ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಿಮಾನ ಇಂಧನ (ಎಟಿಎಫ್) ದರವನ್ನು ಶುಕ್ರವಾರ ಶೇ 14ರಷ್ಟು ಹೆಚ್ಚಿಸಿವೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರುವ ಬದಲಾವಣೆಗೆ ಅನುಗುಣವಾಗಿ ದರ ಹೆಚ್ಚಳ ಮಾಡಲಾಗಿದೆ ಎಂದು ಕಂಪನಿಗಳು ತಿಳಿಸಿವೆ.
ದೆಹಲಿಯಲ್ಲಿ ವಿಮಾನ ಇಂಧನ ದರವು ಪ್ರತಿ ಕಿಲೋ ಲೀಟರಿಗೆ ₹13,911ರಷ್ಟು ಹೆಚ್ಚಾಗಿದ್ದು, ₹1.2 ಲಕ್ಷಕ್ಕೆ ತಲುಪಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸ ಆಗುತ್ತದೆ.
ಈ ಹಿಂದೆ ಜುಲೈ 1ರಂದು ಕಿಲೋ ಲೀಟರಿಗೆ ₹1,477 ಮತ್ತು ಆಗಸ್ 1ರಂದು ಕಿಲೋ ಲೀಟರಿಗೆ ₹7,728ರಷ್ಟು ದರ ಹೆಚ್ಚಿಸಲಾಗಿತ್ತು. ಶುಕ್ರವಾರದ ದರ ಹೆಚ್ಚಳವನ್ನು ಒಳಗೊಂಡು ಕಿಲೋ ಲೀಟರಿಗೆ ಒಟ್ಟು ₹23,116ರಷ್ಟು ಏರಿಕೆ ಆಗಿದೆ.