ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 5 ಲಕ್ಷ ಬ್ಯಾಂಕ್‌ ಠೇವಣಿಗೆ ವಿಮೆ ರಕ್ಷಣೆ

Last Updated 13 ಫೆಬ್ರುವರಿ 2020, 17:20 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕ್‌ಗಳು ದಿವಾಳಿಯಾದ ಸಂದರ್ಭದಲ್ಲಿ ಗ್ರಾಹಕರ ಠೇವಣಿಗೆ ರಕ್ಷಣೆ ಒದಗಿಸುವ ಠೇವಣಿ ವಿಮೆಯ ಮೊತ್ತವನ್ನು ₹ 1 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಿರುವುದನ್ನು ಜಾರಿಗೆ ತರಲಾಗಿದೆ.

ಬ್ಯಾಂಕ್‌ಗಳ ಠೇವಣಿ ವಿಮೆ ನಿರ್ವಹಿಸುವ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮವು (ಡಿಐಸಿಜಿಸಿ) ಈ ಸಂಬಂಧ ಬ್ಯಾಂಕ್‌ಗಳಿಗೆ ಈಗಾಗಲೇ ಸುತ್ತೋಲೆ ಕಳಿಸಿದೆ. ನಿಗಮದಲ್ಲಿ ಗ್ರಾಹಕರ ಠೇವಣಿಗೆ ವಿಮೆ ರಕ್ಷಣೆ ಪಡೆದಿರುವ ಬ್ಯಾಂಕ್‌ಗಳಲ್ಲಿ ಇದೇ 4 ರಿಂದಲೇ ಈ ಸೌಲಭ್ಯ ಜಾರಿಗೆ ಬಂದಿದೆ.

ಬ್ಯಾಂಕ್‌ ಠೇವಣಿ ವಿಮೆಯ ಗರಿಷ್ಠ ಮೊತ್ತ ಹೆಚ್ಚಳ ಮತ್ತು ಬ್ಯಾಂಕ್‌ಗಳು ಈ ಠೇವಣಿಗಳ ವಿಮೆಗೆ ಪಾವತಿಸುವ ಕಂತಿನ ಹಣ ಹೆಚ್ಚಿಸಿರುವುದನ್ನೂ ನಿಗಮವು ಬ್ಯಾಂಕ್‌ಗಳ ಗಮನಕ್ಕೆ ತಂದಿದೆ.

ಗ್ರಾಹಕರೊಬ್ಬರು ಒಂದೇ ಬ್ಯಾಂಕ್‌ನ ಬೇರೆ, ಬೇರೆ ಶಾಖೆಗಳಲ್ಲಿ ಇರಿಸಿದ ಠೇವಣಿ ಮೊತ್ತ ಎಷ್ಟಿದ್ದರೂ ಒಟ್ಟಾರೆ ವಿಮೆ ಪರಿಹಾರವು ಗರಿಷ್ಠ ₹ 5 ಲಕ್ಷಕ್ಕೆ ಮಾತ್ರ ಅನ್ವಯಗೊಳ್ಳುತ್ತದೆ. ಬೇರೆ, ಬೇರೆ ಬ್ಯಾಂಕ್‌ಗಳಲ್ಲಿ ಇರಿಸಿದ ಠೇವಣಿ ಮೊತ್ತವನ್ನು ಮಾತ್ರ ಪ್ರತ್ಯೇಕವಾಗಿಯೇ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.

ಠೇವಣಿದಾರರ ಉಳಿತಾಯ, ಚಾಲ್ತಿ ಖಾತೆ, ಸ್ಥಿರ ಠೇವಣಿ (ಎಫ್‌ಡಿ) ಮತ್ತು ಆರ್‌ಡಿಗೆ ಠೇವಣಿ ವಿಮೆ ಅನ್ವಯಗೊಳ್ಳುತ್ತದೆ. ಗರಿಷ್ಠ ₹ 5 ಲಕ್ಷದ ಠೇವಣಿ ವಿಮೆಯು ಅಸಲು ಮತ್ತು ಬಡ್ಡಿಯನ್ನೂ ಒಳಗೊಂಡಿರುತ್ತದೆ.

ವಿಮೆ ಪ್ರೀಮಿಯಂ: ಇನ್ನು ಮುಂದೆ ಬ್ಯಾಂಕ್‌ಗಳು ಪ್ರತಿ ₹ 100 ಠೇವಣಿಗೆ ವರ್ಷಕ್ಕೆ 12 ಪೈಸೆ ಪ್ರೀಮಿಯಂ ಪಾವತಿಸಬೇಕು. ಇದಕ್ಕೂ ಮೊದಲು ಈ ವಾರ್ಷಿಕ ಪ್ರೀಮಿಯಂ ಮೊತ್ತವು ಪ್ರತಿ ₹ 100ಗೆ 10 ಪೈಸೆಗಳಷ್ಟಿತ್ತು.

‘ಡಿಐಸಿಜಿಸಿ’ಯು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿರುವ ಅಂಗ ಸಂಸ್ಥೆಯಾಗಿದೆ.

ಪ್ರತಿಯೊಂದು ಬ್ಯಾಂಕ್‌, ಠೇವಣಿ ವಿಮೆ ಯೋಜನೆಗೆ ಕಡ್ಡಾಯವಾಗಿ ಸೇರ್ಪಡೆಗೊಂಡಿರಬೇಕು. ಯಾವುದೇ ಬ್ಯಾಂಕ್‌ ಈ ಯೋಜನೆಯಿಂದ ಹೊರಗೆ ಉಳಿಯುವಂತಿಲ್ಲ. ನಿರಂತರವಾಗಿ ಮೂರು ಬಾರಿ ಅರ್ಧ ವಾರ್ಷಿಕ ಪ್ರೀಮಿಯಂ ಪಾವತಿಸದ ಬ್ಯಾಂಕ್‌ನ ನೋಂದಣಿಯನ್ನು ನಿಗಮವು ರದ್ದುಪಡಿಸುವ ಅಧಿಕಾರ ಹೊಂದಿದೆ. ಈ ನಿರ್ಧಾರವನ್ನು ಸಾರ್ವಜನಿಕರಿಗೆ ತಲುಪಿಸಲು ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT