ಶನಿವಾರ, ಜನವರಿ 25, 2020
28 °C
15 ಲಕ್ಷ ಜನರ ಸಂಕಷ್ಟ ತೆರೆದಿಟ್ಟ ಕಾಫಿ ಕೈಪಿಡಿ

ಬೆಳೆ ವಿಮೆ ವ್ಯಾಪ್ತಿಗೆ ಕಾಫಿ, ಕೇಂದ್ರಕ್ಕೆ ಮನವರಿಕೆ: ಸಚಿವ ಸಿ.ಟಿ.ರವಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅತಿವೃಷ್ಟಿ, ಹವಾಮಾನ ವೈಪರೀತ್ಯಗಳಿಂದಾಗಿ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, 15 ಲಕ್ಷ ಜನರ ಬದುಕು ದುಸ್ತರವಾಗಿದೆ. ಇದಕ್ಕಾಗಿ ಕಾಫಿ ಬೆಳೆಯನ್ನೂ ಫಸಲ್‌ ಬಿಮಾ ಯೋಜನೆಯಡಿ ತರಲು ಪ್ರಧಾನಿಗೆ ಶೀಘ್ರ ಮನವರಿಕೆ ಮಾಡಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್‌) ವತಿಯಿಂದ ಹೊರತರಲಾದ 2019ನೇ ಸಾಲಿನ ‘ಭಾರತದ ಕಾಫಿ–ಪ್ರಸಕ್ತ ವಿದ್ಯಮಾನಗಳು’  ಕೈಪಿಡಿಯನ್ನು ಶುಕ್ರವಾರ ಇಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘94 ಸಿ ವ್ಯಾಪ್ತಿಗೆ ಕಾಫಿ ಬೆಳೆಗಾರರ ಸಣ್ಣಪುಟ್ಟ ಒತ್ತುವರಿಯನ್ನು ತರುವುದು, ಸರ್ಕಾರಿ ಭೂಮಿ ಕಬಳಿಕೆ ಮಾಡಿಕೊಂಡ ಕಾಫಿ ಬೆಳೆಗಾರರ ಮೇಲಿನ ಪ್ರಕರಣ ತೆಗೆದುಹಾಕಿ, ಅಂತಹ ಜಮೀನನ್ನು ಭೋಗ್ಯಕ್ಕೆ ಕೊಡಿಸುವುದು, ಕೊಮಾರ್ಕ್‌ನಂತಹ ಕಾಫಿ ಖರೀದಿ ಸಂಸ್ಥೆಗಳ ಬಲವರ್ಧನೆಗೆ ಕ್ರಮ ಸಹಿತ ಹಲವು ಯೋಜನೆಗಳನ್ನು ಸರ್ಕಾರ ಹಂತ ಹಂತವಾಗಿ ಜಾರಿಗೆ ತರಲಿದ್ದು, ಬೆಳೆಗಾರರು ಆತಂಕಪಡಬಾರದು’ ಎಂದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ‘ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರ ಸಮಯ ಕೊಟ್ಟು ಸ್ಪಂದಿಸಲಿದೆ. ಭೂಕುಸಿತದಿಂದ ಕಾಫಿ ಬೆಳೆ ಪ್ರದೇಶ ಕಳೆದುಕೊಂಡವರಿಗೆ ಬದಲಿ ಜಮೀನು ಕೊಡಲು ಸರ್ಕಾರ ಈಗಾಗಲೇ ಒಪ್ಪಿಕೊಂಡಿದೆ. ಕಾಂಡಕೊರಕ ರೋಗ ಬಾಧೆ ನಿವಾರಣೆಗೆ ಜೈವಿಕ ತಂತ್ರಜ್ಞಾನ ಸಂಸ್ಥೆಗಳ ನೆರವು ಒದಗಿಸಲಾಗುವುದು’ ಎಂದರು.

ಬೆಳೆಗಾರರ ಕಷ್ಟಗಳಿಗೆ ಕೈಗನ್ನಡಿ: ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್‌ ಅವರು ಕೈಪಿಡಿಯಲ್ಲಿ ನೀಡಲಾದ ಮಾಹಿತಿಯನ್ನು ಸಭೆಯ ಮುಂದಿಟ್ಟು, ಸುಮಾರು 1.5 ಲಕ್ಷ ಕಾಫಿ ಬೆಳೆಗಾರರು ಹಾಗೂ ಅವರನ್ನು ಅವಲಂಬಿಸಿರುವ ಸುಮಾರು 13 ಲಕ್ಷದಷ್ಟು ಜನರ ಬದುಕು ಸಂಕಷ್ಟಕ್ಕೆ ಸಿಲುಕಿದ್ದನ್ನು ವಿವರಿಸಿದರು. ‘ಪಶ್ಚಿಮ ಘಟ್ಟ ಪ್ರದೇಶದ ಜೀವವೈವಿಧ್ಯವನ್ನು ಕಾಪಾಡಿಕೊಂಡು ಕೇವಲ ನೆರಳಿನ ಆಶ್ರಯದಲ್ಲಿ ಬೆಳೆಯುವ ಕಾಫಿಗೆ ಸರ್ಕಾರದ ನೆರವು ಅಗತ್ಯ. ಇಲ್ಲವಾದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸುವುದು ಅಸಾಧ್ಯ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು