ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ ನೆಮ್ಮದಿಯ ಸೂತ್ರ ಎಲ್ಲರಿಗೂ ಸಿಗಲಿ

Published 22 ಏಪ್ರಿಲ್ 2023, 18:53 IST
Last Updated 22 ಏಪ್ರಿಲ್ 2023, 18:53 IST
ಅಕ್ಷರ ಗಾತ್ರ

ನವೀನ ಗಂಗೋತ್ರಿ

ವೈಶಾಖಮಾಸದ ಶುಕ್ಲಪಕ್ಷದ ತೃತೀಯಾ ತಿಥಿಯನ್ನು ‘ಅಕ್ಷಯ ತೃತೀಯಾ’ ಎಂದು ಆಚರಿಸುವುದು ಸನಾತನ ಸಂಪ್ರದಾಯ. ಯುಗಾದಿಯನ್ನು ಹೊಸವರ್ಷವಾಗಿ ಆಚರಿಸುವ ಚಾಂದ್ರಮಾನ ವ್ಯವಸ್ಥೆಯಲ್ಲಿ ವೈಶಾಖವು ಎರಡನೆಯ ಮಾಸ. ಅಕ್ಷಯ ತೃತೀಯಾ ದಿನದಂದು ಕೊಂಡ ಬಂಗಾರ, ಆ ದಿನ ಮಾಡಿದ ಹಣದ ಹೂಡಿಕೆ ಅಕ್ಷಯವಾಗಿ (ಎಂದೆಂದೂ ಕಡಿಮೆಯಾಗದೆ) ವೃದ್ಧಿಯನ್ನು ಹೊಂದುತ್ತಲೇ ಇರುತ್ತದೆ ಎನ್ನುವ ನಂಬುಗೆಯಿಂದಾಗಿ ಈ ದಿನದಂದು ಬಂಗಾರ ಮತ್ತು ಬೆಳ್ಳಿಯನ್ನು ಕೊಳ್ಳುವ ಪರಿಪಾಟ ಈಚಿನ ವರ್ಷಗಳಲ್ಲಿ ವ್ಯಾಪಕವಾಗುತ್ತಿದೆ. ಬಂಗಾರ ಕೊಳ್ಳುವುದಕ್ಕಾಗಿ ಅಕ್ಷಯ ತೃತೀಯಾ ದಿನವನ್ನೇ ಕಾಯುವವರೂ ಇದ್ದಾರೆ. ಇಷ್ಟೆಲ್ಲ ಆರ್ಥಿಕ ಸಂಚಲನವನ್ನು ಸೃಷ್ಟಿಸುವ ಈ ಹಬ್ಬಕ್ಕೆ ಪೌರಾಣಿಕವಾದ ಅಥವಾ ಐತಿಹಾಸಿಕವಾದ ಹಿನ್ನೆಲೆ ಇರಲೇಬೇಕಷ್ಟೆ.

ಭಾರತೀಯ ಜೀವನವನ್ನು ನಾನಾ ವಿಧವಾಗಿ ಪ್ರಭಾವಿಸಿದ ಮಹಾಭಾರತ ಕಥೆಯಲ್ಲಿ ಅಕ್ಷಯ ತೃತೀಯಾ ತಿಥಿ ಮಹತ್ತ್ವ ಪಡೆದುಕೊಳ್ಳುತ್ತದೆ. ವನವಾಸದಲ್ಲಿರುವ ಪಾಂಡವರು ತಮ್ಮ ದೈನಂದಿನ ಆಹಾರಕ್ಕಾಗಿ ಮತ್ತು ಅತಿಥಿಸತ್ಕಾರಕ್ಕೆ ಬೇಕಾಗುವ ಆಹಾರವಸ್ತುವಿಗಾಗಿ ನಿಶ್ಚಿತ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿದ್ದ ಹೊತ್ತಿನಲ್ಲಿ ಶ್ರೀಕೃಷ್ಣನು ಎಂದೆಂದೂ ಬರಿದಾಗದ ಆಹಾರಪಾತ್ರೆಯೊಂದನ್ನು ಯಾಜ್ಞಸೇನಾಳಿಗೆ ಕರುಣಿಸುತ್ತಾನೆ. ಮುಂದೆ, ವನವಾಸದಲ್ಲಿದ್ದಷ್ಟೂ ಕಾಲ ಅಕ್ಷಯವಾಗಿ ಆಹಾರವನ್ನು ಕರುಣಿಸಿದ್ದು ಇದೇ ಅಕ್ಷಯ ಪಾತ್ರೆ. ಈ ಪಾತ್ರೆಯನ್ನು ಶ್ರೀಕೃಷ್ಣನು ಅನುಗ್ರಹಿಸಿದ ದಿನವು ವೈಶಾಖಮಾಸದ ಶುಕ್ಲಪಕ್ಷದ ತೃತೀಯಾ ತಿಥಿಯಾಗಿತ್ತು ಎನ್ನುವುದು ಐತಿಹ್ಯ. ಭಾರತದ ಉತ್ತರ ಭಾಗದಲ್ಲಿರುವ ಗಂಗೋತ್ರಿ ಮತ್ತು ಯಮುನೋತ್ರಿಯ ಯಾತ್ರಾ ಸ್ಥಳಗಳು ಈ ದಿನದಂದು ತೆರೆಯಲ್ಪಡುತ್ತವೆ.

ಇದಲ್ಲದೆ, ಶಾಪದಿಂದಾಗಿ ಭಸ್ಮಗೊಂಡ ತನ್ನ ಪೂರ್ವಿಕರಿಗೆ ಸದ್ಗತಿಯನ್ನು ಕೊಡಿಸುವುದಕ್ಕಾಗಿ ಭಗೀರಥನು ಮಹಾಪ್ರಯತ್ನದಿಂದ ಗಂಗೆಯನ್ನು ಒಲಿಸಿಕೊಳ್ಳಲಾಗಿ ಆಕೆ ದೇವಲೋಕದಿಂದ ಭೂಲೋಕಕ್ಕೆ ಬಂದ ಕಥೆಯು ಪ್ರಸಿದ್ಧವಾಗಿದೆಯಷ್ಟೆ. ಇಲ್ಲಿ ಗಂಗೆಯು ಭೂಮಿಗೆ ಅವತರಿಸಿದ ದಿನವೂ ಅಕ್ಷಯ ತೃತೀಯಾ ದಿನವೇ. ಶಾಸ್ತ್ರ ಮತ್ತು ಶಸ್ತ್ರ ಇವೆರಡರ ಅಪೂರ್ವಸಂಗಮವಾದ ಪರಶುರಾಮರು ಅವತಾರವೆತ್ತಿದ್ದು ಈ ದಿನದಂದೇ. ಬಸವ ಸಿದ್ಧಾಂತವನ್ನು ಪ್ರತಿಪಾದಿಸಿದ ಬಸವೇಶ್ವರರ ಜಯಂತಿಯೂ ಇದೇ ದಿನದಂದು. ಕಡುಬಡವನಾದ ಸುದಾಮನು ತನ್ನ ಬದುಕಿನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕೆ ಮಿತ್ರನಾದ ಶ್ರೀಕೃಷ್ಣನಲ್ಲಿಗೆ ತೆರಳಿ ನಿವೇದಿಸಿಕೊಂಡ ದಿನವೂ ಇದೇ. ಹಾಗಾಗಿಯೇ ಮುಷ್ಟಿ ಅವಲಕ್ಕಿಗೆ ಪ್ರತಿಯಾಗಿ ಆತನಿಗಾದ ಸಂಪತ್ತಿನ ಅನುಗ್ರಹ ಅಕ್ಷಯವಾದುದಾಗಿತ್ತು. ಹೀಗೆ ಈ ದಿನವನ್ನು ವಿಶೇಷವೆಂದು ಪರಿಗಣಿಸುವುದಕ್ಕೆ ಕಾರಣವಾದ ಹಲವಾರು ಸಂಗತಿಗಳು ಇತಿಹಾಸ–ಪುರಾಣಗಳಲ್ಲಿ ಇವೆ. ಜೈನ ಮತಾವಲಂಬಿಗಳಿಗೂ ಈ ದಿನ ಪವಿತ್ರ ದಿನವೇ. ಅವರಲ್ಲಿ ಆದಿ ತೀರ್ಥಂಕರರಾದ ವೃಷಭದೇವ ತಮ್ಮ ಉಪವಾಸವನ್ನು ಕೊನೆಗೊಳಿಸಿ ಆಹಾರವನ್ನು ಸ್ವೀಕರಿಸಿದ ದಿನ ಅಕ್ಷಯ ತೃತೀಯಾ.

ಬದುಕಿನಲ್ಲಿ ಅಕ್ಷಯವಾಗಬೇಕಾದ ಸಂಗತಿಯೆಂದರೆ ಅದು ನೆಮ್ಮದಿ ಎಂಬ ದ್ರವ್ಯ. ಈ ನೆಮ್ಮದಿಯ ಮೂಲವು ‘ಅರ್ಥ’ ಎಂಬ ಪುರುಷಾರ್ಥವೇ ಆಗಿದೆ ಎನ್ನುವ ಗ್ರಹಿಕೆಯಲ್ಲಿ ಭೌತಿಕ ವಸ್ತುಗಳಲ್ಲಿ ನೆಮ್ಮದಿಯನ್ನು ಹುಡುಕುವುದು ನಮ್ಮ ಸಮಾಜದಲ್ಲಿ ಆಚರಣೆಗೆ ಬಂದಿದೆ. ಅಕ್ಷಯ ತೃತೀಯಾ ದಿನದಂದು ಬಹುಮೂಲ್ಯದ ವಸ್ತುಗಳಾದ ಬಂಗಾರ ಮತ್ತು ಬೆಳ್ಳಿಯನ್ನು ಕೊಳ್ಳುವುದಕ್ಕೆ ಇದುವೇ ಮೂಲ. ಈ ದಿನ ಕೊಂಡಿದ್ದು ಅಕ್ಷಯವಾಗುತ್ತದೆ ಎಂಬ ನಂಬಿಕೆ. ನಿಜವೆಂದರೆ ಯಾವುದನ್ನು ಕೂಡಿಡುತ್ತೇವೆಯೋ ಅದಲ್ಲ ಅಕ್ಷಯವಾಗುವುದು, ಬದಲಿಗೆ ಯಾವುದನ್ನು ದಾನ ಮಾಡುತ್ತೇವೆಯೋ ಅದು ಅಕ್ಷಯವಾಗುತ್ತದೆ ಎಂಬುದು ಶಾಸ್ತ್ರಗಳ ಮಾತು. ಹಾಗಾಗಿ ಅಕ್ಷಯ ತೃತೀಯಾ ದಿನದಂದು ಸಮಾಜದ ನಾನಾ ವಿಭಾಗಗಳಿಗೆ ದಾನಧರ್ಮಾದಿಗಳ ಮೂಲಕ ಸಹಾಯ ಮಾಡುವವರು ಇವತ್ತಿಗೂ ಇದ್ದಾರೆ.

ಯಾವುದೇನೇ ಇದ್ದರೂ ವರ್ತಮಾನಕಾಲದಲ್ಲಿ ಅಕ್ಷಯತೃತೀಯಾ ದಿನವು ಭಾರತದ ಬಂಗಾರ ಮಾರುಕಟ್ಟೆಯನ್ನು ತೀವ್ರವಾದ ಸಂಚಲನಕ್ಕೆ ಒಡ್ಡುವ ದಿನವಾಗಿ ಬೆಳೆದಿದ್ದು ದಿಟ. ಭಾರತದ ಸ್ವರ್ಣಪ್ರೇಮಕ್ಕೆ ಇದೊಂದು ನಿದರ್ಶನವೂ ಹೌದು.

ದಾನ ಮಾಡುವುದಾದರೂ ಸರಿ, ಬಂಗಾರವನ್ನು ಕೊಳ್ಳುವುದಾದರೂ ಸರಿ – ಅಕ್ಷಯ ನೆಮ್ಮದಿಯ ಸೂತ್ರವೊಂದು ಈ ದಿನದ ನೆವದಲ್ಲಿ ಎಲ್ಲರಿಗೂ ದೊರೆಯುವಂತಾದರೆ ಅದು ಪರಮಭಾಗ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT