ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಸ್ಲೆ ವಿರುದ್ಧ ತನಿಖೆಗೆ ಸೂಚನೆ

Published 19 ಏಪ್ರಿಲ್ 2024, 14:10 IST
Last Updated 19 ಏಪ್ರಿಲ್ 2024, 14:10 IST
ಅಕ್ಷರ ಗಾತ್ರ

ನವದೆಹಲಿ: ನೆಸ್ಲೆ ಇಂಡಿಯಾ ಕಂಪನಿ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ), ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಸೂಚಿಸಿದೆ.

ಭಾರತದಲ್ಲಿ ನೆಸ್ಲೆ ಮಾರಾಟ ಮಾಡುತ್ತಿರುವ ಶಿಶು ಆಹಾರ ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ ಅಂಶ ಸೇರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸ್ವಿಟ್ಜರ್‌ಲೆಂಡ್‌ನ ಸ್ವಯಂಸೇವಾ ಸಂಸ್ಥೆ ಪಬ್ಲಿಕ್‌ ಐ ಹಾಗೂ ಇಂಟರ್‌ನ್ಯಾಷನಲ್ ಬೇಬಿ ಫುಡ್ ಆ್ಯಕ್ಷನ್ ನೆಟ್‌ವರ್ಕ್‌ (ಐಬಿಎಫ್‌ಎಎನ್‌) ಅಧ್ಯಯನ ನಡೆಸಿ ವರದಿ ಪ್ರಕಟಿಸಿವೆ.

‘ಈ ವರದಿಗೆ ಸಂಬಂಧಿಸಿದಂತೆ ನೆಸ್ಲೆ ಉತ್ಪನ್ನಗಳ ಬಗ್ಗೆ ತನಿಖೆ ನಡೆಸುವಂತೆ ಎಫ್‌ಎಸ್‌ಎಸ್‌ಎಐಗೆ ಪತ್ರ ಬರೆಯಲಾಗಿದೆ’ ಎಂದು ಸಚಿವಾಲಯದ ಅಧೀನದಲ್ಲಿ ಬರುವ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ (ಸಿಸಿಪಿಎ) ಮುಖ್ಯಸ್ಥೆ ನಿಧಿ ಖರೆ ಅವರು, ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.‌

‘ನೆಸ್ಲೆ ಕಂಪನಿಯು ಉತ್ಪನ್ನಗಳ ತಯಾರಿಕೆ ಬಗ್ಗೆ ಅನುಸರಿಸುತ್ತಿರುವ ಮಾದರಿ ಕುರಿತು ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಎಫ್‌ಎಸ್ಎಸ್‌ಎಐ ತನಿಖೆ ನಡೆಸಿ ವಾಸ್ತವಾಂಶವನ್ನು ಬೆಳಕಿಗೆ ತರಲಿದೆ’ ಎಂದು ಹೇಳಿದ್ದಾರೆ. 

‘ನೆಸ್ಲೆ ಉತ್ಪನ್ನಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಯನ್ನು ಸಚಿವಾಲಯವು ಗಮನಿಸಿದೆ. ಸೆರೆಲಾಕ್‌ ಏಕದಳ ಧಾನ್ಯಗಳ ಉತ್ಪನ್ನದಲ್ಲಿ ಹೆಚ್ಚಿನ ಸಕ್ಕರೆ ಅಂಶ ಸೇರಿಸುತ್ತಿದೆ ಎಂಬ ಆರೋಪವಿದೆ’ ಎಂದು ಹೇಳಿದ್ದಾರೆ.

ಪತ್ರದಲ್ಲಿ ಏನಿದೆ?:

‘ಜರ್ಮನಿ, ಸ್ವಿಟ್ಜರ್‌ಲೆಂಡ್‌, ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ಮಾರಾಟ ಮಾಡುವ ಕಂಪನಿಯ ಉತ್ಪನ್ನಗಳು ಸಕ್ಕರೆ ಅಂಶದಿಂದ ಮುಕ್ತವಾಗಿದೆ. ಆದರೆ, ಭಾರತದಲ್ಲಿ ಒಂದು ಬಾರಿ ಮಗುವಿಗೆ ಕೊಡುವ ಸೆರೆಲಾಕ್‌ನಲ್ಲಿ 2.7 ಗ್ರಾಂನಷ್ಟು ಸಕ್ಕರೆ ಬೆರೆಸಲಾಗುತ್ತದೆ ಎಂದು ವರದಿ ಹೇಳಿದೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು’ ಎಂದು ಸೂಚಿಸಲಾಗಿದೆ.

ದೇಶದ ಶಿಶುಗಳು ಮತ್ತು ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮ ಅತಿಮುಖ್ಯವಾಗಿದೆ. ಆಹಾರ ತಯಾರಿಕೆ ವೇಳೆ ಸುರಕ್ಷತಾ ಮಾನದಂಡವನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪವಿದೆ. ಅಧಿಕ ಸಕ್ಕರೆ ಅಂಶ ಸೇವಿಸಿದರೆ ಮಕ್ಕಳು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಲಿದ್ದಾರೆ ಎಂದು ಸಚಿವಾಲಯವು ಆತಂಕ ವ್ಯಕ್ತಪಡಿಸಿದೆ.

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯದ ಅಧೀನದಲ್ಲಿ ಬರುತ್ತದೆ. 

ಈ ವಿಷಯವು ಗಂಭೀರವಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುವಂತೆ  ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೂಡ ಪ್ರಾಧಿಕಾರಕ್ಕೆ ಸೂಚಿಸಿದೆ.

ಎರಡು ದಿನದಲ್ಲಿ ₹10 ಸಾವಿರ ಕೋಟಿ ನಷ್ಟ

ನವದೆಹಲಿ: ಶುಕ್ರವಾರವೂ ನೆಸ್ಲೆ ಇಂಡಿಯಾ ಕಂಪನಿಯ ಷೇರಿನ ಮೌಲ್ಯವು ಶೇ 1ರಷ್ಟು ಕುಸಿದಿದೆ. ಎರಡು ದಿನಗಳಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವು ₹10610 ಕೋಟಿ ಕರಗಿದೆ. ಬಿಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 1.04ರಷ್ಟು ಕುಸಿದಿದ್ದು ಪ್ರತಿ ಷೇರಿನ ಬೆಲೆ ₹2375.75 ಆಗಿದೆ. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 1.32ರಷ್ಟು ಇಳಿಕೆಯಾಗಿದ್ದು ಪ್ರತಿ ಷೇರಿನ ಬೆಲೆ ₹2430 ಆಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT