ಭಾನುವಾರ, ಆಗಸ್ಟ್ 14, 2022
25 °C
ಬೇಡಿಕೆ ಕುಸಿತ; ಬೆಲೆ‌ ಇಳಿಕೆ, ರೈತರು ಕಂಗಾಲು

ಸಿಹಿ ಗೆಣಸು ಬೆಳೆಗಾರರಿಗೆ ಕಹಿ ಉಣಿಸಿದ ದೆಹಲಿ‌ ಚಳವಳಿ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮೂರು ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ರೈತರು‌ ದೆಹಲಿಯಲ್ಲಿ ನಡೆಸುತ್ತಿರುವ ಚಳವಳಿಯ ಪರಿಣಾಮವು ಜಿಲ್ಲೆಯ ಸಿಹಿಗೆಣಸು ಬೆಳೆಗಾರರಿಗೆ ಕಹಿ ಉಣಿಸಿದೆ.

ಇಲ್ಲಿ ಬೆಳೆಯುವ ಸಿಹಿಗೆಣಸಿಗೆ ದೆಹಲಿ, ಮಧ್ಯಪ್ರದೇಶ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ‌ಬಹಳ ಬೇಡಿಕೆ ಇದೆ. ದೆಹಲಿಗೆ ಹೆಚ್ಚಿನ ಪ್ರಮಾಣದಲ್ಲಿ ಈ ಉತ್ಪನ್ನ ರಫ್ತಾಗುತ್ತಿದ್ದ ಸೀಸನ್ ಇದು. ಆದರೆ, ಅಲ್ಲಿ‌ ಚಳವಳಿ ನಡೆಯುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಿಹಿಗೆಣಸು ಸಾಗಿಸಲು ಸಾಧ್ಯವಾಗುತ್ತಿಲ್ಲ. ಲಾರಿಗಳ ಚಾಲಕರು ಅಲ್ಲಿಗೆ ಒಯ್ಯಲು. ಕೆಲವು ಲಾರಿಗಳಷ್ಟೇ ಹೋಗುತ್ತಿವೆ. ಇದರಿಂದಾಗಿ ಬೇಡಿಕೆ ಕುಸಿದಿರುವುದರಿದ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ಈ  ವೇಳೆಯಲ್ಲಿ ಹೋದ ವರ್ಷ ಉತ್ತಮ ಗುಣಮಟ್ಟದ ಸಿಹಿಗೆಣಸಿಗೆ ಸರಾಸರಿ ₹ 1,500–₹ 1,800 ಬೆಲೆ ದೊರೆಯುತ್ತಿತ್ತು. ಆದರೆ‌ ಈಗ ₹ 800-₹ 1,000ಕ್ಕೆ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಜಮೀನಿನನ್ಲೇ ಬಿಟ್ಟಿದ್ದಾರೆ: ಜಿಲ್ಲೆಯಲ್ಲಿ ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ಸಿಹಿಗೆಣಸನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಅಲ್ಲದೇ, ನೆರೆಯ ಮಹಾರಾಷ್ಟ್ರದ ಚಂದಗಡ ಭಾಗದ ರೈತರೂ ಇಲ್ಲಿನ ಎಪಿಎಂಸಿ ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ 1,700 ಹೆಕ್ಟೇರ್‌ ‍ಪ್ರದೇಶದಲ್ಲಿ ಸಿಹಿಗೆಣಸು ಬೆಳೆದಿದ್ದಾರೆ. ಎಕರೆಗೆ ಸರಾಸರಿ 7ರಿಂದ 8 ಟನ್‌ ಇಳುವರಿ ಬರುತ್ತದೆ.

ಈ ಉತ್ಪನ್ನವನ್ನು ಬಹಳ ದಿನ ಇಡಲಾಗುವುದಿಲ್ಲ. ಆದ್ದರಿಂದ, ಸಿಕ್ಕಷ್ಟು ಬೆಲೆಗೆ ಮಾರಿ ಹೋಗಬೇಕಾದ ಸ್ಥಿತಿ ಉಂಟಾಗಿದೆ. ಕೆಲವರು, ಇನ್ನೊಂದಷ್ಟು ದಿನ ನೋಡಿ ಕೀಳೋಣ ಎಂದು ಜಮೀನಿನಲ್ಲೇ ಬಿಟ್ಟಿದ್ದಾರೆ. ಬಹಳಷ್ಟು ಬಲಿತು ಹೋದರೂ ಉತ್ತಮ ಬೆಲೆ ಸಿಗುವುದಿಲ್ಲ. ಹೀಗಾಗಿ, ಸಂಕಷ್ಟದ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ರೈತರು.

ಹಿಂದಿನ ವರ್ಷದಷ್ಟಿಲ್ಲ: ‘ದೆಹಲಿಗೆ ಹಿಂದಿನ ವರ್ಷಗಳಲ್ಲಿ ಹೋಗುತ್ತಿದ್ದಷ್ಟು ಪ್ರಮಾಣದಲ್ಲಿ ಸಿಹಿಗೆಣಸು ಈಗ ಹೋಗುತ್ತಿಲ್ಲ. ಅಲ್ಲಿ ಚಳಿಗಾಲದಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇರುತ್ತಿತ್ತು.  15ರಿಂದ 20 ಟನ್‌ ಸಾಮರ್ಥ್ಯದ 30ಕ್ಕೂ ಹೆಚ್ಚಿನ ವಾಹನಗಳು ಹೋಗುತ್ತಿದ್ದವು. ಈಗ, ಇವುಗಳ ಸಂಖ್ಯೆ 15ಕ್ಕೆ ಇಳಿದಿದೆ. ಇಲ್ಲಿ ಕೆ.ಜಿ.ಗೆ ಸರಾಸರಿ ₹ 8ರಿಂದ ₹ 10 ಇದ್ದರೆ. ದೆಹಲಿಯಲ್ಲಿ ₹ 3ರಿಂದ ₹ 4 ಹೆಚ್ಚುವರಿ ಬೆಲೆ ಮಾರುತ್ತಾರೆ. ಆದರೆ, ಅಲ್ಲೂ ಬೇಡಿಕೆ ಕುಸಿದಿದೆ ಎಂಬ ಮಾಹಿತಿ ಇದೆ. ಕೋವಿಡ್–19 ಕಾರಣದಿಂದಾಗಿ ದೆಹಲಿಯಲ್ಲಿದ್ದ ಬಿಹಾರದವರು ತಮ್ಮ ಊರುಗಳಿಗೆ ಮರಳಿದ್ದಾರೆ. ರೈತರ ಪ್ರತಿಭಟನೆಯಿಂದಲೂ ಸಿಹಿಗೆಣಸಿಗೆ ಬೇಡಿಕೆ ಇಲ್ಲದಾಗಿದೆ ಎನ್ನಲಾಗುತ್ತಿದೆ. ಹೀಗಾಗಿ, ಬೆಲೆ ಕುಸಿತ ಉಂಟಾಗಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಕೋಡಿಗೌಡ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ಶನಿವಾರ ಹಾಗೂ ಭಾನುವಾರ ಸಿಹಿಗೆಣಸಿನ ಸಗಟು ಮಾರುಕಟ್ಟೆ ಇರುತ್ತದೆ. ಇಲ್ಲಿಂದ ಬೆಂಗಳೂರಿನ ಮಾರುಕಟ್ಟೆಗೆ ಹೋಗುವುದಿಲ್ಲ. ಅಲ್ಲಿಗೆ ಈ ಉತ್ಪನ್ನ ತಮಿಳುನಾಡು ಕಡೆಯಿಂದ ಬರುವುದು ಇದಕ್ಕೆ ಕಾರಣ. ದೆಹಲಿಯಲ್ಲಿ ರೈತರ ಚಳವಳಿ ನಿಲ್ಲುವವರೆಗೆ ಸಿಹಿಗೆಣಸು ಕೀಳುವುದನ್ನು ಮುಂದೂಡುವಂತೆ ರೈತರಿಗೆ ತಿಳಿವಳಿಕೆ ನೀಡುತ್ತಿದ್ದೇವೆ. ಜನವರಿ ವೇಳೆಗೆ ಬೆಲೆ ಏರುವ ಸೂಚನೆ ಇದೆ’ ಎಂದು ಅವರು ಮಾಹಿತಿ ನೀಡಿದರು.

*
ಬೆಳಗಾವಿ ಹಾಗೂ ಖಾನಾಪುರ ಭಾಗದಲ್ಲಿ ಸಿಹಿಗೆಣಸು ಪ್ರಮುಖ ತೋಟಗಾರಿಕಾ ಬೆಳೆ. ಬೇಗನೆ ಕೆಡುವುದರಿಂದ ಬೆಂಬಲ ಬೆಲೆ ನಿಗದಿಪಡಿಸುವುದು ಕಷ್ಟ.
-ರವೀಂದ್ರ ಹಕಾಟಿ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ಬೆಳಗಾವಿ

*
ಬೆಲೆ ಕುಸಿತದಿಂದ ಬಹಳ ನಷ್ಟವಾಗುತ್ತಿದೆ. ಆರಂಭದಲ್ಲಿ ಕ್ವಿಂಟಲ್‌ಗೆ ಸರಾಸರಿ ₹1,000 ಬೆಲೆ ಸಿಗುತ್ತಿತ್ತು. ಈಗ ₹ 600ರಿಂದ <br/>₹ 700ಕ್ಕೆ ಇಳಿದಿದೆ.
-ರಘುನಾಥ ಪಾಟೀಲ, ರೈತ, ಬೆಳಗುಂದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು