ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಅಂತರ್ಜಲ; ಕುಸಿದ ಆತ್ಮಬಲ

ಬೇಸಿಗೆ ಮುನ್ನವೇ ಬಾಡುತ್ತಿರುವ ದ್ರಾಕ್ಷಿ ಬೆಳೆ; ಆತಂಕದಲ್ಲಿ ಬೆಳೆಗಾರರು
Last Updated 30 ನವೆಂಬರ್ 2018, 20:01 IST
ಅಕ್ಷರ ಗಾತ್ರ

ವಿಜಯಪುರ: ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಅಂತರ್ಜಲ ಕ್ಷೀಣಿಸುತ್ತಿದೆ. ತೆರೆದ ಬಾವಿ, ಕೊಳವೆ ಬಾವಿಗಳು ಬತ್ತುತ್ತಿವೆ. ಇದೀಗ ದ್ರಾಕ್ಷಿ ಬೆಳೆಯ ಹಂಗಾಮು ಆರಂಭಗೊಂಡಿದ್ದು, ನೀರಿನ ಕೊರತೆಯಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಚಿತ್ರಣ ವಿವಿಧೆಡೆ ಗೋಚರಿಸುತ್ತಿದೆ.

ಕೆಲವೆಡೆ, ಟ್ಯಾಂಕರ್‌ ನೀರಿನ ಮೂಲಕ ಬೆಳೆಯನ್ನು ರಕ್ಷಿಸಿಕೊಳ್ಳುವ ಪ್ರಯತ್ನವೂ ನಡೆದಿದೆ. ಆದರೆ, ಅದರ ಖರ್ಚಿನ ಭಾರಕ್ಕೆ ಬೆಳೆಗಾರರು ಇನ್ನಷ್ಟು ನಲುಗುತ್ತಿದ್ದಾರೆ.

‘ಜಿಲ್ಲೆಯಲ್ಲಿ 11,500 ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಿದೆ. ನೀರಿನ ಅಭಾವದಿಂದ, ಗಿಡ ಉಳಿಸಿಕೊಳ್ಳುವುದೂ ಕಷ್ಟವಾಗಿದೆ. ಹೀಗಾಗಿ ಹಲವಾರು ರೈತರು, ಗಿಡ ಉಳಿಸಿಕೊಂಡರೆ ಸಾಕು. ಫಸಲಿನ ಸಹವಾಸವೇ ಬೇಡ ಎಂದು ಅಂದಾಜು 1,500 ಹೆಕ್ಟೇರ್‌ ಪ್ರದೇಶದಲ್ಲಿ ಚಾಟ್ನಿಯನ್ನೇ ನಡೆಸಿಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಂದಾರ ತಿಳಿಸಿದ್ದಾರೆ.

‘ಅಕ್ಟೋಬರ್‌, ನವೆಂಬರ್‌ನಲ್ಲಿ ದ್ರಾಕ್ಷಿಯ ಚಾಟ್ನಿ ನಡೆದಿದೆ. ಚಾಟ್ನಿ ನಡೆದ ದಿನದಿಂದ 120 ದಿನಗಳಲ್ಲಿ ದ್ರಾಕ್ಷಿ ಗೊನೆ ಗಿಡಗಳಲ್ಲಿ ತೂಗುತ್ತದೆ. ಚಾಟ್ನಿಯ ದಿನದಿಂದ 100 ದಿನಗಳವರೆಗೂ ಹಂತ ಹಂತವಾಗಿ ಪ್ರತಿ ಗಿಡವು 5 ಲೀಟರ್‌ನಿಂದ 25–30 ಲೀಟರ್ ನೀರು ಬೇಡುತ್ತದೆ. ಆಯಾ ಬೆಳವಣಿಗೆ ಹಂತದಲ್ಲಿ ಬೆಳೆಗಾರರು ಇಷ್ಟು ನೀರನ್ನು ಪೂರೈಸಲೇಬೇಕು. ಇಲ್ಲದಿದ್ದರೆ ಬೆಳೆ ಹಾಳಾಗುತ್ತದೆ. ಇಳುವರಿ ಕುಸಿಯುತ್ತದೆ. ಗುಣಮಟ್ಟದ ಹಣ್ಣು ಸಿಗುವುದಿಲ್ಲ. ಮಣೂಕ (ಒಣ ದ್ರಾಕ್ಷಿ) ತಯಾರಿಕೆಗೂ ಸೂಕ್ತವಾಗುವುದಿಲ್ಲ’ ಎಂದು ಹೇಳಿದ್ದಾರೆ.

‘ಜಿಲ್ಲೆಯಲ್ಲಿ, ಈ ವರ್ಷ ಮುಂಗಾರು– ಹಿಂಗಾರು ಎರಡೂ ಕೈ ಕೊಟ್ಟಿವೆ. ಶೇ 50ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದೆ. ಈಗಲೇ ನೀರಿನ ಸಮಸ್ಯೆ ಉಲ್ಭಣಿಸುತ್ತಿದೆ. ಇನ್ನೊಂದು ತಿಂಗಳು ಕಳೆದರೆ ಸಮಸ್ಯೆ ಗಂಭೀರವಾಗಲಿದೆ. ಪರಿಸ್ಥಿತಿ ನಿಭಾಯಿಸುವಲ್ಲಿ ಬೆಳೆಗಾರರು ಹೈರಾಣಾಗಲಿದ್ದಾರೆ’ ಎನ್ನುತ್ತಾರೆ ಇನಾಂದಾರ.

ಫಸಲಲ್ಲ; ದಶಕದ ದ್ರಾಕ್ಷಿ ಪಡ ಉಳಿಸಿಕೊಳ್ಳುವುದೂ ದುಸ್ತರ
‘ಭಾಳ ವರ್ಷದಿಂದ ದ್ರಾಕ್ಷಿ ಬದುಕು ಕೊಟ್ಟಿತ್ತು. ನೀರಿನ ಸಮಸ್ಯೆ ಹೆಚ್ಚಾದಂಗ ಬೆಳೆಯೋದ್ ಕಡಿಮಿ ಮಾಡಿದ್ವಿ. ಈಗ ಆರ್‌ ಎಕರೆದಾಗ ಐತಿ. ಆದ್ರ ತ್ವಾಟದಾಗಿನ ಆರು ಕೊಳವಿಬಾವೀನೂ ಬತ್ಯಾವು. ಸಮೀಪದಾಗ್‌ ಎಲ್ಲೂ ನೀರಿನ ಆಸರಿ ಇಲ್ಲ. ಹೊಸ್ದಾಗಿ ಬೋರ್‌ ಕೊರಸಾಕ ಧೈರ್ಯ ಇಲ್ಲ. ಒಂದ್ಕಡೆ ಗಿಡ ಒಣಗಾಕತ್ಯಾವು, ಇನ್ನೊಂದ್‌ ಕಡೆ ಸಾಲ ಬೆಳಕೊಂತ ಹೊಂಟೇತಿ. ಏನ್‌ ಮಾಡ್ಬೇಕ್‌ ಅನ್ನೋದ... ತಿಳೀವಲ್ದು’ ಎಂದು ವಿಜಯಪುರ ತಾಲ್ಲೂಕು ಹೊನಗನಹಳ್ಳಿಯ ದ್ರಾಕ್ಷಿ ಬೆಳೆಗಾರ ನಾಗಪ್ಪ ಉಮ್ಮಗೋಳ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ನಮ್ಮಪ್ಪಾರ್ದು ನೂರು ಎಕರೆ ಜಮೀನು ಇತ್ತು. ದ್ರಾಕ್ಷಿ ಉಳುಸ್ಕೋಬೇಕಂತ ಈಗಾಗ್ಲೇ ನಾವು ಅದ್ರಾಗ 31 ಎಕರೆ ಮಾರೇವಿ. ಈ ವರ್ಷನೂ ಚಾಟ್ನಿಗಂತ ಎರಡರಿಂದ ಮೂರ್‌ ಲಕ್ಷ ರೂಪಾಯಿ ಖರ್ಚ್‌ ಆಗೇತಿ. ಆದ್ರ ನೀರ... ಇಲ್ಲ. ಇದ ಪರಿಸ್ಥಿತಿ ಮುಂದುವರದ್ರ ನಮ್ಮಂಥವರ‍್ಗೆ ಸಾವ.. ಗತಿ!’ ಎಂದು ಕಣ್ಣೀರಿಟ್ಟರು.

ಟ್ಯಾಂಕರ್‌ ನೀರಿನ ಮೂಲಕ ಬೆಳೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಸವನಬಾಗೇವಾಡಿಯ ದ್ರಾಕ್ಷಿ ಬೆಳೆಗಾರ ರಾಜಶೇಖರ ಇವಣಗಿ, ತಾವು ಮಾಡುತ್ತಿರುವ ಖರ್ಚಿಗೆ ಕಂಗಾಲಾಗಿದ್ದಾರೆ. ಐದು ಎಕರೆಯಲ್ಲಿನ ದ್ರಾಕ್ಷಿಗೆ ದಿನವೂ 10 ಟ್ಯಾಂಕರ್‌ ನೀರು ಹಾಕಿಸುತ್ತಿರುವ ಅವರು, ಅದಕ್ಕಾಗಿ ನಿತ್ಯ ₹ 6,000 ಖರ್ಚು ಮಾಡುತ್ತಿದ್ದಾರೆ. ‘ಈಗಲೇ ಹೀಗಾದರೆ, ಬೇಸಿಗೆಯಲ್ಲಿ ಗತಿಯೇನು’ ಎಂಬುದು ಅವರ ಪ್ರಶ್ನೆ.

ತಮ್ಮ ಜಮೀನಿನಲ್ಲಿದ್ದ ನಾಲ್ಕು ಕೊಳವೆಬಾವಿಗಳೂ ಬತ್ತಿದ್ದರಿಂದ, ಟ್ಯಾಂಕರ್‌ ನೀರನ್ನು ತೆರೆದ ಬಾವಿಗೆ ತುಂಬಿಸುತ್ತಿದ್ದಾರೆ. ಅಲ್ಲಿಂದ ಡ್ರಿಪ್‌ ಮೂಲಕ ಬೆಳೆಗೆ ಹರಿಸುತ್ತಿದ್ದಾರೆ. ಅವರಿಗೆ ಫಸಲಿಗಿಂತ, ದಶಕದ ದ್ರಾಕ್ಷಿ ಪಡ ಉಳಿಸಿಕೊಳ್ಳುವುದೇ ಇದೀಗ ಮುಖ್ಯವಾಗಿದೆ.

*
ಎಕರೆಗೆ ಕನಿಷ್ಠ ₹ 40,000 ಖರ್ಚು ಮಾಡಿ ಚಾಟ್ನಿ ಮಾಡಿದ್ದೆ. ಆರು ಎಕರೆಯಲ್ಲಿನ ದ್ರಾಕ್ಷಿ ಬಾಡಲಾರಂಭಿಸಿದೆ. ಏನು ಮಾಡಬೇಕು ಎಂಬುದೇ ತೋಚದಾಗಿದೆ.
–ನಾಗಪ್ಪ ಉಮ್ಮಗೋಳ, ಹೊನಗನಹಳ್ಳಿಯ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT