ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶದ ಹಾದಿಯಲ್ಲಿನ ವಿಪ್ರೊ ಸಾಧನೆ ಸ್ಮರಣೆ

ಸಂಸ್ಥೆಯ ಷೇರುದಾರರಿಗೆ ಅಜೀಂ ಪ್ರೇಮ್‌ಜಿ ಕೊನೆಯ ಪತ್ರ
Last Updated 16 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆಯಾಗಿರುವ ವಿಪ್ರೊದ ಅಧ್ಯಕ್ಷ ಹುದ್ದೆಯಿಂದ ಇದೇ 31ರಂದು ನಿವೃತ್ತರಾಗಲಿರುವ ಅಜೀಂ ಪ್ರೇಮ್‌ಜಿ ಅವರು ಸಂಸ್ಥೆಯ ಷೇರುದಾರರಿಗೆ ಬರೆದಿರುವ ಕೊನೆಯ ಪತ್ರದಲ್ಲಿ ಸಂಸ್ಥೆ ಜತೆಗಿನ ತಮ್ಮ ಐದು ದಶಕಗಳ ಒಡನಾಟ ಸ್ಮರಿಸಿಕೊಂಡು, ಸಂಸ್ಥೆಯ ಬೆಳವಣಿಗೆಗೆ ಕಾರಣರಾದವರಿಗೆಲ್ಲ ಧನ್ಯವಾದ ಹೇಳಿದ್ದಾರೆ.

‘ಐ.ಟಿ ಕ್ಷೇತ್ರದಲ್ಲಿನ ಜಾಗತಿಕ ಬದಲಾವಣೆಗಳಿಗೆ ನಿರಂತರವಾಗಿ ಸ್ಪಂದಿಸುತ್ತ ಹೊಸ ಎತ್ತರಕ್ಕೆ ಏರುವ ಹಾದಿಯಲ್ಲಿ ಸಂಸ್ಥೆಯು ಮೌಲ್ಯಗಳಿಗೆ ಯಾವತ್ತೂ ಬದ್ಧತೆ ತೋರಿದೆ. ಷೇರುದಾರರ ಸಂಪತ್ತು ಹೆಚ್ಚಿಸುತ್ತಲೇ ಬಂದಿರುವ ಸಂಸ್ಥೆ ಈಗ 75ನೆ ವರ್ಷಕ್ಕೆ ಕಾಲಿಟ್ಟಿದೆ. ಸಂಸ್ಥೆಯ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲುಗಲ್ಲು ಆಗಿದೆ. ಸಾಮಾಜಿಕ ಹೊಣೆಗಾರಿಕೆ, ನೈತಿಕತೆ ಮತ್ತು ನಿರಂತರ ಯಶೋಗಾಥೆಗೆ ಸಂಸ್ಥೆಯು ಆದರ್ಶವಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ.

ನಮ್ಮಷ್ಟಕ್ಕೆ ನಾವು, ಸದಾ ಹೊಸತನಕ್ಕೆ ತೆರೆದುಕೊಳ್ಳುತ್ತ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತ ನಿರಂತರವಾಗಿ ಬೆಳೆಯುತ್ತ ಬಂದಿದ್ದೇವೆ. ಇದಕ್ಕೆಲ್ಲ ಸಂಸ್ಥೆಯ ಸಿಬ್ಬಂದಿಯ ಕಠಿಣ ಪರಿಶ್ರಮ, ಬದ್ಧತೆ ಮತ್ತು ಇತರ ಪ್ರಮುಖ ಮೌಲ್ಯಗಳು ನಮ್ಮ ದಾರಿ ದೀಪಗಳಾಗಿರುವುದೇ ಕಾರಣ.

ಡಿಜಿಟಲ್‌, ಕ್ಲೌಡ್‌, ಎಂಜಿನಿಯರಿಂಗ್‌ ಸರ್ವಿಸಸ್‌ ಮತ್ತು ಸೈಬರ್ ಸುರಕ್ಷತೆ ತಂತ್ರಜ್ಞಾನಗಳು ಭವಿಷ್ಯದಲ್ಲಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಲಿವೆ. ಈ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿಕೆ ಮಾಡಲು ಸಂಸ್ಥೆ ನಿರ್ಧರಿಸಿದೆ.

ಸಂಸ್ಥೆಯ ಷೇರುದಾರರ ಸಂಪತ್ತು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ಈ ವರ್ಷದ ಮಾರ್ಚ್‌ ಅಂತ್ಯದ ವೇಳೆಗೆ ನಮ್ಮ ಪ್ರತಿ ಷೇರಿನ ಗಳಿಕೆಯು (ಇಪಿಎಸ್‌) ವರ್ಷದಿಂದ ವರ್ಷಕ್ಕೆ ಶೇ 18.6ರಷ್ಟು ಏರಿಕೆಯಾಗಿದೆ. ಪ್ರತಿ 3 ಷೇರಿಗೆ ಒಂದು ಬೋನಸ್‌ ಷೇರು ನೀಡಲಾಗಿದೆ. ₹ 10,500 ಕೋಟಿ ಮೊತ್ತದ ಷೇರು ಮರು ಖರೀದಿಸಲಾಗಿದೆ. ಸಂಪತ್ತು ಮತ್ತು ದಾನಧರ್ಮಕ್ಕೆ ಸಂಬಂಧಿಸಿದಂತೆ ನಾವು ಸಮಾಜಕ್ಕೆ ಸೇರಿದ ಸಂಪತ್ತಿನ ಧರ್ಮದರ್ಶಿಗಳಾಗಿರಬೇಕೆ ಹೊರತು ಮಾಲೀಕರಲ್ಲ ಎನ್ನುವುದು ನನ್ನ ಧೋರಣೆಯಾಗಿದೆ. ಇಲ್ಲಿಯವರೆಗೆ ದಾನ ಧರ್ಮದ ಉದ್ದೇಶಕ್ಕೆ ಸಂಸ್ಥೆಯು ₹ 1.47 ಲಕ್ಷ ಕೋಟಿ ದೇಣಿಗೆ ನೀಡಿದೆ.

ಸಂಸ್ಥೆಯ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ಮತ್ತು ಸ್ಥಾಪಕ ಅಧ್ಯಕ್ಷನಾಗಿ ನಾನು ಮುಂದುವರೆಯುವೆ. ಇನ್ನು ಮುಂದೆ ನನ್ನೆಲ್ಲ ಸಮಯ ಮತ್ತು ಶಕ್ತಿಯನ್ನು ಪ್ರೇಮ್‌ಜಿ ಫೌಂಡೇಷನ್ನಿನ ದತ್ತಿ ಕಾರ್ಯಕ್ರಮಗಳಿಗೆ ಮೀಸಲಿಡುವೆ. 1966ರಿಂದ ಇಲ್ಲಿಯವರೆಗೆ ಸಂಸ್ಥೆಯನ್ನು ಮುನ್ನಡೆಸಿರುವುದು ನನ್ನ ಬದುಕಿನಲ್ಲಿ ದೊರೆತ ಅತಿದೊಡ್ಡ ಅವಕಾಶವಾಗಿತ್ತು. ಸಂಸ್ಥೆಯು ಈ ಹಂತಕ್ಕೆ ಬೆಳೆದು ನಿಲ್ಲಲು ಕಾರಣವಾದ ಎಲ್ಲ ಸಿಬ್ಬಂದಿಗೆ ಮತ್ತು ಅವರ ಕುಟುಂಬಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮಲ್ಲಿ ವಿಶ್ವಾಸ ಇರಿಸಿದ ಗ್ರಾಹಕರು, ಪಾಲುದಾರರು ಮತ್ತು ಷೇರುದಾರರಿಗೆಲ್ಲ ನಾನು ಆಭಾರಿಯಾಗಿರುವೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT