ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಬೈಲ್‌ನಂತೆಯೇ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ನೆಟ್‌ವರ್ಕ್‌ ಪೋರ್ಟಬಿಲಿಟಿ ಅ. 1ರಿಂದ

Published 19 ಜುಲೈ 2023, 14:21 IST
Last Updated 19 ಜುಲೈ 2023, 14:21 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್‌ ಸಂಖ್ಯೆಗಳಂತೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಸೇವಾದಾರ ನೆಟ್‌ವರ್ಕ್‌ ಅನ್ನು ಪೋರ್ಟಬಿಲಿಟಿ ಮೂಲಕ ಬದಲಿಸಿಕೊಳ್ಳುವ ಸೌಕರ್ಯ ಅಕ್ಟೋಬರ್ 1ರಿಂದ ಬಳಕೆಗೆ ಲಭ್ಯವಾಗಲಿದೆ. 

ಈ ಪೋರ್ಟಬಿಲಿಟಿ ವ್ಯಾಪ್ತಿಗೆ ಅಮೆರಿಕನ್‌ ಎಕ್ಸ್‌ಪ್ರೆಸ್‌ ಬ್ಯಾಂಕಿಂಗ್‌, ಡಿನೆರ್ಸ್‌ ಕ್ಲಬ್‌ ಇಂಟರ್‌ನ್ಯಾಷನಲ್‌, ಮಾಸ್ಟರ್‌ಕಾರ್ಡ್‌, ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್‌ ಆಫ್ ಇಂಡಿಯಾದ ರುಪೇ ಹಾಗೂ ವಿಸಾ ವರ್ಲ್ಡ್‌ವೈಡ್‌ ಸಂಸ್ಥೆಗಳು ವಿತರಿಸಿರುವ ಡೆಬಿಡ್ ಹಾಗೂ ಕ್ರೆಡಿಟ್‌ ಕಾರ್ಡ್‌ಗಳನ್ನು ಪೋರ್ಟ್ ಮಾಡಿಕೊಳ್ಳಬಹುದು.

ಕಾರ್ಡ್‌ ನೆಟ್‌ವರ್ಕ್‌ ಪೋರ್ಟಬಿಲಿಟಿ ಎಂದರೇನು?

ತಮ್ಮ ಆಯ್ಕೆಯ ನೆಟ್‌ವರ್ಕ್‌ ಸೇವಾದಾರರನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಬಳಕೆದಾರರು ಪಡೆಯಲಿದ್ದಾರೆ. ಆದರೆ ಸದ್ಯದ ವ್ಯವಸ್ಥೆಯಲ್ಲಿ ಕಾರ್ಡ್‌ ನೆಟ್‌ವರ್ಕ್‌ ಸಂಸ್ಥೆ ಮತ್ತು ವಿತರಿಸುವ ಬ್ಯಾಂಕುಗಳ ನಡುವೆ ಮಾತ್ರ ಸಂವಹನವಿದೆ. ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಇರಲಿಲ್ಲ. ಆದರೆ ಜುಲೈ 5ರಂದು ನಡೆದ ಕೇಂದ್ರೀಯ ಬ್ಯಾಂಕ್‌ನ ಅಧಿಸೂಚನೆಯಲ್ಲಿ, ‘ಕಾರ್ಡ್‌ ವಿತರಿಸುವ ಸಂಸ್ಥೆ, ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ತಮ್ಮ ಆಯ್ಕೆಯ ನೆಟ್‌ವರ್ಕ್‌ ನೀಡುವ ಅವಕಾಶವನ್ನು ನೀಡಬೇಕು’ ಎಂದು ಸೂಚಿಸಿದೆ.

ಆ ಮೂಲಕ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರ ಹಣಕಾಸು ವ್ಯವಹಾರವು ಇನ್ನಷ್ಟು ಸುರಕ್ಷಿತಗೊಳಿಸುವ ಪ್ರಯತ್ನ ಆರ್‌ಬಿಐನದ್ದಾಗಿದೆ. ಇದರಿಂದ ಗ್ರಾಹಕರಿಗೆ ಆಯ್ಕೆ ಸಿಕ್ಕರೆ, ಮಾರುಕಟ್ಟೆಯಲ್ಲಿ ನೆಟ್‌ವರ್ಕ್‌ ಸಂಸ್ಥೆಗಳ ನಡುವೆ ಪೈಪೋಟಿ ಏರ್ಪಡಲಿದೆ. ಹೀಗಾಗಿ ವಿಸಾ, ರುಪೇ ಅಥವಾ ಬೇರೆ ಯಾವುದೇ ನೆಟ್‌ವರ್ಕ್‌ಗಳ ಆಯ್ಕೆಯ ಸ್ವಾತಂತ್ರ್ಯ ಗ್ರಾಹಕರಿಗೆ ಸಿಗಲಿದೆ. ಜತೆಗೆ ತಮ್ಮ ಬಳಿ ಇರುವ ವಿವಿಧ ಕಾರ್ಡ್‌ಗಳನ್ನು ಒಂದೇ ಸೇವಾದಾರ ಸಂಸ್ಥೆಯಿಂದ ಪಡೆಯುವ ಅವಕಾಶವನ್ಣೂ ಹೊಂದಲಿದ್ದಾರೆ. 

ಇದರಿಂದ ಗ್ರಾಹಕರಿಗೆ ಆಗುವ ಲಾಭವೇನು?

ಕಾರ್ಡ್‌ಗಳ ನೆಟ್‌ವರ್ಕ್‌ ಬದಲಿಸುವ ಅವಕಾಶ ಲಭಿಸಿದಲ್ಲಿ ವಿದೇಶಗಳಿಗೆ ಹೋಗುವವರು ಅಲ್ಲಿನ ಅನುಕೂಲಕ್ಕೆ ತಕ್ಕಂತ ಸೇವಾದಾರರನ್ನು ಬದಲಿಸಬಹುದು. ಉದಾಹರಣೆಗೆ ಬಹಳಷ್ಟು ದೇಶಗಳಲ್ಲಿ ರುಪೇ ಕಾರ್ಡ್‌ ಪುರಸ್ಕರಿಸದ ಸಂದರ್ಭದಲ್ಲಿ ಮಾಸ್ಟರ್ ಅಥವಾ ವಿಸಾ ಸೇವೆಯನ್ನು ಪಡೆಯಬಹುದು. ಅದರಲ್ಲೂ ಯುಪಿಐಗೆ ಕ್ರೆಡಿಟ್ ಕಾರ್ಡ್‌ ಹೊಂದಿಸಿಕೊಂಡಿರುವವರಿಗೂ ಈ ವ್ಯವಸ್ಥೆ ಅನುಕೂಲವಾಗಲಿದೆ.

ಹಾಗಿದ್ದರೆ ತಮಗೆ ಬೇಕಾದ ನೆಟ್‌ವರ್ಕ್‌ಗೆ ಯಾವಾಗ ಪೋರ್ಟ್‌ ಆಗಬಹುದು?

ಹೊಸ ಕಾರ್ಡ್‌ ಪಡೆಯುವ ಸಂದರ್ಭದಲ್ಲಿ ಹಾಗೂ ನವೀಕರಣ ಸಂದರ್ಭದಲ್ಲಿ ಅಥವಾ ಅಧಿಸೂಚನೆ ಪ್ರಕಟಣೆ ದಿನಾಂಕದ ನಂತರ ಬ್ಯಾಂಕ್‌ನೊಂದಿಗೆ ಹೊಸ ಒಪ್ಪಂದ ಪತ್ರಕ್ಕೆ ಸಹಿ ಹಾಕುವಾಗ ನೆಟ್‌ವರ್ಕ್‌ ಬದಲಿಸಬಹುದು. 

ಬ್ಯಾಂಕುಗಳು ಯಾವಾಗ ಇದನ್ನು ಅನುಷ್ಠಾನಕ್ಕೆ ತರಬೇಕು?

ಈ ಬದಲಾವಣೆಯ ಅನುಷ್ಠಾನ ದಿನವಾದ 2023ರ ಅ. 1ರಿಂದ 90 ದಿನಗಳ ಒಳಗಾಗಿ ಬ್ಯಾಂಕುಗಳು ಜಾರಿಗೆ ತರಬೇಕು. ಹೀಗಾಗಿ ಗ್ರಾಹಕರೊಂದಿಗಿನ ಒಪ್ಪಂದ ಪತ್ರದಲ್ಲಿ ನೆಟವರ್ಕ್‌ ಪೋರ್ಟಬಿಲಿಟಿಯ ಅವಕಾಶವನ್ನು ಸೇರಿಸಬೇಕು ಎಂದು ಆರ್‌ಬಿಐ ಸೂಚಿಸಿದೆ.

ಈ ಅವಕಾಶದಿಂದಾಗಿ ಗ್ರಾಹಕರು ತಮ್ಮಿಷ್ಟದ ನೆಟ್‌ವರ್ಕ್‌ಗಳನ್ನು ತಮ್ಮ ಅನುಕೂಲ ಹಾಗೂ ಲಾಭಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡು ಬಳಸಿಕೊಳ್ಳಬಹುದಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT