ಗುರುವಾರ , ಮಾರ್ಚ್ 4, 2021
23 °C

ಆರ್ಥಿಕ ಬೆಳವಣಿಗೆಗೆ ಖಾಸಗಿ ವಲಯ ಚಾಲಕ ಶಕ್ತಿ: ನಿರ್ಮಲಾ ಸೀತಾರಾಮನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದೇಶದ ಆರ್ಥಿಕ ಬೆಳವಣಿಯಲ್ಲಿ ಖಾಸಗಿ ವಲಯವು ಪ್ರಮುಖ ಚಾಲಕ ಶಕ್ತಿಯಾಗಿದೆ. ಕೇಂದ್ರ ಸರ್ಕಾರವು ಅದಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುವ ಪಾತ್ರವನ್ನು ವಹಿಸಿದೆ ಎನ್ನುವುದನ್ನು ಬಜೆಟ್‌ ಮೂಲಕ ತಿಳಿಸಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಬೆಂಗಳೂರು ಚೇಂಬರ್ ಆಫ್‌ ಇಂಡಸ್ಟ್ರಿ ಆ್ಯಂಡ್‌ ಕಾಮರ್ಸ್‌ (ಬಿಸಿಐಸಿ) ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ‘ಆರ್ಥಿಕ ಬೆಳವಣಿಗೆಯಲ್ಲಿ ಖಾಸಗಿ ವಲಯದ ಪಾಲುದಾರಿಕೆ ಬಹಳ ಮುಖ್ಯ. ಈ ವಲಯವನ್ನು ಸಮರ್ಥವಾಗಿಸದೇ ಹೋದರೆ ಹಾಗೂ ಅದಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸದೇ ಇದ್ದರೆ ಭಾರತವು ದೊಡ್ಡ ಅವಕಾಶ ಕಳೆದುಕೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯ ಮಾತ್ರದಿಂದಲೇ ದೇಶದ ಬೆಳವಣಿಗೆ ಮತ್ತು ವಿವಿಧ ವಲಯಗಳ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಸರ್ಕಾರಿ–ಖಾಸಗಿ ಸಹಭಾಗಿತ್ವದಿಂದ ಕೊರೊನಾ ಲಸಿಕೆ ಲಭ್ಯವಾಗುವಂತೆ ಮಾಡಿರುವುದು ಇದಕ್ಕೆ ಅತಿದೊಡ್ಡ ಉದಾಹರಣೆ ಆಗಿದೆ ಎಂದರು.

‘ಕಂಪನಿಗಳು ಡಿಜಿಟಲ್‌ ವಸಾಹತು ಆಗುವ ಬದಲು ದೇಶದಲ್ಲಿಯೇ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎನ್ನುವುದನ್ನು ದೇಶ ಬಯಸುತ್ತದೆ’ ಎಂದು ಮಣಿಪಾಲ್‌ ಗ್ಲೋಬಲ್ ಎಜುಕೇಷನ್‌ ಸರ್ವೀಸ್‌ನ ಅಧ್ಯಕ್ಷ ಟಿ.ವಿ. ಮೋಹನ್‌ದಾಸ್ ಪೈ ಹೇಳಿದರು.

‘ಈಗಲೂ ಶೇ 90ಕ್ಕೂ ಹೆಚ್ಚು ಐ.ಟಿ. ಸಿಬ್ಬಂದಿ ಮನೆಯಿಂದಲೇ ಕೆಲಸ’

ಲಾಕ್‌ಡೌನ್‌ ಜಾರಿಯಲ್ಲಿದ್ದಾಗ ತಂತ್ರಜ್ಞಾನ ಉದ್ಯಮದ ಶೇ 90ಕ್ಕೂ ಅಧಿಕ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ ನಿರ್ಬಂಧ ತೆರವಾದ ಬಳಿಕ ಈಗಲೂ ಅಷ್ಟೇ ಪ್ರಮಾಣದ ನೌಕರರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ತಿಳಿಸಿದರು.

‘ಕಚೇರಿ ಮತ್ತು ಮನೆಯಿಂದ ಕೆಲಸ ಮಾಡುವ ಹೈಬ್ರಿಡ್‌ ಮಾದರಿಯ ಮಹತ್ವವನ್ನು ಐ.ಟಿ ಉದ್ಯಮ ಮತ್ತು ಸರ್ಕಾರ ಗ್ರಹಿಸಿವೆ. ಹೈಬ್ರಿಡ್‌ ಮಾದರಿಯಲ್ಲಿ ಸಾಂಕ್ರಾಮಿಕದ ಅಂತ್ಯವಾದ ಬಳಿಕವೂ ಜನರು ಭಾಗಶಃ ಕಚೇರಿಯಿಂದ ಮತ್ತು ಮನೆಯಿಂದ ಕೆಲಸ ಮಾಡುವ ಅವಕಾಶ ಇದೆ. ಇದು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯಾಗಿದೆ. ದೇಶದ ಎಲ್ಲಾ ಭಾಗಗಳಿಂದ ಉತ್ತಮ ಭಾಗವಹಿಸುವಿಕೆಗೆ ಅವಕಾಶ ದೊರೆತಿದೆ. ಮನೆಯಿಂದ ಕೆಲಸ ಮಾಡುವ ಅವಕಾಶವು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಕೆಲಸ ಮಾಡುವಂತೆ ಪ್ರೇರೇಪಿಸುತ್ತಿದೆ’ ಎಂದರು.

ಜನರು ಲೋಕೋಪಕಾರ ಮತ್ತು ದಾನದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರೇಮ್‌ಜಿ ಹೇಳಿದರು. ‘ದಾನ ಮತ್ತು ಲೋಕೋಪಕಾರವು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯದ ಒಂದು ಭಾಗವಾಗಿದೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು