೆ. ಮತ್ತೊಂದೆಡೆ ಬಿಎಸ್ಇ ಕನ್ಸೂಮರ್ ಡೂರೆಬಲ್ಸ್ ಶೇ 3ರಷ್ಟು ಮತ್ತು ಎಫ್‌ಎಂಸಿಜಿ ಸೂಚ್ಯಂಕ ಶೇ 1ರಷ್ಟು ಕುಸಿದಿವೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಟಾಟಾ ಮೋಟರ್ಸ್, ಅದಾನಿ ಟ್ರಾನ್ಸ್‌ಮಿಷನ್, ಹಿಂಡಾಲ್ಕೊ ಇಂಡಸ್ಟ್ರೀಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಮಹಿಂದ್ರ ಆ್ಯಂಡ್ ಮಹಿಂದ್ರ ಗಳಿಕೆ ದಾಖಲಿಸಿವೆ. ಬಿಎಸ್ಇ ಮಿಡ್ ಕ್ಯಾಪ್‌ನಲ್ಲಿ ಸಿಜಿ ಪವರ್ ಆ್ಯಂಡ್ ಇಂಡಸ್ಟ್ರಿಯಲ್ ಸಲ್ಯೂಷನ್ಸ್, ಮ್ಯಾಕ್ಸ್ ಫೈನಾನ್ಸಿಯಲ್ ಸರ್ವಿಸಸ್, ಆಲಿಸ್ ಇಂಡಿಯಾ, ಚೋಳಮಂಡಲಂ ಇನ್ವೆಸ್ಟ್‌ಮೆಂಟ್, ಎಲ್ ಆ್ಯಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್, ಮೋತಿಲಾಲ್ ಓಸ್ವಾಲ್ ಫೈನಾನ್ಸಿಯಲ್ ಸರ್ವಿಸಸ್, ಬಜಾಜ್ ಹೋಲ್ಡಿಂಗ್ ಆ್ಯಂಡ್ ಇನ್ವೆಸ್ಟ್‌ಮೆಂಟ್ ಗಳಿಕೆ ದಾಖಲಿಸಿವೆ.

ಐಡಿಬಿಐ ಬ್ಯಾಂಕ್, ಗ್ಲ್ಯಾಂಡ್ ಫಾರ್ಮಾ, ವೋಡಾಫೋನ್ ಐಡಿಯಾ, ಎಲ್ ಆ್ಯಂಡ್ ಟಿ ಟೆಕ್ನಾಲಜಿಕಲ್ ಸರ್ವಿಸಸ್, ಜೆಎಸ್‌ಡಬ್ಲ್ಯೂ ಎನರ್ಜಿ ಕುಸಿದಿವೆ.

ಮುನ್ನೋಟ: ಈ ವಾರ ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಪಾಲಿಕ್ಯಾಬ್, ಹ್ಯಾವೆಲ್ಸ್, ಜೆಎಸ್‌ಬ್ಲ್ಯೂ ಸ್ಟೀಲ್ ಸೇರಿ ಹಲವು ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಜಾಗತಿಕ ವಿದ್ಯಮಾನಗಳ ಜೊತೆ ದೇಶಿ ಬೆಳವಣಿಗೆಗಳು, ಕಂಪನಿಗಳ ತ್ರೈಮಾಸಿಕ ಸಾಧನೆಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT