ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2023–24ರ ಹಣಕಾಸು ವರ್ಷ: ₹20 ಲಕ್ಷ ಕೋಟಿ ಉದ್ಯಮದ ಗಾತ್ರ

ಜಿಎಸ್‌ಟಿಗೆ ವಾಹನದ ಉದ್ಯಮ ಕೊಡುಗೆ ಶೇ 15ರಷ್ಟು: ಎಸ್‌ಐಎಎಂ
Published : 9 ಸೆಪ್ಟೆಂಬರ್ 2024, 15:53 IST
Last Updated : 9 ಸೆಪ್ಟೆಂಬರ್ 2024, 15:53 IST
ಫಾಲೋ ಮಾಡಿ
Comments

ನವದೆಹಲಿ: ದೇಶದ ವಾಹನ ಉದ್ಯಮದ ಗಾತ್ರವು 2023–24ರ ಹಣಕಾಸು ವರ್ಷದಲ್ಲಿ ₹20 ಲಕ್ಷ ಕೋಟಿ ದಾಟಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟದ (ಎಸ್‌ಐಎಎಂ) ಅಧ್ಯಕ್ಷ ವಿನೋದ್‌ ಅಗರ್ವಾಲ್ ಹೇಳಿದ್ದಾರೆ. 

ದೇಶದ ಒಟ್ಟು ಜಿಎಸ್‌ಟಿ ವರಮಾನದಲ್ಲಿ ವಾಹನ ಉದ್ಯಮದ ಪಾಲು ಶೇ 14–15ರಷ್ಟು ಇದೆ. ಜೊತೆಗೆ ವಲಯವು ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಭಾರತೀಯ ವಾಹನ ಬಿಡಿಭಾಗಗಳ ತಯಾರಕರ ಒಕ್ಕೂಟದ (ಎಸಿಎಂಎ) 64ನೇ ವಾರ್ಷಿಕ ಸಮಾವೇಶದಲ್ಲಿ ಸೋಮವಾರ ಹೇಳಿದರು.

ದೇಶದ ಜಿಡಿಪಿಗೆ ಈ ಉದ್ಯಮವು ಪ್ರಸ್ತುತ ಶೇ 6.8ಕ್ಕಿಂತ ಹೆಚ್ಚು ಕೊಡುಗೆ ನೀಡಲಿದೆ. ಜಾಗತಿಕವಾಗಿ ದೇಶದ ವಾಹನ ಉದ್ಯಮವು ಪ್ರಗತಿ ಕಾಣುತ್ತಿದೆ ಎಂದು ಹೇಳಿದರು.

ಆಮದು ಅವಲಂಬನೆ ತಗ್ಗಿಸಲು, ಸ್ಥಳೀಯ ಉತ್ಪಾದನೆ ಹೆಚ್ಚಿಸಲು ವಲಯವು 50 ನಿರ್ಣಾಯಕ ಘಟಕಗಳನ್ನು ಗುರುತಿಸಲಾಗಿದೆ. ಎಸ್‌ಐಎಎಂ ಮತ್ತು ಎಸಿಎಂಎ ಸ್ಥಳೀಯವಾಗಿ ತಯಾರಿಕೆ ಹೆಚ್ಚಿಸಲು ಆರಂಭಿಸಿದೆ.‌ 2019–20ರಲ್ಲಿ ಶೇ 60ರಷ್ಟು ಆಮದು ಪ್ರಮಾಣವಿತ್ತು. ಇದನ್ನು 2024–25ರ ವೇಳೆಗೆ ಶೇ 20ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ದೇಶದಲ್ಲಿ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ನಂತಹ ವಸ್ತುಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.

ಇದಲ್ಲದೆ, ಗ್ಯಾಸೋಲಿನ್ ಮತ್ತು ಡೀಸೆಲ್‌ನಂತಹ ಸಾಂಪ್ರದಾಯಿಕ ಆಂತರಿಕ ದಹನಕಾರಿ ಎಂಜಿನ್ (ಇಂಟರ್‌ನಲ್‌ ಕಂಬಷನ್ ಎಂಜಿನ್‌) ತಂತ್ರಜ್ಞಾನಗಳಲ್ಲಿ ಪರಿಣತಿಯನ್ನು ಹೊಂದಿರುವ ಉದ್ಯಮವು, ಈಗ ಸಿಎನ್‌ಜಿ ಮತ್ತು ಎಲೆಕ್ಟ್ರಿಫೈಡ್ ವಾಹನಗಳಾದ ವಿದ್ಯುತ್‌ ಚಾಲಿತ ಹಾಗೂ ಹೈಬ್ರಿಡ್‌ ವಾಹನಗಳನ್ನು ಅಭಿವೃದ್ಧಿಪಡಿಸಿದೆ ಎಂದು ಅಗರ್ವಾಲ್ ಹೇಳಿದರು.

‘ಉದ್ಯಮವು ಆಟೊಮೋಟಿವ್ ಮಿಷನ್ ಯೋಜನೆಯ ಮೂರನೇ ಆವೃತ್ತಿಯನ್ನು ಎದುರು ನೋಡುತ್ತಿದೆ’ ಎಂದು ಎಸಿಎಂಎ ಅಧ್ಯಕ್ಷೆ ಶ್ರದ್ಧಾ ಸೂರಿ ಮರ್ವಾಹ್ ಹೇಳಿದರು. ಕೌಶಲ ಕೊರತೆ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳ ಪಾಲನೆಯಲ್ಲಿ ಉದ್ಯಮವು ವಿವಿಧ ಸವಾಲುಗಳನ್ನು ಎದುರಿಸುತ್ತಿದೆ. ಆದ್ದರಿಂದ, ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಯೋಗ ಮತ್ತು ಕೌಶಲ ಅಭಿವೃದ್ಧಿಗೆ ಹೂಡಿಕೆ ಅಗತ್ಯವಾಗಿದೆ. ಜೊತೆಗೆ, ಉದ್ಯಮದ ಸಹಯೋಗವು ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT