ಬುಧವಾರ, ಜನವರಿ 22, 2020
28 °C

ಬೇಡಿಕೆ ಹೆಚ್ಚಳ: ‘ಎನ್‌ಬಿಎಫ್‌ಸಿ’ಗೆಜೀವ ತುಂಬಲು ಬಜೆಟ್‌ನಲ್ಲಿ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಿಸಲು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಬಜೆಟ್‌ನಲ್ಲಿ ವಿವಿಧ ಬಗೆಯಲ್ಲಿ ನೆರವು ಕಲ್ಪಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ.

ಗ್ರಾಹಕರ ವಿವಿಧ ಬಗೆಯ ಸಾಲಗಳಿಗೆ ಹಣಕಾಸು ಒದಗಿಸುವ ಪ್ರಮುಖ ಮೂಲಗಳಾದ ‘ಎನ್‌ಬಿಎಫ್‌ಸಿ’ಗಳು ಆರ್ಥಿಕವಾಗಿ ಚೇತರಿಸಿಕೊಳ್ಳಲು  ಬಜೆಟ್‌ನಲ್ಲಿ ವಿಶೇಷ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಅವುಗಳ ಸಾಲ ಖರೀದಿಸುವ ಮತ್ತು ಷೇರುಪೇಟೆಯೂ ಸೇರಿದಂತೆ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿ ಅವುಗಳಿಗೆ ಪುನರ್ಧನ ನೀಡಲು ಚಿಂತಿಸಲಾಗುತ್ತಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರುವರಿ 1ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಈ ಉದ್ದೇಶಕ್ಕೆ ಪ್ರತ್ಯೇಕ  ಕಂಪನಿ ಸ್ಥಾಪಿಸುವುದನ್ನು ಪ್ರಕಟಿಸುವ ಸಾಧ್ಯತೆ ಇದೆ.

ಗೃಹ ನಿರ್ಮಾಣ, ವಾಹನ ಮತ್ತು ಗೃಹೋಪಯೋಗಿ ಸಲಕರಣೆಗಳ ಖರೀದಿಗೆ ಈ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಸಾಲ ನೀಡುತ್ತಿವೆ.

‘ಎನ್‌ಬಿಎಫ್‌ಸಿ’ಗಳ ಸಾಲದ ಸಮಸ್ಯೆಯನ್ನು ದೀರ್ಘಾವಧಿ ಆಧಾರದಲ್ಲಿ ಬಗೆಹರಿಸುವುದು ಕುಸಿಯುತ್ತಿರುವ ಬೇಡಿಕೆ ಪುಟಿದೇಳುವಂತೆ ಮಾಡುವ ಅತ್ಯುತ್ತಮ ವಿಧಾನವಾಗಿದೆ. ಇದರಿಂದ ಮಂದಗತಿಯ ಆರ್ಥಿಕ ಚಟುವಟಿಕೆಗಳಿಗೂ ಚೇತರಿಕೆ ಸಿಗಲಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬೇಡಿಕೆ ಹೆಚ್ಚಿಸಲು ತೆರಿಗೆದಾರರ ಬಳಿ ಹೆಚ್ಚು ಹಣ ಇರುವಂತೆ ಮಾಡಲು ಆದಾಯ ತೆರಿಗೆ ಕ್ರಮಗಳನ್ನೂ ಪರಿಶೀಲಿಸಲಾಗುತ್ತಿದೆ. ಆದರೆ, ಅದರಿಂದ ಕಡಿಮೆ ಸಂಖ್ಯೆಯಲ್ಲಿ ಇರುವ ವೇತನ ವರ್ಗದವರಿಗೆ ಮಾತ್ರ ಪ್ರಯೋಜನ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

ಗ್ರಾಹಕರ ವಿವಿಧ ಬಗೆಯ ಹಣಕಾಸು ಅಗತ್ಯಗಳನ್ನು ಶೇ 40ರಷ್ಟು ಪೂರೈಸುತ್ತಿರುವ ‘ಎನ್‌ಬಿಎಫ್‌ಸಿ’ಗಳು, 2018ರಲ್ಲಿ ಬೆಳಕಿಗೆ ಬಂದ ಐಎಲ್‌ಆ್ಯಂಡ್‌ಎಫ್‌ಎಸ್‌ ಬಿಕ್ಕಟ್ಟಿನಿಂದಾಗಿ ತೀವ್ರ ಸ್ವರೂಪದ ನಗದು ಕೊರತೆ ಎದುರಿಸುತ್ತಿವೆ. ಅವುಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದ ಮ್ಯೂಚುವಲ್‌ ಫಂಡ್ಸ್‌ಗಳು, ಈ ಬಿಕ್ಕಟ್ಟಿನ ಬೆನ್ನಲ್ಲೇ  ಸಾಲ ನೀಡುವುದನ್ನು ಸ್ಥಗಿತಗೊಳಿಸಿವೆ. ಹೀಗಾಗಿ ಗ್ರಾಹಕರ ಹಣಕಾಸು ಮೂಲಗಳಿಗೆ ಹಣದ ಹರಿವು ಸ್ಥಗಿತಗೊಂಡಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು