ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2 ಕೋಟಿವರೆಗಿನ ಸಾಲಗಳ ಬಡ್ಡಿ ಮೇಲಿನ ಬಡ್ಡಿ ಮನ್ನಾಕ್ಕೆ ಒಪ್ಪಿಗೆ

Last Updated 3 ಅಕ್ಟೋಬರ್ 2020, 11:42 IST
ಅಕ್ಷರ ಗಾತ್ರ

ನವದೆಹಲಿ: ಸಾಲದ ಕಂತು ಮರುಪಾವತಿ ಮುಂದೂಡಿಕೆ ಅವಧಿಗೆ ಅನ್ವಯಿಸುವಂತೆ ಬಡ್ಡಿ ಮೇಲಿನ ಬಡ್ಡಿಯನ್ನು (ಚಕ್ರ ಬಡ್ಡಿ) ಮನ್ನಾ ಮಾಡಲು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಒಪ್ಪಿಕೊಂಡಿದೆ. ಈ ಸೌಲಭ್ಯವು ₹ 2 ಕೋಟಿ ಮೊತ್ತದವರೆಗಿನ ಸಾಲಕ್ಕೆ ಮಾತ್ರ ದೊರಕಲಿದೆ.

ಇದರಿಂದಾಗಿ ವೈಯಕ್ತಿಕ ಹಾಗೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಹೆಚ್ಚಿನ ಅನುಕೂಲ ಆಗಲಿದೆ.

ಸಾಲದ ಕಂತು ಮುಂದೂಡಿಕೆ ಯೋಜನೆಯ ಪ್ರಯೋಜನ ಪಡೆದರೂ ಅಥವಾ ಪಡೆಯದೇ ಇದ್ದರೂ ಬಡ್ಡಿ ಮೇಲಿನ ಬಡ್ಡಿ ಮನ್ನಾ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.

ಈ ಸಂಬಂಧ ಸೂಕ್ತವಾದ ಅನುದಾನಕ್ಕಾಗಿ ಸಂಸತ್‌ನಿಂದ ಅನುಮತಿ ಪಡೆಯಲಾಗುವುದು. ಆತ್ಮ ನಿರ್ಭರ ಯೋಜನೆಯಡಿ ಎಂಎಸ್‌ಎಂಇಗಳಿಗೆ ನೀಡಿರುವ ₹ 3.7 ಲಕ್ಷ ಕೋಟಿ ಹಾಗೂ ಗರೀಬ್‌ ಕಲ್ಯಾಣ ಯೋಜನೆಯಡಿ ಗೃಹ ಸಾಲ ಪಡೆದವರಿಗೆ ನೀಡಿರುವ ₹ 70 ಸಾವಿರ ಕೋಟಿ ಮೊತ್ತದ ನೆರವಿನ ಹೊರತಾಗಿ ಈ ಸೌಲಭ್ಯ ನೀಡಲಾಗುವುದು ಎಂದು ವಿವರಿಸಿದೆ.

ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದವರನ್ನು ರಕ್ಷಿಸುವ ಉದ್ದೇಶದಿಂದ ಮಾರ್ಚ್‌ನಿಂದ–ಆಗಸ್ಟ್‌ 31ರವರೆಗೆ ಆರು ತಿಂಗಳ ಕಾಲ ಸಾಲ ಮುಂದೂಡಿಕೆಗೆ ಅವಕಾಶ ಕಲ್ಪಿಸಲಾಗಿತ್ತು.

ಹೊರೆ ಹೊರಲಿರುವ ಸರ್ಕಾರ: ಬಡ್ಡಿ ಮೇಲಿನ ಬಡ್ಡಿ ಮನ್ನಾ ಮಾಡುವುದರಿಂದ ಬ್ಯಾಂಕ್‌ಗಳಿಗೆ ಆರ್ಥಿಕ ಹೊರೆಯಾಗಲಿದೆ. ಅ ಹೊರೆಯನ್ನು ಹೊರುವುದು ಕಷ್ಟವಾಗುವುದರಿಂದ ಬ್ಯಾಂಕ್‌ಗಳು ಅದನ್ನು ಠೇವಣಿದಾರರಿಗೆ ವರ್ಗಾಯಿಸಲಿವೆ. ಹಾಗೆ ಮಾಡದೇ ಇದ್ದರೆ ಅವುಗಳ ಹಣಕಾಸು ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಒಟ್ಟಾರೆಯಾಗಿ ದೇಶದ ಆರ್ಥಿಕ ಹಿತಾಸಕ್ತಿಯ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಹಾಗಾಗಿ, ಕೇಂದ್ರದ ಬಳಿ ಸದ್ಯ ಇರುವ ಏಕೈಕ ಪರಿಹಾರ, ಈ ಹೊರೆಯನ್ನು ತಾನೇ ಹೊರುವುದು. ಆದರೆ, ದೇಶ ಎದುರಿಸುತ್ತಿರುವ ಇನ್ನಿತರ ಸಮಸ್ಯೆಗಳಿಗೆ ಹಣ ಹೊಂದಿಸಲು ಇದರಿಂದ ಸಮಸ್ಯೆ ಎದುರಾಗಲಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದೆ.

ಒಂದೊಮ್ಮೆ, ಈ ಆರು ತಿಂಗಳ ಅವಧಿಯ ಎಲ್ಲಾ ಸಾಲ ಮತ್ತು ಮುಂಗಡಗಳ ಮೇಲಿನ ಬಡ್ಡಿದರ ಮನ್ನಾ ಮಾಡಲು ಪರಿಗಣಿಸುವುದಾದರೆ ಅದಕ್ಕೆ ₹ 6 ಲಕ್ಷ ಕೋಟಿಗಿಂತಲೂ ಹೆಚ್ಚಿನ ಹಣ ಬೇಕಾಗಲಿದೆ. ಇದನ್ನು ಬ್ಯಾಂಕ್‌ಗಳು ಭರಿಸುವುದಾದರೆ ಅವುಗಳ ನಿವ್ವಳ ಸಂಪತ್ತಿನ ಬಹುಪಾಲು ಖಾಲಿಯಾಗಲಿದೆ.

ಮೊರಟೋರಿಯಂ ಪದಕ್ಕೆ ಆರ್‌ಬಿಐ ನಿರ್ದಿಷ್ಟ ವ್ಯಾಖ್ಯೆ ನೀಡಿದೆ. ವಿವಿಧ ಪ್ರಕಟಣೆಗಳನ್ನು ನೀಡುವಾಗ ಮೊರಟೋರಿಯಂ ಎನ್ನುವುದನ್ನು ಬಡ್ಡಿದರ ಮನ್ನಾ ಎನ್ನುವ ಅರ್ಥದಲ್ಲಿ ಬಳಸಿಲ್ಲ. ಮೊರಟೋರಿಯಂ ಎಂದರೆ ಬಡ್ಡಿದರ ಮುಂದೂಡಿಕೆ ಎಂದಾಗಿದೆ. ಸಾಲ ಪಡೆಯುವವರು ಸಾಲ ಮನ್ನಾ ಮತ್ತು ಸಾಲದ ಕಂತಿನ ಪಾವತಿ ಮುಂದೂಡಿಕೆಯ ನಡುವಣ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿಯೇಶೇ 50ಕ್ಕಿಂತ ಹೆಚ್ಚು ಮಂದಿ ಸಾಲ ಮುಂದೂಡಿಕೆಯ ಪ್ರಯೋಜನ ಪಡೆದುಕೊಂಡಿಲ್ಲ ಎಂದು ವಿವರಿಸಿದೆ.

ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠದ ಎದುರು ಸೋಮವಾರ ಈ ವಿಷಯ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಯಾವ ಸಾಲಗಳಿಗೆ ಪ್ರಯೋಜನ

* ಎಂಎಸ್‌ಎಂಇ

* ಶಿಕ್ಷಣ

* ಗೃಹ

* ಗ್ರಾಹಕ ಬಳಕೆ ವಸ್ತುಗಳು

* ಕ್ರೆಡಿಟ್‌ ಕಾರ್ಡ್‌ ಬಾಕಿ

* ವಾಹನ ಸಾಲ

* ವೈಯಕ್ತಿಕ ಸಾಲ

* ಉಪಭೋಗದ ಸಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT