ಈಕ್ವಿಟಿ ಮ್ಯೂಚುವಲ್ ಫಂಡ್‌ಗಳ ಪೈಕಿ ಸ್ಮಾಲ್ ಕ್ಯಾಪ್ ಫಂಡ್‌ಗಳು ಪ್ರಮುಖ ಸ್ಥಾನ ಪಡೆದಿವೆ. ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧ, ಆದರೆ ದೀರ್ಘಾವಧಿಯಲ್ಲಿ ಅತಿ ಹೆಚ್ಚು ಲಾಭ ಸಿಗಬೇಕು ಎನ್ನುವವರಿಗೆ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ ಹೂಡಿಕೆ ಸೂಕ್ತ. ಈ ಫಂಡ್‌ಗಳಿಂದ ಎಷ್ಟು ಲಾಭ ಸಿಗಬಹುದು? ಈ ಫಂಡ್‌ಗಳ ಮಹತ್ವವೇನು? ತಿಳಿಯೋಣ.
₹5,000 ಕೋಟಿಗಿಂತ ಕಡಿಮೆ ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಗಳನ್ನು ಸ್ಮಾಲ್ ಕ್ಯಾಪ್ ಕಂಪನಿಗಳು ಎಂದು ಕರೆಯಲಾಗುತ್ತದೆ. ಅಂತಹ ಕಂಪನಿಗಳಲ್ಲಿ ಹೂಡಿಕೆ ಮಾಡುವ ಫಂಡ್‌ಗಳನ್ನು ಸ್ಮಾಲ್ ಕ್ಯಾಪ್ ಫಂಡ್ ಎಂದು ವಿಂಗಡಿಸಲಾಗುತ್ತದೆ. ಲಾಜ್ ಕ್ಯಾಪ್ ಅಂದರೆ ಷೇರು ಮಾರುಕಟ್ಟೆಯಲ್ಲಿರುವ ಬೃಹತ್ ಕಂಪನಿಗಳು, ಮಿಡ್ ಕ್ಯಾಪ್ ಅಂದರೆ ಮಧ್ಯಮ ಗಾತ್ರದವು ಮತ್ತು ಸ್ಮಾಲ್ ಕ್ಯಾಪ್ ಅಂದರೆ ಸಣ್ಣ ಕಂಪನಿಗಳು.
ಸ್ಮಾಲ್ ಕ್ಯಾಪ್ ಫಂಡ್‌ಗಳು ಹೂಡಿಕೆದಾರರ ಶೇಕಡ 65ರಷ್ಟು ಹಣವನ್ನು ಸಣ್ಣ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಒಂದಿಷ್ಟು ಮೊತ್ತವನ್ನು ಮಿಡ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್ ಕಂಪನಿಗಳಲ್ಲೂ ತೊಡಗಿಸಲಾಗುತ್ತದೆ. ಆದರೆ ಸ್ಮಾಲ್ ಕ್ಯಾಪ್ ಫಂಡ್‌ಗಳ ಬಹುಪಾಲು ಮೊತ್ತ ಸಣ್ಣ ಕಂಪನಿಗಳ ಮೇಲೆಯೇ ಹೂಡಿಕೆಯಾಗಿರುತ್ತದೆ.
ರಿಸ್ಕ್ ಜಾಸ್ತಿ, ಬೆಳವಣಿಗೆ ಸಾಧ್ಯತೆ ಹೆಚ್ಚು: ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿನ ಅಲ್ಪಾವಧಿ ಹೂಡಿಕೆಯಲ್ಲಿ ರಿಸ್ಕ್ ಜಾಸ್ತಿ ಇರುತ್ತದೆ. ಆದರೆ ದೀರ್ಘಾವಧಿ, ಅಂದರೆ ಸುಮಾರು 5ರಿಂದ 7 ವರ್ಷಗಳ ಅವಧಿಗೆ, ಹೂಡಿಕೆ ಮಾಡಿದರೆ ಲಾಭದ ಸಾಧ್ಯತೆ ಹೆಚ್ಚು. ಕಳೆದ 5 ವರ್ಷಗಳಲ್ಲಿ ಸ್ಮಾಲ್ ಕ್ಯಾಪ್ ಫಂಡ್‌ಗಳು ಸರಾಸರಿ ಶೇ 20.28ರಷ್ಟು ವಾರ್ಷಿಕ ಲಾಭಾಂಶ ಕೊಟ್ಟಿವೆ. ಕಳೆದ 10 ವರ್ಷಗಳ ಅವಧಿಯಲ್ಲಿ ಸರಾಸರಿ ಶೇ 24.29ರಷ್ಟು ವಾರ್ಷಿಕ ಲಾಭ ಒದಗಿಸಿವೆ. ಮಾರುಕಟ್ಟೆ ಅನಿಶ್ಚಿತತೆಯ ಸಂದರ್ಭದಲ್ಲಿ ಸ್ಮಾಲ್ ಕ್ಯಾಪ್ ಫಂಡ್‌ಗಳು ದೊಡ್ಡ ಪೆಟ್ಟು ಅನುಭವಿಸುತ್ತವೆ. ಆದರೆ ಅಷ್ಟೇ ದೊಡ್ಡ ಮಟ್ಟದ ಲಾಭ ಕೊಡುವ ಸಾಮರ್ಥ್ಯವೂ ಈ ಫಂಡ್‌ಗಳಿಗಿದೆ.
ಒಳ್ಳೆಯ ಕಂಪನಿಗಳ ಹುಟ್ಟು: ಸ್ಮಾಲ್ ಕ್ಯಾಪ್ ಕಂಪನಿಗಳು ಬೆಳವಣಿಗೆ ಕಂಡು ಕ್ರಮೇಣ ಮಿಡ್ ಕ್ಯಾಪ್, ಲಾರ್ಜ್ ಕ್ಯಾಪ್ ಕಂಪನಿಗಳಾಗಿ ರೂಪುಗೊಳ್ಳುತ್ತವೆ. ಒಂದು ಸಮಯದಲ್ಲಿ ಸ್ಮಾಲ್ ಕ್ಯಾಪ್ ಕಂಪನಿಗಳಾಗಿದ್ದ ಐಷರ್ ಮೋಟರ್ಸ್, ಅರಬಿಂದೊ ಫಾರ್ಮಾ, ಇಂಡಸ್ ಇಂಡ್ ಬ್ಯಾಂಕ್ ಇಂದು ಲಾರ್ಜ್ ಕ್ಯಾಪ್ ಕಂಪನಿಗಳಾಗಿ ರೂಪುಗೊಂಡಿವೆ. ಸ್ಮಾಲ್ ಕ್ಯಾಪ್‌ನಲ್ಲೂ ಈಗ ಒಳ್ಳೆಯ ಹೆಸರು ಮಾಡಿರುವ ಕಂಪನಿಗಳಿವೆ.
ಸಿಡಿಎಸ್ಎಲ್, ಬಿಇಎಂಎಲ್, ಸಿಯೆಟ್, ಇಂಡಿಗೊ ಪೇಂಟ್ಸ್, ಗ್ರಾಫೈಟ್ ಇಂಡಿಯಾ, ಕ್ಯಾಮ್ಸ್, ಪಿವಿಆರ್ ಐನಾಕ್ಸ್ ಇವೆಲ್ಲವೂ ಸ್ಮಾಲ್ ಕ್ಯಾಪ್ ಕಂಪನಿಗಳೇ. ಆದರೆ ಹೆಚ್ಚು ಲಾಭ ಕೊಡದ ಕಂಪನಿಗಳೂ ಸ್ಮಾಲ್ ಕ್ಯಾಪ್ ವರ್ಗದಲ್ಲಿರುತ್ತವೆ ಎನ್ನುವುದು ನೆನಪಿರಲಿ. ಹೂಡಿಕೆ ಮಾಡುವಾಗ ಯಾವ ಫಂಡ್ ಪರಿಗಣಿಸಬೇಕು ಎಂದು ಅಧ್ಯಯನ ಮಾಡಿ ಮುಂದುವರಿಯುವುದು ಮುಖ್ಯ. ನಿಮಗೆ ಯಾವ ಸ್ಮಾಲ್ ಕ್ಯಾಪ್ ಫಂಡ್ ಉತ್ತಮ ಎಂಬುದನ್ನು ಸ್ವತಂತ್ರವಾಗಿ ತಿಳಿದುಕೊಳ್ಳಲು ಸಾಧ್ಯವಾಗದಿದ್ದರೆ. ಪರಿಣತ ಹಣಕಾಸು ತಜ್ಞರ ನೆರವು ಪಡೆಯಿರಿ.
ಯಾರು ಹೂಡಿಕೆ ಮಾಡಬೇಕು?: ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ದೀರ್ಘಾವಧಿ ಹೂಡಿಕೆ ಬಹಳ ಮುಖ್ಯ. ಸುಮಾರು 5ರಿಂದ 7 ವರ್ಷಗಳ ಹೂಡಿಕೆ ಸಮಯವಿದ್ದರೆ ಮಾತ್ರ ಈ ಫಂಡ್‌ಗಳಲ್ಲಿ ಹಣ ತೊಡಗಿಸುವುದು ಸೂಕ್ತ. ‘ಹೆಚ್ಚು ರಿಸ್ಕ್, ಹೆಚ್ಚು ಲಾಭ’ ಎನ್ನುವ ಲೆಕ್ಕಾಚಾರವನ್ನು ಯಾರು ಒಪ್ಪುವರೋ ಅವರು ಸ್ಮಾಲ್ ಕ್ಯಾಪ್ ಫಂಡ್‌ಗಳನ್ನು ಪರಿಗಣಿಸಬಹುದು.
ಸಹಜವಾಗಿಯೇ ಸ್ಮಾಲ್ ಕ್ಯಾಪ್ ಕಂಪನಿಗಳು, ಮಿಡ್ ಮತ್ತು ಲಾರ್ಜ್ ಕ್ಯಾಪ್ ಕಂಪನಿಗಳಷ್ಟು ಸದೃಢವಾಗಿರುವುದಿಲ್ಲ, ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಸ್ಮಾಲ್ ಕ್ಯಾಪ್ ಕಂಪನಿಗಳು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತವೆ. ಮೂರು ತಿಂಗಳು, ಆರು ತಿಂಗಳು ಒಂದು ವರ್ಷದ ಅವಧಿಯ ಹೂಡಿಕೆಗೆ ಸ್ಮಾಲ್ ಕ್ಯಾಪ್ ಫಂಡ್‌ಗಳನ್ನು ಪರಿಗಣಿಸಬೇಡಿ.
ಗಳಿಕೆಗೆ ತೆರಿಗೆ ಎಷ್ಟು?: ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ ಒಂದು ವರ್ಷದ ಒಳಗಾಗಿ ನಗದೀಕರಣಕ್ಕೆ ಮುಂದಾದರೆ ಗಳಿಕೆಯ ಮೇಲೆ ಶೇ 15ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಇದನ್ನು ಎಲ್‌ಟಿಸಿಜಿ ಅಥವಾ ಅಲ್ಪಾವಧಿ ಬಂಡವಾಳ ವೃದ್ಧಿ ತೆರಿಗೆ ಎನ್ನುತ್ತಾರೆ. ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ ಒಂದು ವರ್ಷದ ಬಳಿಕ ನಗದೀಕರಣಕ್ಕೆ ಮುಂದಾಗಿ ಲಾಭಾಂಶ ₹1 ಲಕ್ಷದ ಒಳಗಿದ್ದರೆ ಯಾವುದೇ ತೆರಿಗೆ ಇಲ್ಲ. ₹1 ಲಕ್ಷ ಮೀರಿದ ಲಾಭಾಂಶಕ್ಕೆ ಶೇ 10ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಇದನ್ನು ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆ ಎಂದು ಕರೆಯಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.