ಸೋಮವಾರ, ಮೇ 25, 2020
27 °C

ಕೊರೊನಾ ವಿರುದ್ಧ ಸಮರ: ಭಾರತೀಯ ಕೈಗಾರಿಕಾ ಒಕ್ಕೂಟದ ಕಾರ್ಯಪಡೆ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೊರೊನಾ–2‘ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡಿರುವ ದಿಗ್ಬಂಧನ ಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಕರ್ನಾಟಕ ಘಟಕವು ಭರವಸೆ ನೀಡಿದೆ.

ಘಟಕದ ಅಧ್ಯಕ್ಷ ಸಂದೀಪ್ ಸಿಂಗ್‌ ಮತ್ತು ಉಪಾಧ್ಯಕ್ಷ ರಮೇಶ್‌ ರಾಮದೊರೈ ನೇತೃತ್ವದಲ್ಲಿನ ಉನ್ನತ ಮಟ್ಟದ ನಿಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ್‌ ಭಾಸ್ಕರ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಉದ್ಯಮವು ಸರ್ಕಾರದ ನೆರವಿಗೆ ನಿಲ್ಲುವುದಾಗಿ ನಿಯೋಗವು ಭರವಸೆ ನೀಡಿದೆ.

ಕಾರ್ಯಪಡೆ ರಚನೆ: ಈ ನಿಟ್ಟಿನಲ್ಲಿ ಸರ್ಕಾರದ ಜತೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ‘ಸಿಐಐ’ ಕಾರ್ಯಪಡೆ ರಚಿಸಲಾಗಿದೆ.

ಕೊರೊನಾ ಹಾವಳಿಗೆ ನಿಯಂತ್ರಣ ಹಾಕಲು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಸರ್ಕಾರದ ಪ್ರಯತ್ನಗಳಿಗೆ ಬೆಂಬಲ ನೀಡುವ  ಬಗ್ಗೆ ಈ ಕಾರ್ಯಪಡೆ ಉದ್ದಿಮೆಗಳಿಗೆ ನೆರವಾಗಲಿದೆ.

ಜೀವರಕ್ಷಕ ಔಷಧಿಗಳ ದೇಣಿಗೆ, ವೈಯಕ್ತಿಕ ಆರೋಗ್ಯ ರಕ್ಷಣೆ ಸಲಕರಣೆ, ರೋಗ ಪತ್ತೆ ಪರೀಕ್ಷಾ ಕಿಟ್‌ ಪೂರೈಕೆ ಮತ್ತು ಹಣಕಾಸಿನ ನೆರವು ಒದಗಿಸಲು ಈ ಕಾರ್ಯಪಡೆ ನೆರವಾಗಲಿದೆ.

ದಿಗ್ಬಂಧನದಿಂದಾಗಿ ಆರ್ಥಿಕತೆಯ ವಿವಿಧ ವಲಯಗಳ ಮೇಲೆ ಆಗಿರುವ ಪರಿಣಾಮಗಳು ಮತ್ತು ಎದುರಾಗಿರುವ ಸವಾಲುಗಳನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಾರ್ಯಪಡೆಯು ಸಿದ್ಧಪಡಿಸಿರುವ ವರದಿಯನ್ನು ‘ಸಿಐಐ’ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಗಮನಕ್ಕೆ ತರಲಿದೆ.

ಇ–ಕಾಮರ್ಸ್‌ ಕಂಪನಿಗಳಿಗೆ ನೆರವು: ಕೈಗಾರಿಕಾ ಕಮಿಷನರ್‌ ಜತೆ ಇ–ಕಾಮರ್ಸ್‌ ಕಂಪನಿಗಳ ಸಭೆಯನ್ನೂ ‘ಸಿಐಐ’ ಆಯೋಜಿಸಿತ್ತು. ಸದ್ಯದ ಕಠಿಣ ಪರಿಸ್ಥಿತಿಯಲ್ಲಿ ಈ ಕಂಪನಿಗಳ ಕಾರ್ಯನಿರ್ವಹಣೆಗೆ ನೆರವಾಗುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ.

ಅವಶ್ಯಕ ಸೇವೆಗಳ ವ್ಯಾಪ್ತಿಯಲ್ಲಿ ಇರುವ ಮತ್ತು ದಿಗ್ಬಂಧನದಿಂದ ವಿನಾಯ್ತಿ ಪಡೆದಿರುವ ಸರಕುಗಳ ಸುಗಮ ಸಾಗಾಣಿಕೆಗೆ ‘ಸಿಐಐ’ ಅಗತ್ಯ ನೆರವು ನೀಡಲಿದೆ.

ಎಂಎಸ್‌ಎಂಇ ನಿಧಿ ಸ್ಥಾಪನೆ: ಆರ್ಥಿಕ ಸವಾಲುಗಳನ್ನು ಎದುರಿಸಲು ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳಿಗೆ ಹಣಕಾಸು ನೆರವು ಒದಗಿಸಲು ‘ಸಿಐಐ’ ಪ್ರತ್ಯೇಕ ನಿಧಿ ಸ್ಥಾಪಿಸಿದೆ.

‘ಎಸ್‌ಎಂಎಸ್‌ಇ’ಗಳು ಮತ್ತು ರಫ್ತು ಘಟಕಗಳ ಕಾರ್ಯನಿರ್ವಹಣೆಗೆ ಅಗತ್ಯ ಬೆಂಬಲ ನೀಡಲು ಆದ್ಯತೆ ನೀಡಲಾಗಿದೆ.

ಒಕ್ಕೂಟದ ಸದಸ್ಯರಿಗೆ ನೆರವಾಗಲು ಸಹಾಯವಾಣಿಯನ್ನೂ ಆರಂಭಿಸಲಾಗಿದೆ.  ಉದ್ಯಮಿಗಳ ಅನುಮಾನ ನಿವಾರಿಸಲು, ಅಗತ್ಯ ನೆರವು ಪಡೆಯಲು ಸೂಕ್ತ ಇಲಾಖೆಗಳನ್ನು ಸಂಪರ್ಕಿಸಲೂ ನೆರವಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು