ಲಾನ್‌ಸೆಸ್ಟನ್ (ಆಸ್ಟ್ರೇಲಿಯಾ):ಭಾರತದ ತೈಲ ಸಂಸ್ಕರಣ ಕಂಪನಿಗಳು ರಷ್ಯಾದಿಂದ ಭಾರಿ ಕಡಿಮೆ ದರದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿವೆ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್
ಕಚ್ಚಾ ತೈಲದ ದರಕ್ಕಿಂತ 40 ಡಾಲರ್‌ವರೆಗೆ ಕಡಿಮೆ ದರದಲ್ಲಿ ಖರೀದಿ ಮಾಡಲಾಗುತ್ತಿದೆ.ಸರಕು ವಹಿವಾಟು ವಿಶ್ಲೇಷಣಾ ಸಂಸ್ಥೆ ಕೆಪ್ಲರ್ ಪ್ರಕಾರ, ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲದ ಆಮದು ಮೇ ತಿಂಗಳಲ್ಲಿ ದಾಖಲೆ ಮಟ್ಟ ಮುಟ್ಟಿದೆ. ಜೂನ್‌ನಲ್ಲಿ ಇದು ಇನ್ನೂ ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ.
ಬ್ರೆಂಟ್ ಕಚ್ಚಾ ತೈಲದ ದರವು ಗುರುವಾರ ಪ್ರತಿ ಬ್ಯಾರಲ್‌ಗೆ 113.3 ಡಾಲರ್ ಇತ್ತು. ರಷ್ಯಾದಿಂದ ಆಮದಾಗುವ ಕಚ್ಚಾ ತೈಲಕ್ಕೆ ಪ್ರತಿ ಬ್ಯಾರಲ್‌ಗೆ ಇದಕ್ಕಿಂತ 40 ಡಾಲರ್ ಕಡಿಮೆ ಪಾವತಿಸಲಾಗುತ್ತಿದೆ. ಅಂದರೆ, ಪ್ರತಿ ಬ್ಯಾರಲ್‌ಗೆ ಸುಮಾರು 73 ಡಾಲರ್ ಪಾವತಿಸಲಾಗುತ್ತಿದೆ. 2021ರ ಮೇ ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರವು ಪ್ರತಿ ಬ್ಯಾರಲ್‌ಗೆ 70 ಡಾಲರ್ ಆಸುಪಾಸಿನಲ್ಲಿ ಇತ್ತು. ಆಗ ಭಾರತದಲ್ಲಿ ಪೆಟ್ರೋಲ್ ದರವು ಲೀಟರ್‌ಗೆ ₹93 ಇತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕಡಿಮೆ ಇದ್ದರೂ ಅದನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ ಎಂಬ ಆಕ್ಷೇಪ ಆಗ ಕೇಳಿ ಬಂದಿತ್ತು.
ಮೇ ತಿಂಗಳಲ್ಲಿ ರಷ್ಯಾದಿಂದ ಆಗಿರುವ ಕಚ್ಚಾ ತೈಲ ಆಮದು ಪ್ರತಿ ದಿನಕ್ಕೆ 8,40,645 ಬ್ಯಾರಲ್. ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಇದು 3,88,666 ಬ್ಯಾರಲ್‌ನಷ್ಟು ಹೆಚ್ಚು. ಕಳೆದ ವರ್ಷ ಮೇಯಲ್ಲಿ ರಷ್ಯಾದಿಂದ ಬರುತ್ತಿದ್ದ ಕಚ್ಚಾ ತೈಲವು ಪ್ರತಿ ದಿನಕ್ಕೆ 1,36,774 ಬ್ಯಾರಲ್.
ಜೂನ್ ತಿಂಗಳಲ್ಲಿ ಭಾರತದ ಆಮದು ಪ್ರತಿ ದಿನಕ್ಕೆ 10 ಲಕ್ಷ ಬ್ಯಾರಲ್ ಅನ್ನು ಮೀರಲಿದೆ ಎಂದು ಅಂದಾಜಿ
ಸಲಾಗಿದೆ. ಒಂದೇ ತ್ರೈಮಾಸಿಕದ ಅವಧಿ
ಯಲ್ಲಿ ರಷ್ಯಾದಿಂದ ಭಾರತದ ಆಮದು ತೀವ್ರಗತಿಯಲ್ಲಿ ಏರಿಕೆಯಾಗಲಿದೆ.
ಉಕ್ರೇನ್ ಮೇಲೆ ರಷ್ಯಾವು ಫೆಬ್ರುವರಿ 24ರಿಂದ ದಾಳಿ ಆರಂಭಿಸಿದೆ. ಆ ಕಾರಣದಿಂದ ರಷ್ಯಾದ ಮೇಲೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ದೇಶಗಳು ನಿರ್ಬಂಧ ಹೇರಿವೆ. ಐರೋಪ್ಯ ಒಕ್ಕೂಟದ ಎಲ್ಲ 27 ದೇಶಗಳು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿವೆ ಅಥವಾ ಕಡಿಮೆ ಮಾಡಿವೆ. ಆ ನಷ್ಟವನ್ನು ಸರಿದೂಗಿಸಿಕೊಳ್ಳುವುದಕ್ಕಾಗಿ ರಷ್ಯಾವು ಕಡಿಮೆ ದರದಲ್ಲಿ ತೈಲವನ್ನು ಭಾರತ ಮತ್ತು ಚೀನಾಕ್ಕೆ ಪೂರೈಸುತ್ತಿದೆ.
ಇನ್ನೂ ಕಡಿತಕ್ಕೆ ಒತ್ತಡ
ಕಚ್ಚಾ ತೈಲ ದರದಲ್ಲಿ ಇನ್ನಷ್ಟು ಕಡಿತ ಮಾಡಬೇಕು. ಪ್ರತಿ ಬ್ಯಾರಲ್‌ಗೆ 70 ಡಾಲರ್‌ಗೂ ಕಡಿಮೆಗೆ ತೈಲ ಪೂರೈಸಬೇಕು ಎಂಬ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಭಾರತ ಸರ್ಕಾರದ ಸ್ವಾಮ್ಯದ ಹಿಂದುಸ್ತಾನ್ ಪೆಟ್ರೋಲಿಯಿಂದ ಕಾರ್ಪೊರೇಷನ್‌ನ (ಎಚ್‌ಪಿಸಿಎಲ್) ಅಧ್ಯಕ್ಷ ಪುಷ್ಪಕುಮಾರ್ ಜೋಶಿ ಹೇಳಿದ್ದಾರೆ.
ಯಾವ ಪ್ರಮಾಣದಲ್ಲಿ ತೈಲ ಖರೀದಿ ಮಾಡಲು ಉದ್ದೇಶಿಸಲಾಗಿದೆ ಮತ್ತು ಯಾವ ಪ್ರಮಾಣದ ಕಡಿತಕ್ಕೆ ಬೇಡಿಕೆ ಇರಿಸಲಾಗಿದೆ ಎಂಬುದನ್ನು ತಿಳಿಸಲು ಜೋಶಿ ಅವರು ನಿರಾಕರಿಸಿದ್ದಾರೆ. ಭಾರತದ ತೈಲ ಸಂಸ್ಕರಣ ಘಟಕಗಳು ರಷ್ಯಾದಿಂದ ತೈಲ ಖರೀದಿಯ ಆರು ತಿಂಗಳ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸುತ್ತಿವೆ ಎಂದು ಮೂಲಗಳು ಹೇಳಿವೆ.
ರಷ್ಯಾದಿಂದ ಭಾರತದ ತೈಲ ಆಮದು ಒಟ್ಟು ಆಮದಿನ ಶೇ 2ಕ್ಕೂ ಕಡಿಮೆ ಇತ್ತು. ಈಗ ಅದು ಶೇ 6ಕ್ಕೆ ಏರಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.