ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದಲ್ಲಿ ಒಟ್ಟು ₹2,042 ಕೋಟಿ ದಾನ: ಶಿವ ನಾಡಾರ್ ದೇಶದ ಮಹಾದಾನಿ

ದೇಶದ 119 ದಾನಿಗಳ ಪಟ್ಟಿ ಬಿಡುಗಡೆ ಮಾಡಿದ ಹುರೂನ್‌ ಇಂಡಿಯಾ
Published 2 ನವೆಂಬರ್ 2023, 15:37 IST
Last Updated 2 ನವೆಂಬರ್ 2023, 15:37 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಸಿಎಲ್‌ ಟೆಕ್ನಾಲಜೀಸ್‌ ಕಂಪನಿಯ ಸಂಸ್ಥಾ‍ಪಕ ಶಿವ ನಾಡಾರ್ ಅವರು ಸತತ ಎರಡನೇ ಬಾರಿಯೂ ದೇಶದ ಮಹಾದಾನಿ ಆಗಿದ್ದಾರೆ. ಶಿವ ನಾಡರ್ ಅವರು ಒಂದು ವರ್ಷದ ಅವಧಿಯಲ್ಲಿ ಒಟ್ಟು ₹2,042 ಕೋಟಿ ದಾನ ಮಾಡಿದ್ದು, ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಹುರೂನ್‌ ಇಂಡಿಯಾ ಸಂಸ್ಥೆಯು ಎಡೆಲ್‌ಗಿವ್‌ ಸಂಸ್ಥೆಯ ಜೊತೆ ಸೇರಿ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಇದೆ. ₹ 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದಾನ ನೀಡಿರುವವರನ್ನು ಪರಿಗಣಿಸಲಾಗಿದೆ. 

2022ರ ಏಪ್ರಿಲ್‌ 1 ರಿಂದ 2023ರ ಮಾರ್ಚ್‌ 31ರ ಅವಧಿಯಲ್ಲಿ ದೇಶದ 119 ಮಹಾದಾನಿಗಳು ಒಟ್ಟು ₹8,445 ಕೋಟಿ ದಾನ ನೀಡಿದ್ದಾರೆ. ಕಳೆದ ವರ್ಷ ನೀಡಿದ್ದ ದಾನದ ಮೊತ್ತಕ್ಕೆ ಹೋಲಿಸಿದರೆ ಶೇ 59ರಷ್ಟು ಏರಿಕೆ ಕಂಡುಬಂದಿದೆ.

ವಿಪ್ರೊ ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರು ವಾರ್ಷಿಕ ₹1,774 ಕೋಟಿ ದಾನ ಮಾಡುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

₹100 ಕೋಟಿಗೂ ಅಧಿಕ ಮೊತ್ತವನ್ನು ದಾನವಾಗಿ ನೀಡುವವರ ಸಂಖ್ಯೆಯು ಐದು ವರ್ಷದಲ್ಲಿ 2 ರಿಂದ 14ಕ್ಕೆ ಏರಿಕೆ ಕಂಡಿದೆ. ₹50 ಕೋಟಿಗೂ ಅಧಿಕ ಮೊತ್ತ ದಾನ ನೀಡುವವರ ಸಂಖ್ಯೆಯೂ 2 ರಿಂದ 24ಕ್ಕೆ ಏರಿದೆ ಎಂದು ಹುರೂನ್‌ ಇಂಡಿಯಾ ಸಂಸ್ಥೆಯ ಮುಖ್ಯ ಸಂಶೋಧಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನಸ್ ರಹಮಾನ್ ಜುನೈದ್ ಮಾಹಿತಿ ನೀಡಿದ್ದಾರೆ.

ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯ ಉದ್ದೇಶಕ್ಕಾಗಿ ದಾನ ನೀಡುವ ಮೊತ್ತವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 31ರಷ್ಟು ಹೆಚ್ಚಾಗಿ, ₹143 ಕೋಟಿಗೆ ತಲುಪಿದೆ. 2023ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ (ಎಸ್‌ಡಿಜಿ) ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯು (ಸಿಎಸ್‌ಆರ್‌) ಪ್ರಮುಖ ಪಾತ್ರ ವಹಿಸುವ ವಿಶ್ವಾಸ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದಾನಿಗಳ ಪಟ್ಟಿಯಲ್ಲಿ ಮೊದಲ 10 ಸ್ಥಾನದಲ್ಲಿ ಇರುವವರು ಕಳೆದ ವರ್ಷ ಒಟ್ಟು ₹3,034 ಕೋಟಿ ದಾನ ನೀಡಿದ್ದರು. ಈ ವರ್ಷ ದಾನದ ಮೊತ್ತವು ₹5,806 ಕೋಟಿಗೆ ಏರಿಕೆ ಕಂಡಿದೆ.

ಅಜೀಂ ಪ್ರೇಮ್‌ಜಿ
ಅಜೀಂ ಪ್ರೇಮ್‌ಜಿ

ಬೆಂಗಳೂರಿಗೆ ಮೂರನೇ ಸ್ಥಾನ

ಹೆಚ್ಚಿನ ಸಂಖ್ಯೆಯ ದಾನಿಗಳನ್ನು ಹೊಂದಿರುವ ನಗರಗಳ ಸಾಲಿನಲ್ಲಿ ಮುಂಬೈ (39) ಮೊದಲ ಸ್ಥಾನದಲ್ಲಿದೆ. ದೆಹಲಿಯಲ್ಲಿ 19 ದಾನಿಗಳಿದ್ದು ಎರಡನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ನಗರದಲ್ಲಿ 13 ದಾನಿಗಳಿದ್ದು ಮೂರನೇ ಸ್ಥಾನದಲ್ಲಿದೆ.

ಪ್ರಮುಖ 10 ದಾನಿಗಳ ವಿವರ

* ಶಿವ ನಾಡಾರ್ ಮತ್ತು ಕುಟುಂಬ;₹2042 ಕೋಟಿ

* ಅಜೀಂ ಪ್ರೇಮ್‌ಜಿ ಮತ್ತು ಕುಟುಂಬ;₹1774 ಕೋಟಿ

* ಮುಕೇಶ್ ಅಂಬಾನಿ ಮತ್ತು ಕುಟುಂಬ;₹376 ಕೋಟಿ

* ಕುಮಾರ ಮಂಗಲಂ ಬಿರ್ಲಾ ಮತ್ತು ಕುಟುಂಬ;₹287 ಕೋಟಿ

* ಗೌತಮ್ ಅದಾನಿ ಮತ್ತು ಕುಟುಂಬ;₹285 ಕೋಟಿ

* ಬಜಾಜ್ ಕುಟುಂಬ;₹264 ಕೋಟಿ

*ಅನಿಲ್‌ ಅಗರ್ವಾಲ್‌ ಮತ್ತು ಕುಟುಂಬ;₹241 ಕೋಟಿ

* ನಂದನ್‌ ನಿಲೇಕಣಿ;₹189 ಕೋಟಿ

* ಸೈರಸ್‌ ಎಸ್‌. ಪೂನಾವಾಲ ಮತ್ತು ಆದಾರ್ ಪೂನಾವಾಲ;₹179 ಕೋಟಿ

* ರೋಹಿಣಿ ನಿಲೇಕಣಿ;₹170 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT