ಬುಧವಾರ, ಮಾರ್ಚ್ 29, 2023
28 °C

ಎಕ್ಸೈಸ್ ಸುಂಕ ಇಳಿಕೆಯಿಂದ ಬೊಕ್ಕಸಕ್ಕೆ ₹ 45 ಸಾವಿರ ಕೋಟಿ ನಷ್ಟ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕವನ್ನು ಕೇಂದ್ರ ಸರ್ಕಾರವು ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಿರುವುದರಿಂದಾಗಿ, ಕೇಂದ್ರದ ಬೊಕ್ಕಸಕ್ಕೆ ₹ 45 ಸಾವಿರ ಕೋಟಿ ನಷ್ಟ ಆಗುತ್ತದೆ ಎಂದು ಬ್ರೋಕರೇಜ್ ಸಂಸ್ಥೆ ನೊಮುರ ಹೇಳಿದೆ. ಅಲ್ಲದೆ, ಈ ತೀರ್ಮಾನದಿಂದಾಗಿ ಕೇಂದ್ರದ ವಿತ್ತೀಯ ಕೊರತೆಯು ಶೇಕಡ 0.3ರಷ್ಟು ಹೆಚ್ಚಳ ಆಗಲಿದೆ ಎಂದೂ ಸಂಸ್ಥೆ ಹೇಳಿದೆ.

ಒಟ್ಟಾರೆ ಬಳಕೆಯನ್ನು ಆಧರಿಸಿ ಹೇಳುವುದಾದಲ್ಲಿ, ಒಂದು ವರ್ಷದಲ್ಲಿ ಆಗುವ ವರಮಾನ ನಷ್ಟವು ₹ 1 ಲಕ್ಷ ಕೋಟಿ ಆಗುತ್ತದೆ. ಪ್ರಸಕ್ತ ಹಣಕಾಸು ವರ್ಷದ ಇನ್ನುಳಿದ ಅವಧಿಗೆ ಆಗುವ ವರಮಾನ ನಷ್ಟವು ₹ 45 ಸಾವಿರ ಕೋಟಿ ಎಂದು ನೊಮುರ ಅಂದಾಜು ಮಾಡಿದೆ.

ಇದರಿಂದಾಗಿ ಕೇಂದ್ರದ ವಿತ್ತೀಯ ಕೊರತೆ ಪ್ರಮಾಣವು ಶೇಕಡ 6.5ಕ್ಕೆ ಬರಬಹುದು ಎಂದು ಸಂಸ್ಥೆ ಹೇಳಿದೆ. ಈ ಮೊದಲು ವಿತ್ತೀಯ ಕೊರತೆಯು ಶೇ 6.2ರಷ್ಟು ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಹೀಗಿದ್ದರೂ, ಇದು ಬಜೆಟ್ ಅಂದಾಜು ಆಗಿರುವ ಶೇ 6.8ಕ್ಕಿಂತ ಕಡಿಮೆ.

ಕೇಂದ್ರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ತೀರಾ ಹಿಡಿತದಿಂದ ಹಣ ಖರ್ಚು ಮಾಡಿದ ಕಾರಣದಿಂದಾಗಿ ವಿತ್ತೀಯ ಕೊರತೆಯು ಸೆಪ್ಟೆಂಬರ್‌ ಅಂತ್ಯದವರೆಗೆ ಬಜೆಟ್ ಅಂದಾಜಿನ ಶೇ 35ರಷ್ಟಕ್ಕೆ ಮಿತಿಗೊಂಡಿದೆ. ಈಗಿನ ಎಕ್ಸೈಸ್ ಸುಂಕ ಕಡಿತದ ನಂತರ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಪ್ರಮಾಣವು ನೇರವಾಗಿ ಶೇ 0.14ರಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಪರೋಕ್ಷ ಪರಿಣಾಮಗಳನ್ನೂ ಪರಿಗಣಿಸಿದರೆ ಹಣದುಬ್ಬರವು ಶೇ 0.3ರವರೆಗೆ ತಗ್ಗಬಹುದು ಎಂದು ಅದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು