ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹2000 ಮುಖಬೆಲೆಯ ನೋಟುಗಳ ಬದಲಾವಣೆಗೆ ಬಾಕಿ ಉಳಿದಿವೆ ಐದು ದಿನಗಳು

Published 25 ಸೆಪ್ಟೆಂಬರ್ 2023, 8:43 IST
Last Updated 25 ಸೆಪ್ಟೆಂಬರ್ 2023, 8:43 IST
ಅಕ್ಷರ ಗಾತ್ರ

ಮುಂಬೈ: ಆರ್‌ಬಿಐ ಮೇ 23ರಂದು ಘೋಷಿಸಿದಂತೆ ₹2 ಸಾವಿರ ಮುಖಬೆಲೆಯ ನೋಟುಗಳ ಬಳಕೆ ಇದೇ 30ಕ್ಕೆ ಕೊನೆಯಾಗಲಿದ್ದು, ನೋಟುಗಳನ್ನು ಬ್ಯಾಂಕ್‌ಗಳಿಗೆ ಹಿಂದಿರುಗಿಸಲು ಕೇವಲ ಐದು ದಿನಗಳು ಬಾಕಿ ಉಳಿದಿವೆ.

ಸದ್ಯ ಚಲಾವಣೆಯಲ್ಲಿ ಇರುವ ನೋಟುಗಳನ್ನು ಸೆಪ್ಟೆಂಬರ್‌ 30ರ ಒಳಗಾಗಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಂತೆ ಅಥವಾ ಬೇರೆ ಮುಖಬೆಲೆಯ ನೋಟುಗಳೊಂದಿಗೆ ಬದಲಾಯಿಸಿಕೊಳ್ಳುವಂತೆ ಆರ್‌ಬಿಐ ಸೂಚನೆ ನೀಡಿದೆ.

₹2 ಸಾವಿರ ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿಯೇ ಉಳಿಯಲಿವೆ ಎಂದೂ ಆರ್‌ಬಿಐ ಈ ಹಿಂದೆಯೇ ಹೇಳಿದೆ. ₹2 ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆಗೆ ಯಾವುದೇ ಮಿತಿಯನ್ನು ಆರ್‌ಬಿಐ ಹೇರಿಲ್ಲ. ಆದರೆ ಗ್ರಾಹಕರ ಕೆವೈಸಿ (ಗ್ರಾಹಕರನ್ನು ತಿಳಿದುಕೊಳ್ಳಿ) ಆಗಿರಬೇಕಾದ್ದು ಅಗತ್ಯ ಎಂದಿದೆ.

₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದರಿಂದ ದೇಶದಲ್ಲಿ ಕರೆನ್ಸಿ ಅಗತ್ಯವನ್ನು ಫೂರೈಸುವ ಸಲುವಾಗಿ 2016ರ ನವೆಂಬರ್‌ನಲ್ಲಿ ₹2 ಸಾವಿರ ಮುಖಬೆಲೆಯ ನೋಟನ್ನು ಪರಿಚಯಿಸಲಾಯಿತು. ಇತರ ಮುಖಬೆಲೆಯ ನೋಟುಗಳು ಅಗತ್ಯ ಪ್ರಮಾಣದಲ್ಲಿ ಲಭ್ಯ ಇವೆ. ಹೀಗಾಗಿ, ₹2 ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿ ಇರುವ ಅಗತ್ಯ ಇಲ್ಲ ಎಂದು ಆರ್‌ಬಿಐ ತಿಳಿಸಿದೆ.

ಸಾಮಾನ್ಯ ಉಳಿತಾಯ ಡೆಪಾಸಿಟ್ ಅಥವಾ ಜನ ಧನ ಖಾತೆಗಳಿಗೆ ನೀಡಲಾಗಿರುವ ಡೆಪಾಸಿಟ್‌ ಮಿತಿ ಎಂದಿನಂತೆಯೇ ಇರಲಿದೆ. ಈ ಬಗೆಯ ಖಾತೆ ಹೊಂದಿರುವವರು ಹೆಚ್ಚುವರಿ ಹಣ ಭರ್ತಿ ಮಾಡಬೇಕಾದ ಪಾಲಿಸಬೇಕಾದ ಬ್ಯಾಂಕ್‌ನ ನಿಯಮಗಳಿಗೆ ಒಳಪಟ್ಟಿರುತ್ತಾರೆ.

ಆದಾಯ ತೆರಿಗೆ ಕಾಯ್ದೆಯ 114ಬಿ ಅಡಿಯಲ್ಲಿ ₹50 ಸಾವಿರ ಮೊತ್ತದ ಹಣ ಡೆಪಾಸಿಟ್ ಮಾಡಬೇಕಾದರೆ ಗ್ರಾಹಕರು ತಮ್ಮ ಪಾನ್‌ ಸಂಖ್ಯೆಯನ್ನು ನೀಡಬೇಕಾದ್ದು ಕಡ್ಡಾಯ.

ಸೆ. 30ರವರೆಗೆ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ₹2ಸಾವಿರ ಮುಖಬೆಲೆಯ ನೋಟುಗಳನ್ನು ಬದಲಿಸಿಕೊಳ್ಳಬಹುದು. ಇದರೊಂದಿಗೆ ತಮ್ಮ ಸಮೀಪದ ಬ್ಯಾಂಕುಗಳಲ್ಲೂ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಬ್ಯಾಂಕುಗಳಿಗೆ ಈ ವಾರ ಇರುವ ರಜೆಗಳು

* ಬ್ಯಾಂಕುಗಳು ಸೆ. 25ರಿಂದ 27ರವರೆಗೆ ಕಾರ್ಯ ನಿರ್ವಹಿಸಲಿವೆ.

* ಗುರುವಾರ (ಸೆ. 28)ರಂದು ಈದ್ ಮಿಲಾದ್ ಆಚರಣೆಗೆ ರಜೆ ಇರಲಿದೆ.

* ಶುಕ್ರವಾರ ಮತ್ತು ಶನಿವಾರ (ಸೆ. 29 ಹಾಗೂ 30)ರಂದು ಬ್ಯಾಂಕುಗಳು ಎಂದಿನಂತೆಯೇ ಕಾರ್ಯ ನಿರ್ವಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT