ಭಾನುವಾರ, ಜನವರಿ 19, 2020
20 °C
ಆರಂಭದಲ್ಲೇ ರೈತರಿಗೆ ಹರ್ಷ ತಂದ ಹೊಸ ವರ್ಷ

₹35 ಸಾವಿರ ದಾಟಿದ ಅಡಿಕೆ ಧಾರಣೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಅಧಿಕ ಮಳೆ, ರೋಗಬಾಧೆ ಪರಿಣಾಮ ಈ ಬಾರಿ ಅಡಿಕೆ ಇಳುವರಿ ಶೇ 40ರಷ್ಟು ಕುಂಠಿತವಾಗಿದ್ದು, ಮೂರು ವರ್ಷಗಳ ನಂತರ ಧಾರಣೆ ಮತ್ತೆ ಏರುಗತಿಯಲ್ಲಿ ಸಾಗಿದೆ. 

ಆಗಸ್ಟ್ ನಂತರ ನವೆಂಬರ್‌ವರೆಗೆ ನಿರಂತರ ಸುರಿದ ಮಳೆಯ ಪರಿಣಾಮ ಮಲೆನಾಡು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಡಿಕೆ ಮರಗಳು ರೋಗಗಳಿಗೆ ತುತ್ತಾಗಿವೆ. ಇಳುವರಿ ಗಣನೀಯವಾಗಿ ಕುಸಿದಿದೆ. ಹಲವೆಡೆ ಫಲಕ್ಕೆ ಬಂದ ಇಳುವರಿಯನ್ನೂ ಸಕಾಲಕ್ಕೆ ಕೊಯ್ಲು ಮಾಡಲು ಸಾಧ್ಯವಾಗದೆ ಗೋಟಾಗಿವೆ.

ರಾಜ್ಯದಲ್ಲಿ ಪ್ರತಿ ವರ್ಷ 4 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ಪ್ರತಿ ಎಕರೆಗೆ 7 ಕ್ವಿಂಟಲ್‌ನಿಂದ 8 ಕ್ವಿಂಟಲ್‌ವರೆಗೆ ಇಳುವರಿ ಸಿಗುತ್ತಿತ್ತು. ದರ ಏರಿಕೆ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಮಾರಾಟ ಮಾಡದೇ ಮೂರು ವರ್ಷಗಳಿಂದ ಅಡಿಕೆ ಸಂಗ್ರಹಿಸಿ ಇಟ್ಟುಕೊಂಡಿದ್ದರು. ಇದರಿಂದ ವರ್ತಕರು, ಪಾನ್‌ಮಸಾಲ ಕಂಪನಿಗಳ ಬಳಿಯೂ ಸಂಗ್ರಹ ಕುಸಿದಿದೆ. ಇದರ ಪರಿಣಾಮವಾಗಿ ನಿರೀಕ್ಷೆಯಂತೆಯೇ ಅಡಿಕೆ ಧಾರಣೆ ಭಾರಿ ಏರಿಕೆ ಕಾಣುತ್ತಿದೆ.

ಅಡಿಕೆ ಧಾರಣೆ 2010ರವರೆಗೂ ಕ್ವಿಂಟಲ್‌ಗೆ ₹ 10 ಸಾವಿರದಿಂದ ₹ 15 ಸಾವಿರದ ಆಸುಪಾಸು ಇತ್ತು. 2014–15ರಲ್ಲಿ ಅದು ₹ 1 ಲಕ್ಷದ ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.

ಅಡಿಕೆ ಪ್ರದೇಶ ವಿಸ್ತರಣೆ, ಅಡಿಕೆ ಹಾನಿಕಾರಕ ಎಂದು ಕೇಂದ್ರ ಸರ್ಕಾರವೇ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದು, ಕೆಲವು ರಾಜ್ಯಗಳಲ್ಲಿ ಗುಟ್ಕಾ ನಿಷೇಧ, ವಿದೇಶಿ ಅಡಿಕೆ ಕಳ್ಳ ಸಾಗಣೆ ಮತ್ತಿತರ ಕಾರಣಗಳಿಂದ ಧಾರಣೆ ಕುಸಿತದತ್ತ ಸಾಗಿತ್ತು. 

ಚೇತರಿಕೆಯತ್ತ ಧಾರಣೆ: ಮೂರು ವರ್ಷಗಳಿಂದ ಧಾರಣೆ ₹ 30 ಸಾವಿರದಿಂದ ₹ 35 ಸಾವಿರದವರೆಗೆ ಇತ್ತು. 2020 ಆರಂಭವಾಗುತ್ತಿದ್ದಂತೆ ಮೊದಲ ದಿನದಿಂದಲೇ ಅಡಿಕೆ ಧಾರಣೆ ಚೇತರಿಕೆಯತ್ತ ಸಾಗಿದೆ.

ಜನವರಿ 1ರಂದು ₹ 35,552ಕ್ಕೆ ಏರಿಕೆಯಾಗಿದ್ದ ಧಾರಣೆ ನಂತರದ ದಿನಗಳಲ್ಲಿ ₹ 36,200, ₹ 36,700, ₹ 37,299ಕ್ಕೆ ಜಿಗಿದಿದೆ. ದಾವಣಗೆರೆ ಎಪಿಎಂಸಿಯಲ್ಲಿ ಜ. 3ರಂದು ₹ 35,709 ಗರಿಷ್ಠ ಧಾರಣೆಯಿದ್ದ ಅಡಿಕೆ ಬೆಲೆಯು ಅ. 10ರಂದು ₹ 36,259ಕ್ಕೆ ಏರಿಕೆಯಾಗಿದೆ. ಚನ್ನಗಿರಿಯ ತುಮ್ಕೋಸ್‌ನಲ್ಲಿ ಅದೇ ದಿನ ಗರಿಷ್ಠ ₹ 36,372 ಧಾರಣೆಯಾಗಿತ್ತು.

ನಾಲ್ಕು ವರ್ಷಗಳ ಹಿಂದೆ ಉತ್ತಮ ಧಾರಣೆ ಸಿಕ್ಕರೂ ರೈತರ ಬಳಿ ಆವಕ ಇರಲಿಲ್ಲ. ಮಧ್ಯವರ್ತಿಗಳಿಗೆ ಅಧಿಕ ಲಾಭವಾಗಿತ್ತು. ಬೇಗನೆ ಮಾರಾಟ ಮಾಡಿ ಕೈಸುಟ್ಟುಕೊಂಡ ನಂತರ ಬೆಳೆಗಾರರೂ ಸಂಗ್ರಹಣೆಯತ್ತ  ಗಮನ ಹರಿಸಿದ್ದರು.

‘ಸಾಲ ಮಾಡಿದರೂ ಸರಿ ಉತ್ತಮ ಧಾರಣೆ ಸಿಗುವವರೆಗೂ ಮಾರಾಟ ಮಾಡಬಾರದು ಎಂದು ನಿರ್ಧರಿಸಿದ್ದೆವು. ಎರಡು–ಮೂರು ವರ್ಷ ಸಂಯಮ ವಹಿಸಿದ್ದಕ್ಕೆ ಈಗ ಫಲ ದೊರೆಯುತ್ತಿದೆ. ₹ 40 ಸಾವಿರ ದಾಟುವ ನಿರೀಕ್ಷೆ ಇದೆ. ನಂತರವೇ ಸಂಗ್ರಹ ಮಾರಾಟ ಮಾಡುವ ಕುರಿತು ಚಿಂತಿಸುತ್ತೇವೆ’ ಎನ್ನುತ್ತಾರೆ ತರಗನಹಳ್ಳಿಯ ರೈತರಾದ ಬಸವರಾಜ್, ರುದ್ರೇಶ್.

***

ಈ ವರ್ಷ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಅಡಿಕೆ ಬಂದಿದೆ. ಇಳುವರಿ ಕಡಿಮೆ ಇರುವ ಕಾರಣ ಸಹಜವಾಗಿ ಧಾರಣೆ ಏರಿಕೆ ಕಾಣುತ್ತಿದೆ
-ಕೆ.ಸಿ.ಮಲ್ಲಿಕಾರ್ಜುನ,ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಕಾರ್ಯದರ್ಶಿ

****

 

ಧಾರಣೆ ವಿವರ (₹ ಗಳಲ್ಲಿ)

ವರ್ಷ;ಬೆಲೆ

2013;28,797

2014;99,190

2015;87,575

2016;39,650

2017;36,499

2018;33,869

2019;35,899

2020;37,299

ಪ್ರತಿಕ್ರಿಯಿಸಿ (+)