ನವದೆಹಲಿ: ಅದಾನಿ ಷೇರು ಹಗರಣದಲ್ಲಿ ಸೆಬಿ ಅಧ್ಯಕ್ಷೆ ಮತ್ತು ಅವರ ಪತಿ ಧವಲ್ ಪಾತ್ರವಿರುವ ಬಗ್ಗೆ ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ಆರೋಪದ ಬೆನ್ನಲ್ಲೇ ಅದಾನಿ ಸಮೂಹದ ಎಲ್ಲ ಷೇರುಗಳ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಅದಾನಿ ಎನರ್ಜಿ ಶೇಕಡ 17ರಷ್ಟು ಕುಸಿತದೊಂದಿಗೆ ವಹಿವಾಟು ಆರಭಿಸಿದೆ ಎಂದು ವರದಿ ತಿಳಿಸಿದೆ.
ಅದಾನಿ ಷೇರುಗಳು ವಾಸ್ತವ ಬೆಲೆಗಿಂತ ಕೃತಕ ಬೆಲೆಗೆ ಮಾರಾಟವಾದ ಹಗರಣದಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಪಾತ್ರವಿದೆ. ಅವರಿಬ್ಬರು ಬರ್ಮುಡಾ ಮತ್ತು ಮಾರಿಷಸ್‌ನಲ್ಲಿ ಅಕ್ರಮ ಹೂಡಿಕೆ ಮಾಡಿದ್ದಾರೆ ಎಂದೂ ಹಿಂಡೆನ್ ಆರೋಪಿಸಿತ್ತು.
ಬಿಎಸ್‌ಇಯ ಅದಾನಿ ಎನರ್ಜಿ ಸಲ್ಯೂಷನ್ ಶೇಕಡ 17 ರಷ್ಟು, ಅದಾನಿ ಟೋಟಲ್ ಗ್ಯಾಸ್ ಶೇಕಡ 13.39 ಮತ್ತು ಎನ್‌ಡಿಟಿವಿ ಷೇರುಗಳ ಬೆಲೆಯಲ್ಲಿ ಶೇಕಡ 11ರಷ್ಟು ಕುಸಿತ ಕಂಡಿದೆ. ಅದಾನಿ ಪವರ್ ಶೇಕಡ 10.94ರಷ್ಟು ಕುಸಿತ ಕಂಡಿದೆ.
ಅದಾನಿ ಗ್ರೀನ್ ಎನರ್ಜಿ ಶೇಕಡ 6.96ರಷ್ಟು, ಅದಾನಿ ವಿಲ್ಮರ್ ಶೇಕಡ 6.49ರಷ್ಟು, ಅದಾನಿ ಎಂಟರ್‌ಪ್ರೈಸ್ ಶೇಕಡ 5.43, ಅದಾನಿ ಪೋರ್ಟ್ಸ್ ಶೇಕಡ 4.95ರಷ್ಟು, ಅಂಬುಜಾ ಸಿಮೆಂಟ್ ಶೇಕಡ 2.53ರಷ್ಟು ಮತ್ತು ಎಸಿಸಿ 2.42ರಷ್ಟು ಆರಂಭಿಕ ವಹಿವಾಟಿನಲ್ಲಿ ಕುಸಿತ ದಾಖಲಿಸಿದ್ದವು.
ಸೆಬಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಬುಚ್ ದಂಪತಿ, ಹಿಂಡೆನ್‌ವರ್ಗ್ ಆರೋಪವು ಸೆಬಿ ಮೇಲಿನ ವಿಶ್ವಾಸಾರ್ಹತೆಯ ಮೇಲಿನ ದಾಳಿ ಮತ್ತು ನಮ್ಮ ಹೆಸರು ಹಾಳುಮಾಡುವ ಯತ್ನ ಎಂದು ದೂರಿದ್ದಾರೆ.
ಸೋಮವಾರ ಆರಂಭಿಕ ವಹಿವಾಟಿನಲ್ಲೇ 30 ಷೇರುಗಳ ಬಿಎಸ್‌ಇ 479.78 ಅಂಶ ಕುಸಿದು, 79,226.13ರಲ್ಲಿ ವಹಿವಾಟು ಆರಂಭಿಸಿದರೆ, ಎನ್‌ಎಸ್‌ಇ ನಿಫ್ಟಿ 155.4 ಅಂಶಗಳಷ್ಟು ಕುಸಿದು, 24,212.10ರಲ್ಲಿ ವಹಿವಾಟು ಆರಂಭಿಸಿತು.