ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ ಸಿದ್ಧತೆ: ಇಂದಿನಿಂದ ಸಮಾಲೋಚನೆ

ರೈತ ಸಂಘಟನೆ, ಕೈಗಾರಿಕಾ ಪ್ರತಿನಿಧಿಗಳ ಜತೆ ನಿರ್ಮಲಾ ಚರ್ಚೆ
Last Updated 16 ಡಿಸೆಂಬರ್ 2019, 1:44 IST
ಅಕ್ಷರ ಗಾತ್ರ

ನವದೆಹಲಿ: 2020–21ನೇ ಹಣಕಾಸು ವರ್ಷದ ಬಜೆಟ್‌ ಮಂಡನೆಯ ಸಾಂಪ್ರದಾಯಿಕ ಪೂರ್ವಭಾವಿ ಸಮಾಲೋಚನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸೋಮವಾರ ಚಾಲನೆ ನೀಡಲಿದ್ದಾರೆ.

ಸರಕು ಮತ್ತು ಸೇವೆಗಳ ಬಳಕೆ ಪ್ರಮಾಣ ಹೆಚ್ಚಿಸಿ ಕುಸಿದಿರುವ ಆರ್ಥಿಕ ವೃದ್ಧಿ ದರವನ್ನು ಮೇಲೆತ್ತಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ರೈತ ಸಂಘಟನೆಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ವಿವಿಧ ಭಾಗಿದಾರರಿಂದ ಸಲಹೆ ಪಡೆಯಲಾಗುವುದು.

ಪ್ರಧಾನಿ ನರೇಂದ್ರ ಮೋದಿ ಅವರ 2.0 ಸರ್ಕಾರದ ಎರಡನೆ ಬಜೆಟ್‌ ಈ ಬಾರಿಯೂ ಫೆಬ್ರುವರಿ 1ರಂದು (ಶನಿವಾರ) ಮಂಡನೆಯಾಗುವ ಸಾಧ್ಯತೆ ಇದೆ.

ಸೋಮವಾರದಿಂದ (ಡಿ.16) ಆರಂಭವಾಗಲಿರುವ ಈ ಪ್ರಕ್ರಿಯೆ ಇದೇ 23ರವರೆಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

2019–20ರ ಎರಡನೇ ತ್ರೈಮಾಸಿಕದಲ್ಲಿ ಶೇ 4.5ರಷ್ಟು ಪ್ರಗತಿ ದಾಖಲಿಸಿ 6 ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಕುಸಿದಿರುವ ಆರ್ಥಿಕ ಬೆಳವಣಿಗೆ ದರಕ್ಕೆ ಚೇತರಿಕೆ ನೀಡುವುದೇ ಈ ಬಾರಿಯ ಬಜೆಟ್‌ನ ಆದ್ಯತೆಯಾಗಿರಲಿದೆ.

ಹೊಸ ಆರ್ಥಿಕತೆ: ಹೊಸ ಆರ್ಥಿಕತೆಗಳಾದ ನವೋದ್ಯಮ, ಹಣಕಾಸು ತಂತ್ರಜ್ಞಾನ ಮತ್ತು ಡಿಜಿಟಲ್‌ ವಲಯದ ತಂಡಗಳ ಜತೆ ನಿರ್ಮಲಾ ಸೋಮವಾರ ಬೆಳಿಗ್ಗೆ ಚರ್ಚೆ ನಡೆಸುವರು. ಆನಂತರ ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಷೇರುಪೇಟೆಯ ಪ್ರತಿನಿಧಿಗಳ ಜತೆ ವಿಚಾರ ವಿನಿಮಯ ನಡೆಸಲಿದ್ದಾರೆ.

ಸುಲಭವಾಗಿ ಉದ್ದಿಮೆ ವಹಿವಾಟು ಆರಂಭಿಸಲು ಒದಗಿಸಬೇಕಾದ ಅನುಕೂಲತೆಗಳು, ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನೆ ಮತ್ತು ರಫ್ತು ಸ್ಪರ್ಧಾತ್ಮಕತೆ ಕುರಿತು ಸರ್ಕಾರವು ಉದ್ಯಮಿಗಳ ಅಭಿಪ್ರಾಯ ಕೇಳಲಿದೆ. ಇದೇ 19ರಂದು ವಾಣಿಜ್ಯೋದ್ಯಮ ಸಂಘಟನೆಗಳ ಪ್ರತಿನಿಧಿಗಳ ಜತೆ ಸಭೆ ನಿಗದಿಯಾಗಿದೆ.

ಆರ್ಥಿಕತೆಗೆ ಉತ್ತೇಜನ ನೀಡಲು ಸರ್ಕಾರ ಈಗಾಗಲೇ ಕಾರ್ಪೊರೇಟ್‌ ತೆರಿಗೆ ಕಡಿತ ಒಳಗೊಂಡಂತೆ ಹಲವಾರು ಕ್ರಮಗಳನ್ನು ಪ್ರಕಟಿಸಿದೆ. ವೈಯಕ್ತಿಕ ಆದಾಯ ತೆರಿಗೆಯಲ್ಲಿ ಬದಲಾವಣೆ ಮಾಡಿ ವೇತನದಾರರ ವರ್ಗಕ್ಕೆ ಕೆಲಮಟ್ಟಿಗೆ ಪರಿಹಾರ ಒದಗಿಸಬಹುದು ಎನ್ನುವ ನಿರೀಕ್ಷೆಯೂ ಹೆಚ್ಚಿದೆ.

ಮುಂದಿನ ವರ್ಷದ ವೆಚ್ಚದ ಅಂದಾಜು ಕುರಿತು ಹಣಕಾಸು ಸಚಿವಾಲಯವು ಈಗಾಗಲೇ ವಿವಿಧ ಸಚಿವಾಲಯಗಳ ಜತೆ ಚರ್ಚೆ ಆರಂಭಿಸಿದೆ.

‘ಐ.ಟಿ. ವಿನಾಯ್ತಿ ಮಿತಿ ಹೆಚ್ಚಿಸಿ’

ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಳಗೊಂಡು ಆರ್ಥಿಕತೆ ಪುಟಿದೇಳಬೇಕೆಂದರೆ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಸದ್ಯದ ₹ 2.5 ಲಕ್ಷದಿಂದ ₹ 5 ಲಕ್ಷದವರೆಗೆ ಹೆಚ್ಚಿಸಬೇಕು ಎನ್ನುವುದು ಕೈಗಾರಿಕಾ ಸಂಘಟನೆಗಳ ಬೇಡಿಕೆಯಾಗಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಸಿ ಅಡಿ ಈಗ ಇರುವ ಒಟ್ಟಾರೆ ಕಡಿತದ ಮಿತಿಯನ್ನು ₹ 1.5 ಲಕ್ಷದಿಂದ ₹ 3 ಲಕ್ಷಕ್ಕೆ ಹೆಚ್ಚಿಸಬೇಕು ಎಂಬುದೂ ಅವುಗಳ ಹಕ್ಕೊತ್ತಾಯವಾಗಿದೆ. ಇದರಿಂದ ಹೂಡಿಕೆಗೆ ಉತ್ತೇಜನ ಸಿಗುವುದಲ್ಲದೆ ವೈಯಕ್ತಿಕ ತೆರಿಗೆದಾರರು ಹೆಚ್ಚು ಉಳಿತಾಯ ಮಾಡಲೂ ಪ್ರೇರಣೆ ದೊರೆಯಲಿದೆ ಎನ್ನುವುದು ಅವುಗಳ ವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT