ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘಾವಧಿ ಹೂಡಿಕೆಯತ್ತ ಗಮನ ಹರಿಸಿ: ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್
Published 20 ನವೆಂಬರ್ 2023, 15:58 IST
Last Updated 20 ನವೆಂಬರ್ 2023, 15:58 IST
ಅಕ್ಷರ ಗಾತ್ರ

ಮುಂಬೈ: ಹೂಡಿಕೆದಾರರು ವಾಯಿದಾ ವಹಿವಾಟಿನಲ್ಲಿ (ಎಫ್‌ ಆ್ಯಂಡ್ ಒ) ಹೊಂದಿರುವ ಆಸಕ್ತಿಯು ಗೊಂದಲ ಮತ್ತು ಅಚ್ಚರಿ ಮೂಡಿಸುತ್ತಿದೆ. ಏಕೆಂದರೆ ಇಲ್ಲಿ ವಹಿವಾಟು ನಡೆಸುವವರಲ್ಲಿ ಶೇ 90ರಷ್ಟು ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರು ಸೋಮವಾರ ಹೇಳಿದ್ದಾರೆ.

ಹೂಡಿಕೆದಾರರು ದೀರ್ಘಾವಧಿಯ ಹೂಡಿಕೆಯತ್ತ ಗಮನ ಹರಿಸಬೇಕು. ಹಣದುಬ್ಬದ ಪ್ರಮಾಣಕ್ಕಿಂತ ಹೆಚ್ಚಿನ ಲಾಭ ತಂದುಕೊಡುವ ಸಾಧ್ಯತೆ ಇರುವ ಹೂಡಿಕೆ ಸೂಕ್ತ ಎಂದೂ ಅವರು ಸಲಹೆ ನೀಡಿದ್ದಾರೆ.

ಎನ್‌ಎಸ್‌ಇನಲ್ಲಿ ಹೂಡಿಕೆದಾರರ ಅಪಾಯ ಕಡಿಮೆ ಮಾಡುವ ‘ಇನ್‌ವೆಸ್ಟರ್ಸ್‌ ರಿಸ್ಕ್‌ ರಿಡಕ್ಷನ್‌ ಅಕ್ಸೆಸ್‌ (ಐಆರ್‌ಆರ್‌ಎ) ವೇದಿಕೆಯನ್ನು ಬಿಡುಗಡೆ ಮಾಡಿ  ಅವರು ಮಾತನಾಡಿದರು. ಬಂಡವಾಳ ಮಾರುಕಟ್ಟೆಯ ಈಚಿನ ಸಂಶೋಧನಾ ವರದಿಯ ಪ್ರಕಾರ, 'ಎಫ್‌ ಆ್ಯಂಡ್ ಒ’ನಲ್ಲಿ ಒಟ್ಟು 45.24 ಲಕ್ಷ ಹೂಡಿಕೆದಾರರು ವಹಿವಾಟು ನಡೆಸಿದ್ದು ಅವರಲ್ಲಿ ಶೇ 11ರಷ್ಟು ಹೂಡಿಕೆದಾರರಿಗೆ ಮಾತ್ರವೇ ಲಾಭ ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಂಶೋಧನೆಯ ಪ್ರಕಾರ, ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ವಾಯಿದಾ ವಹಿವಾಟಿನಲ್ಲಿ ಹೂಡಿಕೆದಾರರ ಭಾಗವಹಿಸುವಿಕೆಯು ತೀವ್ರವಾಗಿ ಏರಿಕೆ ಕಂಡಿತು. 2018–19ರಲ್ಲಿ 7.1 ಲಕ್ಷ ಇದ್ದ ಹೂಡಿಕೆದಾರರ ಸಂಖ್ಯೆಯು ಕೋವಿಡ್‌ ಸಂದರ್ಭದಲ್ಲಿ ಶೇ 500ಕ್ಕೂ ಅಧಿಕ ಏರಿಕೆ ಕಂಡಿತು. ದೀರ್ಘಾವಧಿಯ ಮತ್ತು ಸ್ಥಿರ ಹೂಡಿಕೆ ಅಭ್ಯಾಸವನ್ನು ರೂಢಿಸಿಕೊಳ್ಳುವಂತೆ ಅವರು ಹೂಡಿಕೆದಾರರಿಗೆ ಮನವಿ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಸಂಪತ್ತು ಸೃಷ್ಟಿಯ ಸಾಧ್ಯತೆ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT