ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಾಜ್ ಗ್ರೂಪ್ ಮಾಜಿ ಅಧ್ಯಕ್ಷ, ಉದ್ಯಮಿ ರಾಹುಲ್ ಬಜಾಜ್ ನಿಧನ

Last Updated 12 ಫೆಬ್ರುವರಿ 2022, 13:54 IST
ಅಕ್ಷರ ಗಾತ್ರ

ಪುಣೆ: ಖ್ಯಾತ ಉದ್ಯಮಿ, ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ಶನಿವಾರ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಬಜಾಜ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ರಾಹುಲ್ ಬಜಾಜ್ 1965ರಲ್ಲಿ ಬಜಾಜ್ ಗ್ರೂಪ್‌ನ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರ ಆಡಳಿತದಲ್ಲಿ ಕಂಪನಿಯು ದೇಶದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿ ಹೊರಹೊಮ್ಮಿತ್ತು.

‘ರಾಹುಲ್ ಬಜಾಜ್ ಅವರು ಇಂದು ಮಧ್ಯಾಹ್ನ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪುಣೆಯಲ್ಲಿ ಭಾನುವಾರ ಅಂತ್ಯಸಂಸ್ಕಾರ ನಡೆಯಲಿದೆ’ ಎಂದು ಬಜಾಜ್ ಗ್ರೂಪ್ ಪ್ರಕಟಣೆ ತಿಳಿಸಿದೆ.

ರಾಹುಲ್ ಬಜಾಜ್ ಅವರು 1938ರ ಜೂನ್ 10ರಂದು ಕೋಲ್ಕತ್ತದಲ್ಲಿ ಜನಿಸಿದ್ದರು. ಇವರ ಅಜ್ಜ ಜಮನಾಲಾಲ್ ಬಜಾಜ್ ಅವರು ಬಜಾಜ್ ಗ್ರೂಪ್‌ ಸಂಸ್ಥಾಪಕರು. ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಜಮನಾಲಾಲ್ ಬಜಾಜ್ ಅವರು ಮಹಾತ್ಮ ಗಾಂಧಿ ಅವರಿಗೆ ಆಪ್ತರಾಗಿದ್ದರು.

ರಾಹುಲ್ ಬಜಾಜ್ ಅವರು ಮುಂಬೈಯ ‘ಕ್ಯಾಥೆಡ್ರಲ್ ಆ್ಯಂಡ್ ಜಾನ್ ಕ್ಯಾನನ್ ಸ್ಕೂಲ್’, ದೆಹಲಿಯ ಸೈಂಟ್ ಸ್ಟೀಫನ್ಸ್ ಕಾಲೇಜು ಹಾಗೂ ಮುಂಬೈಯ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಅಧ್ಯಯನ ನಡೆಸಿದ್ದರು.

ಅಮೆರಿಕದ ‘ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌’ನಲ್ಲಿಯೂ ವ್ಯಾಸಂಗ ಮಾಡಿದ್ದರು.

‘ಇಂಡಿಯನ್ ಏರ್‌ಲೈನ್ಸ್‌’ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ’ ಇದರ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅಂತರರಾಷ್ಟ್ರೀಯ ಉದ್ಯಮ ಮಂಡಳಿಯ ಅಧ್ಯಕ್ಷರಾಗಿದ್ದೂ ಸೇರಿದಂತೆ ವಿಶ್ವಮಟ್ಟದಲ್ಲಿ ಅನೇಕ ಜವಾಬ್ದಾರಿಗಳನ್ನೂ ನಿರ್ವಹಿಸಿದ್ದರು.

2008ರಲ್ಲಿ ಬಜಾಜ್ ಆಟೊ ಮೂರು ಘಟಕಗಳಾಗಿ ವಿಂಗಡಣೆಯಾಗಿತ್ತು. ಸದ್ಯ, ರಾಹುಲ್ ಬಜಾಜ್ ಅವರ ಮಕ್ಕಳಾದ ರಾಜೀವ್ ಬಜಾಜ್ ಮತ್ತು ಸಂಜೀವ್ ಬಜಾಜ್ ಕಂಪನಿಯ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.

ರಾಜ್ಯಸಭೆಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದ ರಾಹುಲ್ ಬಜಾಜ್ ಅವರು ಉದ್ಯಮ ಕ್ಷೇತ್ರದಲ್ಲಿ ಮಾಡಿದ್ದ ಸಾಧನೆ ಗುರುತಿಸಿ ಭಾರತ ಸರ್ಕಾರವು ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT