ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಖರೀದಿ: ರಾಜ್ಯದ ರೈತರಿಗೆ ನೆರವಿನ ಭರವಸೆ ನೀಡಿದ ನಿರ್ಮಲಾ ಸೀತಾರಾಮನ್

Published 24 ನವೆಂಬರ್ 2023, 5:37 IST
Last Updated 24 ನವೆಂಬರ್ 2023, 5:37 IST
ಅಕ್ಷರ ಗಾತ್ರ

ಬೆಂಗಳೂರು: ಐಟಿಸಿ ಲಿಮಿಟೆಡ್‌ನ ಅಧ್ಯಕ್ಷ ಸಂಜೀವ್‌ ಪುರಿ ಅವರ ನೇತೃತ್ವದ ತಂಡ ಕರ್ನಾಟಕಕ್ಕೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆಯಲಿದೆ. ಜತೆಗೆ ಧಾನ್ಯಗಳನ್ನು ಖರೀದಿಸುವ ಕುರಿತು ಮಾತುಕತೆ ನಡೆಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಕರ್ನಾಟಕದ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ಗುರುವಾರ ನನ್ನನ್ನು ಭೇಟಿಯಾಗಿ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ. ಅದರಂತೆ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸಚಿವರಿಗೆ ತಿಳಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಐಟಿಸಿ ಲಿಮಿಟೆಡ್‌ನ ಅಧ್ಯಕ್ಷ ಸಂಜೀವ್‌ ಪುರಿ ಅವರ ನೇತೃತ್ವದ ತಂಡ ಕರ್ನಾಟಕಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಗೆ ಸಂಬಂಧಿಸಿ ರೈತರಿಂದ ಮಾಹಿತಿ ಪಡೆಯಲಿದೆ. ಜತೆಗೆ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಧಾನ್ಯಗಳನ್ನು ಖರೀದಿಸಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ವಿವರಿಸಿದ್ದಾರೆ.

ಕರ್ನಾಟಕದಲ್ಲಿ ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ನೀಡಲು ₹17,901.73 ಕೋಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮತ್ತೊಮ್ಮೆ ಮನವಿ ಮಾಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಗುರುವಾರ ಭೇಟಿ ಮಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಮನವಿ ಮಾಡಿದ್ದರು.

‘ಕೇಂದ್ರ ಸರ್ಕಾರದ 2015ರ ಅಂಕಿಅಂಶದ ಪ್ರಕಾರ, ರಾಜ್ಯದಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರು ಶೇ 44ರಷ್ಟಿದ್ದಾರೆ. ಆದರೆ, ಈಗ ರಾಜ್ಯದ ಜನಸಂಖ್ಯೆಯ ಶೇ 70ರಷ್ಟು ಸಣ್ಣ ಹಾಗೂ ಅತಿಸಣ್ಣ ರೈತರು ಇದ್ದಾರೆ. 2015ರ ಅಂಕಿ ಅಂಶ ಪರಿಗಣನೆಗೆ ತೆಗೆದುಕೊಂಡರೆ ರಾಜ್ಯಕ್ಕೆ ₹1,500 ಕೋಟಿಯಷ್ಟು ನಷ್ಟ ಆಗುತ್ತದೆ. ಪರಿಹಾರ ಮಂಜೂರು ಮಾಡುವ ಸಂದರ್ಭದಲ್ಲಿ ಈಗಿನ ಅಂಕಿ ಅಂಶ ಗಣನೆಗೆ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದರು.

ಕೇಂದ್ರ ಬಿಡುಗಡೆ ಮಾಡಿದ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ಅವರು ಹೇಳಿದ್ದರು.

‘ಬರ ಪರಿಹಾರ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿ ಎರಡು ತಿಂಗಳು ಕಳೆದಿವೆ. ಕೇಂದ್ರದ ತಂಡವು ಅಧ್ಯಯನ ನಡೆಸಿ ವರದಿ ನೀಡಿದೆ. ಸಚಿವರ ಸಮಿತಿಯು ಈ ವರದಿಯನ್ನು ಪರಿಶೀಲನೆ ನಡೆಸಲಿದೆ. ಬಳಿಕ ಪರಿಹಾರ ಬಿಡುಗಡೆಯಾಗುವ ವಿಶ್ವಾಸ ಇದೆ’ ಎಂದು ಅವರು ತಿಳಿಸಿದ್ದರು.

ಚಲುವರಾಯಸ್ವಾಮಿ ಮಾತನಾಡಿ, ‘ರೈತರ ಬೆಳೆ ವಿಮೆ ಹಣ ಬಿಡುಗಡೆ ಮಾಡಲು ವಿಮಾ ಕಂಪನಿಗಳು ತಡ ಮಾಡುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಸೂಚನೆ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ’ ಎಂದು ತಿಳಿಸಿದ್ದರು.

ರೈತರು ಬೆಳೆಯುವ ಎಲ್ಲ ಸಿರಿಧಾನ್ಯಗಳನ್ನೂ ಯಾವುದೇ ನಿಬಂಧನೆ ಇಲ್ಲದೆ ಕನಿಷ್ಠ ಬೆಂಬಲ ಬೆಲೆ ನೀಡಿ ಸರ್ಕಾರವೇ ಖರೀದಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT