ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ: ಶೇ 7ರಷ್ಟು ಪ್ರಗತಿ ನಿರೀಕ್ಷೆ

ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಪರಿಷ್ಕೃತ ಮುನ್ನೋಟ ಪ್ರಕಟ
Published 11 ಏಪ್ರಿಲ್ 2024, 15:18 IST
Last Updated 11 ಏಪ್ರಿಲ್ 2024, 15:18 IST
ಅಕ್ಷರ ಗಾತ್ರ

ನವದೆಹಲಿ: 2024–25ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಭಾರತದ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಪರಿಷ್ಕರಿಸಿದ್ದು, ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ. 

ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಹೂಡಿಕೆಯು ಸದೃಢವಾಗಿರಲಿದೆ. ಸರಕುಗಳ ಖರೀದಿಯೂ ಸುಧಾರಿಸಲಿದೆ. ಇದು ಆರ್ಥಿಕತೆ ಬೆಳವಣಿಗೆಯ ವೇಗಕ್ಕೆ ಸಹಕಾರಿಯಾಗಲಿದೆ ಎಂದು ಗುರುವಾರ ಬಿಡುಗಡೆಯಾಗಿರುವ ಪರಿಷ್ಕೃತ ಮುನ್ನೋಟದ ವರದಿ ತಿಳಿಸಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇ 6.7ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂದಾಜಿಸಿತ್ತು.

ಏಷ್ಯಾ ಮತ್ತು ಪೆಸಿಫಿಕ್‌ ವಲಯದಲ್ಲಿ ಆರ್ಥಿಕತೆಯ ಬೆಳವಣಿಗೆ ದೃಷ್ಟಿಯಲ್ಲಿ ಭಾರತವು ದೊಡ್ಡ ಎಂಜಿನ್‌ ಆಗಿದೆ ಎಂದು ಹೇಳಿದೆ‌. 

2023–24 ಹಾಗೂ 2024–25ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ತುಸು ಮಂದಗತಿಯಲ್ಲಿದ್ದರೂ 2025–26ನೇ ಆರ್ಥಿಕ ವರ್ಷದಲ್ಲಿ ಶೇ 7.2ರಷ್ಟು ಬೆಳವಣಿಗೆ ಕಾಣಲಿದೆ ಎಂದು ವರದಿ ತಿಳಿಸಿದೆ. 

‘ತಯಾರಿಕಾ ಮತ್ತು ಸೇವಾ ವಲಯದಲ್ಲಿನ ಸದೃಢವಾದ ಬೆಳವಣಿಗೆಯು 2023–24ನೇ ಹಣಕಾಸು ವರ್ಷದ ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ. ಹೂಡಿಕೆಯೂ ಚೇತರಿಕೆ ಕಾಣಲಿದೆ. ಬಳಕೆಗೆ ಉತ್ತೇಜನ ಸಿಗಲಿದೆ. ಜಾಗತಿಕ ಬಿಕ್ಕಟ್ಟಿನಿಂದಾಗಿ ಹಣದುಬ್ಬರದ ಇಳಿಕೆ ಅಥವಾ ಏರಿಕೆ ಸ್ಥಿತಿಯು ಮುಂದುವರಿಯಲಿದೆ’ ಎಂದು ಹೇಳಿದೆ.

‘2024–25ನೇ ಸಾಲಿನಡಿ ಸರಕುಗಳ ರಫ್ತಿನಲ್ಲಿ ಸುಧಾರಣೆಯಾಗಲಿದೆ. ತಯಾರಿಕಾ ವಲಯದ ಉತ್ಪಾದಕತೆಯು ಏರಿಕೆಯಾಗಲಿದೆ. ಜೊತೆಗೆ, ಕೃಷಿ ಕ್ಷೇತ್ರದ ಉತ್ಪಾದನೆ ಕೂಡ ಹೆಚ್ಚಳವಾಗಲಿದೆ’ ಎಂದು ಎಡಿಬಿ ವರದಿ ತಿಳಿಸಿದೆ.

‘ಜಾಗತಿಕ ಬಿಕ್ಕಟ್ಟುಗಳ ಹೊರತಾಗಿಯೂ ಭಾರತದ ಆರ್ಥಿಕತೆಯು ಅತಿವೇಗವಾಗಿ ಬೆಳೆಯುತ್ತಿದೆ. ದೇಶೀಯ ಬೇಡಿಕೆ ಹೆಚ್ಚಳ ಮತ್ತು ಸರ್ಕಾರದ ನೀತಿಗಳು ಇದಕ್ಕೆ ಬೆನ್ನೆಲುಬಾಗಿವೆ’ ಎಂದು ಎಡಿಬಿಯ ಭಾರತದ ನಿರ್ದೇಶಕ ಮಿಯೋ ಓಕಾ ಹೇಳಿದ್ದಾರೆ.

ಆರ್‌ಬಿಐ ವರದಿ:

2024–25ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಈಗಾಗಲೇ ಅಂದಾಜಿಸಿದೆ. ಈ ಬಾರಿ ಮುಂಗಾರು ಸಾಮಾನ್ಯವಾಗಿರಲಿದ್ದು, ಹಣದುಬ್ಬರದ ಒತ್ತಡ ತಗ್ಗಲಿದೆ. ಮತ್ತೊಂದೆಡೆ ತಯಾರಿಕಾ ಮತ್ತು ಸೇವಾ ವಲಯದ ಬೆಳವಣಿಗೆಯ ವೇಗವು ಸುಸ್ಥಿರವಾಗಿರಲಿದೆ ಎಂದು ಆರ್‌ಬಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT