ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳ ಮಾರುಕಟ್ಟೆ: ನೆಮ್ಮದಿಯ ನಿವೃತ್ತಿಗೆ ಎನ್‌ಪಿಎಸ್

Published : 4 ಜೂನ್ 2023, 21:06 IST
Last Updated : 4 ಜೂನ್ 2023, 21:06 IST
ಫಾಲೋ ಮಾಡಿ
Comments
ತೆರಿಗೆ ಉಳಿತಾಯವಾಗಬೇಕು, ನಿವೃತ್ತಿಯ ನಂತರ ನಿಯಮಿತ ಆದಾಯ ಸಿಗಬೇಕು, ತೊಡಗಿಸಿದ ಹಣದ ಮೇಲೆ ಉತ್ತಮ ಲಾಭಾಂಶವೂ ದೊರಕಬೇಕು ಎನ್ನುವವರಿಗೆ ಒಳ್ಳೆಯ ಹೂಡಿಕೆ ಆಯ್ಕೆ ಎನ್‌ಪಿಎಸ್‌. ಎನ್‌ಪಿಎಸ್‌ ಅಂದರೆ ರಾಷ್ಟ್ರೀಯ ಪಿಂಚಣಿ ಯೋಜನೆ. ತೆರಿಗೆ ನಿಯಮಗಳಲ್ಲಿ ಸುಧಾರಣೆ, ಹೂಡಿಕೆದಾರರಿಗೆ ಪೂರಕವಾದ ನಿಯಮಾವಳಿಗಳ ರಚನೆ ಸೇರಿದಂತೆ ಕಳೆದ ಒಂದು ದಶಕದಲ್ಲಿ ತಂದ ಸಾಕಷ್ಟು ಸುಧಾರಣೆಗಳಿಂದಾಗಿ ಎನ್‌ಪಿಎಸ್ ಈಗ ಹೆಚ್ಚು ಅನುಕೂಲಕರ ಹೂಡಿಕೆಯಾಗಿ ಮಾರ್ಪಟ್ಟಿದೆ. ಬನ್ನಿ ಎನ್ ಪಿಎನ್ ಹೂಡಿಕೆಯಿಂದಾಗುವ ಲಾಭಗಳೇನು ತಿಳಿಯೋಣ.
ಏನಿದು ಎನ್‌ಪಿಎಸ್ ಯೋಜನೆ?
ರಾಷ್ಟ್ರೀಯ ಪಿಂಚಣಿ ಯೋಜನೆ ಭಾರತದ ನಾಗರಿಕರಿಗೆ ವೃದ್ಧಾಪ್ಯ ಭದ್ರತೆಯನ್ನು ಒದಗಿಸಲು ಭಾರತ ಸರ್ಕಾರ ಪ್ರಾರಂಭಿಸಿರುವ ಪಿಂಚಣಿ ಮತ್ತು ಹೂಡಿಕೆ ಯೋಜನೆಯಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ನಿಯಂತ್ರಿಸುತ್ತದೆ. ನಿವೃತ್ತಿ ನಂತರವೂ ನಿಯಮಿತ ಆದಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇದನ್ನು ರೂಪಿಸಿದೆ. ಎಪಿಎನ್ ಹೂಡಿಕೆ ಎಲ್ಲರಿಗೂ ಮುಕ್ತವಾಗಿದೆ ಆದರೆ ಸರ್ಕಾರಿ ನೌಕರರಿಗೆ ಕಡ್ಡಾಯವಾಗಿದೆ.
ಖಾತೆ ಆರಂಭಿಸುವುದು ಹೇಗೆ?:
ಎನ್‌ಪಿಎಸ್‌ನಲ್ಲಿ ಹೂಡಿಕೆಯಲ್ಲಿ ಎರಡು ರೀತಿಯ ಖಾತೆಗಳಿವೆ. ಶ್ರೇಣಿ 1 (Tier -1) ಮತ್ತು ಶ್ರೇಣಿ 2 (Tier-2) ಖಾತೆ. ಶ್ರೇಣಿ 1 ಖಾತೆ ನಿವೃತ್ತಿ ಖಾತೆಯಾಗಿದ್ದು ಸಾಕಷ್ಟು ತೆರಿಗೆ ಲಾಭಗಳು ಈ ಖಾತೆಯಲ್ಲಿ ಸಿಗುತ್ತವೆ. ಆದರೆ ಇದರಲ್ಲಿ ಹೂಡಿಕೆ ಮಾಡುವಾಗ ನಿವೃತ್ತಿಯ ತನಕ ಅಂದ್ರೆ 60 ವರ್ಷದ ವರೆಗೆ ಹೂಡಿಕೆ ಹಣ ಹಿಂಪಡೆಯಲು ಅವಕಾಶವಿಲ್ಲ.
ಜನಪ್ರಿಯತೆ ಪಡೆದಿಲ್ಲ
ಎನ್‌ಪಿಎನ್ ಒಂದು ಒಳ್ಳೆಯ ಹೂಡಿಕೆ ಯೋಜನೆಯಾಗಿದ್ದರೂ ಈಗಲೂ ಅಷ್ಟೇನು ಜನಪ್ರಿಯತೆ ಪಡೆದುಕೊಂಡಿಲ್ಲ. ಹೂಡಿಕೆದಾರರಿಗೆ ಎನ್‌ಪಿಎಸ್ ಉತ್ಪನ್ನದ ಬಗ್ಗೆ ಇರುವ ಅರಿವಿನ ಕೊರತೆಯೇ ಇದಕ್ಕೆ ಪ್ರಮುಖ ಕಾರಣ. ಕಾರ್ಮಿಕರ ಭವಿಷ್ಯ ನಿಧಿಗೆ (ಪಿಎಫ್) ಸುಮಾರು 6 ಕೋಟಿ ಚಂದಾದಾರರಿದ್ದಾರೆ. ಮ್ಯೂಚುವಲ್‌ ಫಂಡ್‌ಗಳಲ್ಲಿ ಸುಮಾರು 3.77 ಕೋಟಿ ಹೂಡಿಕೆದಾರರಿದ್ದಾರೆ. ಇನ್ನು ಪಿಪಿಎಫ್, ಅಂದ್ರೆ ಸಾರ್ವಜನಿಕ ಭವಿಷ್ಯ ನಿಧಿಯಲ್ಲೂ ಸುಮಾರು 2.4 ಕೋಟಿ ಮಂದಿ ಹಣ ತೊಡಗಿಸಿದ್ದಾರೆ. ಆದ್ರೆ ಎನ್‌ಪಿಎಸ್ ಹೂಡಿಕೆದಾರರ ಸಂಖ್ಯೆ 46.4 ಲಕ್ಷ ಮಾತ್ರ ಇದೆ.
ಎನ್‌ಪಿಎಸ್ ಹೂಡಿಕೆ, ತೆರಿಗೆ ಅನುಕೂಲಗಳು
ಎನ್‌ಪಿಎಸ್ ಹೂಡಿಕೆಗೆ ಹಲವು ತೆರಿಗೆ ಅನುಕೂಲಗಳಿವೆ. ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ₹ 1.5 ಲಕ್ಷದ ವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಹೆಚ್ಚುವರಿ ₹ 50 ಸಾವಿರದ ವರೆಗಿನ ಹೂಡಿಕೆಗೆ ಸೆಕ್ಷನ್ 80ಸಿಸಿಡಿ 1ಬಿ ಅಡಿಯಲ್ಲಿ ತೆರಿಗೆ ಅನುಕೂಲ ಲಭಿಸುತ್ತದೆ. ನಿಮ್ಮ ಮೂಲ ವೇತನದ ಶೇ 10 ರಷ್ಟು ಮೊತ್ತವನ್ನು ಎನ್ ಪಿಎಸ್‌ನಲ್ಲಿ ಹೂಡಿಕೆ ಮಾಡಿದರೆ ಸೆಕ್ಷನ್ 80 ಸಿಸಿಡಿ 2 ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ 80 ಸಿಸಿಡಿ 2 ಸೆಕ್ಷನ್‌ನ ತೆರಿಗೆ ಲಾಭ ಪಡೆಯಲು ಹೂಡಿಕೆಯನ್ನು ನಿಮ್ಮ ಉದ್ಯೋಗದಾತ ಸಂಸ್ಥೆ ಮೂಲಕವೇ ಮಾಡಬೇಕು. ನೀವೇ ನೇರವಾಗಿ ಹೂಡಿಕೆ ಮಾಡಲು ಅವಕಾಶವಿರುವುದಿಲ್ಲ.
ಎಷ್ಟು ತೆರಿಗೆ ಉಳಿಸೋಕೆ ಸಾಧ್ಯ?:
ಬಹುಪಾಲು ಮಂದಿ ಎನ್‌ಪಿಎಸ್‌ನ ತೆರಿಗೆ ಲಾಭಗಳನ್ನು ಅರಿಯದೆ ಅದರಿಂದ ದೂರ ಉಳಿಯುತ್ತಿದ್ದಾರೆ. 44 ವರ್ಷದ ಹರ್ಷ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ಕಂಪನಿಯಲ್ಲಿ ಸುಮಾರು 7 ವರ್ಷಗಳ ಹಿಂದೆಯೇ ಸೆಕ್ಷನ್ 80 ಸಿಸಿಡಿ 2 ಅಡಿಯಲ್ಲಿ ಎನ್‌ಪಿಎಸ್ ಹೂಡಿಕೆಗೆ ಅವಕಾಶ ಕಲ್ಪಿಸಿದ್ದರು. ಮಾನವ ಸಂಪನ್ಮೂಲ ವಿಭಾಗದವರೂ ಕೂಡ ಹರ್ಷಗೆ ಈ ಬಗ್ಗೆ ತಿಳಿಸಿದ್ದರು. ಆದರೆ ಹರ್ಷ ಎನ್‌ಪಿಎಸ್ ಹೂಡಿಕೆಗೆ ಗಮನ ಕೊಡಲಿಲ್ಲ. ಪರಿಣಾಮ ಹರ್ಷಾಗೆ 7 ವರ್ಷಗಳಲ್ಲಿ ಸುಮಾರು ₹ 3 ಲಕ್ಷ ತೆರಿಗೆ ಉಳಿಸಿಕೊಳ್ಳುವ ಅವಕಾಶ ತಪ್ಪಿ ಹೋಯಿತು. ಇದು ಹರ್ಷ ಅವರೊಬ್ಬರ ಕಥೆಯಲ್ಲ, ಬಹುಪಾಲು ಮಂದಿ ಹೀಗೆಯೇ ತಡ ಮಾಡಿ ನಷ್ಟ ಮಾಡಿಕೊಳ್ಳುತ್ತಾರೆ. ಹಾಗಾಗಿ ಎನ್‌ಪಿಎಸ್ ಬಗ್ಗೆ ಸಷ್ಟ ಅರಿವು ಹೊಂದುವುದು ಬಹಳ ಮುಖ್ಯ.
ಎನ್‌ಪಿಎಸ್ ಹೂಡಿಕೆಗೆ ಶುಲ್ಕ ಕಡಿಮೆ:
ಮ್ಯೂಚುವಲ್‌ ಫಂಡ್‌ಗಳಲ್ಲಿ ಫಂಡ್ ವಾರ್ಷಿಕ ನಿರ್ವಹಣೆ ಶುಲ್ಕ ಶೇ 1.5 ರಿಂದ ಶೇ 2.5 ರ ವರೆಗೂ ಇರುತ್ತದೆ. ಆದರೆ ಎನ್‌ಪಿಎನ್ ಹೂಡಿಕೆಯಲ್ಲಿ ವಾರ್ಷಿಕ ಫಂಡ್ ನಿರ್ವಹಣೆ ಶುಲ್ಕ ಗರಿಷ್ಠ ಶೇ 0.09 ರಷ್ಟು ಮಾತ್ರ. ಅಂದರೆ ನೀವು ರ₹ 1 ಲಕ್ಷ ಹೂಡಿಕೆ ಮಾಡಿದರೆ ವಾರ್ಷಿಕ ಫಂಡ್ ನಿರ್ವಹಣೆ ಶುಲ್ಕ ₹ 90 ಮಾತ್ರ. ಈ ಕಾರಣದಿಂದಾಗಿ ನಿವೃತ್ತಿಗಾಗಿ ಹೂಡಿಕೆ ಮಾಡುವವರಿಗೆ ಎನ್‌ಪಿಎಸ್ ಹೆಚ್ಚು ಆಕರ್ಷಕ ಎನಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT