ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್‌ ಪುನಶ್ಚೇತನಕ್ಕೆ ಕ್ರಮ

ದೂರಸಂಪರ್ಕ– ಹಣಕಾಸು ಸಚಿವಾಲಯ, ನೀತಿ ಆಯೋಗದ ಜತೆ ಪಿಎಂಒ ಚರ್ಚೆ
Last Updated 4 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

ನವದೆಹಲಿ: ನಷ್ಟಪೀಡಿತ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಸಂಸ್ಥೆಗಳಾಗಿರುವ ಭಾರತ್‌ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್‌) ಮತ್ತು ಮಹಾನಗರ ಟೆಲಿಫೋನ್‌ ನಿಗಮ ನಿಯಮಿತಗಳ (ಎಂಟಿಎನ್‌ಎಲ್‌) ಪುನಶ್ಚೇತನಕ್ಕೆ ಅಗತ್ಯವಾದ ಹಣಕಾಸು ನೆರವು ನೀಡಲು ಪ್ರಧಾನಿ ಕಚೇರಿಯು (ಪಿಎಂಒ) ತಾತ್ವಿಕ ಒಪ್ಪಿಗೆ ನೀಡಿದೆ.

ಈ ಎರಡೂ ಸಂಸ್ಥೆಗಳನ್ನು ನಷ್ಟದ ಸುಳಿಯಿಂದ ಮೇಲೆತ್ತಿ ಲಾಭದ ಹಾದಿಗೆ ತರಲು ಹಣಕಾಸು ನೆರವೂ ಸೇರಿದಂತೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ದೂರಸಂಪರ್ಕ, ಹಣಕಾಸು ಸಚಿವಾಲಯ ಮತ್ತು ನೀತಿ ಆಯೋಗದ ಜತೆ ಪ್ರಧಾನಿ ಕಚೇರಿ ನಡೆಸಿದ ಸಭೆಯಲ್ಲಿ 4ಜಿ ತರಂಗಾಂತರ ಹಂಚಿಕೆ, ಸ್ವಯಂ ನಿವೃತ್ತಿ ಯೋಜನೆ ಮತ್ತು ತಕ್ಷಣ ಹಣಕಾಸು ನೆರವು ಒದಗಿಸುವ ಬಗ್ಗೆ ಪ್ರಸ್ತಾವ ಸಲ್ಲಿಸಲು ದೂರಸಂಪರ್ಕ ಸಚಿವಾಲಯಕ್ಕೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತೀವ್ರ ಬಗೆಯ ಸ್ಪರ್ಧಾತ್ಮಕ ವಲಯದಲ್ಲಿ ಅಸ್ತಿತ್ವ ಉಳಿಸಿಕೊಂಡು ಲಾಭದಾಯಕವಾಗಿ ಮುನ್ನಡೆಯಲು ಈ ಎರಡೂ ಸಂಸ್ಥೆಗಳು ಸರ್ಕಾರದ ಮುಂದೆ ಈ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿವೆ.

ಎರಡೂ ಸಂಸ್ಥೆಗಳನ್ನು ಪುನಶ್ಚೇತನಗೊಳಿಸಿ ಆರೋಗ್ಯಕರ ರೀತಿಯಲ್ಲಿ ಸುಸ್ಥಿರಗೊಳಿಸಲು ಸರ್ಕಾರ ನಿರ್ಧರಿಸಿದೆ. ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಶೀಘ್ರವೇ ವಿವರವಾದ ವರದಿ ಸಿದ್ಧಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಇತರ ದೂರಸಂಪರ್ಕ ಸಂಸ್ಥೆಗಳಿಗೆ ಹೋಲಿಸಿದರೆ ಬಿಎಸ್‌ಎನ್ಎಲ್‌ದ ಸಾಲದ ಪ್ರಮಾಣ (₹ 14 ಸಾವಿರ ಕೋಟಿ) ಕಡಿಮೆ ಇದೆ. ದೇಶದಾದ್ಯಂತ 4ಜಿ ತರಂಗಾಂತರ ಸೇವೆ ಕಲ್ಪಿಸಲು ಸಂಸ್ಥೆಗೆ ₹ 7 ಸಾವಿರ ಕೋಟಿ ಬಂಡವಾಳ ಬೇಕಾಗಿದೆ.

ಸಿಬ್ಬಂದಿ ಹೊರೆ: ಈ ಎರಡೂ ಸಂಸ್ಥೆಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ದೂರಸಂಪರ್ಕ ಇಲಾಖೆಯ ಸಿಬ್ಬಂದಿಯನ್ನು ವರ್ಗಾಯಿಸಿದ್ದರಿಂದ ಹೆಚ್ಚುವರಿ ನೌಕರರ ಭಾರದಿಂದ ನಲುಗುತ್ತಿವೆ.

ಬಿಎಸ್‌ಎನ್‌ಎಲ್‌ನಲ್ಲಿ 1.76 ಲಕ್ಷ ಮತ್ತು ಎಂಟಿಎನ್‌ಎಲ್‌ನಲ್ಲಿ 22 ಸಾವಿರ ಸಿಬ್ಬಂದಿ ಇದ್ದಾರೆ.

ಸ್ವಯಂ ನಿವೃತ್ತಿ ಪ್ಯಾಕೇಜ್‌ ಕುರಿತ ಸಂಪುಟ ಸಭೆಗೆ ಟಿಪ್ಪಣಿ ಸಲ್ಲಿಸಲು ಅನುಮತಿ ನೀಡುವಂತೆ ದೂರಸಂಪರ್ಕ ಸಚಿವಾಲಯವು ಸದ್ಯದಲ್ಲೇ ಚುನಾವಣಾ ಆಯೋಗವನ್ನು ಕೋರಲಿದೆ ಎಂದು ಮೂಲಗಳು ತಿಳಿಸಿವೆ.

ಸಂಘದ ವಿರೋಧ: ಸ್ವಯಂ ನಿವೃತ್ತಿ ಯೋಜನೆ ಜಾರಿಗೊಳಿಸುವ ಸರ್ಕಾರದ ಪ್ರಸ್ತಾವಕ್ಕೆ ‘ಬಿಎಸ್‌ಎನ್‌ಎಲ್‌’ ಉದ್ಯೋಗಿಗಳ ಸಂಘವು ವಿರೋಧ ವ್ಯಕ್ತಪಡಿಸಿದೆ.

ಸರ್ಕಾರ 4ಜಿ ತರಂಗಾಂತರ ಹಂಚಿಕೆ ಸಂಬಂಧ ಸಂಸ್ಥೆಯ ಬಗ್ಗೆ ಮಲತಾಯಿ ಧೋರಣೆ ತಳೆದಿದೆ. ಸಿಬ್ಬಂದಿ ಕಡಿತ ಮಾಡಿ ಖಾಸಗಿ ಸಂಸ್ಥೆಯ ವಶಕ್ಕೆ ಒಪ್ಪಿಸುವ ಹುನ್ನಾರ ನಡೆಸುತ್ತಿದೆ ಎಂದೂ ಆರೋಪಿಸಿದೆ.

ಪ್ರಧಾನಿ ವಿರುದ್ಧ ಕಾಂಗ್ರೆಸ್‌ ಟೀಕೆ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಬಂಡವಾಳಶಾಹಿ ಸ್ನೇಹಿತರ‘ ಹಿತ ಕಾಯಲು, ಈ ಎರಡೂ ಸಂಸ್ಥೆಗಳನ್ನು ವಿನಾಶದ ಅಂಚಿಗೆ ದೂಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

54 ಸಾವಿರದಷ್ಟು ಸಿಬ್ಬಂದಿ ಕಡಿತ ಮಾಡುವ ಪ್ರಸ್ತಾವವನ್ನು ಬಿಎಸ್‌ಎನ್‌ಎಲ್‌ ಆಡಳಿತ ಮಂಡಳಿ ಅನುಮೋದಿಸಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಯನ್ನಾಧರಿಸಿ ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಅವರು ಮೋದಿ ವಿರುದ್ಧ ದೂರಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ’ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ದೇಶದ 130 ಕೋಟಿ ಜನರ ಆಸ್ತಿ. ಅದನ್ನು ನಷ್ಟದತ್ತ ದೂಡಿರುವ ಸರ್ಕಾರ, ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT