ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪ್ರಗತಿಗೆ ಮೊದಲ ಆದ್ಯತೆ: ನಿರ್ಮಲಾ ಸೀತಾರಾಮನ್‌

ಕೇಂದ್ರ ಹಣಕಾಸು ಸಚಿವೆ ಹೇಳಿಕೆ
Last Updated 2 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ‘ನರೇಂದ್ರ ಮೋದಿ 2.0 ಸರ್ಕಾರದ ಕಾರ್ಯಸೂಚಿಗಳಲ್ಲಿ ಆರ್ಥಿಕ ಪ್ರಗತಿ ಸಾಧಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಜಿಡಿಪಿಗೆ ವೇಗ ನೀಡಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

‘2018–19ರಲ್ಲಿ ಜಿಡಿಪಿ ಶೇ 6.8ರಷ್ಟು ಪ್ರಗತಿ ಸಾಧಿಸಿದ್ದು, 5 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಕೃಷಿ, ವ್ಯಾಪಾರ, ಸಾರಿಗೆ, ಸಂವಹನ ಮತ್ತು ಸೇವಾ ವಲಯಗಳ ಮಂದಗತಿಯ ಪ್ರಗತಿಯಿಂದಾಗಿ ಜಿಡಿಪಿ ಕುಸಿತ ಕಂಡಿದೆ’ ಎಂದು ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

‘2014–15 ರಿಂದ 2018–19ರ ಅವಧಿಯಲ್ಲಿ ಜಿಡಿಪಿ ಶೇ 7.5ರಷ್ಟು ಗರಿಷ್ಠ ಬೆಳವಣಿಗೆ ಕಂಡಿದೆ’ ಎಂದು ತಿಳಿಸಿದ್ದಾರೆ.

ಪ್ರಮುಖ ಸುಧಾರಣಾ ಕ್ರಮಗಳು: ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯನ್ನು ಎಲ್ಲ ರೈತರಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು. ಸದ್ಯ 2 ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿರುವವರಿಗೆ ಮಾತ್ರವೇ ವರ್ಷಕ್ಕೆ ₹ 6 ಸಾವಿರ ನೀಡಲಾಗುತ್ತಿದೆ.

ಸಣ್ಣ ಮತ್ತು ಅಂಚಿನ ರೈತರು, ಕಿರಾಣಿ ಅಂಗಡಿ ನಡೆಸುವವರಿಗೆ ಸ್ಚ ಇಚ್ಛೆಯಿಂದ ಪಿಂಚಣಿ ಯೋಜನೆಗೆ ಸೇರಲು ಅವಕಾಶ ನೀಡಲಾಗಿದೆ. ಹೂಡಿಕೆ ಮತ್ತು ಪ್ರಗತಿಗೆ ಆದ್ಯತೆ ನೀಡಲು ಪ್ರಧಾನಿ ನೇತೃತ್ವದ ಐವರು ಸದಸ್ಯರ ಸಂಸತ್‌ ಸಮಿತಿ ರಚನೆ ಮಾಡಲಾಗಿದೆ.

‘ಭಾರತವೂ ಈಗಲೂ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಯಾಗಿದೆ. ಅಮೆರಿಕವು 2016ರಲ್ಲಿ ಶೇ 1.6, 2017ರಲ್ಲಿ ಶೇ 2.2, 2018ರಲ್ಲಿ ಶೇ 2.9 ಮತ್ತು 2019ರಲ್ಲಿ ಶೇ 2.3ರಷ್ಟು ಪ್ರಗತಿ ಸಾಧಿಸಿದೆ. ಚೀನಾದ ಪ್ರಗತಿಯೂ ಶೇ 6.7 ರಿಂದ ಶೇ 6.8ಕ್ಕೆ ಮತ್ತು ಶೇ 6.6 ರಿಂದ ಶೇ 6.3ಕ್ಕೆ ಇಳಿಕೆಯಾಗಿದೆ. ಆದರೆ, ಭಾರತವು ಶೇ 7ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸುತ್ತಿದೆ’ ಎಂದು ಹೇಳಿದ್ದಾರೆ.

‘ನೋಟು ರದ್ದತಿ; ಪ್ರಗತಿಗೆ ಹಿನ್ನಡೆಯಾಗಿಲ್ಲ’

‘ನೋಟು ರದ್ದತಿಯಿಂದ ದೇಶಿ ಆರ್ಥಿಕತೆ, ಉದ್ಯೋಗ ಮತ್ತು ಎಂಎಸ್‌ಎಂಇ ವಲಯದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಅಧ್ಯಯನ ನಡೆಸಿಲ್ಲ’ ಎಂದೂ ನಿರ್ಮಲಾ ತಿಳಿಸಿದ್ದಾರೆ.

‘ತಯಾರಿಕಾ ವಲಯ ಕೆಲ ಮಟ್ಟಿನ ಇಳಿಕ ಕಂಡಿದೆಯಾದರೂ ಅದಕ್ಕೆ ನೋಟು ರದ್ದತಿ ಕಾರಣವಲ್ಲ. 2018–19ರಲ್ಲಿ ಆರ್ಥಿಕ ಪ್ರಗತಿ ಕುಂಠಿತಗೊಂಡಿರುವುದಕ್ಕೆ ಕೃಷಿ, ವ್ಯಾಪಾರ. ಹೋಟೆಲ್‌, ಸಾರಿಗೆ, ಸಂಪರ್ಕ ಮತ್ತು ಸೇವಾ ವಲಯಗಳಲ್ಲಿನ ಪ್ರಗತಿ ಇಳಿಕೆಯಾಗಿರುವುದು ಕಾರಣ’ ಎಂದು ಹೇಳಿದ್ದಾರೆ.

ಎರಡೂವರೆ ವರ್ಷದ ನಂತರ ಸರ್ಕಾರದ ಪ್ರತಿಕ್ರಿಯೆ ಬಹಿರಂಗಗೊಂಡಿದೆ. ನೋಟು ರದ್ದತಿಯಿಂದಾಗಿ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡಿಕೆ ಕಡಿಮೆಯಾಗಿ ಈ ವಲಯದ ರಫ್ತು ಪ್ರಮಾಣ ಕುಸಿದಿತ್ತು ಎಂದು ಆರ್‌ಬಿಐ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT